Thursday, 20th June 2024

ಮಂಡಲ ಕಲೆಯ ಪರಿಣತಿ

ಸುರೇಶ ಗುದಗನವರ

ಮಂಡಲ ಕಲಾಕೃತಿಯನ್ನು ಚಿತ್ತ ಕೊಟ್ಟು ಬಿಡಿಸಿದರೆ ಒಂದು ದಿನ, ಕೆಲವೊಮ್ಮೆ ಎರಡು ದಿನ ಬೇಕಾಗುತ್ತದೆ. ಈ ಅದ್ಭುತ ಕಲಾಪ್ರಕಾರವನ್ನು ಕಲಾಸಕ್ತರು ಒಮ್ಮೆಲೇ ನೋಡಿದರೆ ಚಕಿತರಾಗುವುದು ನಿಶ್ಚಿತ.

ಕಲೆ ಎಂಬುದು ಹುಟ್ಟಿನಿಂದಲೇ ಬರುವುದಿಲ್ಲ. ನಮ್ಮ ಆಸಕ್ತಿಯಿಂದ ಹುಟ್ಟಿಕೊಳ್ಳುವುದು. ಆಸಕ್ತಿ ಎನ್ನುವುದು ಸಣ್ಣ ವಯಸ್ಸಿನಲ್ಲೇ ಬಂದರೆ ಸಾಧನೆಯ ಉತ್ತುಂಗಕ್ಕೇರಲು ಬಹಳ ಸುಲಭ. ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳು ಎಲ್ಲದರಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಸಮಾಜದಲ್ಲಿ ತಾನು ಕೂಡ ಗುರುತಿಸಿಕೊಳ್ಳಬೇಕು ಎಂದು ಹಲವಾರು ಕಲೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಹಾಗೆಯೇ ವೃತ್ತಗಳಲ್ಲಿ ರೇಖೆಗಳ ಮೂಲಕ ರಚಿಸುವ ದೇಸಿ ಚಿತ್ರಕಲೆಯಾಗಿರುವ ಮಂಡಲ ಚಿತ್ರಕಲೆ ರಚಿಸುವಲ್ಲಿ ಸಿದ್ಧಹಸ್ತ ರಾದವರು ಧಾರವಾಡದ ಲಕ್ಷ್ಮೀ ಎನ್.ಜಿ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರ ಮೂಲದವರಾದ ಲಕ್ಷ್ಮೀ ೨೦೦೨ರ ಜೂನ್ ೭ರಂದು ಸವದತ್ತಿಯ ಚಿಕ್ಕುಂಬಿಯಲ್ಲಿ ಜನಿಸಿದರು. ತಂದೆ ಡಾ.ನಾಗರಾಜ, ತಾಯಿ ರೇಣುಕಾ. ತಂದೆಯ ವರು ಧಾರವಾಡದ ಅಂಜುಮನ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರು. ಲಕ್ಷ್ಮೀ ಬಾಲ್ಯ ದಲ್ಲಿಯೇ ಚಿತ್ರಕಲೆಯಿಂದ ಆಕರ್ಷಿತರಾ ದವರು.

ಧಾರವಾಡದ ಪ್ರಜಂಟೇಶನ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಯಲ್ಲಿದ್ದಾಗಲೇ ಹಲವಾರು ಚಿತ್ರಗಳನ್ನು ಬಿಡಿಸಿ ಶಾಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಎಸ್.ಡಿ.ಎಮ್. ಎಂಜಿನಿಯರಿಂಗ್ ಕಾಲೇಜಿ ನಲ್ಲಿ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ಚಿತ್ರಕಲೆಯ ಯಾವ ಕೋಸ್ ನ್ನು ಮಾಡದೇ ಆಸಕ್ತಿ ಮತ್ತು ಹವ್ಯಾಸಕ್ಕಾಗಿ ಚಿತ್ರ ಬಿಡಿಸುವುದನ್ನು ರೂಢಿಸಿಕೊಂಡು ಬಂದಿರುವ ಲಕ್ಷ್ಮೀ ಕಲೆಯಲ್ಲಿ ಪರಿಣತಿ ಸಾಧಿಸಿದ್ದು ವಿಶೇಷವಾಗಿದೆ.

