Tuesday, 28th May 2024

ಕಾಂತಾರ ಸಿನಿಮಾ ವಿಶಿಷ್ಠ ಅನುಭೂತಿ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಪತ್ರಕರ್ತ ರವೀಂದ್ರ ಜೋಷಿ ಅವರಿಂದ ಕಾಂತಾರ ಸಿನಿಮಾ ವಿಮರ್ಶೆ

ಬೆಂಗಳೂರು: ಕರಾವಳಿಯ ಕಾಡಿನ ಜನರ ಬದುಕು, ಅವರ ಭೂಮಿಯ ಪ್ರಶ್ನೆ, ಅವರನ್ನು ನಡೆಸಿಕೊಂಡ ಮತ್ತು ಬಳಸಿ ಕೊಂಡ ರೀತಿ ಹಾಗೂ ಸರಕಾರ, ಅರಣ್ಯ ಇಲಾಖೆ… ಇವೆಲ್ಲವುಗಳ ಸುತ್ತ ಜನರ ನೈಜ ಬದುಕು ಮತ್ತು ಅದಕ್ಕಾಗಿ ಅವರು ನಂಬಿರುವ ಆಚರಣೆಗಳು, ದೈವಾರಾಧನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಾಂತಾರ ಸಿನಿಮಾದಲ್ಲಿ ಕಾಣಬಹುದಾಗಿದೆ ಎಂದು ಪತ್ರಕರ್ತ ರವೀಂದ್ರ ಜೋಷಿ ಹೇಳಿದ್ದಾರೆ.

ಗುರುವಾರ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಸ್ ಸಿನಿಮಾ ಕಾಂತಾರ ಕುರಿತು ವಿಮರ್ಶಿಸಿದ ಅವರು, ಸಿನಿಮಾದ ಬೆನ್ನೆಲುಬಾಗಿರುವ ಭೂತಾರಾಧನೆ, ತೆರೆಯ ಮೇಲೆ ಸೂಕ್ಷ್ಮವಾಗಿ, ಅದ್ಭುತವಾಗಿ ಕಾಣುವುದರ ಹಿಂದೆ ನಟ ರಾಜ್ ಬಿ.ಶೆಟ್ಟಿ ಅವರ ಪ್ರಯತ್ನ ಉಲ್ಲೇಖಾರ್ಹ.

ಭೂತಾರಾಧನೆಯ ಬಗ್ಗೆ ಕೊಂಚ ಮಾಹಿತಿ ಇದ್ದವರಿಗೆ ಈ ಸಿನಿಮಾ ಮನಸ್ಸಿನಾಳಕ್ಕೆ ಇಳಿದೀತು. ಮೇಕಿಂಗ್‌ನಲ್ಲಿ ಈ ಸಿನಿಮಾ ಮೇಲುಗೈ ಸಾಧಿಸಿದೆ. ಕರಾವಳಿಯ ಸಂಸ್ಕೃತಿ, ಆಚರಣೆಗೆ ಮತ್ತಷ್ಟು ಬಣ್ಣತುಂಬಿವೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಜೀವಾಳ. ಹೀಗಿದ್ದರೂ ಮೊದಲಾರ್ಧದಲ್ಲಿ ಭೂತಾರಾಧನೆ ಸಂದರ್ಭ ಕೆಲವು ಲೋಪ ಕಂಡುಬಂದರೂ ಕ್ಲೈಮ್ಯಾಕ್ಸ್‌ನಲ್ಲಿ ಈ ಕೊರತೆಯನ್ನು ನೀಗಿಸಿದ್ದಾರೆ ಎನ್ನಬಹುದು ಎಂದು ಹೇಳಿದರು.

