Thursday, 19th September 2024

ರಾಷ್ಟ್ರಪತಿಗಳ ತೆಕ್ಕೆಗೆ ಬೀಳುತ್ತಾ ಕರ್ನಾಟಕ ?

ಮೂರ್ತಿಪೂಜೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿ ನಡೆಸಲಿರುವ ದಿಲ್ಲಿ ದಂಡಯಾತ್ರೆ ಕರ್ನಾಟಕದ ರಾಜಕೀಯ
ಭವಿಷ್ಯವನ್ನು ನಿರ್ಧರಿಸಲಿದೆ. ಕಳೆದ ವಾರ ವಿಧಾನಮಂಡಲ ಅಧಿವೇಶನಕ್ಕೆ ಅಂತ ಬೆಳಗಾವಿಗೆ ಹೋದ ಬೊಮ್ಮಾಯಿ ತಮ್ಮ
ಮಡಿಲಲ್ಲಿ ಎರಡು ಹಾವುಗಳನ್ನು ಬಿಟ್ಟುಕೊಂಡಿರುವುದು ಇದರ ಮೂಲ. ಅದರಲ್ಲಿ ಪಂಚಮಸಾಲಿಗಳ ಮೀಸಲಾತಿ ವಿಷಯ ಮೊದಲ ಹಾವಾದರೆ, ಸಚಿವ ಸಂಪುಟ ವಿಸ್ತರಣೆಯ ಒತ್ತಡ ಎರಡನೇ ಹಾವು.

ಅಂದ ಹಾಗೆ ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ ೨ಎ ಅಡಿಯಲ್ಲಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹಾವಾಗಿ ಮೇಲೆದ್ದು ನಿಂತಿದ್ದರೆ ಅದಕ್ಕೆ ಬಿಜೆಪಿ ವರಿಷ್ಠರೇ ಮುಖ್ಯ ಕಾರಣ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಮೇಲೆ ಲಿಂಗಾಯತ ಪಾಳೇಪಟ್ಟನ್ನು ಓಲೈಸಲು ಬಯಸಿದ ವರಿಷ್ಠರಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಅದೆಂದರೆ, ಕರ್ನಾಟಕದ ಪಡಸಾಲೆಯಲ್ಲಿ ಬಿಜೆಪಿ ಪಾಲಿಗೆ ಲಿಂಗಾಯತರ ಸಾಲಿಡ್ಡು ಬೆಂಬಲ ಕೊಡಿಸ  ಬಲ್ಲವರು ಯಡಿಯೂರಪ್ಪ ಮಾತ್ರ ಎಂಬುದು.

ಹಾಗಂತ ಯಡಿಯೂರಪ್ಪ ಅವರನ್ನು ಓಲೈಸಿದರೆ ಕರ್ನಾಟಕದ ರಾಜಕೀಯ ದಲ್ಲಿ ಬಿಜೆಪಿಯ ಏಳಿಗೆ ಎಂಬುದು ಅವರ ಕುಟುಂಬಕ್ಕೆ ಅಂಟಿಕೊಂಡ ವಿಷಯ ವಾಗಿ ಪರಿಣಮಿಸುತ್ತದೆ ಎಂಬುದು ವರಿಷ್ಠರ ಯೋಚನೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿದ ನಂತರದ ದಿನಗಳಲ್ಲಿ ಲಿಂಗಾಯತ ಮತಬ್ಯಾಂಕ್ ಮೇಲೆ ಹೇಗೆ ಹಿಡಿತ ಸಾಽಸಬಹುದು ಅಂತ ಯೋಚಿಸಿದ ಮೋದಿ-ಅಮಿತ್ ಶಾರ ಕಣ್ಣಿಗೆ ಬಿದ್ದವರು ಬಸವನಗೌಡ ಪಾಟೀಲ್ ಯತ್ನಾಳ್.

