Friday, 24th May 2024

ಗಡಿ ಗಲಾಟೆ; ಮಹಾಜನ್ ವರದಿ ಅಂತಿಮವಲ್ಲ

65 ವರ್ಷವಾದರೂ ಕಾಯಿದೆ ರೂಪಕ್ಕೆ ಬಾರದ ವರದಿ ವರದಿ ಜಾರಿಯಾದರೆ ರಾಜ್ಯಕ್ಕೆ ಕೊಂಚ ನಷ್ಟವೂ ಇದೆ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು: ದಶಕಗಳ ಗಡಿ ವಿವಾದ ‘ಮಹಾ ಗಡಿ ತಂಟೆ’ಗೆ ಮಹಾಜನ್ ವರದಿ ಅಂತಿಮ ಪರಿಹಾರಲ್ಲ. ಅಷ್ಟೇ ಏಕೆ, ತೀರಾ
ಹಿಂದಿನ ಸ್ಥಿತಿಯಲ್ಲಿ ಸಿದ್ಧಪಡಿಸಿದ ವರದಿಯಿಂದ ರಾಜ್ಯಕ್ಕೆ ಹೆಚ್ಚು ಲಾಭವಾಗುವ ಸಾಧ್ಯತೆಯೂ ಕಡಿಮೆ, ವಿಳಂಬ ಜ್ಞಾನೋದಯ ಚರ್ಚೆಗಳು ಇದೀಗ ಆರಂಭವಾಗಿವೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಮರಾಠಿ ಭಾಷಿಗರ ಪ್ರದೇಶ ಪಡೆಯುವ ಹೇಳಿಕೆ ಮೂಲಕ ಗಡಿ ತಂಟೆ ತೆಗೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಹಾಜನ್ ವರದಿಯೇ ಅಂತಿಮ ಎನ್ನುವ ಹಳೇ ಹೇಳಿಕೆಗಳು ನಿರಂತರವಾಗಿ ಕೇಳಿ ಬರುತ್ತಿವೆ.
ಇದನ್ನು ಸರಕಾರ ಮಾತ್ರವಲ್ಲದೆ ಎಲ್ಲಾ ಪಕ್ಷಗಳ ನಾಯಕರೂ ಪುನರುಚ್ಚರಿಸುತ್ತಿದ್ದಾರೆ. ಆದರೆ, ಇದರಿಂದ ಪ್ರಸ್ತುತ ಸ್ಥಿತಿಗೆ ಹೆಚ್ಚಿನ ಅನುಕೂಲಗಳೇನೂ ಆಗುವುದಿಲ್ಲ. ಆದ್ದರಿಂದ ವರದಿ ಜಾರಿಗೊಳಿಸಿ ಕಾಯಿದೆ ಮಾಡಿಸಬೇಕು. ಈ ಮೂಲಕ ಸದ್ಯದ ಯಥಾಸ್ಥಿತಿಯನ್ನು ಮಹಾರಾಷ್ಟ್ರ ಒಪ್ಪಿಕೊಳ್ಳುವಂತೆ ಮಾಡಬೇಕೆನ್ನುವ ಹೋರಾಟ, ನಡೆಸಬೇಕೆನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಅಷ್ಟೇನೂ ಲಾಭದಾಯಕವಲ್ಲ: ಏಕೆಂದರೆ, ನ್ಯಾ.ಮಹಾಜನ್ ವರದಿ ಸಲ್ಲಿಕೆಯಾಗಿ 65ವರ್ಷಗಳಿಗೂ ಹೆಚ್ಚಿನ ಸಮಯವಾಗಿದ್ದು, ವರದಿ ಅಂಶಗಳು ಮತ್ತು ಶಿಫಾರಸುಗಳು ಈಗಿನ ಕಾಲಘಟ್ಟಕ್ಕೆ ಅಷ್ಟೇನೂ ಲಾಭದಾಯಕವಲ್ಲ. ಅಂದರೆ 6 ದಶಕಗಳ ಹಿಂದಿನ
ಸನ್ನಿವೇಶಕ್ಕೆ ತಕ್ಕಂತೆ ಅಧ್ಯಯನ ನಡೆಸಿ ಸಲ್ಲಿಸಿರುವ ವರದಿಯ ಶಿಫಾರಸುಗಳು ಈಗಿನ ಪರಿಸ್ಥಿತಿಗೆ ಪೂರ್ಣ ಅನ್ವಯವಾಗುವು ದಿಲ್ಲ. ಉದಾಹರಣೆಗೆ 60 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಶೇ.80ರಷ್ಟು ಮರಾಠಿ ಭಾಷಿಗರಿದ್ದು, ಶೇ.20ರಷ್ಟು ಕನ್ನಡಿಗರಿದ್ದರೆ, ಈ
ಅನುಪಾತ ಈಗ ಶೇ.80:20ಕ್ಕೆ ಬಂದಿದೆ.

