Friday, 26th July 2024

15 ತಿಂಗಳು ಶೈತ್ಯಾಗಾರದಲ್ಲೇ ಉಳಿದಿತ್ತು ಸೋಂಕಿತ ಮೃತದೇಹಗಳು …!

#RajajiNagar ESI

ಬೆಂಗಳೂರು: ಕೋವಿಡ್ ಮೊದಲ ಅಲೆಯ ಸೋಂಕಿಗೊಳಗಾಗಿ ಮೃತಪಟ್ಟ ಇಬ್ಬರ ಮೃತದೇಹಗಳು 15 ತಿಂಗಳುಗಳ ಕಾಲ ಅಂತ್ಯ ಸಂಸ್ಕಾರವನ್ನು ಕಾಣದೆ ಶವಾಗಾರದ ಶೈತ್ಯಾಗಾರದಲ್ಲೇ ಉಳಿದ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ವರದಿಯಾಗಿದೆ.

ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಕಾರ್ಮಿಕ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಚಾಮರಾಜ ಪೇಟೆಯ ದುರ್ಗಾ(40) ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು (35) ಎಂಬವರು ಕೋವಿಡ್ ಸೋಂಕಿನಿಂದ 2020ರ ಜುಲೈ ತಿಂಗಳಲ್ಲಿ ಮೃತ ಪಟ್ಟಿದ್ದರು. ಈ ವೇಳೆ ಕೋವಿಡ್ ನಿಂದ ಮೃತಪಟ್ಟವರ ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡದೆ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಿ ಸರಕಾರದ ವತಿಯಿಂದಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಅದರಂತೆ ಮೃತದೇಹಗಳನ್ನು ಅಂತ್ಯಸಂಸ್ಕಾರದ ಉದ್ದೇಶದಿಂದ ರಾಜಾಜಿ ನಗರದ ಇಎಸ್‌ಐ ಆಸ್ಪತ್ರೆಯ ಶವಾಗಾರದ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಆದರೆ ಅಂತ್ಯ ಸಂಸ್ಕಾರ ನೆರವೇರಿಸಲೇ ಇಲ್ಲ. ಅಲ್ಲದೆ ಈ ಎರಡು ಮೃತದೇಹಗಳು ಶವಾಗಾರದಲ್ಲೇ ಉಳಿದಿದ್ದು, 15 ತಿಂಗಳ ಬಳಿಕ ಇದೀಗ ಬೆಳಕಿಗೆ ಬಂದಿದೆ.

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ಹೊಸ ಶವಾಗಾರ‌ ನಿರ್ಮಾಣದ ಬಳಿಕ ಹಳೆ ಶವಾಗಾರದ ಬಳಕೆಯನ್ನು ಸ್ಥಗಿತಗೊಳಿಸ ಲಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಮೃತದೇಹಗಳನ್ನು ಇಟ್ಟಿರುವುದನ್ನೇ ಸಿಬ್ಬಂದಿ ಮರೆತಿದ್ದೇ ಎಡವಟ್ಟಿಗೆ ಕಾರಣ ಎನ್ನಲಾಗಿದೆ. ಇದೀಗ ಆಸ್ಪತ್ರೆಯ ಮತ್ತು ಬಿಬಿಎಂಪಿ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬೆಳಕಿಗೆ ಬಂದಿದ್ದು, ಮೃತರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ಪರಿಸ್ಥಿತಿಯಲ್ಲಿ ಬೇರೆ ಬೇರೆ ರೀತಿಯ ಕರುಳು ಹಿಂಡುವ ಘಟನೆಗಳನ್ನು ನಾವು ಕೇಳಿದ್ದೆವು. ಆದರೆ ಇ.ಎಸ್.ಐ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಅತ್ಯಂತ ದುರ್ದೈವ. ಬೇಜವಾಬ್ದಾರಿತನ ಮತ್ತು ಅಮಾನವೀಯ ವರ್ತನೆಯ ಪರಾಕಾಷ್ಠೆ. ತಾವು ಈ ಕುರಿತು ಕೂಡಲೇ ಆಗತ್ಯ ಕ್ರಮ ಜರುಗಿಸಿ ತಪ್ಪಿತಸ್ಥರ ಮೇಲೆ ಅಗತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

error: Content is protected !!