Thursday, 19th September 2024

ಯಡಿಯೂರಪ್ಪ ಅವರ ಲೇಟೆಸ್ಟು ಚಿಂತೆ

ಮೂರ್ತಿಪೂಜೆ

ಮೊನ್ನೆ ವಿಮಾನ ನಿಲ್ದಾಣ ಪರಿಶೀಲನೆಗೆಂದು ಶಿವಮೊಗ್ಗಕ್ಕೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಸಿವಿಸಿಗೊಂಡರಂತೆ. ೨೦೧೮ರಲ್ಲಿ ಬಿಜೆಪಿಯ ವಿಮಾನ ನಿಮ್ಮಿಂದ ಟೇಕ್ ಆಫ್ ಆಗಿರುವುದೇನೋ ನಿಜ. ಆದರೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಅದು ಲ್ಯಾಂಡಿಂಗ್ ಆಗುವುದು ಕಷ್ಟ ಅಂತ ಆಪ್ತರು ಹೇಳಿದ ಮಾತು ಇದಕ್ಕೆ ಕಾರಣ.

ಅಂದ ಹಾಗೆ ಅಧೀಕಾರದಿಂದ ಕೆಳಗಿಳಿದ ನಂತರ ಪಕ್ಷದ ವರಿಷ್ಟರು ತಮ್ಮನ್ನು ನಿರ್ಲಕ್ಷಿಸಿದ ಕ್ರಮಗಳಿಂದ ಯಡಿಯೂರಪ್ಪ ಬೇಸತ್ತಿದ್ದು, ಇದರ ಬೆನ್ನ ಶಿಕಾರಿಪುರದಲ್ಲಿ ನಾನು ಸ್ಪರ್ಧಿಸುವುದಿಲ್ಲ. ಅಲ್ಲಿ ತಮ್ಮ ಪುತ್ರ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದಿದ್ದು ಹಳೆಯ ವಿಷಯ. ಆದರೆ ಅವರು ಹೀಗೆ ಹೇಳಿದ ಮಾತನ್ನೇ ಹಿಡಿದುಕೊಂಡ ಆಪ್ತರು, ಇದರ ಎಫೆಕ್ಟ್ ಏನು? ಅಂತ ಯಡಿಯೂರಪ್ಪ ಅವರಿಗೆ ವಿವರಿಸಿದರಂತೆ. ಸಾರ್, ಚುನಾವಣೆಯಲ್ಲಿ ಸ್ಪರ್ಧಿಸುವು ದಿಲ್ಲ ಅಂತ ನೀವು ಹೇಳಿದ್ದರಿಂದ ಬಿಜೆಪಿಗೆ ಡ್ಯಾಮೇಜ್ ಆಗುವುದು ಗ್ಯಾರಂಟಿ ಅಂತ ಈ ಆಪ್ತರು ಹೇಳಿದಾಗ ದಿಟ್ಟಿಸಿ ನೋಡಿದ ಯಡಿಯೂರಪ್ಪ, ಏನು ಡ್ಯಾಮೇಜ್ ಆಗುತ್ತದೆ? ಅಂತ ಕೇಳಿದರು.

ಅದಕ್ಕೆ ಆ ಆಪ್ತರು, ನೀವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರೆ ಸಹಜವಾಗಿಯೇ ಮತದಾರರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮತದಾರರಿಗೆ ತಮ್ಮ ಮುಂದಿನ ನಾಯಕ ಯಾರು? ಎಂಬುದು ಖಚಿತವಾಗಬೇಕು. ಇದು ಆಗದಿದ್ದರೆ ಅವರು ಪಲ್ಲಟಗೊಳ್ಳುತ್ತಾರೆ. ಈಗ ಬಿಜೆಪಿ ವಿಷಯದಲ್ಲಿ ಮತದಾರರ ಮನ:ಸ್ಥಿತಿ ಅದೇ ಮಟ್ಟದಲ್ಲಿದೆ. ಒಂದು ವೇಳೆ ನೀವು ಸ್ಪರ್ಧಿಸುವುದು ಖಚಿತವಾಗಿದ್ದರೆ, ಚುನಾವಣೆಯ ನಂತರ ಇವರು ಸಿಎಂ ಆಗುತ್ತಾರೆ ಅಂತ ಮತದಾರರು ನಂಬು ತ್ತಿದ್ದರು. ಅದು ಸಾಧ್ಯವೋ ಇಲ್ಲವೋ ಬೇರೆ ಮಾತು. ಆದರೆ ಕಣದಲ್ಲಿ ನೀವಿದ್ದಿದ್ದರೆ ನಿಮ್ಮ ಜಾಗ ದಲ್ಲಿ ಮತ್ತೊಬ್ಬರು ಸಿಎಂ ಕ್ಯಾಂಡಿಡೇಟ್ ಆಗಿ ಕಾಣುತ್ತಿರಲಿಲ್ಲ.

