Sunday, 23rd June 2024

ಐದನೇ ರಾಜ್ಯ ಹಣಕಾಸು ಅಯೋಗದಿಂದ ಕಲಬುರಗಿ‌ ವಿಭಾಗ ಮಟ್ಟದ ಸಭೆ

ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಾಮರ್ಶೆ

ಕಲಬುರಗಿ: ಐದನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ನಿವೃತ್ತ ಐ.ಎ.ಎಸ್. ಅಧಿಕಾರಿ ಮೊಹಮ್ಮದ್ ಸನಾವುಲ್ಲಾ ಹಾಗೂ ರಾಜ್ಯ ಲೆಕ್ಕಪತ್ರ ಇಲಾಖೆಯ ನಿವೃತ್ತ ನಿಯಂತ್ರಕರಾದ ಆರ್.ಎಸ್.ಫೊಂಡೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಎಂ.ಡಿ ಮತ್ತು ಆಯೋಗದ ಕಾರ್ಯದರ್ಶಿ ಉಜ್ವಲ ಕುಮಾರ ಘೋಷ್ ಅವರು ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಲಬುರಗಿ ವಿಭಾಗೀಯ ಮಟ್ಟದ 5ನೇ ರಾಜ್ಯ ಹಣಕಾಸು ಆಯೋಗ ಸಭೆ ನಡೆಸಿ ಕಲಬುರಗಿ ವಿಭಾಗದ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಾಮರ್ಶಿಸಿದರು.

ಪೌರ ಸಂಸ್ಥೆಗಳಿಂದ ನಗರ-ಪಟ್ಟಣದ ನಿವಾಸಿಗಳ ಕಲ್ಯಾಣಕ್ಕೆ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಿಗೆ ಹಣಕಾಸು ಆಯೋಗದಿಂದ ನೀಡಲಾದ ಅನುದಾನದಡಿ ಇದೂವರೆಗಿನ ಖರ್ಚು-ವೆಚ್ಚ ಹಂಚಿಕೆ  ಸೇರಿದಂತೆ ನಾಗರಿಕರಿಗೆ ನೀಡಲಾಗುತ್ತಿರುವ ಸವಲತ್ತುಗಳ ಬಗ್ಗೆ ವಿಸ್ತಾರವಾಗಿ ಆಯಾ ಜಿಲ್ಲೆಗಳ ಅಧಿಕಾರಿಗಳಿಂದ ಆಯೋಗವು ಸಮಗ್ರ ಮಾಹಿತಿ ಪಡೆಯಿತು.

ಸಭೆಯ ಚರ್ಚೆಯಲ್ಲಿ ಆಯೋಗದ ಸದಸ್ಯ ಮೊಹಮ್ಮದ್ ಸನಾವುಲ್ಲಾ ಮಾತನಾಡಿ, ಪೌರ ಸಂಸ್ಥೆಗಳಿಂದ ಖಾತಾ, ಆಸ್ತಿ ವರ್ಗಾವಣೆದಂತಹ ಪ್ರಕರಣ ದಲ್ಲಿ ಸಾರ್ವಜನಿಕರಿಂದ ಅನಗತ್ಯ ದಾಖಲೆ ಕೇಳಿ ಅರ್ಜಿ ವಿಲೇವಾರಿಯಲ್ಲಿ ವಿಳಂಬ ಮಾಡದೆ ಕಾಲಮಿತಿಯಲ್ಲಿ ಸೇವೆ ನೀಡಬೇಕು. ಅರ್ಜಿ ವಿಲೇವಾರಿ ಮತ್ತಷ್ಟು ಜನಸ್ನೇಹಿಯಾಗಿ ಸರಳೀಕರಣಗೊಳಿಸಬೇಕು. ಹೀಗಾದಾಗ ಮಾತ್ರ ಪೌರ ಸಂಸ್ಥೆಗಳ ಮೇಲೆ ಸಾರ್ವಜನಿಕರ ಗೌರವ ಹೆಚ್ಚುವುದಲ್ಲದೆ ಅವರಿಂದ ಸರಿಯಾಗಿ ಕರ ಪಾವತಿ ನಿರೀಕ್ಷಿಸಬಹುದಾಗಿದೆ ಎಂದರು.

ಈ ವೇಳೆಯಲ್ಲಿ ಬೀದರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ ಅವರು ಮಾತನಾಡಿ, ಬೀದರ ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸುದ್ದಿನ್, ಕೊಪ್ಪಳ ಡಿ.ಯು.ಡಿ.ಸಿ ಯೋಜನಾ ನಿರ್ದೇಶಕಿ ಕಾವ್ಯರಾಣಿ, ವಿಜಯನಗರದ ಪಿ.ಡಿ. ಈರಣ್ಣಾ ಬಿರಾದಾರ ಮಾತನಾಡಿದರು. ಮಧ್ಯಾಹ್ನ ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಯಿತು.

ಸಭೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಸೇರಿದಂತೆ ಏಳು ಜಿಲ್ಲೆಗಳಿಂದ ಬಂದ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದರು.

ಕರ ಪಾವತಿಗೆ ಸಾಫ್ಟವೇರ್ ಸಿದ್ದಪಡಿಸಿ: ನಗರ-ಪಟ್ಟಣಗಳ ಅಭಿವೃದ್ಧಿ ಸ್ಥಳೀಯ ಸಂಪನ್ಮೂಲ ಕ್ರೋಢಿಕರಣದ ಮೇಲೆ‌ ನಿರ್ಧರಿತವಾಗಿರುತ್ತದೆ. ಹೀಗಾಗಿ ಪೌರ ಸಂಸ್ಥೆಗಳು ಕರ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಭಿನ್ನ ಪ್ರಯೋಗ ಮಾಡಿ ಕರ ವಸೂಲಿ ಮಾಡಬೇಕು. ಆನ್ ಲೈನ್, ಮೊಬೈಲ್ ಮೂಲಕ ಕರ ಪಾವತಿಗೆ ಅವಕಾಶ ಕಲ್ಪಿಸಬೇಕು. ವಿಶೇಷವಾಗಿ ಕರ ಪಾವತಿಯಿಂದ ನಗರದಲ್ಲಾಗುವ ಅಭಿವೃದ್ದಿ ಕಾರ್ಯಗಳ ಕುರಿತು ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಅವರನ್ನು ಪ್ರೇರೇಪಿಸಬೇಕಿದೆ. ವಾಸ್ತವವಾಗಿ ನೀವು ಜನರ ಬಳಿಗೆ ಹೋಗಲ್ಲ, ಅವ್ರು ಕರ ಕಟ್ಟಲ್ಲ. ಈ ಪರಿಸ್ಥಿತಿ ಬದಲಾಯಿಸಬೇಕಿದೆ. ಚುನಾ ಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಸಮನ್ವಯತೆಯಿಂದ ಈ ಕಾರ್ಯ ಮಾಡಬೇಕಿದೆ ಎಂದು ಸಭೆಯಲ್ಲಿ ಸೂಚಿಸಲಾಯಿತು.

Leave a Reply

Your email address will not be published. Required fields are marked *

error: Content is protected !!