Tuesday, 3rd December 2024

ನೀರಿನ ನಡುವೆ ಒಂದು ರಾತ್ರಿ !

ಅಪರ್ಣಾ ಎ.ಎಸ್

ಸಮುದ್ರದಲ್ಲಿ ತೇಲುತ್ತಾ, ಸಣ್ಣ ಅಲೆಗಳು ಬಂದಾಗ ಏರಿಳಿತವಾಗುವ ಬೋಟ್ ಹೌಸ್‌ನಲ್ಲಿ ರಾತ್ರಿ ಮಲಗಿದರೆ, ತೊಟ್ಟಿಲಲ್ಲಿ ತಾಯಿ ತೂಗು ವಾಗ ಆಗುವ ಅನುಭವ. ನೀರೆಂದರೆ ಭಯವಿದ್ದರೂ, ಆ ಒಂದು ರಾತ್ರಿ ಯನ್ನು ನೀರಿನ ಮೇಲೆ, ಆ ಬೋಟ್ ಹೌಸ್‌ನಲ್ಲಿ ಕಳೆದ ಅನುಭವವನ್ನು ಮಾತ್ರ ಮರೆಯಲು ಸಾಧ್ಯವಿಲ್ಲ.

ನಿಸರ್ಗ ಪ್ರೇಮಿಗಳಿಗೆ ಹಾಗೇ ಕೆಲ ಸಮಯವಾದರೂ ಪರಿಸರದ ಮಡಿಲಿನಲ್ಲಿ, ಹಚ್ಚ ಹಸುರಿನ ಒಡಲಿನಲ್ಲಿ ಕಾಲ ಕಳೆದು ನಗರ ಪ್ರದೇಶದ ಒತ್ತಡವನ್ನು ಕಳೆದುಕೊಂಡು ನೆಮ್ಮದಿಯಾಗಿ ಕೆಲ ದಿನಳಾದರೂ ಕಳೆಯಬೇಕು ಅಂದು ಕೊಂಡಿದ್ದರೆ ಅದಕ್ಕೊಂದು ಉತ್ತಮ ತಾಣವೆಂದರೆ ಕೇರಳದ ಮುನ್ನಾರ್.

ಕಣ್ಣು ಹಾಯಿಸಿದಷ್ಟೂ ಕಡೆ ಹಚ್ಚ ಹಸಿರು, ಚಹಾ ತೋಟಗಳು, ನೀರಿನ ಬುಗ್ಗೆಗಳು, ಹಾಗೇ ನಯನ ಮನೋಹರವಾದ ಬಗೆ
ಬಗೆಯ ಹೂಗಳ ರಾಶಿ. ಸುಂದರವಾದ ಕಣ್ತುಂಬಿಕೊಂಡಷ್ಟು ಸಾಲದು ಎನಿಸುವಷ್ಟು ರಮ್ಯವಾದ ತಾಣಗಳನ್ನು  ತನ್ನೊಡ ಲೊಳಗೆ ಹುದಗಿಸಿಕೊಂಡು ನೋಡುಗರ ಮನಸೆಳೆಯುವ ಪ್ರಕೃತಿಯನ್ನೊಳಗೊಂಡ ಮುನ್ನಾರ್‌ನಲ್ಲಿ ಎಷ್ಟು ನೋಡಿದರೂ ಕಡಿಮೆಯೇ ಅನಿಸುವಷ್ಟು ಸ್ಥಳಗಳಿವೆ. ಇನ್ನು ಸುತ್ತಲೂ ಕಾಡು ಕಾಡಿನ ಮಧ್ಯೆ ಅವರದೇ ಆದಂತಹ ಶೈಲಿಯ ಮನೆ, ದೇವಾಲಯದ ಮಧ್ಯೆ ಕಳೆಯುವುದೆಂದರೆ ಅದೊಂಥರಾ ಮರೆಯಲಾಗದ ಅನುಭವ. ಮಳೆಗಾಲದ ಕೇರಳ ಪ್ರವಾಸ ವಂತೂ ಮಧುರ ಅನುಭೂತಿಯನ್ನು ನೀಡುತ್ತದೆ.