ಕರಾವಳಿ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ದೇವರಿಗಿಂತ ದೈವಗಳ ಆರಾಧನೆಯೇ ಹೆಚ್ಚು. ತುಳು ಸಂಸ್ಕೃತಿಯ ಬಹುಮುಖ್ಯ ಭಾಗವೂ ಆಗಿರುವ ಈ ಅಂಶವನ್ನು ಕಥಾಭಾಗವನ್ನಾಗಿ ಆರಿಸಿಕೊಂಡು, ಆಚರಣೆಗೆ ಚ್ಯುತಿ ಬಾರದಂತೆ ತೆರೆಯ ಮೇಲೆ ತಂದಿರುವ ರಿಷಬ್ ಅವರ ಪ್ರಯತ್ನ ಉಲ್ಲೇಖಾರ್ಹ. ಇಲ್ಲಿ ಕರಾವಳಿಯ ಸಂಸ್ಕೃತಿ, ಆಚರಣೆಯ ಆಳಕ್ಕಿಳಿದು ಯೋಚಿಸಿದ್ದಾರೆ. ವ್ರತವಾಗಿ ಇದನ್ನು ನಿಭಾಯಿಸಿರುವುದು ತೆರೆಯ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ಪ್ರಕೃತಿಗೂ, ಅದರೊಳಗಿರುವ ಮನುಷ್ಯನಿಗೂ ಇರುವ ಸಂಬಂಧ, ಭೂತಾರಾಧನೆ, ಈ ಆಚರಣೆ ನ್ಯಾಯದ ವೇದಿಕೆಯಾಗಿ ಹೇಗೆ ಮಹತ್ವ ಪಡೆದಿದೆ ಎನ್ನುವುದನ್ನು ವಿವರಿಸುತ್ತಾ, ಪ್ರಸಕ್ತ ಸಮಾಜದಲ್ಲಿರುವ ದುರಾಸೆ ಮತ್ತದರ ಪರಿಣಾಮ, ಅಸ್ಪೃಶ್ಯತೆಯನ್ನು ಸ್ಥೂಲ ವಾಗಿ ಚಿತ್ರಿಸಿದ್ದಾರೆ ರಿಷಬ್ ಎಂದು ವಿವರಿಸಿದರು. ಸಿನಿಮಾದಲ್ಲಿ ಒಂದು ಘಟನೆಯಾದ, ಹಳ್ಳಿಗೆ ಅರಣ್ಯ ಅಧಿಕಾರಿ ಬಂದು ಬಿಡುತ್ತಾನೆ.

ಕಾಡನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದೀರಾ? ಇದನ್ನು ಸರ್ವೆ ಮಾಡುತ್ತೇವೆ ಎಂದು ಗಲಾಟೆ ಮಾಡುತ್ತಾನೆ. ಗ್ರಾಮದಲ್ಲಿ ಇರುವ ಶಿವ ಇದಕ್ಕೆ ಆಕ್ಷೇಪವೆತ್ತುತ್ತಾನೆ. ಹೀಗೆ ಆರಂಭವಾದ ಚಿತ್ರದ ಕಥೆಯಲ್ಲಿ ನಿಸರ್ಗದ ಮಧ್ಯೆ ಬದುಕುವ ಜನಾಂಗದ ಬದುಕಿನ ಚಿತ್ರಣದ ಕಾಣಬಹುದಾಗಿದೆ. ನಿಸರ್ಗದ ಮಧ್ಯೆ ಬದುಕುವವರು ದೈವವನ್ನು ಹೆಚ್ಚಾಗಿ ನಂಬುತ್ತಾರೆ. ಅದನ್ನೇ ಚಿತ್ರದಲ್ಲಿ ಕಾಣುತ್ತೇವೆ. ರಿಷಬ್ ಶಟ್ಟಿ, ಕಾಂತಾರ ಸಿನಿಮಾವನ್ನು ದಂತಕಥೆ ಎಂದಿದ್ದಾರೆ.

ನಂಬಿಕೆ ಇಟ್ಟುಕೊಂಡು ಹಳ್ಳಿಯ ಜನ ಹೇಗೆ ಸರಕಾರಿ ವ್ಯವಸ್ಥೆಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಇದರಲ್ಲಿ ಬಣ್ಣಿಸಲಾಗಿದೆ. ದಕ್ಷಿಣ ಕನ್ನಡದ ಸಂಪ್ರದಾಯಗಳನ್ನೊಂಡ ಸಿನಿಮಾ ಇದು. ಒಂದು ಪ್ರಕೃತಿಯಲ್ಲಿ ಶಕ್ತಿ ಇದೆ ಎಂಬುದನ್ನು ಅಲ್ಲಗಳೆಯು ವಂತಿಲ್ಲ. ಇದನ್ನೇ ಕಾಂತಾರ ಸಿನಿಮಾ ಹೇಳುತ್ತದೆ ಎಂದರು.

