Friday, 21st June 2024

ವೇದಿಕೆ ಮೇಲೂ ಅನ್ಸಾರಿ- ಶ್ರೀನಾಥ ಗುದ್ದಾಟ!

– ಗಂಗಾವತಿಯಲ್ಲಿ ನಡೆದ ಸಭೆಯಲ್ಲಿ ಉಭಯ ನಾಯಕರ ಗೊಂದಲ‌ ಬಹಿರಂಗ
– ಸಿಎಂ ಮಾತಿಗೂ ಕಿಮ್ಮತ್ತು ನೀಡದ ಮುಖಂಡರು

ಗಂಗಾವತಿ: ಲೋಕಸಭೆ ಚುನಾವಣೆಯ‌ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದರೂ, ಗಂಗಾವತಿ ಕಾಂಗ್ರೆಸ್ ನಾಯಕರ ಗುದ್ದಾಟ ಮುಂದುವರೆದಿದೆ. ಶಾಸಕ ಇಕ್ಬಾಲ್ ಅನ್ಸಾರಿ ಬಹಿರಂಗ ಸಮಾವೇಶದಲ್ಲೂ ಸ್ವಪಕ್ಷದ ನಾಯಕರ‌ ವಿರುದ್ಧ ವಾಗ್ದಾಳಿ ಮಾಡಿದರು. ಮಾಜಿ ಶಾಸಕರಾದ ಎಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಹೆಸರು ಪ್ರಸ್ತಾಪಿಸದೇ ನನ್ನ ಸೋಲಿಗೆ ಇವರೇಎ ಕಾರಣ.‌ ಜನಾರ್ದನ ರೆಡ್ಡಿ ಜೊತೆಗೆ ಡೀಲ್ ಕುದುರಿಸಿಕೊಂಡು ನನ್ನ ಸೋಲಿಗೆ ಕಾರಣರಾದರು. ಇದಕ್ಕೆ‌ ಮುಂದಿನ ದಿನದಲ್ಲಿ ಮತದಾರರು ತಕ್ಕ ಉತ್ತರ ನೀಡಬೇಕು ಎಂದು ವಾವ್ದಾಳಿ ಮಾಡಿದರು.

ಈ ವೇಳೆ ವೇದಿಕೆ ಮೇಲಿದ್ದ ಎಚ್.ಆರ್.ಶ್ರೀನಾಥ ವೇದಿಕೆ ಮೇಲೆಯೇ ಅಸಮಾಧಾನ ಹೊರ ಹಾಕಿದರು. ಶಾಸಕ ರಾಘವೇಂದ್ರ ಹಿಟ್ನಾಳ ಶ್ರೀನಾಥ ಅವನ್ನು ಸಮಾಧಾನ ಮಾಡುತ್ತಿದ್ದ ದೃಶ್ಯ ಕಂಡು ಬಂದವು. ಅನ್ಸಾರಿ ಮಾತು ಮುಗಿದ ನಂತರ ಹೆಸರು ಹೇಳುವ ಮೊದಲೇ ಮೈಕ್ ಮುಂದೆ ಬಂದ ಎಚ್.ಆರ್.ಶ್ರೀನಾಥ, ಮಾತನಾಡಲು ಮುಂದಾದರು. ಈ ವೇಳೆ ಸ್ವತಃ ಸಿಎಂ ಸಿದ್ದರಾಮಯ್ಯ ಎದ್ದು ಬಂದು ಸಮಾಧಾನ ಮಾಡಿದರೂ ಜಗ್ಗದ ಎಚ್.ಆರ್.ಶ್ರೀನಾಥ, ಒಂದೆರಡು ಮಾತನಾಡುತ್ತೇನೆ ಎಂದು ಮನವಿ ಮಾಡಿದರು.

