Sunday, 21st April 2024

ವಿಮಿ ಎಂಬ ಬಾಲಿವುಡ್ ನಾಯಕಿಯ ಕಥೆ- ವ್ಯಥೆ

ವಿದೇಶವಾಸಿ

‘ನೀಲೆ ಗಗನ್ ಕೆ ತಲೆ, ಧರತಿ ಕಾ ಪ್ಯಾರ್ ಪಲೆ…’, ‘ತುಮ್ ಅಗರ್ ಸಾಥ್ ದೇನೆಕಾ ವಾದಾ ಕರೊ…’ ೬೦ರ ದಶಕದ ಈ ಹಾಡನ್ನು ತಾವೆ ಕೇಳಿರಬಹುದು. ೧೯೬೭ರಲ್ಲಿ ತೆರೆ ಕಂಡ ‘ಹಮ್ರಾಜ್’ ಚಿತ್ರದ ಸೂಪರ್‌ಹಿಟ್ ಹಾಡುಗಳಿವು. ಸುನಿಲ್ ದತ್, ರಾಜ್‌ಕುಮಾರ್, ಬಲರಾಜ್ ಸಹಾನಿ, ಮಮ್ತಾಜ್, ಜೀವನ್ ಮೊದಲಾದವರು ಅಭಿನಯಿಸಿದ, ಬಿ.ಆರ್.ಚೋಪ್ರಾ ನಿರ್ಮಿಸಿ ನಿರ್ದೇಶಿಸಿದ ಈ ರೊಮ್ಯಾಂಟಿಕ್, ಸಸ್ಪೆನ್ಸ್ ಥ್ರಿಲ್ಲರ್ ಹಿಂದಿ ಚಿತ್ರ ಆ ಕಾಲದಲ್ಲಿ ಗಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು.

ಇದೇ ಚಿತ್ರದಲ್ಲಿ ಸೌಂದರ್ಯದ ಖನಿ, ಚೆಲುವಿನ ಗಣಿ ‘ವಿಮಿ’ ಎಂಬಾಕೆ ನಾಯಕಿಯಾಗಿ ನಟಿಸಿದ್ದಳು ಎಂಬುದು ಬಹಳಷ್ಟು ಜನರಿಗೆ ನೆನಪಿರಲಿಕ್ಕಿಲ್ಲ. ಹಾಗೊಮ್ಮೆ ನೆನಪಿದ್ದರೂ, ಜನರ ಸ್ಮೃತಿಪಟಲದಿಂದ ದೂರ ಸರಿದುಹೋದ ನಾಯಕಿಯ ದುರಂತದ ಕಥೆ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ನಾಲ್ಕು ವರ್ಷ ಮೊದಲು ಪಂಜಾಬಿನ ಜಲಂಧರ್‌ನಲ್ಲಿ ಜನಿಸಿದ ವಿಮಿಯ ಪೂರ್ಣನಾಮ ವಿಮಲೇಶ್ ವಧಾವನ್. ವಿಮಿಯ ತಂದೆ- ತಾಯಿ ಇಬ್ಬರೂ ವೃತ್ತಿಯಲ್ಲಿ ಶಿಕ್ಷಕರು. ಅವರದ್ದು ಹಳೆಯ ವಿಚಾರಗಳನ್ನು ಅಳವಡಿಸಿಕೊಂಡಿದ್ದ ಪಕ್ಕಾ ಸಿಖ್ ಸಂಪ್ರದಾಯಸ್ಥ ಕುಟುಂಬ.

