Thursday, 19th September 2024

ಎಲ್ಲ ಬಿಗುಮಾನ ಬಿಟ್ಟು ಹೇಳಿ ಥ್ಯಾಂಕ್ ಯು

ಶಿಶಿರ ಕಾಲ
ಶಿಶಿರ್ ಹೆಗಡೆ ನ್ಯೂಜೆರ್ಸಿ

ಸುಮಾರು ಏಳು ವರ್ಷ ಹಿಂದೆ. ಆಗ ನಾನು ವಾಸಿಸುತ್ತಿದ್ದುದು ನ್ಯೂಜೆರ್ಸಿಯ ಎಡಿಸನ್ ಎಂಬ ಉಪನಗರದಲ್ಲಿ. ನನ್ನ ಆಫೀಸ್ ಇದ್ದದ್ದು ನ್ಯೂಯಾರ್ಕ್‌ನ ಮ್ಯಾನ್ಹಟನ್‌ನಲ್ಲಿ. ಪ್ರತೀ ದಿನ ಬಸ್ಸು, ಎರಡು ರೈಲು ಬದಲಿಸಿ ಆಫೀಸ್‌ಗೆ ಹೋಗುವುದು, ಕೆಲಸ ಮುಗಿಸಿ – ಒಂದು ನಿಮಿಷ ಆಚೀಚೆ ಆಗದಂತೆ – ಸರಿಯಾದ ಸಮಯಕ್ಕೆ ವಾಪಾಸ್ ಮತ್ತೆ ರೈಲು ಮತ್ತು ಬಸ್ಸಿನ ಮೂಲಕ ಮನೆಗೆ.
ಒಂದು ನಿಗದಿತ ಸಮಯದಲ್ಲಿ ಪ್ರಯಾಣ. ಅದೇ ಬಸ್ಸು, ಅದೇ ರೈಲು, ಅದೇ ಬಸ್ ಡ್ರೈವರ್, ಅದೇ ರೈಲಿನ ಟಿಕೆಟ್ ಕಲೆಕ್ಟರ್,
ಅದೇ ನಿಲ್ದಾಣಗಳು – ಅದೇ ನಿಲ್ದಾಣದ ಮೆಟ್ಟಿಲುಗಳು, ಮಂತ್ಲಿ ಪಾಸ್ ಹಿಡಿದ ಕೂಡಲೇ ಕೀಕ್ ಎಂದು ಕೂಗಿ ತೆರೆದುಕೊಳ್ಳುವ ಎಲೆಕ್ಟ್ರಾನಿಕ್ ಬಾಗಿಲುಗಳು. ಹೀಗೆ ಒಂದು ನಿಗದಿತ ಸಮಯದಲ್ಲಿ ಕೆಲಸಕ್ಕೆ ತೆರಳುವ ಪ್ರಕ್ರಿಯೆ ಒಂದಿಷ್ಟು ವಿಚಿತ್ರ ಅನುಭವ ಗಳನ್ನು ಕಟ್ಟಿ ಕೊಡುತ್ತದೆ. ಮನೆಯಿಂದ ಬಸ್ ಹತ್ತಿ ರೈಲ್ವೆ ನಿಲ್ದಾಣಕ್ಕೆೆ ಹೋಗುವಾಗ, ರೈಲಿಗೆ ಕಾಯುವಾಗ, ರೈಲಿನಲ್ಲಿ ಪ್ರಯಾಣಿಸುವಾಗ, ಪ್ರಯಾಣದ ನಂತರ ಆಫೀಸ್ ತಲುಪುವಾಗ ಹೀಗೆ ಎಲ್ಲ ಕಡೆ ಎದುರಿಗೆ ಸಿಗುವ ಜನರು,  ಪ್ರಯಾಣದಲ್ಲಿ ಹಾಡು ಹಿಂದೆ ಸರಿಯುವ ಅಂಗಡಿಗಳು, ರಸ್ತೆ, ಮರಗಳು, ಬ್ರಿಡ್ಜ್ ‌‌ಗಳು, ನದಿ, ಚಿಕ್ಕ ಕೆರೆಗಳು, ರೈಲ್ವೆೆ ಪಕ್ಕದಲ್ಲಿಯೇ ಕಾಣಿಸುವ ಜೈಲು – ಅದರ ಚಿಕ್ಕ ಕಿಟಕಿಗಳು, ಇವೆಲ್ಲ ಬದುಕಿನ ಭಾಗವೇ ಆಗಿ ಬಿಟ್ಟಿದ್ದವು.