ಆದರೆ ನೀವೀಗ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರಿಂದ ನಿಮ್ಮ ತವರು ಜಿಲ್ಲೆಯಿಂದ ಹಿಡಿದು ಇಡೀ ರಾಜ್ಯದಲ್ಲಿ ಬಿಜೆಪಿ ಒಂದು ರೀತಿಯ ಹಿನ್ನಡೆ ಅನುಭವಿಸಬೇಕಾಗುತ್ತದೆ. ಕಳೆದ ಬಾರಿ ಬಿಜೆಪಿ ಜತೆ ನಿಂತಿದ್ದ ಮತದಾರರ ಪೈಕಿ ಕನಿಷ್ಟ ಮೂವತ್ತು ಪರ್ಸೆಂಟ್ ಮತದಾರರು ಈ ಬಾರಿ ಬೇರೆ ಕಡೆ
ವಾಲುತ್ತಾರೆ. ಕಳೆದ ಬಾರಿ ಪಕ್ಷಕ್ಕೆ ೩೬.೧೫ ಪರ್ಸೆಂಟ್ ಮತಗಳು ಬಂದಿದ್ದವು. ಇಷ್ಟಾದರೂ ಅದು ಕಾಂಗ್ರೆಸ್ ಪಕ್ಷ ಪಡೆದ ಮತಗಳಿಗಿಂತ ಕಡಿಮೆ ಎಂಬುದನ್ನು ಮರೆಯಬಾರದು. ಈಗ ನೀವು ಚುನಾವಣೆಯ ಸ್ಪರ್ಧಿಸುವುದಿಲ್ಲ ಎಂದಿರುವುದರಿಂದ ಬಿಜೆಪಿ ೨೬ ಇಲ್ಲವೇ ೨೭ ಪರ್ಸೆಂಟಿಗೆ ಲಿಮಿಟ್ ಆಗಬಹುದು ಅಂತ ಈ ಆಪ್ತರು ವಿವರಿಸಿದಾಗ ಯಡಿಯೂರಪ್ಪನೋ, ನೋ ನಾನೇ ಫೀಲ್ಡಿನಲ್ಲಿದ್ದೇನಲ್ಲ. ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಏನು ಮಾಡಬೇಕೋ? ಅದನ್ನೆಲ್ಲ ಮಾಡುತ್ತೇನೆ. ಹೀಗಾಗಿ ಈ ವಿಷಯದಲ್ಲಿ ನಿಮಗೇನೂ ಅನುಮಾನ ಬೇಡ ಎಂದರು.

ಆದರೆ ಹಿಂದೆ ಮುಂದೆ ನೋಡದ ಆ ಆಪ್ತರು, ಸಾರ್, ಕುಸ್ತಿಯ ಕಣದಲ್ಲಿ ಜನ ಪೈಲ್ವಾನ್ ಯಾರು ಅಂತ ನೋಡುತ್ತಾರೆಯೇ ಹೊರತು ರೆಫ್ರಿಯನ್ನಲ್ಲ. ಅದೇ ರೀತಿ ರೆಫ್ರಿ ಹೇಳಿದ ಮಾತು ಕೇಳಿ ಜನ ಪೈಲ್ವಾನನ ಜತೆ ನಿಲ್ಲುವುದಿಲ್ಲ. ಈಗ ನೀವು ಪಕ್ಷದ ಸಭೆಗಳಿಗೆ ಬರಬಹುದು. ಇಂತವರಿಗೆ ಮತ ಕೊಡಿ ಎಂದು ಹೇಳಬಹುದು. ಆದರೆ ಅದು ದೊಡ್ಡ ಮಟ್ಟದಲ್ಲಿ ವರ್ಕ್ ಔಟ್ ಆಗುವುದು ಕಷ್ಟ ಎಂದರಂತೆ.

