Saturday, 27th July 2024

ಯಾವ ಕಾಲದ ಮದುವೆ ಚಂದ ?

ಆ ಕಾಲ ಚಂದವೋ, ಈ ಕಾಲ ಚಂದವೋ ಎಂದು ತಲೆಕೆಡಿಸಿಕೊಳ್ಳುತ್ತಾ ಕೂಡುವ ಬದಲು, ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗುತ್ತಾ ಹೋಗುವುದೇ ಜಾಣತನ ಅಲ್ಲವೇ?

ನಳಿನಿ ಟಿ ಭೀಮಪ್ಪ

ನಿಶ್ಚಯವಾಯ್ತೂ ಎಂದರೆ ಸಾಕು, ಈಗಿನ ಜೋಡಿಗಳಿಗೆ ಲೈಸೆನ್ಸ್ ಸಿಕ್ಕ ಹಾಗಾಗಿರುತ್ತದೆ. ಕಾಲುಗಳಂತೂ ನೆಲದ ಮೇಲೇ ಇರುವು ದಿಲ್ಲ. ಬಾನಿನಲ್ಲೇ ತೇಲಾಡುತ್ತಿರುತ್ತಾರೆ. ಬೆಳಿಗ್ಗೆಯಿಂದ ಸಂಜೆಯ ತನಕ ಊರೆಲ್ಲಾ ಅಡ್ಡಾಡಿಕೊಂಡು ಬಂದಿರುತ್ತಾರೆ, ಮತ್ತೂ ಮನೆಗೆ ಬಂದ ತಕ್ಷಣ ಮಾತು-ಕಥೆ ಶುರುವಾಗಿರುತ್ತದೆ.

ಅದೇನು ಮಾತೋ, ಅದೇನು ಕಥೆಯೋ ಗಂಟೆಗಟ್ಟಲೆ ಕಿವಿಗೆ ಹಾಕಿದ ಇಯರ್ ಫೋನ ನ್ನು ತೆಗೆಯದೆ ಮಾತನಾಡುತ್ತಲೇ ಇರುತ್ತಾರೆ. ವಾಟ್ಸಪ್ ಚಾಟು, ವೀಡಿಯೋ ಕಾಲು ಪುರುಸೊತ್ತು ಇರುವುದಿಲ್ಲ. ನೋಡಿದರೆ ಒಂದು ರೀತಿ ಅಸೂಯೆಯಾಗುತ್ತದೆ.
ನಮ್ಮ ಕಾಲದಲ್ಲಿ ಮದುವೆಗೆ ಮುಂಚೆಯೂ ಮಾತುಕತೆಯಾಡಲು ಅವಕಾಶವಿರಲಿಲ್ಲ.

ಮದುವೆಗೆ ಎರಡೂ ಮನೆಯವರು ಒಪ್ಪಿದ ಮೇಲೆ ಹುಡುಗಿಯ ಜೊತೆಗೆ ಮಾತನಾಡ ಬೇಕು ಅಂತಾ ಹುಡುಗ ಹೇಳಿಬಿಟ್ಟರೆ ಹೆಣ್ಣಿನ ಮನೆಯವರೆಲ್ಲರ ಮುಖ, ಧಾರಾವಾಹಿ ಯಲ್ಲಿ ಯಾವುದೋ ಸೀರಿಯಸ್ ವಿಷಯಕ್ಕೆ ಒಬ್ಬೊಬ್ಬರೂ ಮುಖ ಮುಖ ನೋಡುವು ದನ್ನು ಸೀರಿಯಸ್ ಆಗಿ, ಕ್ಲೋಸ್ ಅಪ್ ಆಗಿ, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಮೇತ ತೋರಿಸುವ ಹಾಗೆ ಗಂಟಿಕ್ಕುತ್ತಿತ್ತು. ರೆಮನಸ್ಸಿನಿಂದಲೇ ಒಂದು ರೂಮಿನೊಳಗೆ ಕಳಿಸುತ್ತಿದ್ದರು.

