Saturday, 27th July 2024

ಸ್ಥಳೀಯ ರಸ್ತೆ, ಮುಖ್ಯ ರಸ್ತೆ ಎಂಬೆಲ್ಲ ವ್ಯತ್ಯಾಸಗಳಿಲ್ಲ: ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌

ಬೆಂಗಳೂರು: ಕಾನೂನಿನಲ್ಲಿ ಸ್ಥಳೀಯ ರಸ್ತೆ ಮತ್ತು ಮುಖ್ಯ ರಸ್ತೆ ಎಂಬ ವ್ಯತ್ಯಾಸವಿಲ್ಲ. ಪ್ರತಿಯೊಬ್ಬ ಜವಾಬ್ದಾರಿ ಯುತ ಪ್ರಜೆಯು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಎಚ್ಚರಿಸಿದ್ದಾರೆ.

ಟ್ವಿಟರ್‌ನಲ್ಲಿ ಶನಿವಾರ #AskCPBLR ಕಾರ್ಯಕ್ರಮ ನಡೆಸಿಕೊಟ್ಟ ಕಮಲ್‌ ಪಂತ್‌, ಬೆಳಗ್ಗೆ 11ರಿಂದ ಮಧ್ಯಾಹ್ನ 12 ವರೆಗೆ 1 ಗಂಟೆ ಕಾಲ ಟ್ವಿಟರ್‌ನಲ್ಲಿ ಲೈವ್‌ ಪ್ರಶ್ನೋತ್ತರ ನಡೆಸಿಕೊಟ್ಟರು. ನಾಗರಿಕರಿಂದ ದೂರುಗಳು, ಪ್ರಶ್ನೆ ಗಳನ್ನು ಸ್ವೀಕರಿಸಿ, ತಕ್ಷಣ ಪ್ರತಿಕ್ರಿಯೆ ನೀಡಿದರು. ಸಲಹೆಗಳನ್ನು ಸ್ವೀಕರಿಸಿದರು.

ಜತಿನ್‌ ಎಂಬ ಹೆಸರಿನ ಟ್ವಿಟರ್‌ ಖಾತೆಯಿಂದ, ‘ದಯವಿಟ್ಟು ಪೊಲೀಸರಿಗೆ ಸ್ಥಳೀಯ ರಸ್ತೆ ಹಾಗೂ ಮುಖ್ಯ ರಸ್ತೆ ಗಿರುವ ವ್ಯತ್ಯಾಸ ತಿಳಿಸಿಕೊಡಿ. ಕೆಲವು ಸಂದರ್ಭ ಗಳಲ್ಲಿ ಸ್ಥಳೀಯ ರಸ್ತೆಗಳಲ್ಲಿ ದಂಡ ವಿಧಿಸುತ್ತಾರೆ. ದಯವಿಟ್ಟು ಈ ಬಗ್ಗೆ ಗಮನಹರಿಸಿ’ ಎಂಬ ಕೋರಿಕೆ ವ್ಯಕ್ತವಾಯಿತು.

‘ನಾನಿಲ್ಲಿ ಒಂದು ಸಂಗತಿಯನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಕಾನೂನಿನ ಪ್ರಕಾರ ಸ್ಥಳೀಯ ರಸ್ತೆ ಮತ್ತು ಮುಖ್ಯ ರಸ್ತೆ ಎಂಬೆಲ್ಲ ವ್ಯತ್ಯಾಸಗಳಿಲ್ಲ. ರಸ್ತೆಗಳಲ್ಲಿ ಓಡಾಡುವ ಪ್ರತಿಯೊಬ್ಬನು ಜವಾಬ್ದಾರಿಯುತ ಪ್ರಜೆಯಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಸ್ವಯಂ ಸುರಕ್ಷತೆಗಾಗಿ, ಸಹಪ್ರಯಾಣಿಕರು ಹಾಗೂ ಪಾದಚಾರಿಗಳ ಸುರಕ್ಷತೆ ಗಾಗಿ ನಿಯಮಗಳನ್ನು ಪಾಲಿಸಬೇಕು’ ಎಂದು ಕಿವಿ ಹಿಂಡಿದರು.

ಸಂಚಾರಿ ಪೊಲೀಸ್‌ ವಾಹನಗಳ ಹಾರ್ನ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಆನಂದ್‌ ರಾಘವನ್‌ ಎಂಬುವವರು ಪ್ರಶ್ನಿಸಿದ್ದು, ಮಕ್ಕಳಿಗೆ, ವೃದ್ಧರಿಗೆ ಭಯ ಮತ್ತು ಆತಂಕ ತರಿಸುವಂತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ವಿನಂತಿಸಿದರು. ಹಾರ್ನ್‌ ಶಬ್ದವನ್ನು ಸಮರ್ಥಿಸಿಕೊಂಡ ಪೊಲೀಸ್‌ ಕಮಿಷನರ್‌, ಪೊಲೀಸರು ಗಸ್ತು ತಿರುಗುತ್ತಿದ್ದಾರೆ ಎಂಬುದನ್ನು ನಾಗರಿಕರ ಗಮನಕ್ಕೆ ತರಲು ಇದು ಅನಿವಾರ್ಯ’ ಎಂದು ಉತ್ತರಿಸಿದರು.

Leave a Reply

Your email address will not be published. Required fields are marked *

error: Content is protected !!