Saturday, 27th July 2024

ಕಫೀಲ್ ಖಾನ್ ಬಂಧನ ಆದೇಶ ರದ್ದು: ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ’ಜೈ’

ನವದೆಹಲಿ: ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಡಾ.ಕಫೀಲ್ ಖಾನ್ ಬಂಧನದ ಆದೇಶವನ್ನು ರದ್ದುಪಡಿಸಿರುವ ಅಲಹಾ ಬಾದ್ ಹೈಕೋರ್ಟಿನ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿಹಿಡಿದಿದೆ.

ಸೆಪ್ಟಂಬರ್ 1 ರಂದು ಹೈಕೋರ್ಟ್ ನೀಡಿರುವ ಆದೇಶದಲ್ಲಿ ಖಾನ್ ಬಂಧನ ಆದೇಶವನ್ನು ರದ್ದುಪಡಿಸಿದ್ದು, ಈ ಆದೇಶದಲ್ಲಿ ಮಧ್ಯಪ್ರವೇಶಿಸುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್.‌ಎ.ಬೋಬ್ಡೆ ಹಾಗೂ ಜಸ್ಟಿಸ್‌ಗಳಾದ ಎ.ಎಸ್.ಬೋಪಣ್ಣ ಹಾಗೂ ವಿ.ರಾಮಸುಬ್ರಹ್ಮಣ್ಯಂ ಅವರಿದ್ದ ಮೂವರು ಸದಸ್ಯರ ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದು ತಿಳಿಸಿದ ಸುಪ್ರೀಂಕೋರ್ಟ್ ಉತ್ತರಪ್ರದೇಶ ಸರಕಾರ ಸಲ್ಲಿಸಿ ರುವ ಅರ್ಜಿಯನ್ನು ತಿರಸ್ಕರಿಸಿತು. ಪ್ರತಿಭಟನೆಯ ವೇಳೆ ಅಲಿಗಢ ಮುಸ್ಲಿಂ ಯುನಿವರ್ಸಿಟಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಡಾ. ಕಫೀಲ್ ಖಾನ್‌ರನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಿ ಮಥುರಾ ಜೈಲಿನಲ್ಲಿಡಲಾಗಿತ್ತು.

ಸೆಪ್ಟಂಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥುರ್ ಹಾಗೂ ಜಸ್ಟಿಸ್ ಸುಮಿತ್ರಾ ದಯಾಳ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಡಾ. ಖಾನ್ ಪರ ಅವರ ತಾಯಿ ರಿಟ್ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಲ್ಲದೆ, ಖಾನ್ ಬಂಧನವನ್ನು ರದ್ದುಪಡಿಸಿತ್ತು.

 

Leave a Reply

Your email address will not be published. Required fields are marked *

error: Content is protected !!