Thursday, 20th June 2024

ಯಕ್ಷ ಸಾಧಕ: ದಾಖಲೆಯ ದೀಪಕ

ವಿದೇಶವಾಸಿ

dhyapaa@gmail.com

ಯಕ್ಷಗಾನ ಕಲೆಗೆ ಅದರದ್ದೇ ಆದ ಘನತೆಯಿದೆ, ಮರ್ಯಾದೆಯಿದೆ. ಅದಕ್ಕಾಗಿಯೇ ೫೦೦ ವರ್ಷವಾದರೂ, ಈ ಕಲೆ ಇನ್ನೂ ಜೀವಂತವಾಗಿದೆ, ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ. ದೀಪಕ್ ಅವರ ‘ಹರಿ ದರುಶನ’ ಶುದ್ಧ ಯಕ್ಷಗಾನವಾಗಿದ್ದು, ಅದರಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಕಾಣುವುದಿಲ್ಲ.

ಕರ್ನಾಟಕದ ಕಲೆಗಳಲ್ಲಿ ಯಕ್ಷಗಾನ ಕಲೆಯ ಖದರೇ ಬೇರೆ. ಸಾಹಿತ್ಯ, ಸಂಗೀತ, ನೃತ್ಯ, ಮಾತುಗಾರಿಕೆ, ಮುಖವರ್ಣಿಕೆ, ಬಣ್ಣ ಬಣ್ಣದ ವೇಷ-ಭೂಷಣ, ಧ್ವನಿ-ಬೆಳಕು ಎಲ್ಲದರ ಸಮ್ಮಿಲನ, ಯಕ್ಷಗಾನ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪೂರ್ಣಭಾಗ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಅರ್ಧಭಾಗ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಅರ್ಧಭಾಗ, ಹೀಗೆ ಒಟ್ಟೂ ಮೂರೂವರೆ ಜಿಲ್ಲೆಯಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದು, ಜನಪ್ರಿಯವಾಗಿದ್ದರೂ ಇದು ಕರ್ನಾಟಕದ ಗಂಡುಕಲೆ.

‘ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎನ್ನುತ್ತಾರಲ್ಲ, ಯಕ್ಷಗಾನವೂ ಅಷ್ಟೇ, ಅದರ ರುಚಿಯನ್ನು ಬಲ್ಲವನೇ ಬಲ್ಲ. ಬಹುಶಃ ರಾತ್ರಿಯಿಂದ ಬೆಳಗಿನವರೆಗೂ ನಡೆಯುವ ಇನ್ಯಾವುದೇ ಕಲಾ ಪ್ರಕಾರವೂ (ಇತ್ತೀಚಿನ ದಿನಗಳಲ್ಲಿ ಕಾಲಮಿತಿಯಲ್ಲಿ ಯಕ್ಷಗಾನ ನಡೆಯುತ್ತಿದ್ದರೂ) ಯಕ್ಷಗಾನದಷ್ಟು ಜನಪ್ರಿಯವಲ್ಲ ಎಂದರೆ ತಪ್ಪಾಗ ಲಾರದು. ಇಂಥ ಯಕ್ಷಗಾನ ಕಲೆಯಲ್ಲಿ ಕಾಲ ಕಾಲಕ್ಕೆ ಬದಲಾವಣೆಯಾಗಿದೆ. ಅನೇಕ ಹೊಸ ಪ್ರಯೋಗ ಗಳಾಗಿವೆ. ಅದೆಷ್ಟೋ ದಾಖಲೆಗಳಾಗಿವೆ. ‘ಏಕವ್ಯಕ್ತಿ- ನವರೂಪಂ’ ಕೂಡ ಅಂಥ ದಾಖಲೆಗಳಲ್ಲಿ ಒಂದಾಗುವಂಥದ್ದು. ಇಂಥದ್ದೊಂದು ಪ್ರಯೋಗ ಮಾಡಬೇಕು ಎಂದಾಗ ಮನದ ಮೂಲೆಯಲ್ಲಿ ಮೊದಲು ಮೂಡಿದ ಪ್ರಶ್ನೆ, ಇದು ಸಾಧ್ಯವೇ? ಎಂಬುದು.

