Friday, 26th July 2024

ಲಂಚ ಪ್ರಕರಣದಲ್ಲಿ ಅಮಾನತಾಗಿರುವ ದೇವೇಂದ್ರಪ್ಪ, ಆಪ್ತರಿಗೆ ಎಸಿಬಿ ತನಿಖೆ ಬಿಸಿ

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಮಾಡಿರುವ ಆರೋಪದ ಮೇಲೆ ಬಿಬಿಎಂಪಿ ಸಹಾಯಕ ಅಭಿಯಂತರ ಎಸ್. ಎನ್ ದೇವೇಂದ್ರಪ್ಪ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಮೃತನಗರದ ಮನೆ ಹಾಗೂ ಹಲಸೂರು ಗುಪ್ತ ಲೇಔಟ್ ನಲ್ಲಿ ದೇವೇಂದ್ರಪ್ಪ ಆಪ್ತ ಶ್ರೀನಿವಾಸ್ ಎಂಬವರ ಮನೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ. ನಿವಾಸದಲ್ಲಿರುವ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಅಕ್ರಮ ಆಸ್ತಿ ಗಳಿಸಿರುವ ನಿಖರ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದು ಸೇವೆಯಿಂದ ಅಮಾನತುಗೊಂಡಿರುವ ಬಿಬಿಎಂಪಿ ನಗರ ಯೋಜನೆ ವಿಭಾಗದ ಸಹಾಯಕ ಅಭಿಯಂತರ ದೇವೇಂದ್ರಪ್ಪ ಅವರ ಆಪ್ತರ ಮನೆ ಮೇಲಿನ ದಾಳಿ ಮುಂದುವರೆದಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿ ಕೊಂಡಿದ್ದಾರೆ.

ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ನಗರ ಯೋಜನೆ ವಿಭಾಗದಲ್ಲಿ ಪ್ರಭಾರ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವೇಂದ್ರಪ್ಪ ಅವರು ಖಾಸಗಿ ಸಂಸ್ಥೆಯೊಂದರ ಕಟ್ಟಡ ಕಾಮಗಾರಿಗೆ ಒಸಿ ನೀಡಲು 20 ಲಕ್ಷದ ಹಣದ ಬೇಡಿಕೆ ಇಟ್ಟಿದ್ದರು.  ಲಂಚದ ಹಣ ಸ್ವೀಕರಿಸುತ್ತಿದ್ದಾಗ ಕಳೆದ ಫೆ.5ರಂದು ಎಸಿಬಿ ಪೊಲೀಸರಿಗೆ ದೇವೇಂದ್ರಪ್ಪ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ದೇವೇಂದ್ರಪ್ಪ ಅವರನ್ನು ವಶಕ್ಕೆ ಪಡೆದಾಗ ಅವರ ನಿವಾಸದಲ್ಲಿ ಬಿಬಿಎಂಪಿಗೆ ಸಂಬಂಸಿದ ಹಲವಾರು ಕಡತಗಳು, ಕೋಟಿ ಗಟ್ಟಲೆ ಹಣ ಸಿಕ್ಕಿತ್ತು.

ಅಕ್ರಮ ಆಸ್ತಿ ಸಂಪಾದಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಬಿಬಿಎಂಪಿ ಸೇವೆಯಿಂದ ಅಮಾನತು ಪಡಿಸಲಾಗಿದೆ.

ಮಂಗಳವಾರ ಅವರ ಆಪ್ತ ಶ್ರೀನಿವಾಸ ಮೂರ್ತಿ ಅವರ ನಿವಾಸ ಹಾಗೂ ಅಮೃತ್‍ನಗರದಲ್ಲಿರುವ ದೇವೇಂದ್ರಪ್ಪ ಅವರ ನಿವಾಸಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!