ಈ ವೇಳೆ ವೇದಿಕೆ ಮುಂದಿದ್ದ ಸಾವಿರಾರು ಜನ ಶ್ರೀನಾಥ ಭಾಷಣಕ್ಕೆ ಅಡ್ಡಿ ಮಾಡಿದರು. ವೇದಿಕೆ ಮೇಲಿದ್ದ ಅನ್ಸಾರಿ ಬೆಂಬಲಿಗರು ಕೈ ಮಾಡುವ ಮೂಲಕ ಅಡ್ಡಿ ಮಾಡುವಂತೆ ಪ್ರಚೋದನೆ ಮಾಡಿದ ದೃಶ್ಯ ಕಂಡು ಬಂತು. ಗಲಾಟೆ ನಡುವೆಯೇ ಮಾತನಾಡಿದ ಎಚ್.ಆರ್.ಶ್ರೀನಾಥ, ನಮ್ಮ ಕುಟುಂಬ ಯಾವತ್ತೂ ಕಾಂಗ್ರೆಸ್ ‌ಪರ ಇದೆ. ನಾನು ಸಿದ್ಧರಾಮಯ್ಯ ಅವರು 1991 ರಲ್ಲಿ ಕೊಪ್ಪಳ ಲೋಕಸಭೆಗೆ ಸ್ಪರ್ಧೆ ‌ಮಾಡಿದ್ದಾಗ, ಅವರ ಪರ ಕೆಲಸ ಮಾಡಿದ್ದೇನೆ ಎಂದು ನೆನಪಿಸಿದರು. ಕೆಲವರು ನಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಅನ್ಸಾರಿ ವಿರುದ್ಧ ಮಾತನಾಡಿದರು.

ನಂತರ ಸಿಎಂ ಸಿದ್ದರಾಮಯ್ಯ ಮಾತನಾಡಿ, ಎಸ್ಸಿ/ ಎಸ್ಟಿಗೆ ಮೀಸಲಿಟ್ಟ ಅನುದಾನ ಬೇರೆ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಜಾಹೀರಾತು ನೀಡಿದೆ. ಆದರೆ, ಬಿಜೆಪಿಗೆ ನೈತಿಕತೆ ಇಲ್ಲ. ಎಸ್ಸಿ/ ಎಸ್ಟಿಗೆ ವಿಶೇಷ ಅನುದಾನ ನೀಡುವ ಕಾನೂನು ಮಾಡಿದ್ದು ನಾನು ಸಿಎಂ ಆಗಿದ್ದಾಗ. ಬಿಜೆಪಿಗೆ ತಾಖತ್ ಇದ್ದರೆ ‌ಕೇಂದ್ರದಲ್ಲಿ ಇಂಥ ಕಾನೂನು ಜಾರಿ ಮಾಡಿ. ಎಸ್ಸಿಪಿಟಿಎಸ್ ಪಿ ಕಾನೂನು ಬಿಜೆಪಿ ಅಧಿಕಾರದಲ್ಲಿ ಇರುವ ಎಲ್ಲ ರಾಜ್ಯದಲ್ಲಿ ಕೇಂದ್ರದಲ್ಲಿ ಜಾರಿ ಮಾಡಿ ಎಂದು ಸವಾಲು ಹಾಕಿದರು. ಕೇಂದ್ರ ಸರಕಾರ ಮುಂಬಡ್ತಿಯಲ್ಲಿ ಮೀಸಲಾತಿ ನೀಡುವುದನ್ನು ರದ್ದು ಮಾಡಿದ್ದರು. ಇದನ್ನು ರತ್ನಪ್ರಭ ನೇತೃತ್ವದಲ್ಲಿ ಕಮಿಟಿ ಮಾಡಿ ಮತ್ತೇ ವಾಪಾಸ್ ಮುಂಬಡ್ತಿಯಲ್ಲಿ ಮೀಸಲಾತಿ ನೀಡಿದ ಸರಕಾರ ನಮ್ಮದು ಎಂದು ಮಾಹಿತಿ ನೀಡಿದರು.