ಏಕೆಂದರೆ, ಐದು ನೂರು ವರ್ಷಕ್ಕೂ ಹೆಚ್ಚು ವರ್ಷದ ಯಕ್ಷಗಾನದ ಇತಿಹಾಸದಲ್ಲೇ ಇದು ಮೊದಲ ಪ್ರಯತ್ನ. ಇಂಥ ಒಂದು ವಿಚಾರ ಯಾರಿಗಾದರೂ
ಬಂತು ಎಂದರೆ ಅದೇ ಅದ್ಭುತ. ಇನ್ನು ಅದನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂದರೆ ಅದು ಅತ್ಯದ್ಭುತ. ಚಲನಚಿತ್ರದಲ್ಲಿ ಈ ರೀತಿಯ ಪ್ರಯತ್ನ ಆಗಿದೆ.
ಸುಮಾರು ೨೫ ವರ್ಷಗಳ ಹಿಂದೆಯೇ ಒಂದು ಚಿತ್ರದಲ್ಲಿ ಎಡ್ಡಿ ಮರ್ಫಿ ೭ ಪಾತ್ರದಲ್ಲಿ ಅಭಿನಯಿಸಿದರೆ, ೧೫ ವರ್ಷದ ಹಿಂದೆ ಕಮಲ್ ಹಾಸನ್ ೧೦ ಪಾತ್ರದಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ.

ಜಾನ್ಸನ್ ಜಾರ್ಜ್ ಒಂದೇ ಚಿತ್ರದಲ್ಲಿ ೪೫ ಪಾತ್ರಗಳಲ್ಲಿ ಅಭಿನಯಿಸಿದ್ದು ಇಂದಿಗೂ ಗಿನ್ನಿಸ್ ದಾಖಲೆಯ ಪುಟದಲ್ಲಿ ಅಚ್ಚಾಗಿ ಬೆಚ್ಚಗೆ ಕುಳಿತಿದೆ. ಇನ್ನು
ದ್ವಿಪಾತ್ರ-ತ್ರಿಪಾತ್ರಗಳೆಲ್ಲ ಲೆಕ್ಕಕ್ಕೆ ಸಿಗದಷ್ಟು ಆಗಿಹೋಗಿವೆ ಬಿಡಿ. ಆದರೆ ಯಕ್ಷಗಾನದಲ್ಲಿ?! ಆಗ ತಾನೆ ಜಗತ್ತು ಕೋವಿಡ್ ಮಹಾಮಾರಿಯಿಂದ ಚೇತರಿಸಿಕೊಂಡಿತ್ತು. ಸ್ನೇಹಿತರೂ, ಯಕ್ಷಗಾನ ಕಲಾವಿದರೂ ಆದ ದೀಪಕ್ ರಾವ್ ಪೇಜಾವರ ಮನೆಗೆ ಬಂದಿದ್ದರು. ಒಂದು ಯಕ್ಷಗಾನ ದಲ್ಲಿ ಬರುವ ಎಲ್ಲ ಪಾತ್ರಗಳನ್ನೂ ಒಬ್ಬರೇ ಮಾಡಿ ತೋರಿಸಬೇಕು ಎಂಬ ಕನಸನ್ನು ನನ್ನಲ್ಲಿ ಹಂಚಿಕೊಂಡಿ ದ್ದರು. ಮೊದಲು ನನಗೆ ಅರ್ಥವಾಗಿರಲಿಲ್ಲ.

‘ರಂಗದಲ್ಲಿ ಅದು ಹೇಗೆ ಸಾಧ್ಯ?’ ಎಂದು ಕೇಳಿದ್ದೆ. ‘ರಂಗಸ್ಥಳದಲ್ಲಿ ಲೈವ್ ಕಾರ್ಯಕ್ರಮ ಅಲ್ಲ, ರೆಕಾರ್ಡ್ ಮಾಡಿ ಸಿಡಿ ಮಾಡುವುದು ಅಥವಾ ಯೂಟ್ಯೂಬ್‌ನಂಥ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು’ ಎಂದರು. ಚಲನಚಿತ್ರದಲ್ಲಿ ಆಗಿದೆ ಎಂದರೆ ಯಕ್ಷಗಾನದಲ್ಲಿ ಯಾಕಾಗಬಾರದು ಅನಿಸಿತು. ‘ಅಲ್ಲೂ ಚಿತ್ರೀಕರಣ ಮಾಡಿ ತೆರೆಯ ಮೇಲೆ ತರುವುದು ಬಿಟ್ಟರೆ ನಾಟಕದಂತೆ ಲೈವ್ ಅಲ್ಲವಲ್ಲ? ಯಾವ ಕಥಾ ಭಾಗ?’ ಎಂದು ಕೇಳಿದೆ.

