Saturday, 27th July 2024

ಕಾಂಗ್ರೆಸ್ ಸರಕಾರ ಜನತೆಯ ಮುಂದೆ ಬೆತ್ತಲಾಗಿದೆ: ಸಚಿವ ನಾರಾಯಣಸ್ವಾಮಿ 

ತುಮಕೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ಗೆ ಸಂಪುಟ ನಿರ್ಧಾರ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರಕಾರ ಜನತೆ ಮುಂದೆ ಬೆತ್ತಲಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ,  ಸಿಎಂ ಸಿದ್ದರಾಮಯ್ಯ ಆಕ್ಟ್, ಸೆಕ್ಷನ್ ಬಗ್ಗೆ ಮಾತನಾಡ್ತಾರೆ. ಅಂದು ಸಿಬಿಐ ನವರು ಅನುಮತಿ ಕೇಳಿದ್ರು, ಸರ್ಕಾರ ಅನುಮತಿ ನೀಡಿತ್ತು. ರಾಜ್ಯದ ಡಿಸಿಎಂ ನ್ಯಾಯಾಲಯಗಳಿಗೆ ಓಡಾಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ತೀರ್ಪಾಗಲಿ. ನ್ಯಾಯಾಲಯದ ಮುಂದೆಯೇ ಕ್ಲೀನ್ ಚೀಟ್ ಪಡೆದು ಜನರ ಮುಂದೆ ಹೋಗಬೇಕಿತ್ತು. ಇದೊಂದು ನ್ಯಾಯಾಲಯಕ್ಕೆ ಸವಾಲ್ ಹಾಕಿದ ರೀತಿಯಲ್ಲಿದೆ ಎಂದು ಹೇಳಿದರು.
ಒಂದು ಸಲ ಎಫ್.ಐಆರ್ ಆದ್ಮೇಲೆ ಚಾರ್ಜ್ ಶೀಟ್ ಕೊಟ್ಟರೆ ಬದಲಾವಣೆ ಮಾಡಲು ನ್ಯಾಯಾಧೀಶರ ಅನುಮತಿ ಪಡೆಯಬೇಕು. ಪ್ರಕರಣಗಳು ಒಂದು ಸಲ ಕೋರ್ಟ್ ಗೆ ಹೋದ್ರೆ ನ್ಯಾಯಾಧೀಶರೇ ತೀರ್ಮಾನ ತೆಗೆದುಕೊಳ್ಳಬೇಕು. ಕ್ಯಾಬಿನೆಟ್ ಗೆ ಯಾವುದೇ ಅಧಿಕಾರ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.
ಜಾತಿ ಗಣತಿ ವಿಚಾರ ಮಾತನಾಡಿ, ಜಾತಿ ಗಣತಿ ವರದಿ ಅವಶ್ಯಕತೆಯಿದೆ. ಜನಗಣತಿ 2011ರಲ್ಲಿ ನಡೆದಿದೆ, ಈವರೆಗೆ ಆಗಿಲ್ಲ. ಯಾವುದೇ ಪಂಚವಾರ್ಷಿಕ ಯೋಜನೆಗಳ ಜಾರಿಗೆ ಜನಸಮುದಾಯಗಳ ಸಾಮಾಜಿಕ, ಅರ್ಥಿಕ ಮಾಹಿತಿ ಅತ್ಯವಶ್ಯಕ ಎಂದು ಜಾತಿ ಗಣತಿ ವರದಿ ಪರ ಬ್ಯಾಟ್ ಬೀಸಿದರು.
ಪ್ರತಿ ಐದು ವರ್ಷಕ್ಕೊಮ್ಮೆ ಜಾತಿಗಣತಿ ವರದಿ ಆಗಬೇಕು ಎಂದ ಸಚಿವರು, ವರದಿ ನಾಪತ್ತೆ ವಿಚಾರ, ಎಲ್ಲಿ ನಾಪತ್ತೆ ಆಯ್ತು ತನಿಖೆ ಆಗಬೇಕಿತ್ತು. ಆದರೆ, ತನಿಖೆ ಮಾಡದೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಒಳ ಮೀಸಲಾತಿ ಕುರಿತು ಎ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿ, ಒಳ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಬದ್ದ. ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ಒಲವು ತೋರಿಸಿದ್ದಾರೆ. ಸುಪ್ರಿಂ ಕೋರ್ಟ್ ಸಹ ಫೆಬ್ರವರಿಯಲ್ಲಿ ಈ ಬಗ್ಗೆ ತೀರ್ಪು ನೀಡಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!