ಕರ್ನಾಟಕದ ಲಿಂಗಾಯತ ಮತ ಬ್ಯಾಂಕ್‌ನ ಫಿಫ್ಟಿ ಪರ್ಸೆಂಟಿಗೂ ಅಽಕ ಶೇರು ಹೊಂದಿರುವ ಪಂಚಮಸಾಲಿ ಪಾಳೇಪಟ್ಟಿಗೆ ಯತ್ನಾಳ್ ಅವರೇ ಡೈನಮಿಕ್ ಲೀಡರ್. ಹಾಗಂತಲೇ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ ಈ ಜೋಡಿ ರಾಜ್ಯ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತ ಅರುಣ್ ಸಿಂಗ್ ಅವರನ್ನು ಯತ್ನಾಳ್ ಬಳಿ ಕಳಿಸಲು ತೀರ್ಮಾನಿಸಿತು. ಯತ್ನಾಳ್ ಅವರನ್ನು ಭವಿಷ್ಯದ ನಾಯಕ ಎಂದು ಬಿಂಬಿಸಿದರೆ ಲಿಂಗಾಯತ ಮತಬ್ಯಾಂಕಿನ ಮೇಲೆ ಬಿಜೆಪಿಯ ಹಿಡಿತ ಉಳಿಯುತ್ತದೆ ಎಂಬುದು ಮೋದಿ-ಅಮಿತ್ ಶಾ ಲೆಕ್ಕಾಚಾರ.

ಅವರ ಈ ಲೆಕ್ಕಾಚಾರಕ್ಕೆ ಅನುಗುಣವಾಗಿ ಅರುಣ್ ಸಿಂಗ್ ಅವರು ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿ ಮಾಡಿದರು. ಈ ಭೇಟಿಯ ಸಂದರ್ಭದಲ್ಲಿ ವರಿಷ್ಠರ ಲೆಕ್ಕಾಚಾರವನ್ನು ಯತ್ನಾಳ್ ಅವರಿಗೆ ವಿವರಿಸಿದ ಅರುಣ್ ಸಿಂಗ್, ಈ ಕೆಲಸ ನಿಮ್ಮಿಂದ ಸಾಧ್ಯವಾದರೆ ಅನುಮಾನ ಇಟ್ಟುಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ನೀವು ಸಿಎಂ ಆಗುವುದು ಗ್ಯಾರಂಟಿ ಎಂದರಂತೆ. ಇದಕ್ಕೆ ಪ್ರತಿಯಾಗಿ ಯತ್ನಾಳ್ ಅವರು, ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ ೨ ಎ ಗೆ ಸೇರಿಸಲು ನಾವು ಮಾಡುತ್ತಿರುವ ಹೋರಾಟಕ್ಕೆ ಸರಕಾರ ಒಪ್ಪಿಗೆ ನೀಡುವಂತೆ ಮಾಡಿ ನೋಡಿ.

ಲಿಂಗಾಯತ ಮತಬ್ಯಾಂಕ್ ಬಿಜೆಪಿ ಕೋಟೆಯಿಂದ ಹೊರ ಹೋಗುವುದಿಲ್ಲ ಎಂದರಂತೆ. ಕುತೂಹಲದ ಸಂಗತಿ ಎಂದರೆ
ಈ ಪ್ರಪೋಸಲ್ಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಹಿಡಿಸಿತು. ಮತ್ತು ಅವರು ಕೂಡಾ ಈ ವಿಷಯದಲ್ಲಿ ಒಂದು ಸ್ಪಷ್ಟತೆಗೆ ಬಂದರು.