ಎಲ್ಲಿಯವರೆಗೆ ಎಂದರೆ, ಮನೆಯಲ್ಲಿ ಸಿನಿಮಾ ನೋಡುವುದು ಬಿಡಿ, ಹೆಣ್ಣು ಮಕ್ಕಳು ಆಧುನಿಕ ಉಡುಗೆ ತೊಡುವುದಕ್ಕೂ, ಸೌಂದರ್ಯವರ್ಧಕ ಬಳಸುವುದಕ್ಕೂ ಮನೆಯಲ್ಲಿ ವಿರೋಧವಿತ್ತು. ವಿಮಿಗೆ ಮಾತ್ರ ಈ ವಿಚಾರಗಳು ಚಿಕ್ಕಂದಿನಿಂದಲೂ ಸರಿಹೊಂದುತ್ತಿರಲಿಲ್ಲ. ಈ ವಿಷಯದಲ್ಲಿ ಅವಳು ಯಾವತ್ತೂ ಅಪ್ಪ-ಅಮ್ಮನ ವಿರುದ್ಧವೇ. ಮೇಕಪ್ ಮಾಡಿಕೊಳ್ಳುವುದು, ಕೂದಲು ಕತ್ತರಿಸಿಕೊಳ್ಳುವುದು, ಅದಕ್ಕಾಗಿ ಅಮ್ಮನಿಂದ ಪೆಟ್ಟು ತಿನ್ನುವುದು ಅವಳಿಗೆ ಮಾಮೂಲಿಯಾಗಿತ್ತು.
ಕೆಲವು ವರ್ಷಗಳ ನಂತರ ವಿಮಿಯ ಕುಟುಂಬದವರು ಮುಂಬೈಗೆ ವಲಸೆ ಬಂದರು. ಮುಂಬೈನ ತನ್ನ ಶಿಕ್ಷಣ ಪೂರ್ಣಗೊಳಿಸಿದ ವಿಮಿ, ಸೋಫಿಯಾ ಕಾಲೇಜಿನಿಂದ ಸೈಕಾಲಜಿಯಲ್ಲಿ ಪದವಿಯನ್ನೂ ಪಡೆದಳು. ಕಾಲೇಜಿನ ದಿನಗಳಲ್ಲಿ ವಿಮಿ ಆಲ್ ಇಂಡಿಯಾ ರೇಡಿಯೋದ ಕಾರ್ಯಕ್ರಮಗಳಲ್ಲಿ
ಭಾಗವಹಿಸುತ್ತಿದ್ದಳು.

ಆ ಸಂದರ್ಭದಲ್ಲಿ ಆಕೆಗೆ ಕೋಲ್ಕೊತಾದ ಮಾರವಾಡಿ ಪರಿವಾರದ ಶಿವ್ ಅಗರ್‌ವಾಲ್ ಪರಿಚಯವಾಯಿತು. ನಂತರ ಸಾಮಾನ್ಯ ಸಿನಿಮಾಗಳಲ್ಲಿ ನಡೆಯುವ ಘಟನೆ ಯಂತೆಯೇ, ಸ್ನೇಹ ಪ್ರೇಮಕ್ಕೆ ತಿರುಗಿತು. ಮನೆಯವರ ವಿರೋಧವಿದ್ದರೂ ಶಿವ್ ಅಗರ್‌ವಾಲ್‌ನನ್ನು ವಿಮಿ ಮದುವೆಯಾದಳು. ಇದರಿಂದ ಸಂಪೂರ್ಣವಾಗಿ ಮನೆಯವರ ಸಂಬಂಧವನ್ನೇ ಕಡಿದುಕೊಳ್ಳಬೇಕಾಯಿತು.ಮದುವೆಯ ನಂತರ ವಿಮಿ ಪತಿಯೊಂದಿಗೆ ಕೋಲ್ಕತಾಕ್ಕೆ ಬಂದು ನೆಲೆಸಿದಳು. ಪತಿಯೊಂದಿಗೆ, ಪತಿಯ ಮನೆಯವರೊಂ ದಿಗೆ ಸಂತೋಷದಿಂದಲೇ ಇದ್ದಳು. ಒಂದು ಗಂಡು, ಒಂದು ಹೆಣ್ಣು ಮಗುವಿನ ತಾಯಿಯೂ ಆದಳು. ಸಿರಿವಂತ ಗಂಡನ
ಮನೆಯಲ್ಲಿ ಅವಳಿಗೆ ಯಾವ ತೊಂದರೆಯೂ ಇರಲಿಲ್ಲ.

ಗಾಡಿ, ಉಡುಗೆ, ನೌಕರರು ಯಾವುದಕ್ಕೂ ಕೊರತೆ ಇರಲಿಲ್ಲ. ಆ ದಿನಗಳಲ್ಲಿ ಕೇವಲ ಶ್ರೀಮಂತರಿಗಷ್ಟೇ ಮೀಸಲು ಎನ್ನುವಂತಿದ್ದ ಗಾಲ್ಫ್ ಕೋರ್ಟ್, ಹೈ ಪ್ರೊಫೈಲ್ ಪಾರ್ಟಿಗಳು, ಐಷಾರಾಮಿ ಜೀವನ ಅವಳ ದಿನಚರಿಯಾಯಿತು. ದಿನ ಕಳೆದಂತೆ ಕೋಲ್ಕತಾದ ಗ್ರ್ಯಾಂಡ್ ಹೋಟೆಲ್ ಮತ್ತು ಅಲ್ಲಿ ನಡೆಯುತ್ತಿದ್ದ ಔತಣಕೂಟಗಳು ವಿಮಿಗೆ ಆಪ್ತವಾಗತೊಡಗಿದವು. ಅಂಥ ಒಂದು ಔತಣಕೂಟದಲ್ಲಿ ಆ ಕಾಲದ ಹೆಸರಾಂತ ಸಂಗೀತ ನಿರ್ದೇಶಕರೂ, ಗಾಯಕರೂ ಆಗಿದ್ದ ರವಿ(ನಂತರದ ದಿನಗಳಲ್ಲಿ ಬಾಂಬೆ ರವಿ ಎಂದು ಖ್ಯಾತರಾದವರು) ಉಪಸ್ಥಿತರಿದ್ದರು.