ಕೂಡಲೇ ದೀಪಕ್ ‘ಸುಧನ್ವಾರ್ಜುನ’ ಎಂದಿದ್ದರು. ‘ಇದೇನು? ಇದ್ದಕ್ಕಿದ್ದಂತೆ ಎಲ್ಲಾ ಪಾತ್ರಗಳನ್ನೂ ನೀವೇ ಮಾಡುವ ವಿಚಾರ ಯಾಕೆ ಬಂತು? ಈ ಕಥೆಯೇ ಯಾಕೆ?’ ಎಂದು ಕೇಳಿದೆ. ಅದಕ್ಕೆ ಸರಳ ವಾಗಿಯೇ ಉತ್ತರಿಸಿದ ದೀಪಕ್, ಇಂದು ಯಕ್ಷಗಾನ ದಲ್ಲಿ ಒಂದೇ ಪಾತ್ರವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಡುತ್ತಾರೆ. ಅದನ್ನು ಸಂಪೂರ್ಣ ತಪ್ಪು ಎನ್ನಲಾಗದಿದ್ದರೂ, ಮಾಡುತ್ತಿರುವುದೆಲ್ಲ ಸರಿಯೂ ಅಲ್ಲ. ಉದಾಹರಣೆಗೆ, ಸುಧನ್ವಾರ್ಜುನ ದಲ್ಲಿ ಬರುವ ಸುಧನ್ವನ ತಾಯಿ ಸುಗರ್ಭೆ, ಮಡದಿ ಪ್ರಭಾವತಿ, ತಂಗಿ ಕುವಲೆ, ಈ ಮೂರೂ ಸ್ತ್ರೀ ಪಾತ್ರಗಳಿಗೆ ಅದರದ್ದೇ ಆದ ಚೌಕಟ್ಟಿದೆ. ತಾಯಿಯ ಪಾತ್ರದಂತೆ ತಂಗಿಯ ಪಾತ್ರವನ್ನೋ, ಮಡದಿಯ ಪಾತ್ರವನ್ನೋ ಮಾಡಿದರೆ ತಪ್ಪಾಗುತ್ತದೆ.

ಇತ್ತೀಚೆಗೆ ಕೆಲವರು ಸ್ತ್ರೀ ಪಾತ್ರ ಎಂದರೆ, ಎಲ್ಲ ಸ್ತ್ರೀ ಪಾತ್ರವೂ ಒಂದೇ ಎನ್ನುವ ರೀತಿಯಲ್ಲಿ ಮಾಡುತ್ತಾರೆ. ಜತೆಗೆ, ಪುಂಡು ಪಾತ್ರವಾದ ಸುಧನ್ವನಿಂದ ಹಿಡಿದು, ಕಿರೀಟ ವೇಷದ ಅರ್ಜುನ, ಬಣ್ಣದ ವೇಷದ ಅನುಸಾಲ್ವ, ರಾಜ ವೇಷದ ಹಂಸಧ್ವಜ, ಹೀಗೆ ಯಕ್ಷಗಾನದ ಅನೇಕ ವಿಧದ ಪಾತ್ರಗಳು ಈ ಕಥಾಭಾಗದಲ್ಲಿ ಬಂದುಹೋಗುತ್ತವೆ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಚೌಕಟ್ಟಿದೆ. ಅದನ್ನೆಲ್ಲ ದಾಖಲಿಸಿಡ ಬೇಕು. ಮುಂದೊಂದು ದಿನ ಅದು ಕೆಲವರಿಗೆ
ಅನುಕೂಲವಾದೀತು’ ಎಂದರು. ಹೌದೆನಿಸಿತು.

