ನವದೆಹಲಿ: ಎಟಿಎಂಗೆ ಹೋಗಿ ಕಾರ್ಡ್ ಬಳಸಿ ನಗದು ವಿತ್ ಡ್ರಾವಲ್ ಮಾಡಿದಾಗ, ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಅದಕ್ಕೆ ಬ್ಯಾಂಕ್ ನಿಮ್ಮಿಂದ ದಂಡವನ್ನೂ ವಸೂಲು ಮಾಡುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಎಟಿಎಂನಲ್ಲಿ ನೀವು ನಗದು ವಿತ್ ಡ್ರಾವಲ್ ಮಾಡುವುದಿದ್ದರೆ, ಅದಕ್ಕೂ ಮುನ್ನ ನಿಮ್ಮ ಖಾತೆಯಲ್ಲಿ ಸೂಕ್ತ ಬ್ಯಾಲೆನ್ಸ್ ಇದೆಯೇ ಎಂದು ಪರಿಶೀಲಿಸಿ. ಇಲ್ಲದಿದ್ದರೆ ಫಂಡ್ ಕೊರತೆಯಿಂದ ವಿತ್ ಡ್ರಾವಲ್ ಮಾಡುವುದು ಸಾಧ್ಯವಾಗುವುದಿಲ್ಲ. ಜತೆಗೆ 10 ರೂ.ಗಳ ದಂಡವನ್ನೂ ನೀಡಬೇಕಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಸಂಬಂಧ ತನ್ನ ವೆಬ್ಸೈಟ್ನಲ್ಲಿ 2023ರ ಮೇ 1ರಿಂದ ಈ ನಿಯಮ ಅನ್ವಯ ವಾಗುತ್ತದೆ ಎಂದು ಹೇಳಿದೆ.
ಗ್ರಾಹಕರಿಂದ ವಿಫಲವಾದ ಎಟಿಎಂ ವರ್ಗಾವಣೆಗಳ ಬಗ್ಗೆ ದೂರುಗಳಿದ್ದರೆ, ದೂರು ಸ್ವೀಕರಿಸಿದ 7 ದಿನಗಳೊಳಗೆ ಬಗೆಹರಿಸಲಾಗುವುದು. ದೂರು ಸಲ್ಲಿಸಿದ 30 ದಿನಗಳೊಳಗೆ ಇತ್ಯರ್ಥಪಡಿಸದಿದ್ದರೆ ದಿನಕ್ಕೆ 100 ರೂ. ನೀಡಲಾಗು ವುದು ಎಂದು ಪಿಎನ್ಬಿ ತಿಳಿಸಿದೆ.
ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್, ಡೆಬಿಟ್ ಕಾರ್ಡ್ ಮೂಲಕ ಎಟಿಎಂನಿಂದ ನಗದು ಹಿಂತೆಗೆತದ ದೈನಿಕ ಮಿತಿಯನ್ನು ಏರಿಸಿದೆ. ಕೆನರಾ ಬ್ಯಾಂಕ್ನ ಕ್ಲಾಸಿಕ್ ಡೆಬಿಟ್ ಕಾರ್ಡ್ ಅಡಿಯಲ್ಲಿ ಎಟಿಎಂ ನಗದು ಹಿಂತೆಗೆತದ ಮಿತಿಯನ್ನು 40,000 ರೂ.ಗಳಿಂದ 75,000 ರೂ.ಗೆ ಏರಿಸಲಾಗಿದೆ.