ಹಾಗೆಯೇ ಕನ್ನಡ ಭಾಷಿಗರಿರುವ ಮಹಾರಾಷ್ಟ್ರದ ಭಾಗಗಳು ಆ ರಾಜ್ಯದ ಆಡಳಿತ ಮತ್ತು ಸಾಮಾಜಿಕ ಹೊಂದಾಣಿಕೆಯಲ್ಲಿ ಬೆರೆತು ಹೋಗಿವೆ. ಅದೇರೀತಿ ನೆರೆ ರಾಜ್ಯಗಳು ಕೇಳಿದ್ದ ಬೆಳಗಾವಿ, ಕಾರವಾರ, ಖಾನಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಮರಾಠಿ
ಭಾಷಿಗರಿದ್ದರೂ ಅವು ಈಗ ಕರ್ನಾಟಕದ ಅವಿಭಾಜ್ಯ ಅಂಗವಾಗಿವೆ. ಇಂಥ ಸನ್ನಿವೇಶದಲ್ಲಿ ವರದಿ ಜಾರಿಗೊಳಿಸಿದರೆ, ಈ ಅವಿಭಾಜ್ಯ ಅಂಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಮಾತುಗಳು ಕನ್ನಡಪರ ಸಂಶೋಧಕರು, ಹೋರಾಟಗಾರರು
ಹಾಗೂ ಸಾಹಿತಿಗಳ ವಲಯದಲ್ಲಿ ಕೇಳಿ ಬರುತ್ತಿವೆ.

ವರದಿ ಅಂತಿಮ ಏಕೆ ಅಲ್ಲ?: ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕ ನಡುವೆ ಗಡಿ ವಿವಾದ ಬಂದಾಗ 1966ರಲ್ಲಿ ನ್ಯಾ.ಮಹಾಜನ್ ಆಯೋಗ ರಚಿಸಲಾಗಿತ್ತು. ನಂತರ ವರದಿ ಬಂದಾಗ ಬೆಳಗಾವಿ, ಕಾರವಾರ ಹಾಗೂ ಕಾಸರಗೋಡು ಭಾಗ ಕರ್ನಾಟಕಕ್ಕೆ ಹಾಗೂ ನಂದಗಡ, ನಿಪಾಣಿ, ಖಾನಾಪುರ ಸೇರಿದಂತೆ 340 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಶಿಫಾರಸು ಮಾಡಲಾಗಿತ್ತು. ಇದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಅಂದಿನ ಕರ್ನಾಟಕ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಒಪ್ಪಿಕೊಂಡಿದ್ದರು.

ಆದರೆ, ಮಹಾರಾಷ್ಟ್ರ ಸರಕಾರ ಈ ವರದಿ ವಿರೋಧಿಸಿ 2004ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಇದಕ್ಕೂ ಮುನ್ನ 1970 ಡಿಸೆಂಬರ್ 6ರಂದು ಸಂಸತ್‌ನಲ್ಲಿ ಈ ವರದಿ ಮಂಡಿಸಲಾಗಿತ್ತು. ಆದರೆ, ಈ ಬಗ್ಗೆೆ ಚರ್ಚೆಯೇ ಆಗಲಿಲ್ಲ. ಈ ವರದಿ ಮಂಡನೆಯಾಗಿ 65 ವರ್ಷಕ್ಕೂ ಹೆಚ್ಚು ಸಮಯವಾಗಿದ್ದು, ಇದನ್ನು ಸಂಸತ್ ತಿರಸ್ಕರಿಸಬೇಕು. ಇಲ್ಲವೇ ಚರ್ಚಿಸಿ ಅಂಗೀಕರಿಸಬೇ ಕಿತ್ತು. ಇದೆರಡೂ ಆಗದಿರುವ ಕಾರಣ, ಇದಕ್ಕೆ ಇನ್ನೂ ಕಾಯಿದೆ ರೂಪ ಬಂದಿಲ್ಲ. ಹೀಗಾಗಿ ವರದಿ ಅಂಗೀಕಾರವಾಗಿ ಕಾಯಿದೆ ಆಗುವವರೆಗೂ ಈ ವರದಿ ಅಂತಿಮ ಅಲ್ಲ ಎನ್ನುತ್ತಾರೆ ಕಾನೂನು ತಜ್ಞರು.

ಮಹದಾಯಿ ಮೇಲೆ ಹಕ್ಕು ಕಷ್ಟ
ಮಹಾಜನ್ ವರದಿಯನ್ನು ಕರ್ನಾಟಕ ಸಂಪೂರ್ಣ ಒಪ್ಪಿಕೊಂಡರೆ, ಈಗಿನ ರಾಜ್ಯ ಸರಕಾರ ವಿವಾದಿತ ಮಹದಾಯಿ ನೀರಿನ ಮೇಲೆ ಹೆಚ್ಚಿನ ರೀತಿಯ ಹಕ್ಕು ಸಾಧಿಸುವುದು ಕಷ್ಟವಾಗಬಹುದು. ಏಕೆಂದರೆ ವರದಿ ಪ್ರಕಾರ ಖಾನಾಪುರ ಆಜುಬಾಜಿನ 152 ಹಳ್ಳಿಗಳು ಮಹಾರಾಷ್ಟ್ರಕ್ಕೆ ಹೋಗುತ್ತವೆ. ಹಾಗೆಯೇ ಮಲಪ್ರಭ ಹುಟ್ಟುವ ತಾಂಬೋಟಿ ಗ್ರಾಮ ಕೂಡ ಮಹರಾಷ್ಟ್ರಕ್ಕೆ ಸೇರುವ ಸಾಧ್ಯತೆಯಿದೆ. ಇದರ ಮೇಲೆಯೂ ನಮಗೆ ಅಷ್ಟು ನಿಯಂತ್ರಣ ಸಿಗುವುದು ದುಸ್ತರವಾಗಬಹುದು ಎನ್ನುತ್ತಾರೆ ಕಾನೂನು ತಜ್ಞರು.