ನ್ಯೂಜೆರ್ಸಿಯಿಂದ ನ್ಯೂಯಾರ್ಕ್‌ಗೆ ಲಕ್ಷಗಟ್ಟಲೆ ಮಂದಿ ಪ್ರತೀ ದಿನ ಕೆಲಸಕ್ಕೆ ಹೋಗುತ್ತಾರೆ. ಹೀಗೆ ಹೋಗುವವರೆಲ್ಲ ಬಹುತೇಕ ಒಂದು ನಿಗದಿತ ಸಮಯದಲ್ಲಿ ಪ್ರಯಾಣಿಸುವವರೇ. ಹಾಗಾಗಿ ಅದೆಷ್ಟೋ ಮಂದಿಯ ಮುಖ ಪರಿಚಯವಾಗಿಬಿಡುತ್ತದೆ. ಕೆಲವರು ನೋಡಿ ಸ್ಮೆೆಲ್ ಕೊಡುವವರು – ಇನ್ನು ಕೆಲವರು ನೋಡಿಯೂ ನೋಡದಂತಿರುವವರು. ಕೆಲವರ ನಗು ಚಂದ. ಕೆಲವರು ಸದಾ ಒಂದು ಚಿಂತೆಯಲ್ಲಿರುವಂತೆ ಭಾಸವಾಗುತ್ತಾರೆ. ಕೆಲವರು ಜೀವನದಲ್ಲಿ ಎಲ್ಲ ಕಳೆದುಕೊಂಡಂತೆ ಕಾಣಿಸಿದರೆ ಇನ್ನೂ ಕೆಲವರ ಜೀವನೋತ್ಸಾಹ ನೋಡಿದವರಿಗೆ ಒಂದು ಹುಮ್ಮಸ್ಸು – ಹುರುಪು ಹುಟ್ಟಿ ಬಿಡುತ್ತದೆ. ಕೆಲವರು ಪುಸ್ತಕ ಓದುತ್ತಾರೆ, ಕೆಲವರು ರೈಲಿನಲ್ಲಿಯೇ ಲ್ಯಾಪ್‌ಟಾಪ್ ತೆಗೆದು ಕೆಲಸ ಶುರುಮಾಡಿಕೊಂಡುಬಿಡುತ್ತಾರೆ, ಇನ್ನು ಕೆಲವರು ಹಾಡು ಕೇಳುತ್ತ ಲೋಕ ಮರೆತು ಗೊರಕೆ ಹೊಡೆಯುತ್ತಾರೆ, ಕೆಲವರು ಮೊಬೈಲ್ ಒತ್ತುತ್ತ ಅದ್ಯಾವುದೋ ಲೋಕದಲ್ಲೇ ಇದ್ದುಬಿಡುತ್ತಾರೆ.

ಇವರನ್ನೆಲ್ಲ ನೋಡುತ್ತಾ ಪ್ರಯಾಣಿಸುವುದೇ ಒಂದು ಅದ್ಭುತ ಅನುಭವ. ಬಹುತೇಕರು ಪರಿಚಿತರೇ. ನ್ಯೂಜೆರ್ಸಿಯಿಂದ ನ್ಯೂ
ಯಾರ್ಕ್‌ಗೆ ಹೋಗುವಾಗ ಮಧ್ಯದಲ್ಲಿ ನೆವಾರ್ಕ್ ವಿಮಾನ ನಿಲ್ದಾಣದ ಮೂಲಕ ರೈಲು ಹಾದುಹೋಗುವಾಗ ಅಲ್ಲೊಂದಿಷ್ಟು ವಿದೇಶಿ ಮುಖಗಳು ಪ್ರಯಾಣದ ಆಯಾಸವನ್ನೆಲ್ಲ ಹೊತ್ತು ರೈಲನ್ನು ಸೇರುತ್ತವೆ – ಇಡೀ ಪ್ರಯಾಣದಲ್ಲಿ ಈ ಮುಖಗಳಷ್ಟೇ ಅಪರಿಚಿತ ಅನಿಸುವಂಥವುಗಳು.