ಮೋದಿ ನೀಡಿದ ಭರವಸೆಯಂತೆ ಕಳೆದ 10 ವರ್ಷದಲ್ಲಿ 20 ಕೋಟಿ ರೂ. ಉದ್ಯೋಗ ಸೃಷ್ಠಿ ಆಗಬೇಕಿತ್ತು. ಆದರೆ, ಕನಿಷ್ಠ 20 ಲಕ್ಷ ಉದ್ಯೋಗ ಕೂಡ ಸೃಷ್ಠಿ ಮಾಡಿಲ್ಲ. ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾಡುವ ಉದ್ರಿ ಸಲಹೆ ನೀಡಿದ ಪ್ರಧಾನಿ ‌ನರೇಂದ್ರ ಮೋದಿ ಬಗ್ಗೆ ಯುವಕರಿಗೆ ಗೊತ್ತಾಗಿದೆ. ಭಾರತದ ಇತಿಹಾಸದಲ್ಲಿ ಇಷ್ಟೊಂದು ಸುಳ್ಳು ಹೇಳಿದ ಪ್ರಧಾನಿ ನಾನು ನೋಡಿಲ್ಲ. ಯಾವುದೇ ಕಾರಣಕ್ಕೂ ವೋಟ್ ಹಾಕಬೇಡಿ ಎಂದು ಮನವಿ ಮಾಡಿದರು. ಲೋಕಸಭೆ ಚುನಾವಣೆಯಲ್ಲಿ ಅನೇಕ ಅಭ್ಯರ್ಥಿಗಳು ತಮಗೆ ಮತ ಕೇಳುತ್ತಿಲ್ಲ. ಬದಲಾಗಿ ಮೋದಿಗೆ ವೋಟ್ ಕೊಡಿ ಎನ್ನುತ್ತಿದ್ದಾರೆ. ಇಂಥ ಸುಳ್ಳು ಹೇಳಿದ ಪ್ರಧಾನಿಗೆ ವೋಟ್ ನೀಡಬೇಡಿ ಎಂದರು.

ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ಅಪಕೀರ್ತಿ ಶ್ರೀಮಾನ್ ಜನಾರ್ದನ ರೆಡ್ಡಿ ಅವರಿಗೆ ಸೇರುತ್ತದೆ. ನಾನು ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿ, ಜನಾರ್ದನ ರೆಡ್ಡಿ ಅವರು ಜೈಲಿಗೆ ಹೋಗುವಂತೆ ಮಾಡಿದ್ದೇನೆ. ಜನಾರ್ದನ ರೆಡ್ಡಿ ಶಾಸಕನಾದ ಬಳಿಕ ನನ್ನ ಬಳಿ ಬಂದು, ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ಕೊಟ್ಟಿದ್ದಕ್ಕೆ ನನಗೆ ಸನ್ಮಾನ ಮಾಡಿದರು. ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಮತ ನೀಡಿದರು. ಈಗ ಬಿಜೆಪಿ ಸೇರಿದ್ದು ಇಂಥವರನ್ನು ನಂಬಬೇಡಿ ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಶ್ರೀರಾಮ ನವಮಿ ದಿನ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿದ್ದ ನಮಗೆ ಪಾನಕ, ಕೋಸಂಬರಿ ನೀಡಿದರು. ಜೊತೆಗೆ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದಲ್ಲಿ ಪಾನಕ ಹಂಚಿಕೆ ಕಾರ್ಯ ಸಿದ್ದರಾಮಯ್ಯ ಮನೆಯಲ್ಲಿ ನಡೆದಿತ್ತು. ಇದು ಸಿದ್ದರಾಮಯ್ಯ ಅವರ ಬದ್ಧತೆ. ಬಿಜೆಪಿಯ ಯಾವ ಮುಖಂಡರೂ ಇಂಥ ಕೆಲಸ ಮಾಡುವುದಿಲ್ಲ. ಇನ್ನು ರಾಮ ಭಕ್ತ ಹನುಮಂತನ ಹೆಸರಿನಲ್ಲಿ ವೋಟ್ ಕೇಳುವ ಬಿಜೆಪಿ ಅಂಜನಾದ್ರಿ ಅಭಿವೃದ್ಧಿಗೆ ನೀಡಿದ ಕೊಡುಗೆ ಶೂನ್ಯ. ಆದರೆ, ಸಿದ್ದರಾಮಯ್ಯ ಅವರು ಎರಡು ಬಾರಿ 100 ಕೋಟಿ ರೂ.‌ಅನುದಾನ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಚಿವ ಸುರೇಶ ಬೈರತ್ತಿ, ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪೂರ, ಮಾಜಿ ಸಂಸದ ಸಂಗಣ್ಣ ಕರಡಿ, ಕಾಡಾ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ, ಮುಖಂಡರಾದ ಬಸನಗೌಡ ಬಾದರ್ಲಿ, ಶಾಸಕ ಶ್ರೀನಿವಾಸ, ಮಾಜಿ ಶಾಸಕರಾದ ಮಲ್ಲಿಕಾರ್ಜುನ ನಾಗಪ್ಪ, ಎಚ್.ಆರ್.ಶ್ರೀನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್, ಲಲಿತಾ ರಾಣಿ ಶ್ರೀರಂಗದೇವರಾಯಲು, ಬಸವರಾಜಸ್ವಾಮಿ, ಇಮ್ತಿಯಾಜ್ ಅನ್ಸಾರಿ ಇದ್ದರು.