ದೀಪಕ್ ಈ ವಿಷಯ ಪ್ರಸ್ತಾಪಿಸಿದ ಕೂಡಲೇ ಚಿತ್ರರಂಗದ ನನ್ನ ಪರಿಚಯದವರೊಂದಿಗೆ ಮಾತಾಡಿ, ಈ ಯೋಜನೆಯ ಕುರಿತಂತೆ ಸಮಯ, ಖರ್ಚು-ವೆಚ್ಚ ಚರ್ಚಿಸಿದ್ದೂ ಆಯಿತು. ಏಕೆಂದರೆ ಇದು ಅವರ ಬಹಳ ವರ್ಷದ ಕನಸಾಗಿತ್ತು. ಆ ವರ್ಷದ ರಜೆಯಲ್ಲಿ ಚಿತ್ರೀಕರಣ ಮಾಡುವುದು ಎಂದು ನಿರ್ಣಯಿಸಿದ್ದೂ ಆಯಿತು. ಆದರೆ, ಮೊದಲು ಮಾತಾಡಿದ್ದೇ ಒಂದು, ಆಮೇಲೆ ಆದದ್ದೇ ಒಂದು. ನಾಲ್ಕು ದಿನದ ಚಿತ್ರೀಕರಣ ಒಂದು ವಾರ ಕ್ಕಿಂತಲೂ ಮಿಗಿಲಾಯಿತು.

ವೆಚ್ಚವೂ ಹೇಳಿದ್ದಕ್ಕಿಂತ ಮೂರು ಪಟ್ಟು ಹೆಚ್ಚಾಯಿತು. ಸಾಲದು ಎಂಬಂತೆ ‘ಇನ್ನೂ ಸ್ವಲ್ಪ ಹಣ ಹಾಕಿ ಸಾರ್, ಇದನ್ನೇ ಚಲನಚಿತ್ರವನ್ನಾಗಿ ಮಾಡೋಣ, ನೀವೇ ಹೀರೋ ಆಗುವಿರಂತೆ’ ಇತ್ಯಾದಿ ಸಲಹೆಗಳೂ ಬರಲಾರಂಭಿಸಿ ದವು. ಯಕ್ಷಗಾನದ ದಾಖಲೆ ಆಗಬೇಕು ಎಂದು ನಿರ್ಣಯಿಸಿದ್ದ ದೀಪಕ್ ಅದಕ್ಕೆ ಮನಸ್ಸು
ಮಾಡಲಿಲ್ಲ. ಚಿತ್ರೀಕರಣ ಪೂರ್ಣಗೊಂಡ ನಂತರ ದೀಪಕ್‌ಗೆ ಇನ್ನೊಂದು ಆಘಾತ ಕಾದಿತ್ತು. ‘ನಾವು ಹೇಳಿದ ಮೊತ್ತ ಕೇವಲ ಚಿತ್ರೀಕರಣಕ್ಕೆ. ಎಡಿಟಿಂಗ್‌ಗೆ ಹೆಚ್ಚಿನ ಹಣ ಕೊಡಬೇಕು’ ಎಂದು ಚಿತ್ರೀಕರಣದ ಉಸ್ತುವಾರಿ ವಹಿಸಿಕೊಂಡವರು ಕೇಳಲಾರಂಭಿಸಿದರು. ಅದಕ್ಕೆ ತೆಗಲುವ ವೆಚ್ಚ ಚಿತ್ರೀಕರಣಕ್ಕೆ ನೀಡಿದ ಹಣಕ್ಕಿಂತ ಎರಡು ಪಟ್ಟು ಆಗುತ್ತದೆ ಎಂದಾಗ ದೀಪಕ್ ನಿಜವಾಗಿಯೂ ವೇದನೆಗೆ ಒಳಗಾಗಿದ್ದರು. ಆದರೆ ಅವರ ಒಳಗಿದ್ದ ಸಾಧಕ ಗಟ್ಟಿಯಾಗಿದ್ದ. ಎಡಿಟಿಂಗ್ ಮಾಡುವುದಿ ದ್ದರೂ ಬೇರೆಯವರಿಂದ ಮಾಡಿಸಬೇಕೆಂದು ನಿರ್ಣಯಿಸಿದ್ದರು.

