Tuesday, 27th February 2024

ಇದೆಂತಹ ಬದಲಾವಣೆ ?

ನಳಿನಿ ಟಿ.ಭೀಮಪ್ಪ

ಸಣ್ಣ ಸಣ್ಣ ಕಾರಣಗಳಿಗಾಗಿ ಗಂಡ ಹೆಂಡತಿಯರು ವಾದ ವಿವಾದಕ್ಕೆ ಸಿಕ್ಕಿಬೀಳುವುದು, ದೂರಾಗಲು ನಿಶ್ಚಯ ಮಾಡುವುದು ಈ ಶತಮಾನದಲ್ಲಿ ಜಾಸ್ತಿಯಾಗುತ್ತಿದೆ. ಇದರ ಹಿಂದಿನ ಮರ್ಮವೇನು?

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುವ ಮಾತಿದೆ. ಹಾಗೆಯೇ ಅತ್ತೆಯೂ ಕೂಡ ಒಂದು ಕಾಲದಲ್ಲಿ ಸೊಸೆಯಾಗಿದ್ದ ವಳೇ ಎನ್ನುವ ಸತ್ಯ ಇಂದಿನ ಬಹುತೇಕ ಅತ್ತೆಯಂದಿರು ಅರಿತುಕೊಂಡಿದ್ದಾರೆ. ಸೊಸೆ ಬರುತ್ತಿದ್ದಂತೆ, ಇನ್ನು ಮೇಲೆ ಆಕೆ ಮಾಡಿ ಹಾಕಬೇಕು, ನಾವು ಕೂತು ತಿನ್ನಬೇಕು ಎನ್ನುವ ಸಿದ್ಧಾಂತವನ್ನು ಎಂದೋ ಬದಿಗೊತ್ತಿ, ಹೆಗಲಿಗೆ ಹೆಗಲು ಕೊಟ್ಟು ಸೊಸೆಗೆ ತಮ್ಮ ಕೈಲಿ ಸಾಧ್ಯವಾದಷ್ಟೂ ಸಹಾಯಹಸ್ತ ಚಾಚಲು ಸಿದ್ಧರಿದ್ದಾರೆ.

ಅವರ ಮೇಲೆ ಅವಲಂಬಿತರಾಗದೆ ನಾವೂ ಚೆನ್ನಾಗಿರ‍್ತೀವಿ, ನೀವೂ ಚೆನ್ನಾಗಿರಿ ಎಂದು ಮಗ-ಸೊಸೆಯ ವಿಷಯದಲ್ಲಿ ಮೂಗು ತೂರಿಸದೆ, ಎಲ್ಲರೂ ಒಂದಾಗಿ ಬಾಳೋಣ ಎನ್ನುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ನಾವಂತೂ ಅತ್ತೆಯ ಕೈಕೆಳಗೆ ನಲುಗಿದ್ದಾಯ್ತು, ಮುಂದೆ ಬರುವ ಸೊಸೆ ಆ ತರಹದ ನೋವನ್ನು ಅನುಭವಿಸುವುದು ಬೇಡ, ಆಕೆಗೆ ಎಲ್ಲ ರೀತಿಯ ಸ್ವಾತಂತ್ರ್ಯ ಕೊಟ್ಟುಬಿಡೋಣ, ಮಗನ ಜೊತೆ ಸುಖವಾಗಿ ಬಾಳಲಿ, ಈ ಮನೆಯ ಮಗಳಾಗಿ ಮನೆ ತುಂಬಿದರೆ ಸಾಕು ಎಂದು ಆ ಜೀವ ನೂರಾರು ಕನಸು ಕಟ್ಟಿಕೊಂಡಿರುತ್ತದೆ.

ಮಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಸೊಸೆಗೂ ಕೊಡುತ್ತಿದ್ದಾರೆ. ಕೆಲವು ಕಟ್ಟುನಿಟ್ಟಿನ ಸಂಪ್ರದಾಯಗಳನ್ನು, ಕಟ್ಟು ಪಾಡುಗಳನ್ನೂ ಸಹ ಸೊಸೆಯ ಮೇಲೆ ಹೇರದೆ, ನಾವಿದ್ದಷ್ಟು ದಿನ, ನಮ್ಮ ಕೈಲಾದಷ್ಟು ನಡೆಸಿಕೊಂಡು ಹೋಗುತ್ತೇವೆ, ಮುಂದೆ ನಿಮಗೆ ಸಾಧ್ಯವಾದರೆ ನಡೆಸಿಕೊಂಡು ಹೋಗಿ, ಆಗದಿದ್ದರೂ ಪರವಾಗಿಲ್ಲ ಎನ್ನುವ ಉದಾರ ಮನಸ್ಥಿತಿಗೂ ಬಂದು ಬಿಟ್ಟಿದ್ದಾರೆ. ಆದರೆ ಈಗ ಆಗುತ್ತಿರುವುದು ಏನು? ಮಗ ದೊಡ್ಡ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ಮಗಳು ಮೆಡಿಕಲ್ ಕಲಿಯು ತ್ತಿದ್ದಾಳೆ.

ಇನ್ನಾರು ತಿಂಗಳಿಗೆ ರಿಟೈರ್ ಆಗುತ್ತಿದ್ದುದರಿಂದ, ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ ನಂತರ ಮದುವೆ ಮಾಡಿದರು. ಮಗ, ಸೊಸೆ, ಮಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ, ರಿಟೈರ‍್ಡ್ ಆದ ಮೇಲೆ ಹೋದರಾಯಿತು ಎನ್ನುವ ಮುಂದಾಲೋ ಚನೆ. ಸೊಸೆಯೂ ಸಹ ಇಂಜಿನಿಯರೇ, ಬಡತನದ ಮನೆಯ ಹುಡುಗಿಯಾದರೇನು, ನಮ್ಮ ಹತ್ತಿರವೇ ಬೇಕಾದಷ್ಟಿದೆ ಎಂದು ಹೆಣ್ಣಿನ ಮನೆಯವರಿಂದ ಏನನ್ನೂ ನಿರೀಕ್ಷಿಸದೆ, ತಾವೇ ಹಣ ಖರ್ಚು ಮಾಡಿ ಮದುವೆ ಮಾಡಿಕೊಂಡರು.

ಅಲ್ಲಿಯವರೆಗೂ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ ಹುಡುಗಿ, ನಿವೃತ್ತಿಯ ನಂತರ ಅತ್ತೆ-ಮಾವ ತಮ್ಮ ಜೊತೆ ಬಂದು ಇರುವುದು ಅದ್ಯಾಕೋ ಇರುಸುಮುರುಸಾಯಿತು. ನಾದಿನಿಯೂ ಕಣ್ಣ ಕಿಸರಾಗತೊಡಗಿದಳು. ಕೊನೆಗೊಂದು ದಿನ ವಾದ ವಿವಾದ!

‘ನಿಮ್ಮ ಅಪ್ಪ-ಅಮ್ಮನ ಜೊತೆ ನನಗೆ ಇರುವುದಕ್ಕೆ ಸಾಧ್ಯವಿಲ್ಲ, ನಾದಿನಿಯೂ ಮನೆಯಲ್ಲಿ ಇರಕೂಡದು, ನಿಮಗೆ ನಾನು ಬೇಕಾ? ಅವರು ಬೇಕಾ?’ ಎಂದು ಪ್ರಶ್ನೆ ಮಾಡಿದ್ದಾಳೆ. ‘ನೀನೇ ಬೇಡ. ಅಪ್ಪ ಅಮ್ಮನೇ ಬೇಕು’ ಎಂದು ಹುಡುಗ ಖಡಾಖಂಡಿತವಾಗಿ ಹೇಳಿದ್ದಾನೆ. ಆ ಹುಡುಗಿಯ ತಂದೆ-ತಾಯಿ ಬಂದು ಸಂಧಾನ ಮಾಡಲೆತ್ನಿಸಿದರೂ, ಹುಡುಗಿ ಬಿಲ್ಕುಲ್ ಒಪ್ಪಲಿಲ್ಲ. ಆಕೆ ತವರೂ ಬೇಡ, ಗಂಡನ ಮನೆಯೂ ಬೇಡ ಎಂದು ಮನೆಬಿಟ್ಟು ಹೋಗಿ, ಪಿಜಿಗೆ ಸೇರಿಕೊಂಡಿದ್ದಾಳೆ.