ವಿರೋಧಿಗಳ ಹೆಸರೂ ಹೇಳದ‌ ಅನ್ಸಾರಿ!

ಕಾರ್ಯಕ್ರಮ‌ ಆರಂಭದಲ್ಲೇ ಅನ್ಸಾರಿ ತಮ್ಮ ವಿರೋಧಿಗಳಿಗೆ ಬಿಸಿ ಮುಟ್ಟಿಸಿದರು. ಪ್ರಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ಮೊದಲಿಗೆ ವೇದಿಕೆ ಮೇಲಿನ ಗಣ್ಯರನ್ನು ಸ್ವಾಗತಿಸಿದರು. ಈ ವೇಳೆ ವೇದಿಕೆ ಮೇಲೆ ಆಸೀನರಾಗಿದ್ದ ಎಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಮತ್ತು ಶ್ಯಾಮೀದ್ ಮನಿಯಾರ್ ಹೆಸರು ಹೇಳಲಿಲ್ಲ. ಈ ವೇಳೆ ಮೈಕ್ ಮುಂದೆ ಬಂದ ಸಚಿವ ಶಿವರಾಜ ತಂಗಡಗಿ ಈ ಮೂವರನ್ನು ಸ್ವಾಗತಿಸಿ, ಮೈಕ್ ಮತ್ತೇ ಇಕ್ಬಾಲ್ ಅನ್ಸಾರಿ ‌ಅವರಿಗೆ ವಾಪಾಸ್ ನೀಡಿದರು. ನಂತರ ಮಾತನಾಡಿದ ಅನ್ಸಾರಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ಮತ್ತು ‌ಎಸ್ಸಿ/ ಎಸ್ಟಿ ಮೀಸಲಾತಿ ರದ್ದು ಮಾಡುವುದಾಗಿ ಸಚಿವ ಅಮಿತ್ ಶಾ ಹೇಳಿದ್ದಾರೆ. ಇಡೀ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ತಮ್ಮ 77ನೇ ವಯಸ್ಸಿನಲ್ಲೂ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ನಾನು ವಿಧಾನಸಭೆ ಚುನಾವಣೆಗೆ ನಿಂತಾದ ತುಂಬಾ ಮೋಸ ಆಗಿದೆ. ನಾನು ಪದಾಧಿಕಾರಿ ಮಾಡಿದವರಿಂದಲೇ ನನಗೆ ಮೋಸ ಆಗಿದೆ. ನಾನು 80 ಸಾವಿರ ಡಿಜಿಟಲ್ ಮೆಂಬರ್ ಶಿಫ್ ಮಾಡಿದ್ದೇನೆ.‌ಇದರಲ್ಲಿ 5 ಸಾವಿರ ತೆಗೆದರೂ 75 ಸಾವಿರ ಮತ ಬರಬೇಕಿತ್ತು. ನಾನು ಯಾರ ಹೆಸರು ಹೇಳುವುದಕ್ಕೂ ಹೆದರುವುದಿಲ್ಲ. ಮುಂದೆ ಹೆಸರು ಹೇಳುತ್ತೇನೆ. ಸಂಗಣ್ಣ‌ ಕರಡಿ 10 ವರ್ಷ ಬಿಜೆಪಿಯಲ್ಲಿ ಇದ್ದು, ಸಂಸದರಾಗಿದ್ದರು. ಆದರೆ, ಯಾವತ್ತೂ ಮುಸ್ಲಿಂರಿಗೆ ತೊಂದರೆ ಕೊಟ್ಟಿಲ್ಲ. ಅವರನ್ನು ಜೈಲಿಗೆ ಹಾಕಿ, ಇವರ ಮೇಲೆ ಕೇಸ್ ಮಾಡಿ ಅಂತಾ ಕಿರಿಕಿರಿ ಮಾಡಿಲ್ಲ. ಆಕಸ್ಮಿಕವಾಗಿ ಅವರು ಬಿಜೆಪಿಯಲ್ಲಿ ಇದ್ದರು. ಇಂಥ ವ್ಯಕ್ತಿಗಳು ಕಾಂಗ್ರೆಸ್ ‌ಗೆ ಬಂದಿರುವುದು ಅತ್ಯಂತ ಸ್ವಾಗತಾರ್ಹ ಎಂದರು.