ಈ ರೀತಿಯ ದೈನಂದಿನ ಪ್ರಯಾಣವನ್ನು ನೀವು ಯಾಂತ್ರಿಕವೆನ್ನಿ ಅಥವಾ ಇನ್ನೇನೋ ಒಂದು ಹೆಸರು ಹಿಡಿದು ಕರೆಯಿರಿ.
ಈ ದಿನ ನಿತ್ಯ ನಡೆಯುವ ಪ್ರಯಾಣದಲ್ಲಿ ನೋಡುವ ಕಣ್ಣಿದ್ದರೆ ಮಾತ್ರ ಹೊಸತು ಮತ್ತು ಬೆರಗು – ಇಲ್ಲದಿದ್ದರೆ ನಿದ್ರೆೆ ಸಹಜವಾಗಿ ಬಂದು ಬಿಡುತ್ತದೆ. ಕೆಲವರು ನೋಡಿ ನೋಡಿಯೇ ಪರಿಚಯವಾಗುವವರು ಒಮ್ಮೊಮ್ಮೆ ನಿದ್ದ ಹತ್ತಿ ನಮ್ಮ ನಿಲ್ದಾಣ ಬಂದರೂ ಏಳದಿದ್ದರೆ ಎಬ್ಬಿಸುವಷ್ಟು ಆಪ್ತರಾಗಿಬಿಡುತ್ತಾರೆ.

ಅವರ ಹೆಸರು ಗೊತ್ತಿರುವುದಿಲ್ಲ. ಅವರ ಹಿನ್ನೆೆಲೆ ತಿಳಿದಿರುವುದಿಲ್ಲ. ಇಂತಹ ಪ್ರಯಾಣದ ಅದೆಷ್ಟೋ ದಿನಗಳನ್ನು ಕಳೆದಿದ್ದರೂ ಅದೊಂದು ದಿನ ಮಾತ್ರ ಇಂದಿಗೂ ನೆನಪಿದೆ. ನನ್ನ ಪ್ರಯಾಣ ರೈಲಿನಲ್ಲಿ ಸುಮಾರು ಹತ್ತು ನಿಲ್ದಾಣಗಳನ್ನು ದಾಟಿ ಹೋಗು ವಂಥದ್ದು. ಪ್ರತೀ ನಿಲ್ದಾಣದ ಹತ್ತಿರ ಬಂದಾಗಲೂ ರೈಲಿನ ಪ್ರತೀ ಬೋಗಿಯಲ್ಲಿ ಹಾಕಿರುವ ಸ್ಪೀಕರ್‌ನಲ್ಲಿ ಮುಂದಿನ ನಿಲ್ದಾಣದ ಹೆಸರನ್ನು ಹೇಳುವುದು ಇಲ್ಲಿನ ರೂಢಿ. ಇದರಿಂದ ಘಳಿಗೆಗೊಮ್ಮೆ ಎಲ್ಲಿಗೆ ತಲುಪಿದೆವು ಎಂದು ಎಲ್.ಇ.ಡಿ ಫಲಕವನ್ನು ನೋಡುವುದು ತಪ್ಪುತ್ತಿತ್ತು. ಪೈಲೆಟ್ ಯಾವುದೇ ವಿಷಯವನ್ನು ಪ್ರಯಾಣಿಕರಿಗೆ ತಿಳಿಸಬೇಕೆಂದರೂ ಅದೇ ಸ್ಪೀಕರ್ ಅನ್ನು
ಬಳಸುತ್ತಿದ್ದ. ಆ ದಿನ ಸ್ಪೀಕರ್‌ನಲ್ಲಿ ಪೈಲೆಟ್ ಹೀಗೆ ಘೋಷಣೆ ಮಾಡಿದ. ಇಂದು ಟಿಕೆಟ್ ಕಲೆಕ್ಟರ್ ಮಿಸ್ಟರ್ ಮಾರ್ಟಿನ್ ಅವರ
ವ್ರತ್ತಿಯ ಕೊನೆಯ ದಿನ, ಇವರು ತಮ್ಮ ವ್ರತ್ತಿ ಜೀವನದ ಮೂವತ್ತ ನಾಲ್ಕನೇ ವರ್ಷವನ್ನು ಇವತ್ತು ಕೊನೆಗೊಳಿಸಲಿದ್ದಾರೆ.
ಇದಕ್ಕೆೆ ರೈಲು ಪ್ರಾಧಿಕಾರ ಅವರಿಗೆ ಅಭಾರಿಯಾಗಿದೆ. ಅವರಿಗೆ ಹೆಂಡತಿ ಮತ್ತು ಒಬ್ಬ ಮಗಳು ಇದ್ದಾರೆ. ಅವರಿಗೆ ಧನ್ಯವಾ
ದಗಳು. ಪ್ಲೀಸ್ ಥ್ಯಾಂಕ್ಸ್ ಹಿಮ್. ಅವರು ಈಗ ನಿಮ್ಮ ಭೋಗಿಯನ್ನು ಪ್ರವೇಶಿಸುತ್ತಿದ್ದಾರೆ ಎಂದು ಅವರ ಕುಟುಂಬದ ಕಿರು
ಪರಿಚಯದೊಂದಿಗೆ ಧನ್ಯವಾದ ಹೇಳುತ್ತಿದ್ದ. ಆ ಟಿಕೆಟ್ ಕಲೆಕ್ಟರ್ ಮಾರ್ಟಿನ್, ಬೋಗಿ ದಾಟುತ್ತ ಹೋದಂತೆಲ್ಲ ಈ
ಘೋಷಣೆ ಆ ಬೋಗಿಯಲ್ಲಿ ಕೇಳಿ ಬರುತ್ತಿತ್ತು. ಪ್ರಯಾಣಿಕರು ಅವರತ್ತ ನೋಡಿ ಥ್ಯಾಂಕ್ಯೂ ಎನ್ನುತ್ತಿದ್ದರು, ಆಲ್ ದ ಬೆಸ್ಟ್
ಅನ್ನುತ್ತಿದ್ದರು, ಹಸ್ತ ಲಾಘವ ಮಾಡುತ್ತಿದ್ದರು, ಚಪ್ಪಾಳೆ ತಟ್ಟುತ್ತಿದ್ದರು.