ಕೊನೆಗೆ ಹುಡುಗನ ತಂದೆ ತಾಯಿಗಳೇ, ನೀವಿಬ್ಬರೂ ಬೇರೆ ಮನೆಯನ್ನು ಮಾಡಿಕೊಂಡು ಸುಖವಾಗಿರಿ ಎಂದೂ ರಾಜಿ ಮಾಡಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ನನ್ನ ಅಪ್ಪ ಅಮ್ಮನದು ತಪ್ಪಿದ್ದರೆ ಹೇಳು ಸರಿಪಡಿಸೋಣ, ಸುಖಾಸುಮ್ಮನೆ ಬೇರೆಯಾಗಿ ಹೋಗುವುದರಲ್ಲಿ ಅರ್ಥವಿಲ್ಲ ಎಂದು ಹುಡುಗನ ವಾದ. ಈಗ ಇಬ್ಬರೂ ಕಾನೂನು ಮೂಲಕ ದೂರಾಗಲು ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಮತ್ತೊಂದು ಕುಟುಂಬದಲ್ಲಿ ಹುಡುಗಿ ಹುಡುಗ ಇಬ್ಬರೂ ವೃತ್ತಿಯಲ್ಲಿ ವೈದ್ಯರು. ಹುಡುಗಿಯಂತೂ ಗೋಲ್ಡ್ ಮೆಡಲಿಸ್ಟ್. ಮದುವೆಯಾದ ನಂತರ ಡ್ಯೂಟಿಗೆ ಹೋಗುವಾಗ ಅತ್ತೆ, ತನ್ನ ಮಗನಿಗೆ ಮೊದಲು ಬಿಸಿ ಚಪಾತಿ ಹಾಕಿದಳೆಂದು ಕ್ಯಾತೆ ತೆಗೆದಳು. ‘ನಿನಗೂ ಮಾಡಿಕೊಡ್ತೀನಮ್ಮಾ’ ಎಂದರೂ ಕೇಳದೆ, ದೊಡ್ಡ ಜಗಳ ಮಾಡಿಕೊಂಡು ತವರುಮನೆಗೆ ಹೋದಳು. ಆ ತಾಯಿ
ಗಂಡನಿಲ್ಲದಿದ್ದರೂ ಮಗನ ಸಂಸಾರ ಸುಖವಾಗಿರಲಿ ಎಂದು ಹಳ್ಳಿಗೆ ಹೋಗಿ ಒಂಟಿಯಾಗಿ ನೆಲೆಸಿಬಿಟ್ಟಳು.

