Saturday, 27th July 2024

ಮಗುವಿನೊಂದಿಗೆ ಒಂಬತ್ತು ನಿಮಿಷ

ಮಗುವಿನೊಂದಿಗೆ ಪ್ರತಿ ದಿನ ಒಂಬತ್ತು ನಿಮಿಷ ಕಳೆದರೆ, ಅದೆಂತಹ ಉತ್ತಮ ಬದಲಾವಣೆಯನ್ನು ಕಾಣಬಹುದು, ಗೊತ್ತೆ!

ನಿರ್ಮಲ ವಿ.

ಏನಿದು ನಿಮ್ಮ ಕುಡಿಗೆ ೯ ನಿಮಿಷ ಎಂದು ಆಶ್ಚರ್ಯವೇ? ಹೌದು ಪೋಷಕರೇ ಅದರಲ್ಲೂ ತಾಯಂದಿರೇ ಪ್ರತಿದಿನ ನಿಮ್ಮ ಮಗ
ಅಥವಾ ಮಗಳಿಗೆ ನಿಮ್ಮ ಅಮೂಲ್ಯವಾದ ೯ ನಿಮಿಷ ಸಮಯವನ್ನು ಮೀಸಲಿಡಿ.

ಮಗು ಬೆಳಿಗ್ಗೆ ಎದ್ದಾಗ ೩ ನಿಮಿಷ, ಶಾಲೆಯಿಂದ ಬಂದಾಗ ಮೂರು ನಿಮಿಷ, ಹಾಗೂ ಮಲಗುವ ಮೊದಲು ಮೂರು ನಿಮಿಷ. ಆದರೆ ನೆನಪಿಡಿ ಈ ಒಂಬತ್ತು ನಿಮಿಷ ಸಮಯವು ನೀವು ಸಂಪೂರ್ಣವಾಗಿ ನಿಮ್ಮ ಮಗುವಿಗೆ ಮೀಸಲಿಡಿ. ಈ ಸಂದರ್ಭದಲ್ಲಿ ನೀವು ಬೇರೆಯವರೊಂದಿಗೆ ಮಾತನಾಡುತ್ತಾ, ಮೊಬೈಲ್‌ನಲ್ಲಿ ಮಾತನಾಡುತ್ತಾ, ಟಿವಿ ನೋಡುತ್ತಾ ಅಥವಾ ಬೇರೆ ಯಾವುದೇ ವಿಚಾರವನ್ನು ಚರ್ಚೆ ಮಾಡುತ್ತಾ ಆಗಲಿ ಈ ಸಮಯವನ್ನು ಮಗುವಿಗೆ ಕೊಡಬೇಡಿ. ಆದರೆ ಹೇಗೆ ಈ ಸಮಯವನ್ನು ಮಕ್ಕಳಿಗೆ ಕೊಡಬೇಕು ಎಂದರೆ, ಪೋಷಕರು ಯಾವುದೇ ಒತ್ತಡವಿಲ್ಲದೆ, ಧಾವಂತವಿಲ್ಲದೆ ಮಗು ವನ್ನು ಬೆಳಗ್ಗೆ ಹಾಸಿಗೆಯಿಂದ ಎಬ್ಬಿಸಿ ಪ್ರೀತಿಯಿಂದ ಮಗುವಿನ ಮುಖ ಕಣ್ಣು ತಲೆ ಯನ್ನು ಸವರಿ ಅದನ್ನು ಅಪ್ಪಿಕೊಂಡು ಮುಂಜಾನೆ ಕೆಲವು ಶ್ಲೋಕಗಳನ್ನು ಅದರಿಂದ ಹೇಳಿಸಿರಿ.