ಚಿತ್ರೀಕರಣದ ತಂಡದಿಂದ ಅಷ್ಟು ರೋಸಿಹೋಗಿದ್ದರು ದೀಪಕ್. ಆ ರಜೆಯ ಹೆಚ್ಚಿನ ಭಾಗ ಚಿತ್ರೀಕರಣ ಮತ್ತು ಎಡಿಟಿಂಗ್ ಮಾಡುವವರನ್ನು ಹುಡುಕುವು ದರಲ್ಲಿಯೇ ಕಳೆದುಹೋಗಿತ್ತು. ಬಹ್ರೈನ್‌ಗೆ ಹಿಂತಿರುಗಿ ಬಂದ ದೀಪಕ್ ಅವರ ಒಳಗಿದ್ದ ಛಲಗಾರ ಇನ್ನಷ್ಟು ಗಟ್ಟಿಯಾಗಿದ್ದ. ಭಾರತ ದಲ್ಲಿ ಕುಳಿತು ಎಡಿಟ್ ಮಾಡುತ್ತಿದ್ದವರೊಂದಿಗೆ ಅಲ್ಲಿಂದಲೇ ಸಂಪರ್ಕದಲ್ಲಿದ್ದು ತಮ್ಮ ಕನಸಿನ ಕೂಸಿಗೆ ಜನ್ಮ ನೀಡಿದರು. ಅದಕ್ಕೆ ‘ಹರಿ ದರುಶನ, ಏಕವ್ಯಕ್ತಿ-ನವರೂಪಂ’ ಎಂದು ನಾಮಕರಣವೂ ಆಯಿತು. ಜುಲೈ ೧೬ರಂದು ಮಂಗಳೂರಿನ ಪುರಭವನದಲ್ಲಿ, ಯಕ್ಷಗಾನದ ದಿಗ್ಗಜರಾದ ಪ್ರಭಾಕರ ಜೋಷಿ, ಕೆ. ಗೋವಿಂದ ಭಟ್,
ಕೊಳ್ಯೂರು ರಾಮಚಂದ್ರ ರಾವ್, ಉಜಿರೆ ಅಶೋಕ ಭಟ್, ಶಿವಾನಂದ ಹೆಗಡೆ ಕೆರೆಮನೆ, ಪುರುಷೋತ್ತಮ ಭಂಡಾರಿ ಮೊದಲಾದವರಿದ್ದ ವೇದಿಕೆಯಲ್ಲಿ ಅದರ ಟ್ರೇಲರ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿದರು.

ಮೊನ್ನೆ ೨೯ನೇ ತಾರೀಖಿನಿಂದ ಇದು oeZZಛಿ.ಟಞನಲ್ಲಿ ವೀಕ್ಷಣೆಗೆ ಲಭ್ಯ ವಿದೆ. ಮೊದಲೇ ಹೇಳಿದಂತೆ ಈ ಯಕ್ಷಗಾನದಲ್ಲಿ ಬರುವ ಎಲ್ಲ ೯ ಪಾತ್ರಗಳನ್ನೂ ದೀಪಕ್ ರಾವ್ ಒಬ್ಬರೇ ನಿರ್ವಹಿಸಿದ್ದಾರೆ. ಪ್ರತಿಯೊಂದು ಪಾತ್ರದಲ್ಲೂ ದೀಪಕ್ ಭಿನ್ನವಾಗಿ ಕಾಣದಿದ್ದರೆ ಹೇಳಿ! ಇದು ಯಕ್ಷಗಾನದಲ್ಲಿ ಪ್ರಥಮ ಪ್ರಯೋಗ
ಮತ್ತು ದಾಖಲೆ. ಇನ್ನು ಮುಂದೆ ಇಂಥ ಸಾಕಷ್ಟು ಪ್ರಯೋಗಗಳಾಗಬಹುದು. ಒಳ್ಳೆಯ ರೀತಿಯಲ್ಲಾದರೆ ಅದಕ್ಕೂ ಸ್ವಾಗತ. ಸುಮಾರು ನಾಲ್ಕೂವರೆ ದಶಕದ ಹಿಂದೆ ಕಾಳಿಂಗ ನಾವುಡರ ಭಾಗವತಿಕೆಯಲ್ಲಿ ‘ಗದಾಯುದ್ಧ’ ಪ್ರಸಂಗದ ಆಡಿಯೋ ಕ್ಯಾಸೆಟ್ ಸಾಕಷ್ಟು ಸಂಚಲನ ಮೂಡಿಸಿತ್ತು. ನಂತರ ಅದೇ ಪ್ರಸಂಗ ವಿಡಿಯೋ ಆಗಿಯೂ ಮಾರುಕಟ್ಟೆಗೆ ಬಂತು. ನಂತರದ ಸಿಡಿ ಜಮಾನಾದಲ್ಲಿ ಸಾಕಷ್ಟು ಯಕ್ಷಗಾನದ ಪ್ರಸಂಗಗಳು ಅಭಿಮಾನಿಗಳ ಕೋಣೆಯನ್ನು ಪ್ರವೇಶಿಸಿದವು. ಯೂಟ್ಯೂಬ್ ಬಂದನಂತರ ಅದೂ ನಿಂತುಹೋಗಿ, ಯಕ್ಷಗಾನ ಮೊಬೈಲ್‌ನಲ್ಲಿ, ನೋಡುಗರ ಅಂಗೈಗೆ ಬಂದು ತಲುಪಿದೆ.