ಔತಣಕೂಟದ ಕೆಲವರು ರವಿಯ ಬಳಿ ಬಂದು ‘ವಿಮಿ ಚೆನ್ನಾಗಿ ಹಾಡುತ್ತಾಳೆ, ನೀವು ಅವಳ ಹಾಡು ಕೇಳಬೇಕು’ ಎಂದಾಗ ಹಾಡುವಂತೆ ವಿಮಿಯನ್ನು ರವಿ ಒತ್ತಾಯಿಸಿದರು. ಒತ್ತಾಯಕ್ಕೆ ಮಣಿದ ವಿಮಿ ಅಂಜುತ್ತಲೇ ಒಂದು ಹಾಡು ಹಾಡಿದಳು. ರವಿಗೆ ವಿಮಿಯ ಹಾಡಿನೊಂದಿಗೆ ಇಷ್ಟವಾದದ್ದು ಅವಳ ಸೌಂದರ್ಯ. ಆ ಕ್ಷಣದಲ್ಲಿಯೇ ವಿಮಿಯನ್ನು ಹಿಂದಿ ಚಿತ್ರರಂಗಕ್ಕೆ ಬರಲು ಆಹ್ವಾನಿಸಿದ್ದರು. ‘ನಾನು ಎರಡು ಮಕ್ಕಳ ತಾಯಿ, ಚಿತ್ರರಂಗದಲ್ಲಿ ನನಗೆ ಯಾರು ಅವಕಾಶ ಕೊಡುತ್ತಾರೆ’ ಎಂದು ನಕ್ಕಿದ್ದಳು ವಿಮಿ. ಆಗ ಸುಮ್ಮನಿದ್ದ ರವಿ, ಶಿವ್ ಮತ್ತು ವಿಮಿಯನ್ನು ಮುಂಬೈನಲ್ಲಿ ಆಯೋಜಿಸಿದ ತಮ್ಮ ಮಗನ ಜನ್ಮ ದಿನಾಚರಣೆಯಲ್ಲಿ ಭಾಗಿಯಾಗು ವಂತೆ ಆಹ್ವಾನಿಸಿದ್ದರು. ಅದಕ್ಕೆ ಇಬ್ಬರೂ ಒಪ್ಪಿದರು. ಮುಂದಿನ ಸೀಕ್ವೆನ್ಸ್ ಮುಂಬೈನಲ್ಲಿ.

ಅಂದು ಜನ್ಮದಿನದ ಔತಣಕೂಟದಲ್ಲಿ ಸೇರಿದವರೆಲ್ಲ ಗಣ್ಯರೇ ಆಗಿದ್ದರು. ಮಗನ ಜನ್ಮದಿನಾಚರಣೆ ಒಂದು ಕಡೆಯಾದರೆ, ಮತ್ತೊಂದೆಡೆ ವಿಮಿಯನ್ನು ಗಣ್ಯರಿಗೆ
ಪರಿಚಯಿಸುವ ಉದ್ದೇಶ ರವಿಯದಾಗಿತ್ತು. ಅಂದು ಖ್ಯಾತ ನಿರ್ಮಾಪಕ, ನಿರ್ದೇಶಕರಾದ ಬಿ.ಆರ್.ಚೋಪ್ರಾ ಕೂಡ ಔತಣಕೂಟಕ್ಕೆ ಆಗಮಿಸಿದ್ದರು. ಅವರು ತಮ್ಮ ನೂತನ ಚಿತ್ರ ‘ಹಮ್ರಾಜ್’ಗೆ ನಾಯಕಿಯ ಹುಡುಕಾಟದಲ್ಲಿದ್ದರು. ಅದಕ್ಕೂ ಒಂದು ಕಾರಣವಿತ್ತು. ಹಮ್ರಾಜ್ ಚಿತ್ರದ ನಾಯಕಿ ಮಧ್ಯದಲ್ಲಿಯೇ ಸಾಯುವ ಕತೆಯಿದ್ದುದರಿಂದ ಮಾಲಾ ಸಿನ್ಹಾ, ಆಶಾ ಪಾರೇಖ್, ನಂದಾರಂಥ ಹೆಸರಾಂತ ಅಭಿನೇತ್ರಿಯರು ಆ ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ. ಅದಕ್ಕೆ ಹೊಸನಟಿಯ
ಅನ್ವೇಷಣೆ ಅನಿವಾರ್ಯವಾಗಿತ್ತು. ವಿಮಿಯನ್ನು ಕಂಡ ಚೊಪ್ರಾ ತಮ್ಮ ಚಿತ್ರದಲ್ಲಿ ವಿಮಿ ನಾಯಕಿಯಾಗಬಹುದು ಎಂಬ ಅಭಿಪ್ರಾಯವನ್ನು ರವಿಯ ಮೂಲಕ ತಿಳಿಸಿದರು.