ಸುಮ್ಮನೆ ಹೋಗುತ್ತಿದ್ದುದು ಅಷ್ಟೇ, ಮಾತನಾಡಿಸುವುದಕ್ಕೆ ಅವರಿಗೂ ಧೈರ್ಯ ಸಾಲುತ್ತಿರಲಿಲ್ಲ, ಮಾತನಾಡಲು ನನಗೂ
ಬಾಯಿಯೇ ಬರುತ್ತಿರಲಿಲ್ಲ. ಅವರೇನೋ ಕೇಳಿ, ನಾನೇನೋ ಹೇಳುವ ಹೊತ್ತಿಗೆ ಹೊರಗಿನಿಂದ ಹೋಗೋಣವೇನಪ್ಪಾ ಅಂತಾ
ಅವರಪ್ಪ ಅಮ್ಮನಿಂದ ಬುಲಾವ್ ಬರುತ್ತಿತ್ತು. ಏನೋ ಕೊನೆಗೆ ‘ಕಾಗದ ಬರಿ’ ಅಂತಾ ಹೇಳಿದ್ದು ಚೂರು ಕೇಳಿಸುತ್ತಿದ್ದುದಕ್ಕೆ 
ತಲೆಯಾಡಿಸಿ ಒಪ್ಪಿಗೆ ಕೊಟ್ಟಿದ್ದರೆ ಸಾಕಿತ್ತು.

ಮದುವೆಯಾದ ನಂತರ ಅವಕಾಶ ಇದ್ದರೂ ಮಾತನಾಡುವುದಕ್ಕೆ ವಿಷಯಗಳೇ ಇರುವುದಿಲ್ಲ. ಒಂದೋ, ಎರಡೋ ಮಾತನಾ ಡಿದರೆ ಸ್ವಲ್ಪ ಸಮತೋಲನದಲ್ಲಿರುತ್ತೇವೆ, ಇನ್ನೆರಡು ಮಾತು ಹೆಚ್ಚಾದವೂ ಅಂದರೆ ಸಾಕು ಒಂದೇ ಸಮನೆ ಗುಡುಗು, ಮಿಂಚು, ಮಳೆ ಎಲ್ಲ ಶುರುವಾಗುತ್ತದೆ. ಹಾಗಾಗಿ ನಿಮ್ಮ ಪಾಡಿಗೆ ನೀವಿರಿ, ನಮ್ಮ ಪಾಡಿಗೆ ನಾವಿರುತ್ತೇವೆ ಎನ್ನುವಂತೆ ಇಬ್ಬರೂ ಒಂದೊಂದು ರೂಮಿನಲ್ಲಿ ಸುರಕ್ಷಿತ ವಲಯದೊಳಗೆ ಬಂಧಿಯಾಗಿ ಬಿಡುತ್ತೇವೆ. ಆದರೆ ಈಗಿನ ಕಾಲದ ಬಹುತೇಕ ಜೋಡಿಗಳು ಬಹುಶಃ ಮಾತುಕತೆಯನ್ನೆಲ್ಲ ಮದುವೆಗೆ ಮೊದಲೇ ಮುಗಿಸಿ, ಮದುವೆಯ ನಂತರ ನಾಯಿಗಳು ಕಚ್ಚಾಡುವ ಹಾಗೆ ಕಚ್ಚಾಡಿ ಸೀದಾ ವಿಚ್ಛೇದನಕ್ಕೆ ಮುಂದಾ ಗಿಯೇ ಬಿಡುತ್ತಾರೆ.