ಹೀಗೆ ಅರುಣ್ ಸಿಂಗ್, ಯತ್ನಾಳ್, ಬೊಮ್ಮಾಯಿ ಸೇರಿ ಇಟ್ಟ ಹೆಜ್ಜೆಗೆ ಪೂರಕವಾಗಿ ಪಂಚಮಸಾಲಿ ಲಿಂಗಾಯತರ ರ‍್ಯಾಲಿ ಬೆಳಗಾವಿಯ ಸುವರ್ಣಸೌಧ ತಲುಪಬೇಕು ಅಂತ ನಿರ್ಧಾರವಾಯಿತು. ಈ ನಿರ್ಧಾರಕ್ಕನುಸಾರವಾಗಿ ಹತ್ತು ದಿನ ನಡೆದ ಪಂಚಮಸಾಲಿಗಳು ಕಳೆದ ವಾರ ಸುವರ್ಣವಿಧಾನಸೌಧ ತಲುಪುವ ಸಂದರ್ಭದಲ್ಲಿ ಬೊಮ್ಮಾಯಿ ಅವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ  ಜಯಪ್ರಕಾಶ್ ಹೆಗಡೆ ಮತ್ತು ಸರಕಾರದ ಅಡ್ವೊಕೇಟ್ ಜನರಲ್ ಅವರನ್ನು ರಾತ್ರೋರಾತ್ರಿ ಬೆಳಗಾವಿಗೆ ಕರೆಸಿಕೊಂಡು ಚರ್ಚಿಸಿದರು.

ಅರ್ಥಾತ್, ಹೀಗೆ ಚರ್ಚೆ ಮಾಡಿ ಮರುದಿನ ಪಂಚಮಸಾಲಿಗಳಿಗೆ ಮೀಸಲಾತಿ ಕೊಡುವ ಸಂಬಂಧ ವರದಿ ಪಡೆದ ಬೊಮ್ಮಾಯಿ ಅದನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ತೀರ್ಮಾನಿಸಿದ್ದರು. ಅವರ ತೀರ್ಮಾನದ ಪ್ರಕಾರ ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ವಿಷಯ ಸಂಪುಟದ ಅಂಗೀಕಾರ ಪಡೆದಿದ್ದರೆ ಆಟವೇ ಬೇರೆಯಾಗುತ್ತಿತ್ತು. ಆದರೆ ಪಂಚಮಸಾಲಿಗಳನ್ನು ಪ್ರವರ್ಗ ೨ ಎ ಗೆ ಸೇರಿಸುವ ಪ್ರಪೋಸಲ್ಲು ಸಂಪುಟದ ಮುಂದೆ ಮಂಡನೆಯಾಗುತ್ತಿರುವ ವಿಷಯ ಪಕ್ಕಾ ಆಗುತ್ತಿದ್ದಂತೆ ರಾಜ್ಯ ಬಿಜೆಪಿಯ ಪವರ್ ಫುಲ್ ನಾಯಕರೊಬ್ಬರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ
ತಕರಾರು ಸಂದೇಶವೊಂದನ್ನು ರವಾನಿಸಿದರು.

ಇವತ್ತು ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ ೨ ಎ ಅಡಿ ಸೇರಿಸುವ ಕೆಲಸವಾದರೆ ಕರ್ನಾಟಕದಲ್ಲಿ ಜಾತಿ ದಂಗೆ
ಏಳುತ್ತದೆ. ಮತ್ತು ಈ ದಂಗೆಗೆ ಬಿಜೆಪಿ ಬಲಿಯಾಗುತ್ತದೆ ಎಂದು ಈ ನಾಯಕರು ವಿವರಿಸಿದಾಗ ನಡ್ಡಾ ವಿಸ್ಮಿತರಾದರಂತೆ. ಇವತ್ತು ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ ೨ ಎ ಅಡಿ ಸೇರಿಸಿದರೆ, ಅದರ ತೆಕ್ಕೆಯಲ್ಲಿರುವ ನೂರಾರು ಜಾತಿಗಳಿಗೆ ಅಸಮಾಧಾನವಾಗುತ್ತದೆ. ಯಾಕೆಂದರೆ ಈ ಮೀಸಲಾತಿ ಕೇವಲ ಶಿಕ್ಷಣಕ್ಕೆ ಸಂಬಂಧಿಸಿದ್ದಲ್ಲ.