ಕೆಲವು ದಿನಗಳ ಸಮಯಾವಕಾಶ ಕೇಳಿದ ವಿಮಿ, ಕೊನೆಗೂ ‘ಓಕೆ’ ಎಂದಳು. ಅದಕ್ಕೆ ಅವಳ ಪತಿ ಶಿವ್ ಒಪ್ಪಿಗೆ ನೀಡಿದ್ದರೂ, ಉಳಿದಂತೆ ಮನೆಯಲ್ಲಿ ಯಾರ ಸಹಮತವೂ ಇರಲಿಲ್ಲ. ಪರಿಣಾಮ, ಸಣ್ಣ ಪ್ರಮಾಣದ ಆಸ್ತಿ ನೀಡಿ ಶಿವ್ ಮತ್ತು ವಿಮಿಯನ್ನು ಮನೆಯವರು ಹೊರಗೆ ಹಾಕಿದರು. ವಿಮಿ ಮತ್ತು ಶಿವ್ ಇಬ್ಬರೂ ಹಿಂದಿ ಚಿತ್ರರಂಗದಲ್ಲಿಯೇ ಬದುಕು ಕಟ್ಟಿಕೊಳ್ಳಲು ನಿರ್ಣಯಿಸಿದರು. ೨ ಮಕ್ಕಳ ತಾಯಿ ಎನ್ನುವುದನ್ನು ಬಿಟ್ಟರೆ ವಿಮಿ ಆಗಿನ್ನೂ ೨೪ ವರ್ಷದ ಕೋಮಲೆ.
ವಿಮಿಯ ಸೆಕ್ರೆಟರಿಯಾಗಿ ಶಿವ್ ಕೆಲಸ ಮಾಡಲಾರಂಭಿಸಿದನು.

ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ವಿಮಿಯಲ್ಲಿ ರೂಪವಿತ್ತಾದರೂ ಅಭಿನಯದ ಗಂಧಗಾಳಿಯೂ ಇರಲಿಲ್ಲ. ಇದರಿಂದ ಆಕೆ ಮೊದಲ ದಿನಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಆದರೂ ಮೊದಲ ಚಿತ್ರದ ಸುನಿಲ್ ದತ್, ರಾಜ್ ಕುಮಾರ್‌ರಂಥ ನಾಯಕರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದರಿಂದ ಚಿತ್ರ ಬಿಡುಗಡೆಯಾಗುವ ಮುನ್ನವೇ ವಿಮಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದಳು. ಬೇರೆ ನಿರ್ಮಾಪಕರು, ನಿರ್ದೇಶಕರಿಂದ ಹಿಡಿದು ಮಾಧ್ಯಮದವರವರೆಗೆ
ಎಲ್ಲರೂ ವಿಮಿಯೆಡೆಗೆ ಆಕರ್ಷಿತರಾಗಿದ್ದರು. ಹೆಚ್ಚಿನ ಸಂಭಾವನೆಯ ಸಾಕಷ್ಟು ಆಹ್ವಾನಗಳೂ ಬರಲಾರಂಭಿಸಿದವು. ಆದರೆ ಬಿ.ಆರ್.ಫಿಲ್ಮ್ಸ್‌ನೊಂದಿಗೆ ಮಾಡಿಕೊಂಡ ಒಪ್ಪಂದ ಕಡಿವಾಣ ವಾಯಿತು.