ಅಂದರೆ ನಾನೇನು ಮಾಡಬೇಕು ಅಂತ ನಿಮ್ಮ ಮಾತಿನ ಅರ್ಥ ಅಂತ ಪುನ; ಯಡಿಯೂರಪ್ಪ ಕೇಳಿದರೆ, ನೀವು ಮುಂದಿನ ಚುನಾವಣೆಯಲ್ಲಿ ಸ್ಪಽಸಬೇಕು. ಗೆದ್ದ ನಂತರ ನೀವು ಮುಖ್ಯಮಂತ್ರಿಯೇ ಆಗುತ್ತೀರಿ ಎಂದಲ್ಲ, ಆದರೆ ಸ್ಪರ್ಧಾ ಕಣಕ್ಕೇ ಇಳಿಯದಿದ್ದರೆ ನೋ ಡೌಟ್, ಪಕ್ಷದ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರುತ್ತದೆ. ಅಂದ ಹಾಗೆ ಮಾಜಿ ಪ್ರಧಾನಿ ದೇವೇಗೌಡರು ಎಂಭತ್ತಾರನೇ ವಯಸ್ಸಿನಲ್ಲಿ ಚುನಾವಣೆಯ ಕಣಕ್ಕಿಳಿದಿದ್ದರು.
ಅವರಂತೆಯೇ ನೀವೂ ಹೋರಾಟಗಾರರು. ನೀವೇಕೆ ಚುನಾವಣೆಯಲ್ಲಿ ಸ್ಪಽಸಬಾರದು? ಅಂತ ಈ ಆಪ್ತರು ಹೇಳಿದರಂತೆ.

ಈ ಮಾತು ಕೇಳಿದ ಯಡಿಯೂರಪ್ಪ ಕಸಿವಿಸಿಗೊಳಗಾಗಿದ್ದು ಸಹಜವೇ. ಯಾಕೆಂದರೆ ಈಗಾಗಲೇ ಅವರು ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಈಗ ಶಿಕಾರಿಪುರ ದಲ್ಲಿ ನಾನು, ಮತ್ತೊಂದು ಕ್ಷೇತ್ರದಲ್ಲಿ ವಿಜಯೇಂದ್ರ ನಿಲ್ಲುತ್ತೇವೆ ಅನ್ನುವ ಸ್ಥಿತಿಯಲ್ಲಿ ಅವರಿಲ್ಲ. ಆದರೆ ಅದೇ ಕಾಲಕ್ಕೆ, ಈ ಬಾರಿ ಮರಳಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವ ಅನಿವಾರ್ಯತೆಯೂ ಅವರಿಗಿದೆ. ಯಾಕೆಂದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ತಾನೇ ತಮ್ಮ ಪುತ್ರರಿಗೆ ಭವಿಷ್ಯ? ಹೀಗಾಗಿ ಅವರಿಗೆ ಆಪ್ತರ ಮಾತು ಕೇಳಿದ ನಂತರ ಚಿಂತೆ ಶುರುವಾಗಿದೆ.

