Friday, 26th July 2024

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ನಿತ್ರಾಣ !

ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಈ ಆಸ್ಪತ್ರೆಗಳಲ್ಲಿ ಸಮಸ್ಯೆಗಳ ಸರಮಾಲೆ

ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ನಿತ್ರಾಣ ಗೊಂಡಿದ್ದು, ರೋಗಿಗಳ ಸಾವಿನ ಸಂಖ್ಯೆ
ಹೆಚ್ಚಳವಾಗು ತ್ತಿರುವುದು ಆತಂಕ ಮೂಡಿಸಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳು ಇವೆಯಾದರೂ ನಿರ್ವಹಣೆ ಕೊರತೆ, ಅಗತ್ಯಕ್ಕೆ
ತಕ್ಕಂತೆ ರೋಗಿಗಳಿಗೆ ಸೌಲಭ್ಯ ಕಲ್ಪಿಸುವ ಕೆಲಸ ಆಗುತ್ತಿಲ್ಲ. ಇದರ ಪರಿಣಾಮ ರೋಗಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕಿದ್ವಾಯಿ ಸ್ಮಾರಕ ಗಂಥಿ
ಆಸ್ಪತ್ರೆಯಲ್ಲಿ ಕಳೆದ ೧೧ ತಿಂಗಳಲ್ಲಿ ೯೧೫ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಲ್ಲಿ ೨೧ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಆಡಳಿತ ನೋಡಿಕೊಳ್ಳಲು ಸರಕಾರದಿಂದ ಪ್ರತ್ಯೇಕ ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆಯಾದರೂ ಕೆಲವೊಮ್ಮೆ ಆ ಆಸ್ಪತ್ರೆಗಳು ಸಾಮಾನ್ಯ ಸರಕಾರಿ ಆಸ್ಪತ್ರೆಗಳಿಗಿಂತಲೂ ಕಳಪೆ ಸಾಧನೆ ತೋರಿಸುತ್ತಿರುವುದು ನಿರ್ದೇಶಕರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಜಯದೇವ ಹೃದ್ರೋಗ ಆಸ್ಪತ್ರೆಯಂತೆ ರೂಪಿಸಲಾಗುವುದು ಎಂದು ಅಽಕಾರದಲ್ಲಿರುವವರು ಹೇಳುತ್ತಿದ್ದಾರಾದರೂ ಅದು ಕೇವಲ ಬಾಯಿಮಾತಿಗೆ ಮಾತ್ರ ಸೀಮಿತ ಎಂಬುದಕ್ಕೆ ಈ ಆಸ್ಪತ್ರೆಗಳ ಕುರಿತ ಸಮೀಕ್ಷಾ ವರದಿಗಳೇ
ಸಾಕ್ಷಿಯಾಗಿವೆ. ಬಹುತೇಕ ಆಸ್ಪತ್ರೆಗಳ ವರದಿ ಮಧ್ಯಮಕ್ಕಿಂತ ಕೆಳಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಲಭ್ಯತೆ ಕುರಿತ ದೂರು ಮುಖ್ಯಮಂತ್ರಿಯವರ ಜನತಾ ದರ್ಶನ ಕಾರ್ಯಕ್ರಮದವರೆಗೂ ಬಂದು ತಲುಪಿದೆ. ಅದೇ ರೀತಿ ಉಳಿದ ಅನೇಕ ಆಸ್ಪತ್ರೆಗಳ ನಿರ್ದೇಶಕರು, ವೈದ್ಯರ ವಿರುದ್ಧ ಸಚಿವರು, ಸಂಬಂಧಿಸಿದ ಅಧಿಕಾರಿಗಳಿಗೆ ದೂರುಗಳು ಹರಿದುಬರುತ್ತಿದೆಯಾ
ದರೂ ಫಲಿತಾಂಶ ಮಾತ್ರ ಶೂನ್ಯ. ಆಸ್ಪತ್ರೆಗೆ ಹೋದರೆ ವೈದ್ಯರಿಲ್ಲ, ಬೆಡ್ ಇಲ್ಲ, ಔಷಧ ದೊರೆಯುವುದಿಲ್ಲ ಎಂಬುದು ಸಾಮಾನ್ಯವಾಗಿದೆ. ಆದರೆ, ಈವರೆಗೆ ಯಾವುದೇ ಒಬ್ಬ ನಿರ್ದೇಶಕರ ವಿರುದ್ಧವೂ ಶಿಸ್ತು ಕ್ರಮ ಕೈಗೊಂಡಿಲ್ಲ ಎಂಬುದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ.

ಸರಕಾರ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಂದ ಒಂದು ಸಮಸ್ಯೆ ಇದ್ದೇ ಇರುತ್ತದೆ. ಬೆಂಗಳೂರಿನ ಕೆಲವು ಆಸ್ಪತ್ರೆಗಳು ಮತ್ತು ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮೂಲ ಸೌಲಭ್ಯಗಳು, ನಿರ್ಣಾಯಕ ವೈದ್ಯಕೀಯ ಸಾಧನಗಳು, ಔಷಧ ಮತ್ತು ಸಿಬ್ಬಂದಿ ಕೊರತೆ ಯಿದೆ.