ಒಪ್ಪಂದದ ಪ್ರಕಾರ, ಬಿ.ಆರ್.ಫಿಲ್ಮ್ಸ್‌ನ ಚಿತ್ರಗಳಲ್ಲಿ ನಟಿಸಿದ ನಂತರವೇ ಆಕೆ ಉಳಿದವರೊಂದಿಗೆ ಕಾರ್ಯ ನಿರ್ವಹಿಸಬಹುದಾಗಿತ್ತು. ಒಂದು ಚಿತ್ರದ ಸಂಭಾವನೆಯಿಂದ ಎರಡು ಮಕ್ಕಳೊಂದಿಗೆ ಸಂಸಾರ ಸಾಗಿಸುವುದು ದಂಪತಿಗಳಿಗೆ ಕಷ್ಟವಾಗತೊಡಗಿತು. ಕರಾರು ಸಡಿಲಿಸಲು ಬಿ.ಆರ್.ಫಿಲ್ಮ್ಸ್ ಒಪ್ಪದಿದ್ದಾಗ ಚಿತ್ರೀಕರಣಕ್ಕೆ ಬರದೇ ಇರುವುದು, ತಡವಾಗಿ ಬರುವುದು ಇತ್ಯಾದಿ ಆರಂಭವಾದವು. ಚಿತ್ರೀಕರಣಕ್ಕೆ ಸಹಕರಿಸಿದರೆ ಕರಾರನ್ನು ಸಡಿಲಿಸುವುದಾಗಿ ಬಿ.ಆರ್.ಫಿಲ್ಮ್ಸ್ ಹೇಳಿತು. ಅಂತೂ ಹಮ್ರಾಜ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡು, ಚಿತ್ರ ಬಿಡುಗಡೆಯೂ ಆಯಿತು, ಯಶಸ್ವಿಯೂ ಆಯಿತು. ರಾತ್ರಿ ಬೆಳಗಾಗುವುದರೊಳಗೆ ವಿಮಿ ತಾರೆಯಾಗಿದ್ದಳು, ಅವಳ ಮನೆಯ ಮುಂದೆ ನಿರ್ಮಾಪಕರ ದಂಡೇ ನಿಂತಿತು.

ಮೊದಲ ಚಿತ್ರದ ಯಶಸ್ಸು ವಿಮಿಯ ನೆತ್ತಿಗೇರಿತೋ ಏನೋ, ಆಕೆ ತನ್ನ ಸಂಭಾವನೆಯನ್ನು ೫೦,೦೦೦ದಿಂದ ೩ ಲಕ್ಷಕ್ಕೆ ಏರಿಸಿದ್ದಳು. ಇದು ಹಲವು ವರ್ಷಗಳ ಪರಿಶ್ರಮದಿಂದ ತಾರೆ ಎನಿಸಿಕೊಂಡ ಇತರ ನಟಿಯರ ಸಂಭಾವನೆಗೆ ಸಮನಾಗಿತ್ತು. ಅಷ್ಟೇ ಅಲ್ಲದೇ ವಿಮಿ ಸುನಿಲ್ ದತ್, ರಾಜ್‌ಕುಮಾರ್, ರಾಜೇಂದ್ರ ಕುಮಾರ್, ದಿಲೀಪ್‌ಕುಮಾರ್‌ರಂಥ ತಾರೆ ಯರೊಂದಿಗೆ ಮಾತ್ರ ನಟಿಸುವುದಾಗಿ ಹೇಳಿಕೊಂಡಳು. ಹಮ್ರಾಜ್ ಬಿಡುಗಡೆಯಾಗುವ ಮುನ್ನ ಆಕೆ ಹೊಸನಟ ದೀಪಕ್‌ಕುಮಾರ್ ನೊಂದಿಗೆ ನಟಿಸಲು ಒಪ್ಪಿಕೊಂಡಿದ್ದಳು.

೧೯೬೮ರಲ್ಲಿ ತೆರೆಕಂಡ ‘ಆಬ್ರೂ’ ಮಾತ್ರ ಇದಕ್ಕೆ ಹೊರತಾಗಿತ್ತು. ಬಹಳ ನಿರೀಕ್ಷೆಯ ಆಬ್ರೂ ಮಾತ್ರ ಮಕಾಡೆ ಮಲಗಿತ್ತು. ನಂತರ ಶಶಿಕಪೂರ್ ಜತೆ ನಟಿಸಿದ ‘ಪತಂಗಾ’ ಚಿತ್ರ ಬಿಡುಗಡೆಯಾಯಿತು. ಆ ಚಿತ್ರದ ‘ಜರಾ ರುಕ್ ಜಾಯೆಗಾ ತೊ ತೆರಾ ಕ್ಯಾ ಜಾಯೆಗಾ’ ಹಾಡು ಎಲ್ಲಿಲ್ಲದ ಸದ್ದು ಮಾಡಿದರೂ, ಚಿತ್ರ ಮಾತ್ರ ಸದ್ದಿಲ್ಲದೇ ಪೆಟ್ಟಿಗೆಯೊಳಕ್ಕೆ ಸೇರಿಕೊಂಡಿತು. ಅದಾಗಲೇ ವಿಮಿ ಚಿತ್ರರಂಗಕ್ಕೆ ಬಂದು ೪ ವರ್ಷವಾಗಿತ್ತು. ಪತಿ ಶಿವ್ ಹಸ್ತಕ್ಷೇಪದಿಂದ ನಿರ್ಮಾಪಕರು, ನಿರ್ದೇಶಕರು ಹೈರಾಣಾಗಿ ದ್ದರು. ವಿಮಿಯ ಅಭಿನಯವನ್ನೇ ನೋಡದೆ ಆಕೆಯನ್ನು ತಾರೆಯ ಪಟ್ಟಕ್ಕೇರಿಸಿದವರೆಲ್ಲರೂ ಆಕೆಯನ್ನು ಗೇಲಿಮಾಡಲು ಆರಂಭಿಸಿದರು. ಆಕೆಯಲ್ಲಿ ಸೌಂದರ್ಯ ಬಿಟ್ಟರೆ ಅಭಿನಯದ ಲವಲೇಶವೂ ಇಲ್ಲ, ಆಕೆಯ ಮುಖ ಕಡಿದಿಟ್ಟ ಸುಂದರವಾದ ಕಲ್ಲಿನ ಮೂರ್ತಿಯಂತೆ, ಆಕೆ ಅಭಿನಯಕ್ಕಿಂತ ಮೇಕಪ್ ಕಡೆಗೆ ಹೆಚ್ಚು ಲಕ್ಷ ವಹಿಸುತ್ತಾಳೆ ಇತ್ಯಾದಿ ಟೀಕೆಗಳು ಹುಟ್ಟಿಕೊಂಡವು.