ಸರಕಾರ ಮಾಡಬೇಕಿರುವುದ್ದೇನು?
ಬೆಳಗಾವಿ ಮತ್ತು ಅನೇಕ ಹಳ್ಳಿಗಳು ತಮಗೆ ಸೇರಬೇಕೆನ್ನುವ ವಾದ ಮುಂದಿಟ್ಟು, ಮಹಾರಾಷ್ಟ್ರ ಸುಪ್ರೀಂಕೋರ್ಟ್‌ನಲ್ಲಿ ದಾವೆ
ಹೂಡಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯ ಸರಕಾರ ಪ್ರತಿ ಹೋರಾಟ ನಡೆಸಿತ್ತು. ಆದರೆ, ಇದರ ವೇಗ ಕಡಿಮೆ ಯಾಗಿದ್ದು, ಇದನ್ನು ಹೆಚ್ಚಿಸಬೇಕಿದೆ. ಈ ಹಿಂದೆ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ಅವರನ್ನು ಗಡಿ ಉಸ್ತುವಾರಿ
ಸಚಿವ ರನ್ನಾಗಿ ನೇಮಿಸಿತ್ತು. ಅದೇ ರೀತಿ ಈ ಸರಕಾರವೂ ಗಡಿ ತಂಟೆ ತಡೆಗೆ ಸಚಿವರೊಬ್ಬರನ್ನು ನಿಯೋಜಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಸಂಸತ್‌ನಲ್ಲಿ ಈ ವಿಚಾರ ಚರ್ಚೆಯಾಗಿರುವಂತೆ ಸೂಕ್ತ ರಾಜ್ಯಕ್ಕೆ ಪೂರಕ ನಿರ್ಣಯಗಳಾಗುವಂತೆ ಮಾಡಬೇಕೆಂದು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ.

ನ್ಯಾ.ಮಹಾಜನ್ ವರದಿಯಿಂದ ರಾಜ್ಯಕ್ಕೆ ಅನುಕೂಲ, ಅನನುಕೂಲ ಎರಡು ಇರಬಹುದು. ಆದರೆ, ಇದನ್ನು ಸಂಸತ್‌ನಲ್ಲಿ ಅಂಗೀಕರಿಸಿ, ಕಾಯಿದೆ ಮಾಡಿದರೆ ಉತ್ತಮ. ವರದಿಯೇ ಅಂತಿಮ ಎಂದು ಎರಡೂ ರಾಜ್ಯಗಳು ಈ ಹಿಂದೆಯೇ ಒಪ್ಪಿಕೊಂಡು ಆಗಿದೆ. ಈಗ ಮಹಾರಾಷ್ಟ್ರ ಗಡಿ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದು ಅಪ್ರಸ್ತುತ.
– ಡಾ. ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

ರಾಜ್ಯ ಸರಕಾರ ಮಹಾಜನ್ ವರದಿಯನ್ನು ಒಪ್ಪಿಕೊಳ್ಳುವ ಬದಲು ಯಥಾಸ್ಥಿತಿ ಕಾಯ್ದುಕೊಳ್ಳಲು ಹೋರಾಟ ನಡೆಸಬೇಕು. ವರದಿಯಿಂದ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಪದೇಪದೆ ಹೇಳಿಕೆ ನೀಡುವ ಮಹಾರಾಷ್ಟ್ರ ನಾಯಕರ ವಿರುದ್ಧ ಕೇಸು ದಾಖಲಿಸಬೇಕು.

-ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಮಹಾಜನ್ ವರದಿಯಿಂದ ರಾಜ್ಯ ಕೆಲವು ಭಾಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ, ತುಂಬಾ ನಷ್ಟವೇನು ಆಗುವುದಿಲ್ಲ. ಆದ್ದರಿಂದ ಕೇಂದ್ರ ಸರಕಾರ ಈ ವರದಿಯನ್ನು ಕಾಯಿದೆ ಮಾಡಬೇಕು. ಇಲ್ಲವೇ ಯಥಾಸ್ಥಿತಿಯನ್ನೇ  ಅಂತಿಮಗೊಳಿಸಿ, ತೀರ್ಮಾನ ಕೈಗೊಳ್ಳಬೇಕು.
– ವಾಟಾಳ್ ನಾಗರಾಜ, ಕನ್ನಡ ಚಳವಳಿ ಪಕ್ಷದ ನಾಯಕ

Leave a Reply

Your email address will not be published. Required fields are marked *

error: Content is protected !!