ಬೇಬಿ ಶಾವರ್!
ಇನ್ನು ಮಗುವಿನ ಆಗಮನ ಅಂದಿನ ಕಾಲದಲ್ಲಿ ಖುಷಿಯ ವಿಷಯವೇ ಆದರೂ ಈಗಿನಂತೆ ವಾಟ್ಸಪ್ಪು, ಫೇಸ್ಬುಕ್ ಸ್ಟೇಟಸ್ಸುಗಳಲ್ಲಿ, ಏನೇನೋ ಕೋಡ್ ವರ್ಡ್ ಉಪಯೋಗಿಸಿ ಜಗಜ್ಜಾಹೀರು ಮಾಡುತ್ತಿರಲಿಲ್ಲ. ಜೊತೆಗೆ ಬೇಬೀ ಬಂಪ್ ಅಂತಾ ಸೆಲೆಬ್ರೆಟಿಗಳು ಹೊಟ್ಟೆಯನ್ನು ತೋರಿಸಿಕೊಳ್ಳುತ್ತಾ, ಅದರ ಮೇಲೆ ಚಿತ್ರ ವಿಚಿತ್ರ ಬಿಡಿಸುವುದನ್ನೂ ಫೋಟೋ ಹಾಕಿ, ಬೇಬೀ ಶಾವರ್ ಎನ್ನುವುದನ್ನು ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡಿ, ಗಂಡ ಹೆಂಡತಿಯ ಫೋಟೋಶೂಟ್ ಬೇರೆ ನಡೆಯುತ್ತದೆ.

ಇನ್ನು ಅದು ಹುಟ್ಟಿದಾಗಿನಿಂದ ಅದಕ್ಕೆ ಅದೆಷ್ಟೋ ರೀತಿಯ ಅಲಂಕಾರ ಮಾಡಿ, ಫೋಟೋ ತೆಗೆದದ್ದೇ ತೆಗೆದದ್ದು, ಎಲ್ಲೆಡೆ ಶೇರ್ ಮಾಡಿದ್ದೇ ಮಾಡಿದ್ದು. ತಿಂಗಳ ಹುಟ್ಟುಹಬ್ಬದಿಂದ ಹಿಡಿದು ಕಾಲು, ಅರ್ಧ, ಮುಕ್ಕಾಲು, ಒಂದು ಎನ್ನುತ್ತಾ ಪ್ರತೀಸಲ ಕೇಕು ಕತ್ತರಿಸಿ ಸಂಭ್ರಮಿಸುವವರೂ ಇದ್ದಾರೆ.

ನಮ್ಮ ಕಾಲದಲ್ಲಂತೂ ನಾಲ್ಕು ತಿಂಗಳಿನ ತನಕ ಕಳ್ಳ ಬಸಿರು ಎನ್ನುವ ನೆಪದಲ್ಲಿ ಸುದ್ದಿ ಹರಡುವುದಕ್ಕೆ ಬಿಡುತ್ತಲೇ ಇರಲಿಲ್ಲ.
ಇನ್ನು ಹೊಟ್ಟೆ ತೋರಿಸುವುದಂತೂ ದೂರದ ಮಾತು. ಸೀಮಂತಕ್ಕೆ ಗಂಡ ಬಂದು ಪಕ್ಕದಲ್ಲಿ ನಿಲ್ಲುವುದಕ್ಕೇ ಸಂಕೋಚ ಪಡುತ್ತಿದ್ದರು.