ನಕಾರಾತ್ಮಕ ಸಾಲು ಕಾಂತಾರ ಸಿನಿಮಾದಲ್ಲಿ ಇಲ್ಲ ಧರ್ಮ ಎಂಬುದು ಸೂಕ್ಷ್ಮವಾದ ವಿಷಯ. ಯಾರ ಮನಸ್ಸನ್ನೂ  ನೋಯಿಸ ಲಾರದೆ ಧರ್ಮಾಚರಣೆ ಹಾಗೂ ಸಂಪ್ರದಾಯವನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಒಂದು ಪ್ರದೇಶದ ಸಂಪ್ರದಾಯ ಹಾಗೂ ಪರಂಪರೆಯಾಧಾರಿತ ಸಿನಿಮಾ ಇದಾಗಿದೆ. ವಾಣಿಜ್ಯ ಯುಗದಲ್ಲಿ ಕಾಂತಾರ ಸಿನಿಮಾ ಯಶಸ್ಸು ಕುರಿತು ಅನುಮಾನ ಇತ್ತು. ಈ ಸಿನಿಮಾ ಜನಪ್ರಿಯಗೊಂಡಿರುವುದು ನಿಜಕ್ಕೂ ಅಚ್ಚರಿ.ನಕಾರಾತ್ಮಕ ಸಾಲುಗಳು ಸಿನಿಮಾದಲ್ಲಿ ಇಲ್ಲ.

ಅಮೇರಿಕಾದಲ್ಲಿ ೩೨೦ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿದೆ. ಯಾವುದೇ ಸಿನಿಮಾ ಆದರೂ ಆಯಾ ಕಾಲಘಟ್ಟ ದಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ರೂಪಿಸಲಾಗುತ್ತದೆ. ಚಲನಚಿತ್ರ ಕೇವಲ ಉದ್ಯಮವಲ್ಲ. ಸಾಮಾಜಿಕ ಬದುಕು ಹೇಗೆ ಎಂಬು ದನ್ನು ತೋರಿಸುವ ಸೃಜನಶೀಲ ಉದ್ಯಮ ಎಂಬುದನ್ನು ಈ ಚಿತ್ರ ಸಾಬೀತುಪಡಿಸುತ್ತದೆ ಎಂದು ರವೀಂದ್ರ ಜೋಷಿ ಹೇಳಿದರು.

ಕಾಂತಾರ ಬಲು ಸುಂದರ
ಭೂಮಿ ಮತ್ತು ಬದುಕಿನ ರಕ್ಷಣೆಗಾಗಿನ ಹೋರಾಟದ ಮೇಲೆ ಬೆಳಕು ಚೆಲ್ಲುವ ಚಿತ್ರ.

ಕಥೆಯ ಮೂಲಕ ಪರಂಪರೆಯನ್ನು ಕಟ್ಟಿಕೊಟ್ಟಿದೆ.

ಒಂದು ಭಾಗದ ಜನತೆಯ ಧರ್ಮ, ಸಂಪ್ರದಾಯದ ಸಂಕೋಲೆಯನ್ನು ಹೇಳುತ್ತದೆ.

ವಿಭಿನ್ನ ರೀತಿಯಲ್ಲಿ ಸಾಗುವ ಸಿನಿಮಾ ಗಾಢವಾದ ಪ್ರಭಾವ ಬೀರಿದೆ.

ನಿಸರ್ಗದ ಮಧ್ಯೆ ಬದುಕುವವರು ದೈವ ನಂಬುತ್ತಾರೆ ಎಂಬುದಕ್ಕೆ ಸಿನಿಮಾ ಸಾಕ್ಷಿ.

***

ರವೀಂದ್ರ ಜೋಷಿ ಅವರು ಮೂಲತಃ ಸವಣೂರಿನವರಾಗಿದ್ದು, ಸದ್ಯ ನೆಲೆಸಿರುವುದು ಮೈಸೂರಿನಲ್ಲಿ. ಅವರು ಪತ್ರಕರ್ತ, ಅಂಕಣಕಾರ, ನಟ, ಚಿತ್ರ ನಿರ್ಮಾಪಕ ಹಾಗೂ ಜನಪ್ರಿಯ ಯೂಟ್ಯೂಬರ್ ಆಗಿದ್ದಾರೆ. ಯೂಟ್ಯೂಬ್‌ನಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತು ರವೀಂದ್ರ ಜೋಷಿ ಅವರು ಚರ್ಚೆ ನಡೆಸುತ್ತಾರೆ.
-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು

error: Content is protected !!