Saturday, 27th July 2024

ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಅಲ್ಲ, Anti ನ್ಯಾಶನಲ್ ಕ್ಲಬ್‍ಹೌಸ್ ಎಂದು ಬದಲಿಸಿಕೊಳ್ಳಲಿ: ಕಾರ್ಣಿಕ್

ಬೆಂಗಳೂರು: ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಕೊಡುವ ಕುರಿತು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮಾತನ್ನಾಡಿದ್ದಾರೆ. ಇದು ಕಾಂಗ್ರೆಸ್ ಟೂಲ್‍ಕಿಟ್‍ನ ಇನ್ನೊಂದು ಭಾಗ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಟೂಲ್‍ಕಿಟ್ ವಿಷಯದಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ಸಿಗರ ದುರುದ್ದೇಶವನ್ನು ಜನರ ಗಮನಕ್ಕೆ ತಂದಿದೆ. ದಿಗ್ವಿಜಯ್  ಹೇಳಿಕೆ ಯಿಂದ ಆ ಪಕ್ಷವು ಚೀನಾ- ಪಾಕಿಸ್ತಾನದ ಜೊತೆ ನಿಂತಿರುವುದು ಸ್ಪಷ್ಟಗೊಳ್ಳುತ್ತದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನ ಹೆಸರನ್ನು ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಾರ್ಟಿ (ಐಎನ್‍ಸಿ) ಹೆಸರಿನ ಬದಲಾಗಿ “ಆಯಂಟಿ ನ್ಯಾಶನಲ್ ಕ್ಲಬ್‍ಹೌಸ್” ಎಂದು ಬದಲಿಸಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಅವರು ಈ ಹಿಂದೆ ಪುಲ್ವಾಮಾ ದಾಳಿ ಇದೇನೂ ಗಂಭೀರ ವಿಚಾರವಲ್ಲ ಎಂದು ಹೇಳಿ ಪಾಕಿಸ್ತಾನದ ಕ್ರಮವನ್ನೇ ಸಮರ್ಥಿಸಲು ಮುಂದಾಗಿದ್ದರು. ಇದು ಭಯೋತ್ಪಾದಕರ ದಾಳಿ ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ವಿದೇಶದ ಮಾಧ್ಯಮ ಪ್ರತಿನಿಧಿ ಜೊತೆ ಸಂದರ್ಶನದಲ್ಲಿ “ನರೇಂದ್ರ ಮೋದಿ ಅವರ ಅಧಿಕಾರ ಕಳೆದುಕೊಂಡರೆ” ಎಂಬ ಊಹಾತ್ಮಕ ಪ್ರಶ್ನೆಗೆ ದಿಗ್ವಿಜಯ್ ಸಿಂಗ್ ಅವರು ಈ ಉತ್ತರ ನೀಡಿರುವುದು ಕಾಂಗ್ರೆಸ್‍ನ ಪಾಕ್ ಪರ- ಚೀನಾಪರ ನೀತಿಯ ಪ್ರತಿಬಿಂಬದಂತಿದೆ. ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣ ಬೇಡ ಎಂಬುದರ ಪ್ರತೀಕದಂತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು ಮತ್ತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಈ ಹಿಂದೆ ಕಾಂಗ್ರೆಸ್ ಮುಖಂಡರಾದ ಮಣಿಶಂಕರ್ ಅಯ್ಯರ್ ಅವರೂ ಪಾಕಿಸ್ತಾನದಲ್ಲಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. 2014ರಲ್ಲಿ ಅಯ್ಯರ್ ಅವರು ಈ ಸಂದರ್ಶನ ಕೊಟ್ಟಾಗ ಈ ಹೇಳಿಕೆ ಕೇಳಿ ಟಿ.ವಿ. ಆಂಕರ್ ಆತಂಕಗೊಂಡಿದ್ದರು. ಇದರಲ್ಲಿ ನಮ್ಮ ಪಾತ್ರ ಏನಿದೆ ಎಂಬ ಪ್ರಶ್ನೆ ಮುಂದಿಟ್ಟಿದ್ದರು. ಇದು ಕಾಂಗ್ರೆಸ್ಸಿಗರ ಷಡ್ಯಂತ್ರವಲ್ಲದೆ ಮತ್ತೇನು? ಪಾಕಿಸ್ತಾನ ಪರ ಕಾಂಗ್ರೆಸ್ ಇರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!