Friday, 24th May 2024

ಆಂಧ್ರಪ್ರದೇಶ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಮರಾವತಿ: ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

‘ರಾಜ್ಯದ 25 ಲೋಕಸಭಾ ಮತ್ತು 175 ವಿಧಾನ ಸಭಾ ಸ್ಥಾನಗಳಿಗೆ ಮೇ 13 ರಂದು ಮತದಾನ ನಡೆಯಲಿದೆ.

ಏ.18 ರಿಂದ ಏ.25 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಏ.26 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏ.29 ಕೊನೆಯ ದಿನ’ ಎಂದು ಮುಖ್ಯ ಚುನಾವಣಾಧಿಕಾರಿ ಮುಖೇಶ್ ಕುಮಾರ್ ಮೀನಾ ತಿಳಿಸಿದ್ದಾರೆ.

ಲೋಕಸಭಾ ಅಭ್ಯರ್ಥಿಗಳು ₹ 25,000 ಮತ್ತು ವಿಧಾನಸಭೆ ಅಭ್ಯರ್ಥಿಗಳು ₹ 10,000 ಠೇವಣಿ ಇಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

ವೈಎಸ್‌ಆರ್‌ಸಿಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ(ಪುಲಿವೆಂದುಲಾ), ಟಿಡಿಪಿ ವರಿಷ್ಠ ಎನ್. ಚಂದ್ರಬಾಬು ನಾಯ್ಡು (ಕುಪ್ಪಂ), ಅವರ ಪುತ್ರ ನಾರಾ ಲೋಕೇಶ್ (ಮಂಗಳಗಿರಿ) ಹಾಗೂ ಜನಸೇನಾ ಸಂಸ್ಥಾಪಕ, ನಟ ಪವನ್ ಕಲ್ಯಾಣ್ (ಪಿಠಾಪುರಂ) ಅವರು ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ನಾಯಕರು.

ರಾಜ್ಯ ಬಿಜೆಪಿ ಮುಖ್ಯಸ್ಥೆ ಡಿ. ಪುರಂದೇಶ್ವರಿ (ರಾಜಮಂಡ್ರಿ), ಎಪಿಸಿಸಿ ಅಧ್ಯಕ್ಷೆ ಮತ್ತು ಜಗನ್ ಸಹೋದರಿ ವೈ.ಎಸ್ ಶರ್ಮಿಳಾ (ಕಡಪ) ಲೋಕಸಭೆ ಚುನಾವಣೆ ಕಣದಲ್ಲಿದ್ದಾರೆ.

ವೈಎಸ್‌ಆರ್‌ಸಿಪಿ ಏಕಾಂಗಿ ಹೋರಾಟ ನಡೆಸುತ್ತಿದ್ದರೆ, ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಎನ್‌ಡಿಎ ಭಾಗವಾಗಿವೆ. ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾದ ಸಿಪಿಐ ಮತ್ತು ಸಿಪಿಎಂ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಹೇಳಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 22 ಸ್ಥಾನಗಳನ್ನು ಗೆದ್ದಿದ್ದರೆ, ಟಿಡಿಪಿ 3 ಸ್ಥಾನಗಳನ್ನು ಪಡೆದುಕೊಂಡಿತ್ತು.

Leave a Reply

Your email address will not be published. Required fields are marked *

error: Content is protected !!