ಎರಡು ವರ್ಷದ ಹಿಂದೆ ಕರೋನಾದ ಮೊದಲ ಅಲೆಯ ಕರಿಛಾಯೆ ಕಳೆದು ಎರಡನೇ ಅಲೆಯ ಆರಂಭಕ್ಕೂ ಮೊದಲು ನಾವು ಮುನ್ನಾರ್, ತೇಕ್ಕಡಿ ಹಾಗೂ ಅಲೆಪಿಗೆ ಹೋಗಿ ಬರೋಣವೆಂದು ಹೋಗಿದ್ದೆವು. ಈ ಸ್ಥಳಗಳಿಗೆ ಭೇಟಿ ನೀಡಿದ್ದು ಅದೇ ಮೊದಲ ಬಾರಿಗೆ. ನಾಲ್ಕು ದಿನದ ಪ್ರವಾಸದ ಮೊದಲ ದಿನದಿಂದಲೂ ನಮಗೆ ಕಾದು ಕೂತಿದ್ದ ದಿನವೆಂದರೆ ಕೊನೆಯ ದಿನ. ಏಕೆಂದರೆ, ಅಂದು ನಾವು ‘ಬೋಟ್ ಹೌಸ್’ನಲ್ಲಿ ಒಂದು ದಿನ ತೇಲುತ್ತಾ, ಹಾಯಾಗಿ ಕಳೆಯಬಹುದು ಎಂದು ಹೇಳಿದ್ದರು.

ಬೋಟ್ ಹೌಸ್ ಮಜಾ
ಹಲವು ವರ್ಷಗಳಿಂದ ಬೋಟ್ ಹೌಸ್ ಬಗ್ಗೆ ಕೇಳಿದ್ದು, ನೋಡಿದ್ದೇ ಆಗಿತ್ತು ಹೊರತು ಎಂದಿಗೂ ಆ ಮನೆ ಹೇಗಿರುತ್ತದೆ ಎನ್ನುವ ಕಲ್ಪನೆಯಿರಲಿಲ್ಲ. ಹೇಗಿರಬಹುದು ಎನ್ನುವ ಆಲೋಚನೆಯಲ್ಲಿಯೇ ಮೂರು ದಿನದ ಪ್ರವಾಸ ಮುಗಿಸಿ, ಬೋಟ್ ಹೌಸ್ ಇರುವ ಅಲೆಪಿಯತ್ತ ನಮ್ಮ ಪ್ರಯಾಣವನ್ನು ಆರಂಭಿಸಿದೆವು. ಕೇರಳದ ಆ ಪರಿಸರದಲ್ಲಿ ಸಮುದ್ರದ ಹಿನ್ನೀರನ್ನು ನೋಡಿಕೊಂಡು ಹೋಗುವಾಗ ರಸ್ತೆ ಇಕ್ಕೆಲ್ಲದಲ್ಲಿ ಹಿನ್ನೀರಿನ ಪಕ್ಕದಲ್ಲಿಯೇ ಮನೆಗಳನ್ನು ಕಟ್ಟಿಕೊಂಡು, ಬೋಟ್‌ನಲ್ಲಿ ಓಡಾಡುತ್ತಿದ್ದವರನ್ನು ನೋಡಿ ಅಚ್ಚರಿಗೊಂಡಿದ್ದ ನನಗೆ, ‘ಈ ನೀರ ನಡುವೆ ಒಂದು ರಾತ್ರಿ ಕಳೆಯುವುದು ಹೇಗೆ’ ಎನ್ನುವ ಸಣ್ಣ ಆತಂಕವೂ ಇತ್ತು. ಈ ಎಲ್ಲ ಯೋಚನೆಗಳಲ್ಲಿಯೇ ಬೋಟ್ ಹೌಸ್ ಇರುವ ಜಾಗಕ್ಕೆ ಬಂದ ನಾವು, ಕೆಲವೇ ಹೊತ್ತಿನಲ್ಲಿ ಮನೆಯನ್ನು ಹೊಕ್ಕೆವು. ಒಳಗೆ ಹೋಗುತ್ತಿದ್ದಂತೆ ಕೇರಳದ ಸಾಂಪ್ರದಾಯಿಕ ಪಾನೀಯದ ಮೂಲಕ ಸ್ವಾಗತಿಸಿದ ನಮಗೆ ಪ್ರವೀಣ್ ಚೇಟ (ಬೋಟ್ ಹೌಸ್ ಓಡಿಸುವಾತ) ಹಾಗೂ ಪರಿಚಾರಕ ದೀಪಕ್ ಚೇಟ ಮನೆಯೊಳ ಗೊಂದು ಸುತ್ತು ಹೊಡೆಸಿದರು. ನಾವು ಪ್ರೈವೇಟ್ ಬೋಟ್ ಹೌಸ್ ಮಾಡಿದ್ದರಿಂದ ನಾನು ಹಾಗೂ ನನ್ನವರು ಮಾತ್ರ ಇದ್ದರು. ಆದರೆ ಸುತ್ತಮುತ್ತ ಕೆಲವು ಬೋಟ್ ಹೌಸ್‌ಗಳು ೨೦ ಜನರ ಗುಂಪನ್ನು ಹೊತ್ತು ತಿರುಗಾಡುತ್ತಿದ್ದ ಬೋಟ್‌ಗಳನ್ನು ಗಮನಿಸಿದೆವು.

