Sunday, 23rd June 2024

₹100ರ ಹಳೆ ನೋಟು/ನಾಣ್ಯ ಚಲಾವಣೆಗೆ ಪರದಾಟ…!

ಹುಲಸೂರ: ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿ ನೋಟು ಚಲಾವಣೆಗೆ ಸಾರ್ವಜನಿಕರು, ವಿಶೇಷವಾಗಿ ಗಡಿಯಲ್ಲಿನ ಗ್ರಾಮೀಣ ಭಾಗದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಳ್ಳಿಗಳಲ್ಲಿನ ಸಣ್ಣ-ಪುಟ್ಟ ಕಿರಾಣಿ ಅಂಗಡಿಗಳು, ಹೋಟೆಲ್, ಡಬ್ಬಾ ಅಂಗಡಿಗಳ ವ್ಯಾಪಾರಿಗಳು ಮತ್ತು ಕೂಲಿಕಾರರು ₹100ರ ಮುಖ ಬೆಲೆಯ ಹಳೆ ಮಾದರಿಯ ನೋಟು ಹಾಗೂ ₹10 ನಾಣ್ಯ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದವರು ನೋಟು ಚಲಾವಣೆಗೆ ಪರದಾಡು ತ್ತಿದ್ದಾರೆ.

2024 ರ ಮಾರ್ಚ್ ಅಂತ್ಯಕ್ಕೆ ನೋಟು ಬಂದ್ ಆಗಿದೆ ಎನ್ನುವ ವದಂತಿ ಹಬ್ಬಿತ್ತು. ಆದ್ದರಿಂದ ನೋಟು ಪಡೆಯಲು ಕೆಲವು ವರ್ತಕರು ಹಿಂದೇಟು ಹಾಕುತ್ತಿದ್ದಾರೆ.

ಹಳೆ ಮಾದರಿಯ ₹100 ರ ಮುಖ ಬೆಲೆಯ ನೋಟು ಪಡೆಯಲು ನಿರ್ವಾಹಕರೊಬ್ಬರು ನಿರಾಕರಿಸಿದ ಕಾರಣ ಈಚೆಗೆ ಖಾಸಗಿ ಬಸ್‌ವೊಂದರಲ್ಲಿ ಗಲಾಟೆ ನಡೆದಿದೆ.

‘ಮದುವೆ ಸಮಾರಂಭಕ್ಕೆ ಹೋದಾಗ ಕಿರಾಣಿ ಅಂಗಡಿಯಲ್ಲಿ ಸಣ್ಣ ಪುಟ್ಟ ವಸ್ತುಗಳು ಖರೀದಿಸಿದೆ. ನನ್ನ ಬಳಿಯಿದ್ದ ಹಳೆ ಮಾದರಿಯ ₹100ರ ನೋಟು ನೀಡಿದಾಗ ಅಂಗಡಿಯಾತ ಅದನ್ನು ಪಡೆಯಲು ನಿರಾಕರಿಸಿದ. ಕೊನೆಗೆ ₹500ರ ನೋಟು ನೀಡಿ ಚಿಲ್ಲರೆ ಪಡೆಯಲು ಹರಸಾಹಸ ಪಡಬೇಕಾಯಿತು’ ಎಂದು ಜಮಖಂಡಿ ಗ್ರಾಮದ ಘಾಯಾಳ ತಿಳಿಸಿದರು.

‘ಹಳ್ಳಿಗಳಲ್ಲಿ ಬಹುತೇಕರು ಹಳೆ ಮಾದರಿಯ ನೋಟು ಪಡೆಯಲು ಹಿಂದೇಟು ಹಾಕುತ್ತಾರೆ. ಅದೇ ರೀತಿ ಅಂಗಡಿಯವರು ಹಳೆ ನೋಟುಗಳನ್ನು ನೀಡುತ್ತಾರೆ. ನಾವು ವಾಪಸ್ ನೀಡಿದರೆ ತೆಗೆದುಕೊಳ್ಳುವುದಿಲ್ಲ. ನಾವು ಅವುಗಳನ್ನು ಬ್ಯಾಂಕ್ ಜಮಾ ಮಾಡುತ್ತಿದ್ದೇವೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸ್ವಸಹಾಯ ಸಂಘಗಳ ಪಿಗ್ಮಿ ಸಂಗ್ರಹಕಾರ ಹೇಳಿದರು.

ಗಡಿಯಲ್ಲಿ ₹100 ಮುಖ ಬೆಲೆಯ ಹಳೆನೋಟು ಅಮಾನ್ಯ ಎಂಬ ಸುದ್ದಿ ಹರಿದಾಡಿದ್ದು, ನೂರರ ಮುಖಬೆಲೆ ನೋಟು ಮಾರ್ಚ್ 31ರ ವರೆಗೆ ಮಾತ್ರ ಬಳಸಬಹುದು. ಆ ನಂತರ ಮತ್ತೆ ಬಳಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ಕುರಿತು ಆರಬಿಐ ಯಾವುದೇ ಸೂಚನೆ ನೀಡಿಲ್ಲ. ವದಂತಿ ನಂಬಿಕೊಂಡು ನೋಟು ಸ್ವೀಕರಿಸಲು ನಿರಾಕರಿಸುವುದು ತಪ್ಪು. ತೀರಾ ಹಾಳಾದ ನೋಟುಗಳಿದ್ದರೆ ಬ್ಯಾಂಕ್‌ಗೆ ಬಂದು ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ. ಸುಳ್ಳು ಸುದ್ದಿ ನಂಬಬೇಡಿ ಎಂದು ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ನಂದಕಿಶೋರ ಹೇಳಿದರು.

Leave a Reply

Your email address will not be published. Required fields are marked *

error: Content is protected !!