ಮಗುವಿನ ಫೋಟೋವಂತೂ ಮೂರು ತಿಂಗಳ ತನಕ ತೆಗೆಯಲೂ ಬಿಡುತ್ತಿರಲಿಲ್ಲ. ಫೋಟೋಗಳನ್ನು ಬೇರೆಯವರಿಗೆ
ತೋರಿಸುವುದಂತೂ ದೂರದ ಮಾತು. ಮಗುವಿಗೆ ದೃಷ್ಟಿ ತಾಗಬಾರದು ಅಂತಾ ಅದರ ಹಣೆಗೆ, ಗಲ್ಲಕ್ಕೆ, ಹುಬ್ಬಿಗೆ, ಕೆನ್ನೆಗೆ
ದಪ್ಪಗೆ ಕಾಡಿಗೆ ಬಳಿದು ಅಕ್ರಾಳ ವಿಕ್ರಾಳ ಮಾಡಿಬಿಡುತ್ತಿದ್ದರು. ವರ್ಷದ ಹುಟ್ಟು ಹಬ್ಬಕ್ಕೆ ಮಗುವಿಗೆ ಹೊಸಬಟ್ಟೆ ತೊಡಿಸಿ
ಮನೆಯಲ್ಲಿ ಪಾಯಸವೋ, ಶಿರಾನೋ ಏನೋ ಒಂದು ಸಿಹಿ ಮಾಡಿ ದೇವಸ್ಥಾನಕ್ಕೆ ಹೋಗಿ ಬಂದರೆ ಅಲ್ಲಿಗೆ ಮುಗಿಯುತ್ತಿತ್ತು.

ಈಗಿನ ಬಹಳಷ್ಟು ಜನ ಭರ್ಜರಿಯಾಗಿ ದೊಡ್ಡ ಹೋಟೆಲ್ಲಿನಲ್ಲಿ ಪಾರ್ಟಿ ಇಟ್ಟುಕೊಂಡು, ಎಲ್ಲರನ್ನೂ ಆಮಂತ್ರಿಸಿ, ಅಲ್ಲಿ ಮ್ಯಾಜಿಕ್ ಶೋ, ಹಾಡು, ಡಾನ್ಸು ಎಂತೆಲ್ಲಾ ಏರ್ಪಡಿಸಿ ದೊಡ್ಡ ಔತಣವನ್ನೇ ನೀಡುತ್ತಾರೆ. ಆ ಕಾಲ ಚಂದವೋ, ಈ ಕಾಲ ಚಂದವೋ ಎಂದು ತಲೆಕೆಡಿಸಿಕೊಳ್ಳುತ್ತಾ ಕೂಡುವ ಬದಲು, ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗುತ್ತಾ ಹೋಗುವುದೇ ಜಾಣತನ ಅಲ್ಲವೇ?

ಸಿನಿಮಾದಲ್ಲಿ ಚಿಲ್ಟಾರಿಗಳು
ಇನ್ನು ಸಿನೆಮಾ ಗಿನೆಮಾ ಅಂತೆಲ್ಲಾ ಕರೆದೊಯ್ದರೆ ಜೊತೆಗೆ ಒಂದೆರಡು ಚಿಲ್ಟಾರಿಗಳನ್ನು ಜೊತೆ ಮಾಡಿಯೇ ಕಳಿಸುತ್ತಿದ್ದುದು. ಅವುಗಳು ನಾವು ಹತ್ತಿರವಾಗುತ್ತಿದ್ದಂತೆ ದೂರ ದೂರ ಮಾಡಲು ಟ್ರೈನಿಂಗ್ ತೆಗೆದುಕೊಂಡೇ ಬಂದಿರುತ್ತಿದ್ದವೋ ಏನೋ. ಯಾವಾಗಲೂ ಒಂದು ಕಣ್ಣು ನಮ್ಮಿಬ್ಬರ ಮೇಲೆ ನೆಟ್ಟಿಯೇ ಇರುತ್ತಿದ್ದವು. ಅವುಗಳ ಕಣ್ಣು ತಪ್ಪಿಸಿ ಕೈಕೈ ಹಿಡಿದು ಒಂದು ಮುತ್ತು ಕೊಟ್ಟರೆ, ಅದೇ ದೊಡ್ಡ ವಿಷಯವಾಗಿತ್ತು.

