Monday, 26th February 2024

ವಾರನ್ ಬಫೆಟ್ ದೀರ್ಘಕಾಲದ ಸಹವರ್ತಿ ಚಾರ್ಲೀ ಮುಂಗರ್ ಇನ್ನಿಲ್ಲ

ಕ್ಯಾಲಿಫೋರ್ನಿಯಾ: ಉದ್ಯಮಿ ವಾರನ್ ಬಫೆಟ್ ಅವರ ದೀರ್ಘಕಾಲದ ಸಹವರ್ತಿ, ಬಿಸಿನೆಸ್ ಪಾರ್ಟ್ನರ್ ಚಾರ್ಲೀ ಮುಂಗರ್(99) ನಿಧನರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಆಸ್ಪತ್ರೆಯೊಂದರಲ್ಲಿ  ಕೊನೆಯುಸಿರೆಳೆದರೆಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಬರ್ಕ್​ಸೈರ್ ಹಾಥವೇ ಸಂಸ್ಥೆಯ ವೈಸ್ ಛೇರ್ಮನ್ ಆಗಿ ಚಾರ್ಲಿ ಮುಂಗರ್ ಸಾಕಷ್ಟು ವಿಸ್ಮಯಕಾರಿ ಕಾರ್ಯಗಳನ್ನು ಮಾಡಿದ್ದಾರೆ.

ಡಿಸೆಂಬರ್ 31 ಕಳೆದಿದ್ದರೆ ಅವರು ಶತಾಯುಷಿ ಆಗಿರುತ್ತಿದ್ದರು. ಬರ್ಕ್​ಶೈರ್ ಹಾಥವೇ ಸಂಸ್ಥೆಯಲ್ಲಿ ಹಲವಾರು ದಶಕಗಳಿಂದ ಅವರು ವೈಸ್ ಛೇರ್ಮನ್ ಆಗಿ ಕೆಲಸ ಮಾಡಿದ್ದರು.

ವಾರನ್ ಬಫೆಟ್ ಅವರಿಗೆ 93 ವರ್ಷ ವಯಸ್ಸಾಗಿದ್ದರೆ, ಚಾರ್ಲೀ ಮುಂಗರ್ ಅವರಿಗೆ 99 ವರ್ಷ ವಯಸ್ಸಾಗಿತ್ತು. ಇಬ್ಬರೂ ಕೂಡ ಅಮೆರಿಕದ ನೆಬ್ರಾಸ್ಕ ರಾಜ್ಯದ ಒಮಾಹ ಪ್ರದೇಶದಲ್ಲಿ ಜನಿಸಿ ಅಲ್ಲಿಯೇ ಬೆಳೆದವರು. ಆರು ದಶಕಗಳ ಕಾಲ ಅವರಿಬ್ಬರ ಗಾಢ ಸ್ನೇಹ ಇತ್ತು. 1959ರಲ್ಲಿ ಇಬ್ಬರು ಮೊದಲ ಬಾರಿಗೆ ಸಂಧಿಸಿದ್ದು. ಅಲ್ಲಿಂದ ಅವರ ಸ್ನೇಹ ಪರ್ವ 60 ವರ್ಷಕ್ಕೂ ಹೆಚ್ಚು ಕಾಲ ಇತ್ತು. ಇಬ್ಬರೂ ಕೇವಲ ಆಪ್ತ ಸ್ನೇಹಿತರು ಮಾತ್ರವೇ ಆಗಿರಲಿಲ್ಲ, ಒಳ್ಳೆಯ ಬಿಸಿನೆಸ್ ಪಾರ್ಟ್ನರ್ಸ್ ಆಗಿದ್ದರು.

ಚಾರ್ಲೀ ಮುಂಗರ್ 1978ರಲ್ಲಿ ಬರ್ಕ್​ಶೈರ್ ಹಾಥವೇ ಸಂಸ್ಥೆಗೆ ವೈಸ್ ಛೇರ್ಮನ್ ಆಗಿ ಕೆಲಸಕ್ಕೆ ಸೇರಿದರು. ಆಗ ಅದು ಒಂದು ಸಣ್ಣ ಜವಳಿ ಸಂಸ್ಥೆ ಯಾಗಿತ್ತು. ಇವರ ವ್ಯಾವಹಾರಿಕ ಚತುರತೆಯಿಂದ ಇವತ್ತು ಅದು 780 ಬಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯದ ಬೃಹತ್ ಸಮೂಹ ಸಂಸ್ಥೆಯಾಗಿ ಬೆಳೆದಿದೆ.

ಚಾರ್ಲೀ ಮುಂಗರ್ ಹೂಡಿಕೆ ಬಗ್ಗೆ ಅಪಾರ ಜ್ಞಾನ ಮತ್ತು ಚಾಕಚಕ್ಯತೆ ಹೊಂದಿದ್ದರು. ವಾರನ್ ಬಫೆಟ್ ಒಬ್ಬ ಅಪ್ರತಿಮ ಮತ್ತು ಯಶಸ್ವಿ ಹೂಡಿಕೆದಾರ ರಾಗಿ ಹೊರಹೊಮ್ಮಲು ಮುಖ್ಯ ಕಾರಣವೆ ಚಾರ್ಲೀ ಅವರಾಗಿದ್ದರು.

Leave a Reply

Your email address will not be published. Required fields are marked *

error: Content is protected !!