ಸಮುದ್ರ, ನದಿಯೆಂದರೆ ಭಯಪಡುವ ನನಗೆ, ಆ ಬೋಟಿನ ತುದಿಯಲ್ಲಿ ಕೂತು ನೀರಿನ್ನು ನೋಡುವುದಕ್ಕೆ ಭಯ. ಆದರೆ ಆ
ಸುಂದರ ಸಮಯವನ್ನು ಕಳೆದುಕೊಳ್ಳುವುದಕ್ಕೂ ಆಗದ ಸ್ಥಿತಿಯಲ್ಲಿ ನಾನಿದ್ದಾಗ, ನನ್ನವರೊಂದಿಗೆ ಕೂತು ಅದೆಷ್ಟು ಹೊತ್ತು ಕಳೆದೆನೋ ತಿಳಿಯಲಿಲ್ಲ. ಆದರೆ, ಚೇಟಾ ಬಂದು ಕಾಫಿಗೆ ಎಬ್ಬಿಸಿದಾಗಲೇ ಸಂಜೆ ಐದಾಗಿತ್ತು ಎಂದು ತಿಳಿಯಿತು. ಸಂಜೆ ಕಾಫಿಗೆ
ಕೇರಳ ಮಾದರಿಯ ತಿನಿಸುಗಳು ನೀಡಿದ್ದರು. ಅದಾದ ಬಳಿಕ ಬೋಟ್ ಹೌಸಿನ ಹೊರಾಂಗಣದಲ್ಲಿ ಕೂತು ಸೂರ್ಯ ಮುಳುಗು ವುದನ್ನು ನೋಡಲು ಅದೆಷ್ಟು ಸೊಗಸು!

ಸಮುದ್ರದಲ್ಲಿ ತೇಲುತ್ತಾ, ಸಣ್ಣ ಅಲೆಗಳು ಬಂದಾಗ ಏರಿಳಿತವಾಗುವ ಬೋಟ್ ಹೌಸ್‌ನಲ್ಲಿ ರಾತ್ರಿ ಮಲಗಿದರೆ, ತೊಟ್ಟಿಲಲ್ಲಿ ತಾಯಿ ತೂಗುವಾಗ ಆಗುವ ಅನುಭವದಂತೆ ಭಾಸವಾಗುತ್ತದೆ ಎಂದರೆ ತಪ್ಪಾಗುವುದಿಲ್ಲ. ನೀರೆಂದರೆ ಭಯವಿದ್ದರೂ, ಆ
ಒಂದು ರಾತ್ರಿಯನ್ನು ಮರೆಯಲು ಮಾತ್ರ ಸಾಧ್ಯವಿಲ್ಲ.