ಯತ್ನಾಳ್ ಬಾಯಿಗೆ ಬಿತ್ತು ಬ್ರೇಕ್ ಅಂದ ಹಾಗೆ ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಯಡಿಯೂರಪ್ಪ ಅವರ ವಿರುದ್ಧ ಅಬ್ಬರಿಸುತ್ತಿದ್ದ
ಶಾಸಕ, ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್‌ರ ಬಾಯಿಗೆ ಬಿಜೆಪಿ ವರಿಷ್ಟರು ಬ್ರೇಕ್ ಹಾಕಿದ್ದಾರೆ. ಹೀಗವರು ಯತ್ನಾಳ್ ಬಾಯಿಗೆ ಬೀಗ ಹಾಕಲು ಒಂದು ಕಾರಣವಿದೆ. ಅದೆಂದರೆ ರಾಜ್ಯ ಬಿಜೆಪಿಯಲ್ಲಿ ಇವತ್ತಿಗೂ ಯಡಿಯೂರಪ್ಪ ಅವರಂತಹ ಮತ್ತೊಬ್ಬ ಜನನಾಯಕ ಇಲ್ಲ
ಎಂಬುದು ಮೋದಿ-ಅಮಿತ್ ಷಾ ಜೋಡಿಗೆ ಮನವರಿಕೆಯಾಗಿದೆ.

ಹೀಗಾಗಿ, ಯಡಿಯೂರಪ್ಪ ಅವರನ್ನು ಎಷ್ಟು ದುರ್ಬಲಗೊಳಿಸುತ್ತೇವೋ? ಅಷ್ಟರ ಮಟ್ಟಿಗೆ ಅದು ಬಿಜೆಪಿಗೆ ಹಾನಿ ಎಂಬ ಲೆಕ್ಕಾಚಾರಕ್ಕೆ ಬಂದ ಮೋದಿ-ಅಮಿತ್ ಶಾ ಜೋಡಿ, ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮೌನವಾಗಿರಲು ಹೇಳಿದೆ. ಗಮನಿಸಬೇಕಾದ ಸಂಗತಿ ಎಂದರೆ ಒಂದು ಕಾಲದಲ್ಲಿ ಯತ್ನಾಳ್ ಅವರು ಯಡಿಯೂರಪ್ಪ ಅವರ ಪರಮಾಪ್ತರು. ೨೦೧೯ ರ ಅಂತ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಯತ್ನ ನಡೆದಾಗ ಇದೇ ಯತ್ನಾಳ್ ಅವರು ವರಿಷ್ಟರ ವಿರುದ್ಧವೇ ಗುರುಗುಟ್ಟಿದ್ದರು.

ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಮುಖ್ಯ ಕಾರಣ. ಹೀಗಿರುವಾಗ ಅವರನ್ನು ಕೆಳಗಿಳಿಸುವ ಪ್ರಯತ್ನವೇನಾದರೂ ನಡೆದರೆ ಸುಮ್ಮನಿರಲು ಸಾಧ್ಯವಿಲ್ಲ ಅಂತ ಹೇಳುತ್ತಿದ್ದ ಯತ್ನಾಳ್ ಕಾಲಕ್ರಮೇಣ ಯಡಿಯೂರಪ್ಪ ಅವರ ವಿರುದ್ಧ ಮುನಿಸಿಕೊಂಡರು. ಅಷ್ಟೇ ಅಲ್ಲ, ಯಾವ್ಯಾವಾಗ ಅವಕಾಶ ಸಿಗುತ್ತದೋ? ಆಗೆಲ್ಲ ಯಡಿಯೂರಪ್ಪ ಅವರ ವಿರುದ್ಧ ಹರಿಹಾಯತೊಡಗಿದರು. ಹೀಗೆ ಯಡಿಯೂರಪ್ಪ ಅವರ ವಿರುದ್ಧ ಹರಿಹಾಯುತ್ತಿದ್ದ ಅವರನ್ನು ತಡೆಯುವ ಕೆಲಸ ಕೂಡಾ ಬಿಜೆಪಿ ವರಿಷ್ಟರಿಂದ ಆಗಲಿಲ್ಲ.