ಇದರಿಂದ ಮಗುವಿನ ಏಕಾಗ್ರತೆ ಹೆಚ್ಚುವುದರೊಂದಿಗೆ ಮಗು ಒತ್ತಡ ಮುಕ್ತವಾಗಿ ಬೆಳಗ್ಗೆ ಏಳಲು ಅನುಕೂಲವಾಗುತ್ತದೆ. ನಂತರ ಮಗುವನ್ನು ಮಾತನಾಡಿಸಿ ನಿದ್ರೆ ಚೆನ್ನಾಗಿ ಬಂದಿತ್ತೆ, ನಿದ್ರೆಯಲ್ಲಿ ಕನಸುಗಳು ಏನಾದರೂ ಬಂದಿದ್ದವೇ ಎಂದು ಕೇಳಿದಾಗ ಮಗು ತನ್ನ ಮನಸ್ಸಿನಲ್ಲಿರುವುದನ್ನೆಲ್ಲ ಹೇಳುತ್ತದೆ. ಮಗು ಹೇಳುವಾಗ ಮಧ್ಯ ಮಾತನಾಡದೆ ಅದರ ಮಾತನ್ನು ಕಾಳಜಿಯಿಂದ ಕೇಳಿಸಿ ಕೊಳ್ಳಬೇಕು. ನಂತರವಷ್ಟೇ ನಿಮ್ಮ ಮಾತು ಮುಂದುವರೆಯಬೇಕು. ಅವಸರಿಸದೇ ಶಾಲೆಗೆ ತಯಾರಾಗಲು ಮಗುವಿಗೆ ಸೂಚಿಸಿ ನಿಮ್ಮ ಯಾವುದೇ ಒತ್ತಡಗಳನ್ನು ಅವರಿಗೆ ವರ್ಗಾಯಿಸಬೇಡಿ.

ನಂತರದ ಮೂರು ನಿಮಿಷ ಶಾಲೆಯಿಂದ ಬಂದಾಗ ಮಗುವನ್ನು ಆದರದಿಂದ ಬರಮಾಡಿಕೊಂಡು ಮಕ್ಕಳಿಗೆ ಬೆಳಗ್ಗೆಯಿಂದ ಶಾಲೆಯಲ್ಲಿ ಏನಾಯಿತು ಹಾಗೂ ಗುರುಗಳು ಏನನ್ನು ಹೇಳಿಕೊಟ್ಟರು ಎಂದು ಕೇಳುತ್ತಾ ಮಕ್ಕಳ ಉಡುಪುಗಳನ್ನು ಬದಲಿಸಿ, ಮಕ್ಕಳ ಉಡುಪನ್ನು ಸ್ವತಹ ನೀವೇ ಬದಲಿಸಿ. ಕಾರಣ ಮಕ್ಕಳೇನಾದರೂ ಶಾಲೆಯಲ್ಲಿ ಬಿದ್ದಿದ್ದರೆ ಅಥವಾ ಏಟುಗಳಾಗಿದ್ದರೆ ತಿಳಿಯುತ್ತದೆ ತಲೆಗೆ ಪೂರ್ತಿಯಾಗಿ ಕೈಯಿಟ್ಟು ನೇವರಿಸುವುದನ್ನು ಮರೆಯಬೇಡಿ.

ತಲೆಯನ್ನು ನೆವರಿಸುವುದರಿಂದ ನಿಮ್ಮ ಪ್ರೀತಿಯ ಆಪ್ಯಯಮಾನತೆ ಮಗುವಿನೊಂದಿಗೆ ಬೆರೆಯಲು ಅನುಕೂಲವಾಗುತ್ತದೆ. ಶಾಲೆಯ ಸ್ನೇಹಿತರು ಮತ್ತು ಗುರುಗಳ ಬಗ್ಗೆ ಹಾಗೂ ವ್ಯಾನ್ ಚಾಲಕರು ಮತ್ತು ಆಯಾ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಕಾಳಜಿಯಿಂದ ಕೇಳಿಸಿಕೊಳ್ಳಿ. ಮಗು ಋಣಾತ್ಮಕ ವಿಚಾರಗಳನ್ನು ಹೇಳುತ್ತಿದ್ದರೆ ಗದರಿಸಬೇಡಿ. ನಂತರ ನೀವು ಮಾತನಾಡಿ. ಅಗತ್ಯವಿದ್ದರೆ ಶಿಕ್ಷಕರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇನ್ನುಳಿದ ಮೂರು ನಿಮಿಷವನ್ನು ಮಗು ಮಲಗುವ ಮೊದಲು ಆ ಸಮಯವನ್ನು ಮೀಸಲಿಡಿ. ಹೋಂವರ್ಕನ್ನು ಮಾಡಿದೆಯಾ, ನಾಳೆ ಶಾಲೆಗೆ ಬೇಕಾಗುವ ಪುಸ್ತಕಗಳನ್ನು ಜೋಡಿಸಿಕೊಂಡಿದ್ದೀಯ, ಟೆಸ್ಟ್ ಇದ್ದರೆ ತಯಾರಿ ಹೇಗೆ ಮಾಡಿದ್ದೀಯಾ? ಎಂದು ಕೇಳಿ ನಂತರ ಮಗುವನ್ನು ಮಲಗಿಸಿ. ಮಗು ನಿದ್ದೆಗೆ ಜಾರುವ ತನಕ ಮಗುವನ್ನು ನವಿರಾಗಿ ತಟ್ಟಿ.