ಮಾರ್ಟಿನ್ ಕಣ್ಣಂಚಿನಲ್ಲಿ ನೀರು ಕಾಣಿಸುತ್ತಿತ್ತು. ಮೊನ್ನೆ ಅಂಗಡಿಯೊಂದಕ್ಕೆ ಹೋದಾಗ ಕಾರ್ ಪಾರ್ಕಿಂಗ್ ನಲ್ಲಿ ಅದೇ ಮಾರ್ಟಿನ್ ಅಕಸ್ಮಾತ್ ಆಗಿ ಎದುರಿಗೆ ಕಾಣಿಸಿಕೊಂಡ. ಪಾರ್ಕಿಂಗ್ ಲಾಟ್‌ನಲ್ಲಿ ಅಲ್ಲದೆ ಅಂಗಡಿಯೊಳಗೆ ಎದುರಿಗೆ ಬಂದಿದ್ದರೆ ನನಗೆ ಮಾಸ್ಕ ನ ನಡುವೆ ಗುರುತು ಹತ್ತುತ್ತಿರಲಿಲ್ಲ. ನಿಲ್ಲಿಸಿ ಮಾರ್ಟಿನ್‌ನನ್ನು ಮಾತನಾಡಿಸಿದೆ. ಆತನಿಗೆ ನನ್ನ ನೆನಪು ಗುರುತು ಇರುವುದಿಲ್ಲ – ಸಹಜ. ನಾನೊಬ್ಬ ಪ್ರಯಾಣಿಕನಾಗಿದ್ದೆ ಎಂದು ಪರಿಚಯ ಮಾಡಿಕೊಂಡೆ ಮತ್ತು ಆ ಏಳು ವರ್ಷದ ಹಿಂದಿನ ಆತನ ವೃತ್ತಿಯ ಕೊನೆಯ ದಿನವನ್ನು ನೆನಪಿಸಿದೆ – ನಾನು ಅದೇ ರೈಲಿನಲ್ಲಿದ್ದೆ ಎಂದೆ. ಮಾರ್ಟಿನ್ ಕಣ್ಣಲ್ಲಿ ಮತ್ತೆ ಇವತ್ತು ಕೂಡ ನೀರು ತುಂಬಿತ್ತು. ಕರೋನಾ ಎಲ್ಲವನ್ನು ಮರೆತು ಒಮ್ಮೆೆ ಗಟ್ಟಿಯಾಗಿ ನನ್ನನ್ನು ತಬ್ಬಿದ. ಮಾರ್ಟಿನ್‌ನ ಮೂರು ದಶಕದ ವೃತ್ತಿಯಲ್ಲಿ ಏನೇನೋ ಘಟನೆಗಳನ್ನು ನೋಡಿದ್ದಾನೆ, 9/11 ಘಟನೆಯಾದಾಗ ಆತನಿದ್ದ ರೈಲು ಟನಲ್ ಒಂದರಲ್ಲಿ ಹಲವು ತಾಸು
ಸಿಕ್ಕಿಕೊಂಡು ನಿಂತಿತ್ತು. ಆತ ಬಹುಷಃ ಅದೆಷ್ಟೋೋ ಕೋಟಿ ಜನರನ್ನು ಆತನ ಜೀವನದಲ್ಲಿ ನೋಡಿರಬಹುದು. ಎಂಥೆಂಥ
ದ್ದೋ ಸಂತಸ ತರುವ ಘಟನೆಗಳು ಆತನ ಜೀವನದಲ್ಲಿ ನಡೆದಿರಬಹುದು – ಆದರೆ ಆತನೇ ಹೇಳುವ ಪ್ರಕಾರ ಆತನ ಇಡೀ
ಜೀವನದ ಮರೆಯಲಾಗದ ದಿನ ಎಂದರೆ ಆತನ ವೃತ್ತಿ ಜೀವನದ ಕೊನೆಯ ದಿನ – ಆತನಿಗೆ ಇಡೀ ದಿನ ಚಪ್ಪಾಳೆ ತಟ್ಟಿ
ಧನ್ಯವಾದ ಹೇಳಿದ ವೃತ್ತಿ ಜೀವನದ ಆ ಕೊನೆಯ ದಿನ.