ಅರ್ಥಾತ್, ಯಡಿಯೂರಪ್ಪ ಅವರನ್ನು ಎಷ್ಟು ಬೇಗ ಸಾಧ್ಯವೋ? ಅಷ್ಟು ಬೇಗ ಮೂಲೆಗುಂಪು ಮಾಡುವ ಆಸೆ ಅವರಿಗೂ ಇತ್ತು. ಆದರೆ ತಮ್ಮ ಆಸೆ ಎಷ್ಟು ದುಬಾರಿ ಯಾಗಬಹುದು ಎಂಬುದು ಮೋದಿ-ಅಮಿತ್ ಶಾ ಜೋಡಿಗೆ ಅರ್ಥವಾಗಿದೆ. ಹೀಗಾಗಿ ಚುನಾವಣೆಯ ರಣಾಂಗಣದಲ್ಲಿ ಬಿಜೆಪಿ
ಸೈನ್ಯದ ಮುಂದೆ ಯಡಿಯೂರಪ್ಪ ಅವರ ಉಪಸ್ಥಿತಿ ಇರುವಂತೆ ನೋಡಿಕೊಳ್ಳಲು ಬಯಸಿರುವ ಈ ಜೋಡಿ, ಯತ್ನಾಳ್ ಅವರಿಗೆ ಮೌನವಾಗಿರಲು ಸೂಚಿಸಿದೆ. ಅದಕ್ಕೂ ಮುನ್ನ ಯಡಿಯೂರಪ್ಪ ಅವರ ಜತೆ ದಿಲ್ಲಿಯಲ್ಲಿ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರಮೋದಿ: ನಿಮ್ಮನ್ನೇ ನಂಬಿದ್ದೇವೆ.
ನೀವು ನಂಬಿಕೆ ಉಳಿಸಿಕೊಳ್ಳುತ್ತೀರಿ ಎಂದು ಭಾವಿಸಿದ್ದೇವೆ ಎಂದಿದ್ದರಂತೆ.

ಅರ್ಥಾತ್, ಮುಖ್ಯಮಂತ್ರಿ ಹುzಯಿಂದ ಪದಚ್ಯುತರಾದ ನಂತರ ಅಪಮಾನ ಅನುಭವಿಸುತ್ತಾ ಬಂದಿದ್ದ ಯಡಿಯೂರಪ್ಪ ಅವರ ಮುಖದಲ್ಲೀಗ ಸನ್ಮಾನದ ಕಳೆ ಕಾಣತೊಡಗಿದೆ. ಆದರೆ ಇದು ಎಷ್ಟು ಕಾಲ ಉಳಿಯುತ್ತದೋ ಗೊತ್ತಿಲ್ಲ. ಈಶ್ವರಪ್ಪ ಕೋಟೆಯ ಮೇಲೆ ಆಯನೂರು ಕಣ್ಣು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಸೇರಲು ಹರಸಾಹಸ ಮಾಡಿದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಕೋಟೆಯ ಮೇಲೆ ಈಗ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಣ್ಣು ಹಾಕಿದ್ದಾರೆ.

ಈಶ್ವರಪ್ಪ ಅವರು ಪ್ರತಿನಿಧಿಸುತ್ತಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಪಕ್ಷದ ಟಿಕೆಟ್ ತಮಗೆ ಸಿಗಬೇಕು ಎಂಬುದು ಆಯನೂರು ಮಂಜುನಾಥ್ ವಾದ. ಪಕ್ಷದ ಹಿರಿಯ ನಾಯಕರ ಬಳಿ ತಮ್ಮ ಅಹವಾಲು ಕೊಂಡೊಯ್ದಿರುವ ಅವರು, ಶಿವಮೊಗ್ಗ ಕ್ಷೇತ್ರಕ್ಕೀಗ ಭದ್ರತೆ ಬೇಕು. ಆ
ಭದ್ರತೆ ಸಿಗಬೇಕು ಎಂದರೆ ತಾವೇ ಬಿಜೆಪಿಯ ಅಭ್ಯರ್ಥಿಯಾಗಬೇಕು ಎಂದಿದ್ದಾರಂತೆ. ಇವತ್ತು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಜನರ ಮನಸ್ಸಿ
ನಲ್ಲಿ ಅಭದ್ರತೆಯ ಭಾವನೆ ಇದೆ. ಇಡೀ ಕ್ಷೇತ್ರ ಹಿಂದೂ- ಮುಸ್ಲಿಂ ನೆಲೆಯಲ್ಲಿ ಒಡೆದು ಹೋಗಿರುವುದರಿಂದ ಶಿವಮೊಗ್ಗದ ಜನರಿಗೆ ಸುರಕ್ಷತೆಯ ಭಾವನೆಯಿಲ್ಲ.