ಆಯುರ್ವೇದಿಕ್ ಮಸಾಜ್
ಅಗತ್ಯ ಎನಿಸಿದವರಿಗೆ ಕೇರಳಾದ ಪ್ರಸಿದ್ಧ ಆಯುರ್ವೇದಿಕ್ ಮಸಾಜ್ ಸೆಂಟರ್‌ಗಳಿಗೂ ಈ ಬೋಟ್ ಹೌಸ್‌ನವರು ಕರೆದುಕೊಂಡು ಹೋಗುತ್ತಾರೆ. ಸಾಂಪ್ರದಾಯಿಕ ಶೈಲಿಯಲ್ಲಿ ಮಸಾಜ್ ಮಾಡಿಸಿಕೊಂಡು ಸ್ನಾನ ಮುಗಿಸಿಕೊಂಡು ಮತ್ತೆ ಬೋಟ್ ಹೌಸ್ ಏರಿದರೆ ಮೆತ್ತನೆಯ ಹಾಸಿಗೆ ಜತೆಗೊಂದಿಷ್ಟು ಸುವಾಸನೆ ಬೀರುವ ಕ್ಯಾಂಡಲ್‌ಗಳೊಂದಿಗೆ ನಿದ್ರಾದೇವಿ ತನ್ನ ತೆಕ್ಕೆಗೆಳೆದುಕೊಂಡು ನೀರಿನಲೆಗಳ ಲಾಲಿ ಹಾಡುತ್ತಾಳೆ. ಮತ್ತೆ ಎಚ್ಚರವಾಗುವುದು ಸೂರ್ಯನ ಕಿರಣಗಳೊಂದಿಗೆ ನೀರಿನ ಅಲೆಗಳ ಝೇಂಕಾರ ಗುಡ್
ಮಾರ್ನಿಂಗ್ ಅಂದಾಗಲೇ.

ಏಕಾಂತ ಬೇಕೆ? ಇಲ್ಲಿಗೆ ಬನ್ನಿ!
ವರ್ಷಂಪ್ರತಿ ಜನಜಂಗುಳೀ,ಆಫೀಸ್ ಕೆಲಸದ ಗೌಜು ಗದ್ದಲಗಳ ಬಳಿಕ ಒಂದು ಸೌಮ್ಯವಾದ , ಆರಾಮದಾಯಕ ಸಮಯ ಬೇಕೆಂದರೆ ಅಲೆಪ್ಪಿಯ ಈ ಬೋಟ್ ಹೌಸ್ ಒಂದು ಉತ್ತಮ ಆಯ್ಕೆ. ಸುತ್ತಲೂ ನೀರು, ನದಿಯ ಬದಿಗಳಲ್ಲಿರುವ ಕೇರಳದ ಸಾಂಪ್ರದಾಯಿಕ ಮನೆಗಳು, ಅಲ್ಲಿನ ಸಂಸ್ಕೃತಿಯ ಒಂದು ನೈಜ ನೋಟದೊಂದಿಗೆ ಶಾಂತ ಹಾಗೂ ಅಲೆಗಳ ಸಪ್ಪಳ, ನೀರ ಹಕ್ಕಿಯ ಕೂಗು, ಇನ್ನೊಂದಿಷ್ಟು ಜಲಚರಗಳ ದನಿಯನ್ನು ಬಿಟ್ಟರೆ ನಾವೇ ನಾವು ಮನದೊಳಗಿನ ಗದ್ದಲ ಓಡಿಸಲು ಬೋಟ್ ಹೌಸ್ ಒಂದು ಉತ್ತಮ ಆಯ್ಕೆ.