Saturday, 23rd November 2024

ಪ್ರಬಲ ಭೂಕಂಪಕ್ಕೆ ಟರ್ಕಿ, ಸಿರಿಯಾ ತತ್ತರ: ಭಾರತದಿಂದ ನೆರವಿನ ಹಸ್ತ

ನವದೆಹಲಿ: ಪ್ರಬಲ ಭೂಕಂಪಕ್ಕೆ ಟರ್ಕಿ, ಸಿರಿಯಾ ತತ್ತರಿಸಿ ಹೋಗಿದ್ದು, ಸಂತ್ರಸ್ತ ದೇಶ ಗಳಿಗೆ ನೆರವಿನ ಹಸ್ತ ಚಾಚಿರುವ ಭಾರತ, ವೈದ್ಯಕೀಯ ತಂಡ, ರಕ್ಷಣಾ ಪಡೆಗಳನ್ನು ರವಾನಿಸಿದೆ.

ಭೂಕಂಪ ಪೀಡಿತ ರಾಷ್ಟ್ರಗಳಿಗೆ 48 ಜನರ ರಕ್ಷಣಾ, ವೈದ್ಯ ಪಡೆಯ ಮೊದಲ ತಂಡ ತೆರಳಿದ್ದು, ನೆರವಿನ ಕಾರ್ಯಾಚರಣೆಯನ್ನು ಆರಂಭಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. ಪ್ರಕೃತಿ ಮುನಿಸಿಗೆ ವಿನಾಶಕಾರಿ ಪ್ರಮಾಣದಲ್ಲಿ ಹಾನಿಯಾದ ದೇಶಗಳಿಗೆ ನೆರವು ನೀಡುವುದಾಗಿ ಪ್ರಧಾನಮಂತ್ರಿ ಕಾರ್ಯಾಲಯ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ವಾಯುಪಡೆಯ ವಿಮಾನದಲ್ಲಿ ಪರಿಹಾರ ಸಾಮಗ್ರಿಗಳ ಜೊತೆಗೆ ಮೊದಲ ತಂಡ ಟರ್ಕಿಗೆ ಹಾರಿದೆ.

ಪುರುಷ ಮತ್ತು ಮಹಿಳಾ ಸಿಬ್ಬಂದಿ, ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳು, ಸುಧಾರಿತ ಕೊರೆಯುವ ಉಪಕರಣಗಳು ಸೇರಿದಂತೆ ಇತರ ಸಾಧನಗಳನ್ನು ಒಳಗೊಂಡಂತೆ ಪರಿಣಿತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(ಎನ್​ಡಿಆರ್​ಎಫ್​) ತಂಡ ನೆರವಿಗೆ ತೆರಳಿದೆ. ಟರ್ಕಿ ಮತ್ತು ಸಿರಿಯಾಗೆ ಭಾರತದಿಂದ ಮಾನವೀಯ ನೆರವು ನೀಡಲು ವಿಪತ್ತು ಪರಿಹಾರ ತಂಡಗಳು ಸಜ್ಜಾಗಿವೆ.

ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಬಾಗ್ಚಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಎನ್’ಡಿಆರ್’ಎಫ್ ತಂಡ ಅಗತ್ಯ ಸಾಮಗ್ರಿಗಳ ಜೊತೆಗೆ ತೆರಳುತ್ತಿದೆ ಎಂದು ಹೇಳಿದ್ದಾರೆ. ಭಾರತದಲ್ಲಿರುವ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಅವರು ಭಾರತ ಸರ್ಕಾರದ ನೆರವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.