ಬಹುಶಃ ಒಬ್ಬ ರೈಲ್ವೆೆ ಟಿಕೆಟ್ ಕಲೆಕ್ಟರ್‌ಗೆ ಇದಕ್ಕಿಂತ ಅದ್ಭುತ ಬೀಳ್ಕೊಡುಗೆ – ಅಥವಾ ಪಾರಿತೋಷಕ ಇನ್ನೊಂದಿರಲಿಕ್ಕಿಲ್ಲ.
ಮಾರ್ಟಿನ್ ತನ್ನ ನಿವೃತ್ತಿ ಜೀವನ ಸಂತೃಪ್ತಿಯಿಂದ ಬದುಕಲು ಅದೊಂದು ಘಟನೆ ಕಟ್ಟಿಕೊಟ್ಟ ಸಾರ್ಥಕತೆ ಸಾಕು. ಮಾರ್ಟಿನ್
ಗೆ ಮತ್ತೊಮ್ಮೆ ಥ್ಯಾಂಕ್ ಯು ಹೇಳಿ ಬೀಳ್ಕೊಟ್ಟೆೆ. ಒಂದು ಧನ್ಯವಾದ, ಥ್ಯಾಂಕ್ ಯು, ಶುಕ್ರಿಯಾ ದ ತಾಕತ್ತೇ ಅಂಥದ್ದು. ಅದೆಷ್ಟೋ ಜನರನ್ನು – ಅಭಿಪ್ರಾಯವನ್ನು ಕೆಲವೊಮ್ಮೆ ಒಂದು ಸಹಜ ನೈಜ ಥ್ಯಾಂಕ್ಯು ಬದಲಿಸಿಬಿಡುತ್ತದೆ.

ಎಂಥೆಂಥದ್ದೋ ಸಹಜ – ಅಸಹಜವೆನ್ನುವ ಸನ್ನಿವೇಶವನ್ನು ವಿಶೇಷವಾಗಿಸಿಬಿಡಬಲ್ಲ ತಾಕತ್ತು ಇರುವುದು ಈ ಧನ್ಯವಾದ
ಎನ್ನುವ ಶಬ್ದಕ್ಕೆ. ನಮ್ಮ ಸುತ್ತಲಿನವರು, ತಂದೆ, ತಾಯಿ, ಅಣ್ಣ, ಅಕ್ಕ, ತಮ್ಮ, ತಂಗಿ, ಸಂಬಂಧಿಕರು, ಸ್ನೇಹಿತರು, ಶಿಕ್ಷಕರು, ಲೇಖಕರು, ಪರಿಚಯದವರು, ಪರಿಚಯವೇ ಇಲ್ಲದವರು ಹೀಗೆ ಯಾರ್ಯಾರೋ ಯಾವ ಯಾವುದೋ ರೀತಿಯಲ್ಲಿ, ಬಗೆಯಲ್ಲಿ
ನಮಗೆ ಸಹಾಯ ಮಾಡಿರುತ್ತಾರೆ – ಮಾಡುತ್ತಲೇ ಇರುತ್ತಾರೆ.