ಶಿವಮೊಗ್ಗ ಈಗ ಸ್ಮಾರ್ಟ್ ಸಿಟಿಯಾಗಿದೆ. ವಿಮಾನ ನಿಲ್ದಾಣ ಬಂದಿದೆ. ಹೀಗೆ ಏನೇ ಸವಲತ್ತುಗಳು ಬಂದರೂ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿಲ್ಲ. ಇತ್ತೀಚೆಗೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಯಚೂರು, ಕೊಪ್ಪಳದಂತಹ ಜಿಲ್ಲೆಗಳಲ್ಲಿ
ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ತಯಾರಾಗಿದ್ದಾರೆ. ಆದರೆ ಎಲ್ಲ ಸವಲತ್ತುಗಳೂ ಇದ್ದು ಶಿವಮೊಗ್ಗದಲ್ಲಿ ಬಂಡವಾಳ ಹೂಡಿಕೆ ಮಾಡಲು ಯಾರೂ ಆಸಕ್ತಿ ತೋರಿಸುತ್ತಿಲ್ಲ.

ಇದಕ್ಕೆ ಮುಖ್ಯ ಕಾರಣ ಶಿವಮೊಗ್ಗದಲ್ಲಿರುವ ಅಭದ್ರತೆಯ ಭೀತಿ. ಇಂತಹ ಜಾಗದಲ್ಲಿ ಬಂಡವಾಳ ಹೂಡಲು ಉದ್ಯಮಿಗಳಾದರೂ ಯಾಕೆ ಮುಂದೆ ಬರುತ್ತಾರೆ? ಇವತ್ತು ಶಿವಮೊಗ್ಗದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಸಂಜೆಯಾದ ನಂತರ ಪಾರ್ಕುಗಳಿಗೆ ಹೋಗಲೂ ಜನ ಹೆದರುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಬೇಕು ಎಂದರೆ ಈ ಬಾರಿ ತಮಗೆ ಬಿಜೆಪಿ ಟಿಕೆಟ್ ಕೊಡ ಬೇಕು ಎಂಬುದು ಆಯನೂರು ಮಂಜುನಾಥ್ ವಾದ.
ಶಿವಮೊಗ್ಗದ ಸಂಸದರು ಬಿಜೆಪಿಯವರು, ಶಾಸಕರು ಬಿಜೆಪಿಯವರು, ಕಾರ್ಪೊರೇಷನ್ ಹಿಡಿತ ಇರುವುದು ಬಿಜೆಪಿಯವರ ಕೈಲಿ. ಆದರೆ ಎಲ್ಲರೂ ಇದ್ದು ಶಿವಮೊಗ್ಗದಲ್ಲಿ ಭದ್ರತೆಯ ವಾತಾವರಣ ಇಲ್ಲ. ನಾಲ್ಕು ನೂರು ಜನರಿಗಾಗಿ ನಾಲ್ಕೂವರೆ ಲಕ್ಷ ಜನ ಆತಂಕದಲ್ಲಿರುವುದು ಸರಿಯಲ್ಲ
ಎಂಬುದು ಅವರ ಮಾತು.

ಅವರ ಈ ಮಾತಿಗೆ ಪಕ್ಷ ಮನ್ನಣೆ ನೀಡುತ್ತದೆಯೋ? ಅಥವಾ ತಮಗಾಗಲೀ, ತಮ್ಮ ಮಗ ಕಾಂತೇಶ್ ಅವರಿಗಾಗಲೀ ಟಿಕೆಟ್ ನೀಡಬೇಕು ಎಂಬ ಕೆ.ಎಸ್. ಈಶ್ವರಪ್ಪ ಅವರ ಮಾತಿಗೆ ಮನ್ನಣೆ ನೀಡುತ್ತದೆಯೋ ಕಾದು ನೋಡಬೇಕು.

 
Read E-Paper click here