ನಂತರದ ‘ಕಹಿ ಆರ್ ಕಹಿ ಪಾರ್’, ‘ಕಹಾನಿ ಹಮ್ ಸಬ್ ಕಿ’ ಚಿತ್ರಗಳೂ ನೆಲಕಚ್ಚಿದವು. ಈ ನಡುವೆ ಬಂದ ‘ಗುಡ್ಡಿ’ ಚಿತ್ರ ಯಶಸ್ವಿಯಾಯಿತಾದರೂ, ಅದರಲ್ಲಿ ವಿಮಿಯ ಪಾತ್ರಚಿಕ್ಕದಾಗಿತ್ತು, ನಾಯಕಿಯಾಗಿದ್ದ ಜಯಾ ಬಚ್ಚನ್ ಹೆಸರುಗಳಿಸಿ ದಳು. ೧೯೭೧ರಲ್ಲಿ ವಿಮಿಗೆ ‘ವಚನ್’ ಚಿತ್ರದಲ್ಲಿ ಶಶಿಕಪೂರ್ ಜತೆ ಅಭಿನಯಿಸಲು ಅವಕಾಶ ಸಿಕ್ಕಿತು. ಚಿತ್ರೀಕರಣ ಅರ್ಧದಷ್ಟು ಆಗುತ್ತಿದ್ದಂತೆ ನಿರ್ಮಾಪಕರು ಚಿತ್ರವನ್ನು ವಿತರಕರಿಗೆ ತೋರಿಸಿದರು. ಚಿತ್ರವನ್ನು ಕಂಡ ವಿತರಕರು ವಿಮಿಯನ್ನು ಬದಲಿಸಿದರೆ ಮಾತ್ರ ಚಿತ್ರವನ್ನು ಖರೀದಿಸುವುದಾಗಿ ತಿಳಿಸಿದರು.

ಅದಕ್ಕೆ ನಿರ್ಮಾಪಕರು ಒಪ್ಪಲಿಲ್ಲ, ವಿಮಿಯಿಂದಾಗಿ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಯಾಗಲು ೩ ವರ್ಷ ತಡವಾಯಿತು. ಚಿತ್ರ ಕೊಳ್ಳಲು ನಿರಾಕರಿಸಿದ್ದ ವಿತರಕರು ಬಚಾವಾದರು, ನಿರ್ಮಾಪಕರು ಮುಂದೆಂದೂ ಚಿತ್ರ ನಿರ್ಮಿಸಲಾಗದಂತೆ ನೆಲಕಚ್ಚಿದರು. ವಿಮಿಯ ಪರಿಸ್ಥಿತಿ ಹೇಗಾಯಿತೆಂದರೆ ಕರೆಂಟ್ ಬಿಲ್
ತುಂಬಲೂ ಹಣವಿಲ್ಲದೆ ಕೆಲವು ದಿನ ಕತ್ತಲೆಯಲ್ಲಿ ಕಳೆಯಬೇಕಾಯಿತು. ಕಾಲಕ್ರಮೇಣ ಗಂಡ ಹೆಂಡಿರ ನಡುವೆ ಜಗಳ ಆರಂಭವಾಯಿತು. ಜಗಳ ನ್ಯಾಯಾಲಯದ ಮೆಟ್ಟಿಲೇರಿತು.