ಕಾಲಕ್ಕೆ ತಕ್ಕಂತೆ ಎಲ್ಲವೂ ಹೊಂದಿಕೊಳ್ಳಬೇಕು ಎಂಬುದು ಸತ್ಯ. ಆದರೆ ಆ ಹೊಂದಾಣಿಕೆ ಅಥವಾ ರಂಜನೆಯ ನೆಪದಲ್ಲಿ ಮೂಲ ಧಾತುವಿಗೆ ಧಕ್ಕೆಯಾಗ ಬಾರದು. ಕೆಲವು ವರ್ಷಗಳ ಹಿಂದೆ ಒಂದು ಯಕ್ಷಗಾನದಲ್ಲಿ ಹಾಸ್ಯ ಪಾತ್ರದವರೊಬ್ಬರು ರಂಗಸ್ಥಳದಲ್ಲಿ ಒಂದೊಂದೇ ಬಟ್ಟೆ ಕಳಚಿ ಕೊನೆಗೆ ಮೊಣಕಾಲುದ್ದದ ಒಳ ಉಡುಪಿನಲ್ಲಿ ನಿಲ್ಲುವುದನ್ನು ನೋಡಿದ್ದೆ. ಆ ಕ್ಷಣದಲ್ಲಿ ಕೆಲವು ಪ್ರೇಕ್ಷಕವರ್ಗವನ್ನು ರಂಜಿಸಿದರೂ, ಯಕ್ಷಗಾನಕ್ಕೆ ಅದು ಸಮಂಜಸವಲ್ಲ. ಯಕ್ಷಗಾನ ಕಲೆಗೆ ಅದರದ್ದೇ ಆದ ಘನತೆಯಿದೆ, ಮರ್ಯಾದೆಯಿದೆ. ಅದಕ್ಕಾಗಿಯೇ ೫೦೦ ವರ್ಷ ವಾದರೂ, ಈ ಕಲೆ ಇನ್ನೂ ಜೀವಂತವಾಗಿದೆ, ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವೃದ್ಧಿಸಿ
ಕೊಳ್ಳುತ್ತಿದೆ. ದೀಪಕ್ ಅವರ ‘ಹರಿ ದರುಶನ’ ಶುದ್ಧ ಯಕ್ಷಗಾನವಾಗಿದ್ದು, ಯಾವುದೇ ರೀತಿಯ ಹೊಂದಾಣಿಕೆ ಕಾಣುವುದಿಲ್ಲ.

ಇಷ್ಟೆಲ್ಲ ಹೇಳಿದ ಮೇಲೆ ದೀಪಕ್ ರಾವ್ ಕುರಿತು ಹೇಳಲೇಬೇಕು. ದೀಪಕ್ ಪೇಜಾವರ ಎಂಟನೆಯ ಹರೆಯದಲ್ಲಿಯೇ ಯಕ್ಷಗಾನ ಅಭ್ಯಾಸ ಮಾಡಿ ರಂಗಸ್ಥಳ ಏರಿದವರು. ಸಮಗ್ರ ದಕ್ಷಿಣ ಕನ್ನಡದಲ್ಲಿ ತೆಂಕುತಿಟ್ಟಿನ ಕಲಾವಿದರಾಗಿ ಹೆಸರು ಮಾಡಿದವರು. ಅವರ ಸ್ತ್ರೀ ಪಾತ್ರಗಳು ಹೇಗೆ ಜನಪ್ರಿಯವೋ, ಪುರುಷ ಪಾತ್ರಗಳೂ ಅಷ್ಟೇ ಪ್ರಬುದ್ಧತೆಯಿಂದ ಕೂಡಿದವು ಎಂಬುದರಲ್ಲಿ ಎರಡು ಮಾತಿಲ್ಲ. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರೂ, ಯಾವುದೇ ವೃತ್ತಿನಿರತ ಯಕ್ಷಗಾನ ಕಲಾವಿದನಿಗೂ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದವರು. ಕಳೆದ ೭ ವರ್ಷ ದಿಂದ ಬಹ್ರೈನ್ ದೇಶಕ್ಕೆ ಉದ್ಯೋಗಕ್ಕೆಂದು ಬಂದರೂ ತಮ್ಮ ಧಮನಿಯಲ್ಲಿ ತುಂಬಿಕೊಂಡ ಯಕ್ಷಗಾನ ಕಲೆಯನ್ನು ಅಲ್ಲಿಯ ಕಲಾಪ್ರಿಯರಿಗೆ ಧಾರೆ ಎರೆದವರು.