ಜತೆಗೆ ಇದರಲ್ಲಿ ರಾಜಕೀಯ ಮೀಸಲಾತಿಯೂ ಇದೆ. ನಾಳೆ ಈ ಪ್ರವರ್ಗಕ್ಕೆ ಸೇರುವ ಪಂಚಮಸಾಲಿ ಲಿಂಗಾಯತರು ಎಲ್ಲ ಹಂತಗಳಲ್ಲಿ ಅಧಿಕಾರ ಪಡೆಯತೊಡಗಿದರೆ ಕುರುಬರು ಸೇರಿದಂತೆ ಈಗಾಗಲೇ ಪಟ್ಟಿಯಲ್ಲಿರುವವರಿಗೆ ಅವಕಾಶಗಳು
ಕಡಿಮೆಯಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಂತವರೇ ಪಂಚಮಸಾಲಿಗಳ ಮೀಸಲಾತಿ ಪಡೆಯಬಹುದು ಎಂದು ನಿರ್ಣಯಿಸುವುದು ಹೇಗೆ? ಜಾತಿಯ ಕಲಂನಲ್ಲಿ ಲಿಂಗಾಯತ ಹಿಂದೂ ಅಂತ ಬರೆಸಿದವರೆಲ್ಲರೂ ನಾಳೆ ರಾಜಕೀಯ ಮೀಸಲಾತಿಯನ್ನು ಕ್ಲೈಮ್ ಮಾಡಿದರೆ ಅದನ್ನು ನಿರಾಕರಿಸುವುದು ಹೇಗೆ? ಆದ್ದರಿಂದ ಇದರಿಂದಾಗುವ ಪರಿಣಾಮವನ್ನು ಊಹಿಸಿ ಅಂತ ಈ ನಾಯಕರು ಹೇಳಿದಾಗ ನಡ್ಡಾ ಮೌನಿಯಾರಂತೆ.

ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಸಂಪುಟ ಸಭೆಗೆ ಅಣಿಯಾಗುತ್ತಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ದೆಹಲಿಯಿಂದ ಒಂದು ಕರೆ ಬಂದಿದೆ. ಈ ಸಂದರ್ಭದಲ್ಲಿ ಅತ್ತಲಿಂದ ಮಾತನಾಡಿದವರು, ಇವತ್ತು ಸಂಪುಟ ಸಭೆಯ ಮುಂದೆ ಬರುತ್ತಿರುವ ಪಂಚಮಸಾಲಿಗಳ ಮೀಸಲಾತಿ ವಿಷಯದ ಬಗ್ಗೆ ಯಾವ ತೀರ್ಮಾನವನ್ನೂ ಕೈಗೊಳ್ಳಬೇಡಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ಮಾತನಾಡಲು ದಿಲ್ಲಿಗೆ ಬನ್ನಿ ಅಂತ ಸೂಚಿಸಿದ್ದಾರೆ.

ಹೀಗಾಗಿ ಸಂಪುಟದಲ್ಲಿ ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ, ಸುವರ್ಣಸೌಧದ ಮುಂದೆ ಬಂದ ಪಂಚಮಸಾಲಿ
ರ‍್ಯಾಲಿಗೆ ಪಾಸಿಟಿವ್ ಸಂದೇಶ ರವಾನಿಸುವ ಬೊಮ್ಮಾಯಿ, ಯತ್ನಾಳ್ ಲೆಕ್ಕಾಚಾರ ವಿಫಲವಾಗಿದೆ. ಇದರ ಪರಿಣಾಮ?
ಇಟ್ಟ ಹೆಜ್ಜೆ ಹಿಂದಿಟ್ಟರೆ ಬೊಮ್ಮಾಯಿ ಅವರು ಲಿಂಗಾಯತ ಚಾಂಪಿಯನ್ ಆಗುವ ಅವಕಾಶ ಕಳೆದುಕೊಳ್ಳುತ್ತಾರೆ. ಅದೇ
ಕಾಲಕ್ಕೆ ಪಂಚಮಸಾಲಿ ಕ್ಯಾಂಪಿನಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಪವರ್ ಕಡಿಮೆಯಾಗುತ್ತದೆ.
**