ಆದರೆ ಮಗನ ಸಂಸಾರ ಹೀಗಾಯ್ತಲ್ಲ ಎನ್ನುವ ಕೊರಗಿನಿಂದ ಕೆಲವೇ ತಿಂಗಳಿನಲ್ಲಿ ಪ್ರಾಣಬಿಟ್ಟಳು. ಈಗ ಮತ್ತೆ ಆ ಹುಡುಗಿ
ಸಂಸಾರ ಮಾಡಲು ತಯಾರಿದ್ದೇನೆ ಎಂದು ತಮ್ಮವರ ಮೂಲಕ ಹೇಳಿಕಳುಹಿಸಿದಾಗ, ಒಂದಾಗಿ ಇರಲು ಸಾಧ್ಯವೇ ಇಲ್ಲ, ಪರಿಹಾರವಾಗಿ ಏನು ಬೇಕಾದರೂ ಕೊಡಲು ಸಿದ್ಧ ಎಂದು ಆ ಹುಡುಗ ಹೇಳಿದ್ದಾನೆ. ಇಂತಹ ಕೆಲಸಕ್ಕೆ ಬಾರದ ಸಣ್ಣಪುಟ್ಟ ವಿಷಯಗಳಿಗೆ ಹೆಣ್ಣುಮಕ್ಕಳು ಪತಿಯಿಂದ ದೂರವಾಗುತ್ತಿರುವುದು ಈ ಕಾಲಮಾನದ ದುರಂತ. ಇದು ಎಂತಹ ಸಂಸ್ಕಾರ? ಜಾಸ್ತಿ ಓದಿದ ವಿದ್ಯಾವಂತೆಯರೂ ಹೀಗೆ ಮಾಡುತ್ತಾರೆಂದರೆ ಯಾರನ್ನು ದೂರಬೇಕು.

ಅತ್ತೆ ಮಾವಂದಿರಿಂದ ಹೀಯಾಳಿಕೆಯೋ, ತೆಗಳಿಕೆಯೋ, ಮೂದಲಿಸುವಿಕೆಯೋ ಅಥವಾ ದೌರ್ಜನ್ಯವೋ ಆಗಿದ್ದರೆ ಸೊಸೆ ಯಾದವಳು ಖಂಡಿತಾ ಸಿಡಿದೇಳಲಿ, ಅದು ಅವಳ ಹಕ್ಕು. ಆದರೆ ಏನೂ ಬಲವಾದ ಕಾರಣಗಳಿಲ್ಲದೆ ಹೀಗೆ ಮಾಡುವುದು ಯಾವ ನ್ಯಾಯ? ಗಂಡನೊಬ್ಬನೇ ನನ್ನವನು, ಗಂಡನ ಮನೆಯವರಾರೂ ನನ್ನವರಲ್ಲ ಎನ್ನುವ ಧೋರಣೆ ಸರಿಯಲ್ಲ. ಅತ್ತೆ-ಮಾವಂದಿ ರನ್ನು ‘ಸ್ಕ್ರ್ಯಾಪ್’ ಎಂದು ಆಡಿಕೊಳ್ಳುವವರೂ ಇದ್ದಾರೆ!

ಅಷ್ಟಾಗಿಯೂ ಅತ್ತೆ ಮಾವನ ಜತೆಯಲ್ಲಿ ಇರಲು ಸಾಧ್ಯವಿಲ್ಲ ಎಂದಾದರೆ, ಮದುವೆಗೆ ಮುಂಚೆಯೇ ಈ ಬಗ್ಗೆ ಸಂಗಾತಿಯೊಡನೆ ಮಾತನಾಡುವುದು ಒಳಿತು. ಸಂಸಾರ ಎಂದ ಮೇಲೆ ನಾಲ್ಕು ಮಾತು ಬರುತ್ತಿರುತ್ತವೆ, ಹೋಗುತ್ತಿರುತ್ತವೆ. ಪ್ರತಿಯೊಂದನ್ನೂ ಭೂತಕನ್ನಡಿಯಲ್ಲಿಟ್ಟು ನೋಡುವುದು ಸರಿಯಲ್ಲ. ಕ್ಷುಲ್ಲಕ ಕಾರಣಗಳಿಗೆ ದಾಂಪತ್ಯಜೀವನವನ್ನೇ ಪಣಕ್ಕಿಡುವ ಮೂರ್ಖತನ
ಮಾಡದೆ ಜಾಣತನದಿಂದ ನಿಭಾಯಿಸುವ ಬಗ್ಗೆ ಯೋಚಿಸುವುದು ಒಳಿತು.

error: Content is protected !!