ಶಿವ್ ವಿಮಿಯನ್ನುಬಿಟ್ಟು ಪುನಃ ತನ್ನ ಪರಿವಾರದವರನ್ನು ಸೇರಿಕೊಂಡಾಗ ವಿಮಿ ಮುಂಬೈನಲ್ಲಿ ಒಬ್ಬಂಟಿಯಾಗಿ ಹೋದಳು. ಅವಮಾನ, ಬೇಸರ, ಒಂಟಿತನದ ಸುಳಿಗೆ ಸಿಕ್ಕು ಹೊರಬರಲಾಗದೇ ಕುಡಿತದ ದಾಸಿಯಾದಳು. ಆಗ ವಿಮಿಗೆ ಪರಿಚಯವಾದದ್ದು ಜೋಲಿ. ಸಣ್ಣ ಬಜೆಟ್‌ನ ಚಿತ್ರ ನಿರ್ಮಿಸುತ್ತಿದ್ದ ಜೋಲಿ ವಿಮಿಗೆ ತನ್ನ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ಹೇಳಿದ್ದರೂ ಅದು ಆಗಲೇ ಇಲ್ಲ. ವಿಮಿಗೆ ಬೇರೆ ದಾರಿ ಇಲ್ಲದ ಕಾರಣ ಅವನೊಂದಿಗೇ ಇದ್ದಳು. ಈ ನಡುವೆ ವಿಮಿಗೆ
ಲಿವರ್‌ನ ತೊಂದರೆ ಆರಂಭವಾಯಿತು. ವಿಮಿ ಜೋಲಿ ಇಬ್ಬರೂ ಹಣವಿಲ್ಲದೆ ಕಂಗಾಲಾಗಿದ್ದರು. ಚಿತ್ರಗಳಲ್ಲಿ ಅವಕಾಶ ಬೇಕೆಂದರೆ ನಿರ್ಮಾಪಕರು, ನಿರ್ದೇಶಕರೊಂದಿಗೆ ‘ಸಹಕರಿಸ ಬೇಕು’ ಎಂಬ ಜೋಲಿಯ ಸಲಹೆ ಒಪ್ಪಿಕೊಳ್ಳುವುದು ವಿಮಿಗೆ ಅನಿವಾರ್ಯವಾಯಿತು. ಆದರೆ ಅದರಿಂದ ಏನೂ  ಪ್ರಯೋಜನ ವಾಗಲಿಲ್ಲ. ಕೊನೆಗೊಂದು ದಿನ ವಿಮಿಯ ಆರೋಗ್ಯ ತೀರಾ ಹದಗೆಟ್ಟಿತು. ಜೋಲಿ ಆಕೆಯನ್ನು ಮುಂಬೈನ ನಾನಾವತಿ ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿ ದಾಖಲಿಸಿದ. ಆಸ್ಪತ್ರೆ ಸೇರಿದ ಒಂದು ವಾರದೊಳಗೆ ವಿಮಿ ಕೊನೆಯುಸಿರೆಳೆದಿದ್ದಳು.

೧೯೭೭ರಲ್ಲಿ ಈ ಲೋಕದ ಯಾತ್ರೆ ಅಂತಿಮಗೊಳಿಸುವಾಗ ವಿಮಿಗೆ ಇನ್ನೂ ೩೪ ವರ್ಷ. ದುರಂತವೆಂದರೆ, ಒಂದು ಕಾಲದಲ್ಲಿ ವಿಮಿಯ ಒಂದು ಝಲಕ್ ಕಾಣಲು ಹಾತೊರೆಯುತ್ತಿದ್ದವರಾರೂ ಆಗ ಒದಗಿಬರಲಿಲ್ಲ. ಶವ ಎತ್ತಲು ಬೇಕಾದ ನಾಲ್ಕು ಜನರೂ ಸಿಗದಿದ್ದಾಗ ಹತ್ತಿರದಲ್ಲಿ ಕಡಲೆ ಮಾರುತ್ತಿದ್ದವನ ಕೈಗಾಡಿಯನ್ನು ಪಡೆದು ಶವವನ್ನು ಸ್ಮಶಾನಕ್ಕೆ ಸಾಗಿಸಿದ್ದ ಜೋಲಿ. ಒಂದು ಕಾಲದಲ್ಲಿ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದ ಜೀವವೊಂದು ತಳ್ಳುವ ಕೈಗಾಡಿಯ ಮೇಲೆ ಅಂತಿಮಯಾತ್ರೆ ಮುಗಿಸಿತ್ತು. ತೆರೆಯ ಮೇಲೆ ಬಂದಾಗ ಶಿಳ್ಳೆ, ಚಪ್ಪಾಳೆಯ ಸದ್ದು ಕೇಳಿದ ಕಿವಿ ಮೌನದ ಜತೆಗೂಡಿ ಮಸಣದೆಡೆಗೆ ನಡೆದಿತ್ತು. ಅಂದು ವಿಮಿಗಾಗಿ ಕಣ್ಣೀರು ಸುರಿಸಲು ನಾಲ್ಕು ಕಣ್ಣುಗಳಿಗಿಂತ ಹೆಚ್ಚಿರಲಿಲ್ಲ.

ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ವಿಮಿ ಸಂಗೀತ ನಿರ್ದೇಶಕ ರವಿಯನ್ನು ಭೇಟಿಯಾಗಿ ತನ್ನನ್ನು ಈ ಸ್ಥಿತಿಗೆ ತಂದ ಶಿವ್ ಬಗ್ಗೆ ಹೇಳಿದ್ದಳು. ನಿರ್ದೇಶಕ ಬಿ.ಆರ್.ಚೋಪ್ರಾರನ್ನು ಭೇಟಿಯಾಗಿ ಹಮ್ರಾಜ್ ಚಿತ್ರದ ಚಿತ್ರೀಕರಣದ ವೇಳೆ ಗಂಡನ ಮಾತು ಕೇಳಿ ತೊಂದರೆ ಕೊಟ್ಟೆನೆಂದು ಹೇಳಿ ಕ್ಷಮೆಯನ್ನೂ ಕೇಳಿದ್ದಳು. ಇಬ್ಬರೂ ವಿಮಿಗೆ ಇನ್ನೊಂದು ಅವಕಾಶ ಕೊಡುವು ದಾಗಿ ಹೇಳಿದ್ದರು. ಕಾಲ ಮಾತ್ರ ಕಾಯಲೇ ಇಲ್ಲ. ವಿಮಿಯ ಮೊದಲ ಚಿತ್ರದ ಇನ್ನೊಂದು ಜನಪ್ರಿಯ ಹಾಡಿದೆ- ‘ನ ಮುಹ್ ಚುಪಾಕೆ ಜಿಯೊ, ಔರ್ ನ ಸರ್ ಝುಕಾಕೆ ಜಿಯೊ….’ ಮುಖ ಮುಚ್ಚಿಕೊಳ್ಳುವಂಥ ಕೆಲಸಮಾಡಿ ಬದುಕಬೇಡ, ತಲೆ ತಗ್ಗಿಸಿಕೊಂಡು ಬದುಕಬೇಡ, ದುಃಖಗಳು ಎಷ್ಟೇ ಬಂದರೂ ಮುಗುಳ್ನಗುತ್ತಾ ಜೀವನ ಸಾಗಿಸು ಎಂಬ ಅರ್ಥವಿರುವ ಹಾಡು ಅದು.

ಹಾಡು ಮುಂದುವರಿಯುತ್ತದೆ- ‘ಯಾವ ಕ್ಷಣದಲ್ಲಿ ಸಾವು ಬರುತ್ತದೆಯೋ ಯಾರಿಗೂ ತಿಳಿಯದು, ಆದ್ದರಿಂದ ಪ್ರತಿ ಕ್ಷಣದ ಖುಷಿಯನ್ನು ಅಪ್ಪಿಕೊಂಡು ನಡೆ. ಈ ಬದುಕೆಂಬುದು ಯಾವ ನಿಲ್ದಾಣದಲ್ಲಿಯೂ ಶಾಶ್ವತವಾಗಿ ನಿಲ್ಲುವಂಥದ್ದಲ್ಲ, ಆದ್ದರಿಂದ ಪ್ರತಿ ಸ್ಥಳದಿಂದಲೂ ಮುಂದಡಿ ಇಡುತ್ತಾ ಬದುಕುತ್ತಿರು…’ ಈ ಹಾಡಿನಲ್ಲಿ ಅಭಿನಯಿಸಿದ ವಿಮಿಯ ಜೀವನದಲ್ಲಿ ಮಾತ್ರ ಇದು ಸಾಧ್ಯವಾಗಲೇ ಇಲ್ಲ. ಅವಳು ಓದಿದ ಸೈಕಾಲಜಿಯಾಗಲೀ, ಅವಳ ಒಂದು ಕಾಲದ ತಾರಾಪಟ್ಟವಾಗಲೀ ಅವಳ ಪ್ರಯೋಜನಕ್ಕೆ ಬರಲಿಲ್ಲ. ತನ್ನ ಬದುಕಿನ ಅಂತ್ಯ ಇಷ್ಟು ಭಯಾನಕವಾಗಿರಬಹುದೆಂದು ವಿಮಿ ಕನಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ.

Leave a Reply

Your email address will not be published. Required fields are marked *

error: Content is protected !!