*

ಶಾಸಕ ಜನಾರ್ದನ ‌ರೆಡ್ಡಿ ವಲಸೆ ಹಕ್ಕಿ ಇದ್ದಂತೆ. ಸೀಜನ್ ನಲ್ಲಿ ಹಕ್ಕಿಗಳು ಬಂದು ಹೋಗುವಂತೆ ಜನಾರ್ದನ ರೆಡ್ಡಿ ಬಂದಿದ್ದಾರೆ. ಇವರು ಇಲ್ಲೇ ಶಾಶ್ವತವಾಗಿ ಇದ್ದು ರಾಜಕೀಯ ಮಾಡಲು ಬಂದಿಲ್ಲ. ನನ್ನ ಬಳಿ ಹಣ ಇಲ್ಲ. ಬಿಜೆಪಿಗರು ಬೇಕಾದರೆ ನನ್ನ ವಿರುದ್ಧ ಯಾವುದೇ ತನಿಖೆ ಮಾಡಿಸಲಿ. ಯಾವತ್ತೂ ನಾನು ರಾಜಕೀಯವೇ ಬದುಕು ಎಂದುಕೊಂಡಿದ್ದೇನೆ. ಕಾಂಗ್ರೆಸ್ ‌ಗೆಲ್ಲಿಸುವ ಮೂಲಕ ಸಿ.ಟಿ.ರವಿ ಅಲಿಯಾಸ್ ಒಟಿ ರವಿಗೆ ಮತದಾರರು ಉತ್ತರ ಕೊಡಬೇಕಿದೆ.
– ಸಂಗಣ್ಣ ಕರಡಿ, ಮಾಜಿ ಸಂಸದ

ಇಕ್ಬಾಲ್ ಅನ್ಸಾರಿ ಗೆದ್ದಿದ್ದರೆ ಮಂತ್ರಿ ಆಗಿರುತ್ತಿದ್ದರು. ಅವರನ್ನು ಸೋಲಿಸುವ ಮೂಲಕ ಗಂಗಾವತಿ ಮತದಾರರು ನಿಮಗೆ ನೀವೇ ಅನ್ಯಾಯ ಮಾಡಿಕೊಂಡಿದ್ದೀರಿ. ಮುಂದೆ ಅನ್ಸಾರಿ ಅವರಿಗೆ ಭವಿಷ್ಯ ಇದೆ. ಗಂಗವತಿ ಕಾಂಗ್ರೆಸ್ ಮುಖಂಡರು ನಿಮ್ಮ ಭಿನ್ನಾಭಿಪ್ರಾಯ ದಯವಿಟ್ಟು ಮರೆಬೇಕು. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಅಮರೇಗೌಡ ಅವರ ನಾಯಕತ್ವದಲ್ಲಿ ಎಲ್ಲರೂ ಕೆಲಸ ಮಾಡಬೇಕು.‌ ಮತದಾರರು ಕೂಡ ಒಗ್ಗಟ್ಟಿನಿಂದ ಮತ ಹಾಕಬೇಕು.

– ಸಿದ್ದರಾಮಯ್ಯ, ಸಿಎಂ

Leave a Reply

Your email address will not be published. Required fields are marked *

error: Content is protected !!