ಅಂದ ಹಾಗೆ ಪಂಚಮಸಾಲಿ ಮೀಸಲಾತಿ ವಿಷಯ ಧಗಧಗಿಸುತ್ತಿರುವ ಕಾಲದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಂದು ತಲೆನೋವು ಶುರುವಾಗಿದೆ. ಅದು ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಯವರ ಮಂತ್ರಿಗಿರಿ ಪ್ರಪೋಸಲ್ಲು. ತಮ್ಮ ವಿರುದ್ಧದ ಆರೋಪ ನಿರಾಧಾರವಾದರೂ ತಮ್ಮನ್ನು ಮಂತ್ರಿ ಮಂಡಲಕ್ಕೆ ಸೇರಿಸಿ ಕೊಳ್ಳಲು ವಿಳಂಬ ಮಾಡಲಾಗುತ್ತಿದೆ ಎಂಬುದು ಈ ಇಬ್ಬರ ತಕರಾರು.

ಅಷ್ಟೇ ಅಲ್ಲ, ತಾವು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲು ಮಾಜಿ ಮುಖ್ಯಮಂತ್ರಿಯೊಬ್ಬರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದು ಅವರ ಆಕ್ಷೇಪ. ಈ ತಕರಾರು ಮತ್ತು ಆಕ್ಷೇಪ ರಾಜ್ಯ ಬಿಜೆಪಿಯಲ್ಲೀಗ ಮಿನಿ ಬಂಡಾಯದ ರೂಪು ತಳೆಯು  ತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಬೊಮ್ಮಾಯಿ ಈ ಇಬ್ಬರು ನಾಯಕರಿಗೆ ಮಂತ್ರಿಗಿರಿಯ ಭರವಸೆ ಕೊಟ್ಟಿದ್ದಾರೆ. ನಿಮ್ಮನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವ  ವಿಷಯದದಲ್ಲಿ ವರಿಷ್ಠರು ಪಾಸಿಟಿವ್ ಆಗಿದ್ದಾರೆ ಎಂಬುದು ಬೊಮ್ಮಾಯಿ ಭರವಸೆ. ಆದರೆ ಈ ವಿಷಯದಲ್ಲಿ ಇದುವರೆಗೆ ವರಿಷ್ಠರು ಯಾವುದೇ ಆಸಕ್ತಿ ತೋರಿಸಿಲ್ಲ. ಅವರಿಗೆ ಆಸಕ್ತಿ ಇದ್ದಿದ್ದೇ ಆಗಿದ್ದರೆ ಒಪ್ಪಿಗೆಗಾಗಿ ಬೊಮ್ಮಾಯಿಯವರು ದಿಲ್ಲಿಯ ತನಕ ಹೋಗುವ ಅಗತ್ಯವೇ ಇರಲಿಲ್ಲ.

ಹೀಗಾಗಿ ಈಗ ದಿಲ್ಲಿ ದಂಡಯಾತ್ರೆಗೆ ಸಜ್ಜಾಗಿರುವ ಬೊಮ್ಮಾಯಿ ಈ ಎರಡೂ ವಿಷಯಗಳನ್ನು ಸೆಟ್ಲ್ ಮಾಡಿಕೊಂಡು ಬರಬೇಕಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೋ ಗೊತ್ತಿಲ್ಲ.
**