ಕರೋನಾ ಸಮಯದಲ್ಲಿ ಎರಡು ವರ್ಷ ಸುಮ್ಮನೆ ಮನೆಯಲ್ಲಿ ಕೂಡುವ ಬದಲು, ಭಾರತೀಯ ಪುರಾತನ ಕಲೆಗಳಲ್ಲಿ ಒಂದಾದ ಅತೀ ಕಠಿಣ ಕಲೆ ಮಂಡಲ ಕಲೆಯನ್ನು ಕಲಿತರು. ಮಂಡಲ ಚಿತ್ರಕಲೆ ಒಂದು ವಿಭಿನ್ನ ಪ್ರಕಾರ. ಅಲ್ಲಲ್ಲಿ ಕಾಣುವ ಚುಕ್ಕೆಗಳು, ಇವುಗಳ ಮಧ್ಯೆ ವೃತ್ತಾಕಾರದ ಆಕೃತಿ. ಮಂಡಲ ಚಿತ್ರಗಳನ್ನು ಸಾಮಾನ್ಯವಾಗಿ ಹೋಮ, ಯಾಗ-ಯಜ್ಞಗಳ ಆಚರಣೆಯ ಸಂದರ್ಭದಲ್ಲಿ ದೇವತೆಗಳನ್ನು ಆವ್ಹಾನ ಮಾಡಲು ಪುರೋಹಿತರು ಬಿಡಿಸು ವುದು ವಾಡಿಕೆ.

ಅದೇ ಸಿದ್ದಾಂತ ಆಧರಿಸಿ ಈ ಚಿತ್ರಕಲೆ ಬಂದಿರುವುದು ವಿಶೇಷ. ೪ನೇ ಶತಮಾನದಿಂದಲೇ ಟಿಬೆಟ್, ಭಾರತ, ಚೀನಾ, ಜಪಾನ, ನೇಪಾಳ ಮೊದಲಾದ ಹಲವು ಏಷಿಯಾ ದೇಶಗಳಲ್ಲಿ ಮಂಡಲಗಳ ರಚನೆ ಅಸ್ತಿತ್ವದಲ್ಲಿತ್ತು ಎಂದು ಹಲವು ಮೂಲಗಳಿಂದ ದೊರಕಿದ ಮಾಹಿತಿಯಿದೆ.

ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಮಂಡಲ ಚಿತ್ರಕಲೆಗೂ ಹೆಚ್ಚು ಒಲವು ಬಂತು ಎಂದು ಲಕ್ಷ್ಮೀ ಹೇಳುತ್ತಾರೆ. ಹಲವಾರು ಮಂಡಲ ಕಲಾಕೃತಿಗಳನ್ನು ರಚಿಸಿ ಚಿತ್ರಕಲಾ ಪ್ರಿಯರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಶಾಂತಚಿತ್ತ ಗೊಳಿಸುವ ಮಂಡಲ ಕಲಾಕೃತಿಗಳನ್ನು ಬಿಡಿಸುವುದಕ್ಕೆ ಏಕಾಗ್ರತೆ ಬೇಕು. ಒಂದು ರೀತಿಯ
ಇದೊಂದು ಧ್ಯಾನಸಕ್ತಿಯ ಕಲೆಯಾಗಿದೆ ಎನ್ನುತ್ತಾರೆ ಲಕ್ಷ್ಮೀ.

ಮನೆಯ ಅಲಂಕಾರದ ಜೊತೆಗೆ ಅಲ್ಲಿರುವವರ ಶಾಂತಿ, ನೆಮ್ಮದಿಗಾಗಿ ಮಂಡಲ ಚಿತ್ರಕಲೆ ಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ಹೇಳಿದರು. ಮಂಡಲ ಕಲಾಕೃತಿಯನ್ನು ಚಿತ್ತ ಕೊಟ್ಟು ಬಿಡಿಸಿದರೆ ಒಂದು ದಿನ, ಕೆಲವೊಮ್ಮೆ ಎರಡು ದಿನ ಬೇಕಾಗುತ್ತದೆ ಎನ್ನು ವರು. ಈ ಅದ್ಭುತ ಕಲಾಪ್ರಕಾರವನ್ನು ಕಲಾಸಕ್ತರು ನೋಡಿದರೆ ಚಕಿತರಾಗುವುದು ನಿಶ್ಚಿತ. ತಂದೆ-ತಾಯಿ, ಸಹೋದರಿ ವೈದ್ಯೆ ಸೌಮ್ಯ ಪ್ರೋತ್ಸಾಹ ನೀಡುತ್ತಿರುವುದರಿಂದ ಚಿತ್ರಕಲೆ ಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಲಕ್ಷ್ಮೀ.

ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಮಂಡಲ ಚಿತ್ರಿಸುವುದು ಒಂದು ಉತ್ತಮ ಹವ್ಯಾಸ. ಶಾಲಾ-ಕಾಲೇಜುಗಳಲ್ಲಿ ಮನಸ್ಸನ್ನು ಕೇಂದ್ರಿಕೃತಗೊಳಿಸಲು ಮಂಡಲ ಚಿತ್ರಗಳನ್ನು ವೀಕ್ಷಣೆಗೆಂದೇ ಬಳಸುವುದು ಈಗೀಗ ಹೆಚ್ಚಾಗುತ್ತಿದೆ.

error: Content is protected !!