Saturday, 27th July 2024

ಕಾವೇರಿ 2.0 ತಂತ್ರಾಂಶದಿಂದ ತ್ವರಿತ ಗತಿಯಲಿ ಆಸ್ತಿ ನೋಂದಣಿ: ಆಯುಕ್ತೆ ಮಮತ

ತುಮಕೂರು: ಕಾವೇರಿ ತಂತ್ರಾಂಶ 2.0 ಅಳವಡಿಕೆಯಿಂದ ಯಾವುದೇ ಆಸ್ತಿಯನ್ನು ಖರೀದಿಸುವುದಕ್ಕಿಂತ ಮೊದಲೇ ಆಸ್ತಿಯ ಮೇಲೆ ಇರುವ ಋಣಭಾರ ಹಾಗೂ ನೋಂದಣಿ ಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆಯಲ್ಲದೆ ಈ ತಂತ್ರಾಂಶದಿಂದ ಆಸ್ತಿ ನೋಂದಣಿಯನ್ನು ತ್ವರಿತಗತಿಯಲ್ಲಿ ಮಾಡಬಹುದಾಗಿದೆ ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಇಲಾಖೆಯ ಆಯುಕ್ತೆ ಬಿ.ಆರ್. ಮಮತ ಹೇಳಿದರು.
ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯ ಆವರಣದಲ್ಲಿ ಮಂಗಳ ವಾರ ಕಾವೇರಿ 2.0 ತಂತ್ರಾಂಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿ ಕರು ತಮ್ಮ ಆಸ್ತಿಯ ನೋಂದಣಿಗಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಈ ತಂತ್ರಾಂಶವನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು.
ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಯ ವಿವರ ಮತ್ತು ಮೂಲ ದಾಖಲೆಗಳನ್ನು ಆನ್‌ಲೈನ್ ಮೂಲಕ ನೇರವಾಗಿ ಉಪ ನೋಂದಣಾಧಿಕಾರಿಗೆ ಕಳುಹಿಸ ಬಹುದು. ಅಧಿಕಾರಿಗಳು ಪರಿಶೀಲಿಸಿದ ನಂತರ ನೋಂದಣಿಗೆ ತಗಲುವ ವೆಚ್ಚವನ್ನು ಖಜಾನೆಗೆ ಆನ್‌ಲೈನ್ ಮೂಲಕ ಪಾವತಿಸಿ ನಮಗೆ ಬೇಕಾದ ದಿನಾಂಕ ಮತ್ತು ಸಮಯವನ್ನು ನಿಗಧಿಪಡಿಸಿಕೊಳ್ಳಲು ಅವಕಾಶವಿದೆ. ನಿಗಧಿಪಡಿಸಿಕೊಂಡ ದಿನದಂದು ಕೆಲವೇ ನಿಮಿಷದಲ್ಲಿ ಭಾವಚಿತ್ರ, ಸಹಿ ಹಾಗೂ ಹೆಬ್ಬೆಟ್ಟಿನ ಗುರುತು ತೆಗೆದುಕೊಂಡು ನೋಂದಣಿ ಮಾಡಿಕೊಡಲಾಗುವುದು ಎಂದರು.
ಕಾವೇರಿ 2.0 ತಂತ್ರಾಂಶವು ಜನಸ್ನೇಹಿಯಾಗಿ ಕೆಲಸ ಮಾಡುತ್ತದೆ. ಸಾರ್ವಜನಿಕರೇ ತಮ್ಮ ಆಸ್ತಿಯ ದಸ್ತಾವೇಜುಗಳನ್ನು ನೇರವಾಗಿ ದಾಖಲಿಸುವುದರಿಂದ ಲೋಪಗಳು ಕಡಿಮೆಯಾಗುತ್ತವೆ. ಈ ತಂತ್ರಾಂಶ ಅಳವಡಿಸುವುದರೊಂದಿಗೆ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳಾದ ಪ್ರತ್ಯೇಕ ಕೌಂಟರ್, ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ತಾಯಂದಿರು ಶಿಶುಗಳಿಗೆ ಹಾಲುಣಿಸಲು ಪ್ರತ್ಯೇಕ ಸ್ಥಳ, ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಹಾಗೂ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಲು ಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
 ಕಾರ್ಯಕ್ರಮದಲ್ಲಿ ಸಹಾಯಕ ನೋಂದಣಿ ಮಹಾಪರಿವೀಕ್ಷಕ ಹೆಚ್.ಎಲ್. ಪ್ರಭಾಕರ್, ಚಿಕ್ಕಬಳ್ಳಾಪುರ ಜಿಲ್ಲಾ ನೋಂದಣಾ ಧಿಕಾರಿ ಎಂ. ಶ್ರೀದೇವಿ, ಜಿಲ್ಲಾ ನೋಂದಣಾಧಿಕಾರಿ ಶಶಿಕಲಾ ಬಿ.ಎನ್ ಉಪ ನೋಂದಣಾಧಿಕಾರಿಗಳಾದ ಎಸ್.ಪಿ. ರಂಗರಾಜು, ಧನಲಕ್ಷ್ಮಿ, ಸೌಮ್ಯ ಸಂಪತ್, ಎಂ. ರಾಜಶೇಖರ್,  ಸಿಬ್ಬಂದಿ ಉಪಸ್ಥಿತರಿದ್ದರು.
error: Content is protected !!