ಈ ಮಧ್ಯೆ ಬಿಜೆಪಿ ವರಿಷ್ಠರ ಕಣ್ಣಿಗೆ ಇನ್ನೊಂದಷ್ಟು ಗೋಜಲುಗಳು ಕಾಣುತ್ತಿವೆ. ಉದಾಹರಣೆಗೆ ಒಕ್ಕಲಿಗರ ಮೀಸಲಾತಿ ವಿಷಯ. ಈ ವಿಷಯ ಬಂದಾಗ ಸರಕಾರದಲ್ಲಿರುವ ಒಕ್ಕಲಿಗ ಮಂತ್ರಿಗಳೇ ಸಭೆ ಮಾಡಿ ಸಿಎಂ ಬೊಮ್ಮಾಯಿಯವರಿಗೆ ಮನವಿ ಕೊಡುತ್ತಾರೆ. ಇದೇ ರೀತಿ ರೈತರಿಗೇಕೆ ಮೀಸಲಾತಿ ಕೊಡಬಾರದು ಎಂಬುದರಿಂದ ಹಿಡಿದು ಹಲವು ಕಡೆಗಳಿಂದ ಮೀಸಲಾತಿಗೆ ಬೇಡಿಕೆ ಬರುತ್ತಿದೆ.

ಕುತೂಹಲದ ಸಂಗತಿ ಎಂದರೆ ಮೀಸಲಾತಿಗೆ ಒತ್ತಾಯಿಸುತ್ತಿರುವವರೆಲ್ಲರಿಗೂ ಬಂಪರ್ ಕೊಡುಗೆ ನೀಡುವ ಇಚ್ಛೆ ಬೊಮ್ಮಾಯಿ ಅವರಿಗಿದೆ. ಆದರೆ ಅವರಿಗೆ ಆಸೆ ಇದೆ ಎಂಬ ಕಾರಣಕ್ಕಾಗಿ ಮೀಸಲಾತಿಯ ಪ್ರಮಾಣವನ್ನು ಎಪ್ಪತ್ತೋ, ಎಂಭತ್ತು ಪರ್ಸೆಂಟಿಗೆ ಏರಿಸಲು ಸಾಧ್ಯವಿಲ್ಲವಲ್ಲ? ಹೀಗಾಗಿ ಮೀಸಲಾತಿಯ ವಿಷಯವೇ ‘ಮೀಸಳ್ ಭಾಜಿ’ ತರಹ ಆಗಿ ಕರ್ನಾಟಕದ ರಾಜಕಾರಣದಲ್ಲಿ ಕಲಮಲವೆಬ್ಬಿಸಿದೆ. ಹೀಗೆ ಕಲಮಲವೆದ್ದ ಕರ್ನಾಟಕದ ರಾಜಕಾರಣವನ್ನು ಗಮನಿಸುತ್ತಿರುವ ವರಿಷ್ಠರು ಬೊಮ್ಮಾಯಿ ಏನು ಮಾಡುತ್ತಾರೆ?ಅಂತ ಕಾದು ನೋಡುತ್ತಿದ್ದಾರೆ.

ಒಂದು ವೇಳೆ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಬೊಮ್ಮಾಯಿ ಅವರಿಗೆ ಕಷ್ಟವಾಗುತ್ತಿದೆ ಅನ್ನಿಸಿದರೆ ಕರೋನಾ ಹೆಸರಿನಲ್ಲಿ ಅವಧಿಪೂರ್ವ ಚುನಾವಣೆಗೆ ಹೋಗುವ, ಇಲ್ಲವೇ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ ಚುನಾವಣೆಯನ್ನು
ತಡವಾಗಿ ನಡೆಸುವ ಲೆಕ್ಕಾಚಾರಕ್ಕೆ ವರಿಷ್ಠರು ಬರಬಹುದು  ಎಂಬುದು ಬಿಜೆಪಿ ಮೂಲಗಳ ಹೇಳಿಕೆ. ಮುಂದೇನಾಗುತ್ತದೋ ಗೊತ್ತಿಲ್ಲ. ಆದರೆ ಬೊಮ್ಮಾಯಿ ಅವರ ಈಗಿನ ದಿಲ್ಲಿ ಯಾತ್ರೆ ಕರ್ನಾಟಕದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದು ಮಾತ್ರ ನಿಜ.