Saturday, 27th July 2024

ಖಾಸಗಿ ಬಸ್ಸುಗಳು ಮಾರಾಟಕ್ಕಿವೆ: ಸರಕಾರದ ವಿರುದ್ಧ ಆಕ್ರೋಶ

ತುಮಕೂರು: ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಸರ್ಕಾರದ ಯೋಜನೆಗೆ ಖಾಸಗಿ ಬಸ್‌ಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು ಖಾಸಗಿ ಬಸ್‌ಗಳು ಮಾರಾಟಕ್ಕಿವೆ ಎಂದು ವಿನೂತನವಾಗಿ ಪ್ರತಿಭಟಿಸಿ ದ್ದಾರೆ.
ಬಹುಮತದಿಂದ ಅಧಿಕಾರ ಪಡೆದಿರುವ ಕಾಂಗ್ರೆಸ್ ಸರಕಾರ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ನೀಡಲಾಗುವುದು ಎಂದು ಹೇಳಿತ್ತು. ಅದರಂತೆ ಇದೀಗ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆಯನ್ನು ಜಾರಿಗೆ ತಂದಿದ್ದು ಜೂ. ೧೧ ರಿಂದ ಅಧಿಕೃತವಾಗಿ ಯೋಜನೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಇದರಿಂದ ಖಾಸಗಿ ಬಸ್ ಮಾಲೀಕರು ಕಂಗಾಲಾಗಿದ್ದು, ಬಸ್ ಮಾರಾಟಕ್ಕೆ ಇಟ್ಟಿದ್ದೇವೆ ಎಂಬ ವಿನೂತನ ಪ್ರತಿಭಟನೆ ಕೈಗೊಳ್ಳುವ ಮೂಲಕ ಸರಕಾರದ ನಿರ್ಧಾರದ ವಿರುದ್ಧ  ಕಿಡಿಕಾರಿದ್ದಾರೆ.
ತುಮಕೂರು, ಕರಾವಳಿ ಹಾಗೂ ಮಲೆನಾಡು ಹಾಗೂ ಮಧ್ಯ ಕರ್ನಾಟಕದಲ್ಲಿ ಸರಕಾರಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳ ಬಳಕೆ ಹೆಚ್ಚಾಗಿದೆ. ಇಲ್ಲಿ ಖಾಸಗಿ ಬಸ್‌ಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು, ನಷ್ಟದ ಭೀತಿ ಎದುರಿಸುತ್ತಿದ್ದು ಸಬ್ಸಿಡಿ ನೀಡಬೇಕು, ತೆರಿಗೆ ವಿನಾಯಿತಿ, ತೈಲದ ಮೇಲಿನ ಸೆಸ್ ಇಳಿಸಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಖಾಸಗಿ ಬಸ್ ಮಾಲೀಕರು ಸರಕಾರದ ಮುಂದೆ ಇಟ್ಟಿದ್ದಾರೆ.
ಪೋಸ್ಟ್ರ್ ಅಂಟಿಸಿ ಆಕ್ರೋಶ
ಖಾಸಗಿ ಬಸ್‌ಗಳ ಮೇಲೆ ಬಸ್ ಮಾರಾಟಕ್ಕಿವೆ ಎಂದು ಪೋಸ್ಟರ್ ಅಂಟಿಸಿರುವ ಮಾಲೀಕರು ಮಹಿಳೆ ಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದ ನಮ್ಮ ಅನ್ನಕ್ಕೆ ಮಣ್ಣು ಬಿದ್ದಿದೆ. ಇದರಿಂದ ನಾವು ಬಸ್ ಮಾರಿಕೊಳ್ಳಬೇಕು ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಿರುವ ಖಾಸಗಿ ಬಸ್ ಮಾಲೀಕ ರು, ನಾವೇನು ಪಾಪ ಮಾಡಿದ್ದೇವೆ, ನಮಗೂ ಏನಾದ್ರೂ ಫ್ರೀ ಕೊಡಿ. ಇಲ್ಲದಿದ್ದರೆ ಖಾಸಗಿ ಬಸ್‌ಗಳನ್ನು ಸರಕಾರ ಅಧೀನಕ್ಕೆ ತೆಗೆದುಕೊಳ್ಳಲಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರಕಾರಕ್ಕೆ ಮನವಿ
ಕೇವಲ ಸರ್ಕಾರಿ ಬಸ್‌ಗಳಿಂದ ಮಾತ್ರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಯಶಸ್ವಿಯಾಗುವುದಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆಯಲ್ಲಿ ಖಾಸಗಿ ಬಸ್‌ಗಳನ್ನು ಒಳಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಫೆಡರೇಷನ್ ಸರಕಾರಕ್ಕೆ ಮನವಿ ಮಾಡಿದೆ.
error: Content is protected !!