ಶಿಕ್ಷೆಗಿಂತ ಶ್ರೀರಕ್ಷೆಯೇ ಹೆಚ್ಚು: ಹತ್ತು ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಗಳ ಪೈಕಿ ಜಯದೇವ ಹೃದ್ರೋಗ ಆಸ್ಪತ್ರೆ ಹೊರತುಪಡಿಸಿದರೆ ಉಳಿದ ೯ ಆಸ್ಪತ್ರೆಗಳು ಸೇವೆ ತೃಪ್ತಿ ಕುರಿತ ಸರ್ವೇಯಲ್ಲಿ ಅತ್ಯಂತ ಕಳಪೆ ಸಾಧನೆ ತೋರುತ್ತಿರುವುದು ಬೆಳಕಿಗೆ ಬಂದಿದೆ. ಕಳಂಕ ಹೊಂದಿರುವ ಹಾಗೂ ಹಲವು ಆರೋಪಗಳನ್ನು ಹೊತ್ತಿರುವ ಪ್ರಮುಖ ಆಸ್ಪತ್ರೆಗಳ ನಿರ್ದೇಶಕರು ಖುರ್ಚಿ ಉಳಿಸಿಕೊಳ್ಳುವಲ್ಲಿ ವಿಧಾನಸೌಧದ ಸುತ್ತ ಗಿರಕಿ ಹೊಡೆಯುತ್ತಿದ್ದಾರೆಯೇ ವಿನಃ ರೋಗಿಗಳ ಪರ ಕಾಳಜಿ ವಹಿಸುತ್ತಿಲ್ಲ. ತನಿಖೆ ನಡೆದು ಲೋಪ ಕಂಡುಬಂದರೂ ಕ್ರಮ ಕೈಗೊಳ್ಳದೆ ಇರುವುದನ್ನು ಗಮನಿಸಿದಾಗ ಕಳಂಕಿತ
ನಿರ್ದೇಶಕರಿಗೆ ಶಿಕ್ಷೆ ನೀಡುವುದಕ್ಕಿಂತ ಶ್ರೀರಕ್ಷೆಯೇ ಹೆಚ್ಚು ಎಂಬ ಅನುಮಾನ ಸೃಷ್ಟಿಯಾಗಿದೆ.

ವಿಐಪಿಗಳಿಗೆ ಎಲ್ಲವೂ ಇದೆ, ಬಡವರಿಗಿಲ್ಲ ಸರಕಾರಿ ಆಸ್ಪತ್ರೆಗಳೆಂದರೆ ಬಡವರ ಸಂಜೀವಿನಿ ಎನ್ನುತ್ತಾರೆ. ಆದರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಅದು ವಿಐಪಿ ಮತ್ತು ವಿವಿಐಪಿಗಳಿಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ವಿಐಪಿಗಳಿಂದ ಶಿಫಾರಸು ಪಡೆದು ದಾಖಲಾಗುವ ರೋಗಿಗಳಿಗೆ ನೋಂದಣಿ ಯಿಂದ ಡಿಸ್ಚಾರ್ಜ್‌ವರೆಗೂ ಉತ್ತಮ ಚಿಕಿತ್ಸೆ ಸಿಕ್ಕಿದರೆ ಬಡವರಿಗೆ ಬೆಡ್ ಇಲ್ಲ, ಔಷಧ ಇಲ್ಲ ಎಂಬ ಉತ್ತರ ಸಿಗುತ್ತದೆ. ಬಡವರಿಗಾಗಿ ಇರುವ ರೋಗಿಗಳ ಯೋಗಕ್ಷೇಮ ಹಣವನ್ನು ವಿಐಪಿಗಳಿಗೂ ಬಳಕೆ ಮಾಡಿಕೊಂಡಿರುವ ಆರೋಪಗಳಿವೆ. ಆದರೂ ಕ್ರಮ ಕೈಗೊಂಡ ಉದಾಹರಣೆ ಇಲ್ಲ.

*
ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಕಳೆದ ೧೧ ತಿಂಗಳಲ್ಲಿ ೯೧೫ಕ್ಕೂ ಹೆಚ್ಚು ಮಂದಿ ಸಾವು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ೬ ತಿಂಗಳಲ್ಲಿ ೨೧ಕ್ಕೂ ಹೆಚ್ಚು ಮಕ್ಕಳು ಸಾವು ಆಸ್ಪತ್ರೆಗಳ ಸಮೀಕ್ಷಾ ವರದಿಗಳಲ್ಲಿ ಬಹುತೇಕ ಆಸ್ಪತ್ರೆಗಳ ವರದಿ ಮಧ್ಯಮಕ್ಕಿಂತ ಕೆಳಗಿದೆ ಈ ಆಸ್ಪತ್ರೆಗಳ ನಿರ್ದೇಶಕರು, ವೈದ್ಯರ ವಿರುದ್ಧ ದೂರು ಬಂದರೂ ಯಾವುದೇ ಕ್ರಮವಿಲ್ಲ.

Leave a Reply

Your email address will not be published. Required fields are marked *

error: Content is protected !!