ದೀಪಕ್ ರಾವ್ ಕಳೆದ ೪ ವರ್ಷದಿಂದ ಬಹ್ರೈನ್‌ನ ಕನ್ನಡ ಸಂಘದ ಆಶ್ರಯದಲ್ಲಿ ಉಚಿತವಾಗಿ ಯಕ್ಷಗಾನ ತರಗತಿ ನಡೆಸುತ್ತಿದ್ದಾರೆ. ಇತೀಚೆಗೆ ಅಲ್ಲಿಯ ವಿದ್ಯಾರ್ಥಿಗಳಿಂದ ‘ಗಿರಿಜಾ ಕಲ್ಯಾಣ’ ಕಥಾನಕವನ್ನು ಆಡಿಸಿ ತೋರಿಸಿದ್ದಾರೆ. ಅದರಲ್ಲಿ ಭಾಗವಹಿಸಿದ ಬಹುತೇಕರ ಮಾತೃಭಾಷೆ ಕನ್ನಡ ಅಲ್ಲ. ಅವರ‍್ಯಾರೂ ಮನೆಯಲ್ಲಿ ಕನ್ನಡ ಮಾತಾಡುವು ದಿಲ್ಲ. ಅಂಥವರಿಗೆ ಇಂಗ್ಲಿಷಿನಲ್ಲೇ ಯಕ್ಷಗಾನ ಮಾಡಿ ಸಬಹುದಿತ್ತು. ದೀಪಕ್ ಕೂಡ ಇಂಗ್ಲಿಷಿನಲ್ಲಿ ಯಕ್ಷಗಾನ ಮಾಡಿದವರೇ. ಆದರೆ, ಮಕ್ಕಳಿಗೆ ಕನ್ನಡದ ಸಂಭಾಷಣೆಯನ್ನು ಇಂಗ್ಲಿಷಿನಲ್ಲಿ ಬರೆದು ಕೊಟ್ಟು, ಕಂಠಪಾಠ ಮಾಡಿಸಿ, ಅದರ ಉಚ್ಚಾರಣೆ, ಹೇಳಬೇಕಾದ ಭಾವನೆ ಎಲ್ಲವನ್ನೂ ಕಲಿಸಿಕೊಟ್ಟರು. ಈ ತಂಡದವರು ಇತ್ತೀಚೆಗೆ ಮಂಗಳೂರು ಮತ್ತು ಎಡನೀರಿನಲ್ಲೂ ಪ್ರದರ್ಶನ ನೀಡಿದರು.

ಕರ್ನಾಟಕದ ಕಲೆಯನ್ನು ವಿದೇಶದಲ್ಲಿ ಕಲಿತು, ಕರ್ನಾಟಕದಲ್ಲೇ ಪ್ರದರ್ಶಿಸಿದ ಮೊದಲ ತಂಡ ಇದು. ಈ ನಿಟ್ಟಿನಲ್ಲಿ ದೀಪಕ್ ಅವರದ್ದು ಒಂದು ದಾಖಲೆಯೇ! ಕೆಲವು ವರ್ಷಗಳ ಹಿಂದೆ ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರು ಶಿವಮೊಗ್ಗ ದಲ್ಲಿ ಅಂಧ ಮಕ್ಕಳಿಂದ ಯಕ್ಷಗಾನ ಮಾಡಿಸಿ ಇತಿಹಾಸ ನಿರ್ಮಿಸಿದ್ದರು. ಇತ್ತೀಚಿನ ದಿನಗಳಲ್ಲಿ ದೀಪಕ್ ಅವರ ಈ ಸಾಧನೆ ಇತಿಹಾಸದ ಪುಟಗಳಲ್ಲಿ ಸೇರಿದರೆ ಆಶ್ಚರ್ಯವಿಲ್ಲ. ಯಕ್ಷದೀಪಕ ಪೇಜಾವರ ಅವರಿಂದ ಇನ್ನಷ್ಟು ದಾಖಲೆ ಗಳಾಗಲಿ.

Leave a Reply

Your email address will not be published. Required fields are marked *

error: Content is protected !!