ಅದನ್ನೇ ಹಸುಗಳು ತಿಂದಿದ್ದನ್ನು ಪುನಃ ಪುನಃ ಮೆಲುಕು ಹಾಕುವಂತೆ ಮದುವೆಯ ತನಕ ಇಬ್ಬರೂ ಮೆಲುಕು ಹಾಕಬೇಕಿತ್ತು. ಈಗಿನವರಂತೂ ಕೇಳುವುದೇ ಬೇಡಾ. ಫೋಟೋಶೂಟ್ ಅಂತಾ ಇಬ್ಬರೂ ಮೊದಲೇ ಸೆಮಿ ಹನಿಮೂನ್ ಮಾಡಿಕೊಂಡು ಬರುವ ಕಾಲ. ಹಿಂದಿಂದೆ ಫೋಟೋಗ್ರಾಫರ್‌ಗಳು ಹೀಗೆ ಅಪ್ಪಿಕೊಳ್ಳಿ, ಹೀಗೆ ಮುತ್ತುಕೊಡಿ, ಹೀಗೆ ಹಿಡಿದುಕೊಳ್ಳಿ ಎಂದು ಅವರಿಬ್ಬರನ್ನು
ಹತ್ತಿರ ಹತ್ತಿರ ಮಾಡಲು ನೋಡುತ್ತಿರುತ್ತಾರೆ.

ಆಗೆಲ್ಲ ಮದುವೆಗಳಲ್ಲಿ ತಾಳಿ ಕಟ್ಟುವಾಗ ಗಂಡನನ್ನು ಕದ್ದೂ ಕದ್ದೂ ನೋಡಬೇಕಿತ್ತು. ಅವರೂ ಕಿವಿಯಲ್ಲಿ ಏನೇನೋ ನಾಲ್ಕು
ಮಾತು ಹೇಳುವ ಹೊತ್ತಿಗೆ ಮುಖವೆಲ್ಲಾ ಕೆಂಪಡರಿ ಹೋಗುತ್ತಿತ್ತು. ಜೊತೆಗೆ ಸುತ್ತಮುತ್ತಲಿನ ಬಂಧುಗಳ ಛೇಡುವಿಕೆ ಬೇರೆ. ಈಗಿನ ಕಾಲದಲ್ಲಂತೂ ಮದುವೆಗೆ ಹಸೆಮಣೆ ಮೇಲೆ ಕುಳಿತಾಗಲೂ ಸಹ ಗಂಡೂ ಹೆಣ್ಣು ತಾಳಿಕಟ್ಟುವುದನ್ನು ಮರೆತು ಸುತ್ತಮುತ್ತಲಿನ ಪರಿವೆಯೇ ಇಲ್ಲದೆ ಸಹ ವಟವಟ ಮಾತನಾಡುತ್ತಲೇ ಇರುತ್ತವೆ.

ಮಂತ್ರ ಹೇಳುತ್ತಿರುವ ಸ್ವಾಮಿಗಳೋ, ಸುತ್ತಮುತ್ತಲು ಇರುವ ಬಂಧುಗಳೋ ಗದರಿ ತಾಳಿ ಕಟ್ಟಿಸಬೇಕಾದ ಪರಿಸ್ಥಿತಿ. ಗಂಡನ ಹೆಸರು ಹೇಳುವುದಕ್ಕೆ ಕಾಡಿಸೀ ಕಾಡಿಸೀ, ಕೊನೆಗೆ ನಾಚುತ್ತಾ ಅದಕ್ಕೆ ಒಡಪು ಕಟ್ಟಿ ಹೇಳುತ್ತಿದ್ದ ಕಾಲ ಹೋಗಿಯೇಬಿಟ್ಟಿದೆ. ಇಬ್ಬರೂ ಸ್ನೇಹಿತರ ಹಾಗೆ ಒಬ್ಬರಿಗೊಬ್ಬರು ಹೆಸರು ಹಿಡಿದು ಕರೆಯುವಾಗ, ಹೆಸರು ಕೇಳುವ ಪ್ರಮೇಯವೇ ಬರುವುದಿಲ್ಲ ಬಿಡಿ.

error: Content is protected !!