ಇದರಿಂದ ಮಗುವಿಗೆ ಪೋಷಕರ ಬಗ್ಗೆ ಸುರಕ್ಷತಾ ಭಾವನೆ ಮೂಡುತ್ತದೆ. ಮಗುವನ್ನು ಮುಟ್ಟುವುದರಿಂದ, ಮಗುವನ್ನು ಅಪ್ಪಿ ಕೊಳ್ಳುವುದರಿಂದ ಮಗುವಿಗೆ ನೀವು ಹೆಚ್ಚು ಮಾನಸಿಕವಾಗಿ ಕನೆಕ್ಟ್ ಆಗಲು ಸಾಧ್ಯವಾಗುತ್ತದೆ ಹಾಗೂ ಇದರಿಂದ ಮಗುವಿನ ಮಾತು ಮೌನ ಅದರ ಕೋಪ ಹಾಗೂ ಅಸಹನೆ ಏಕೆ ಎಂಬುದು ಪೋಷಕರಿಗೆ ಅರ್ಥವಾಗುತ್ತದೆ. ಮಗು ಏನಾದರೂ ಸಮಸ್ಯೆ ಯಿಂದ ಬಳಲುತ್ತಿದ್ದರೆ ಪರಿಹರಿಸಲು ಸಾಧ್ಯವಾಗುತ್ತದೆ.

ಪ್ರತಿದಿನ ತಂದೆ ತಾಯಂದಿರು ಈ ಒಂಬತ್ತು ನಿಮಿಷ ಸಮಯವನ್ನು ಮಕ್ಕಳಿಗೆ ಮೀಸಲಿಡುವುದರಿಂದ ಸಾಕಷ್ಟು ಅನುಕೂಲ ಗಳಿವೆ.

ಮಗು ನಮಗೆ ಸುಳ್ಳು ಅಥವಾ ಸತ್ಯ ಹೇಳುತ್ತಿದೆಯಾ ಎಂಬುದರ ಬಗ್ಗೆ ತಿಳಿಯುತ್ತದೆ.

ಮಗುವಿಗೆ ಪೋಷಕರ ಬಗ್ಗೆ ಪ್ರೀತಿ ಕಾಳಜಿ ಮೂಡುತ್ತದೆ. ಪೋಷಕರ ಬಗ್ಗೆ ಸುರಕ್ಷತಾಭಾವ ಮೂಡುತ್ತದೆ.

ಯಾವುದೇ ಸಮಸ್ಯೆಗಳಿದ್ದರೂ ಮಗು ಭಯಪಡದೆ ಎಲ್ಲಾ ವಿಚಾರಗಳನ್ನು ಹೇಳುತ್ತದೆ.

ಮಗುವಿನ ಆಶಯಗಳು ಅರ್ಥವಾಗುತ್ತದೆ, ಮಕ್ಕಳು ಯಾರೊಂದಿಗೆ ಬೆರೆಯುತ್ತವೆ, ಅವರು ಹೇಗೆ ಮಕ್ಕಳೊಂದಿಗೆ ಇರುತ್ತಾರೆ ಎಂಬುದು ತಿಳಿಯುತ್ತದೆ.

ಮಕ್ಕಳ ಕೆಲಸಗಳನ್ನು ಅವರೇ ಮಾಡಿಕೊಳ್ಳಲು ಪ್ರೇರೇಪಿಸಿದಂತೆ ಆಗುತ್ತದೆ.

ಮಕ್ಕಳ ಆಲೋಚನಾ ಶಕ್ತಿ ಬೆಳೆಯುತ್ತದೆ.

ಮಗುವಿಗೆ ಪೋಷಕರ ಈ ನಡೆ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗುತ್ತದೆ.

error: Content is protected !!