ಇದರಲ್ಲಿ ಹೆಚ್ಚಿನವರು ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೇ ಸಹಾಯ ಮಾಡುತ್ತಿರುತ್ತಾರೆ. ಎಲ್ಲ ಸಹಾಯವು ಸಹಾಯವೇ.
ಜೀವನವನ್ನು ಹಿಂದಿರುಗಿ ನೋಡಿದರೆ ಅದೆಷ್ಟೋ ಸಾವಿರ ಮಂದಿ ಸಹಾಯ ಪಡೆದೇ ನಾವು ಬೆಳೆದಿರುತ್ತೇವೆ. ಅದೆಷ್ಟೋ
ಪಡೆದ ಸಹಾಯ ಇವತ್ತು ನೆನಪು ಕೂಡ ಇರುವುದಿಲ್ಲ. ಸಹಾಯ ಮಾಡಿದವರ ಹೆಸರು ಮುಖ ಒಮ್ಮೊಮ್ಮೆ ಮರೆತು ಹೋಗಿರು ತ್ತದೆ. ಅದೆಲ್ಲೋ ಬಸ್ಸು ಸಿಕ್ಕದಿದ್ದಾಗ ಮನೆಯವರೆಗೆ ಬೈಕಿನಲ್ಲಿ ಬಂದು ಬಿಟ್ಟವರು, ರಸ್ತೆ ಮಧ್ಯೆ ಪಂಚರ್ ಆಗಿ ನಿಂತಾಗ – ಪೆಟ್ರೋಲ್ ಖಾಲಿಯಾಗಿ ನಿಂತಾಗ ತಮ್ಮ ಕೆಲಸವನ್ನು ಬಿಟ್ಟು ಅದೆಷ್ಟೋ ದೂರ ಹೋಗಿ ಪೆಟ್ರೋಲ್ ತಂದು ಕೊಟ್ಟವರಿಂದ
ಹಿಡಿದು ನಮ್ಮ ಬದುಕಿಗೆ ಒಂದು ದಿಶೆಕೊಟ್ಟ ಅಪ್ಪ ಅಮ್ಮ, ಸಂಬಂಧಿಗಳು ಹೀಗೆ ಅದೆಷ್ಟೋ ಮಂದಿ. ಪ್ರತೀ ದಿನ ನಿಮ್ಮನ್ನು
ಸಹಿಸಿ ಹತ್ತಾರು ರೀತಿಯಲ್ಲಿ ಸಹಾಯ ಮಾಡುವ ನಿಮ್ಮ ಗಂಡ / ಹೆಂಡತಿ. ಒಂದಕ್ಕೆ ಇನ್ನೊಂದು ತೂಕ ಮಾಡಿ ಹೋಲಿಸಿ ಅದು
ದೊಡ್ಡದು – ಇದು ಸಣ್ಣದು ಎನ್ನುವಂತಿಲ್ಲ. ಅದೆಲ್ಲ ಸಹಾಯ ಸಹಕಾರವೇ ಮತ್ತು ಅವೆಲ್ಲ ಸೇರಿ ನಮ್ಮ ಬದುಕನ್ನು ರೂಪಿಸಿ ರುತ್ತದೆ. ಇದಕ್ಕೆ ಯಾರೂ ಹೊರತಲ್ಲ.

ಆದರೆ ಹೆಚ್ಚಿನ ಬಾರಿ ನಾವು ಒಂದು ಪ್ರಾಮಾಣಿಕ ಧನ್ಯವಾದವನ್ನು ಹೇಳಲು ಮರೆತು ಬಿಡುತ್ತೇವೆ. ಕೆಲವರು ಧನ್ಯವಾದ ಎಂದು ಹೇಳಿದರೆ ಅಷ್ಟೇಕೆ ಫಾರ್ಮಲ್ ಎಂದು ಹೇಳುವವರಿದ್ದಾರೆ. ಆ ಕಾರಣಕ್ಕೆ ಕೆಲವೊಮ್ಮೆ ಧನ್ಯವಾದ ಹೇಳಲು ನಾಚುತ್ತೇವೆ. ಬಹಳಷ್ಟು ಮಂದಿಗೆ ಸಹಾಯ ಕೇಳುವಾಗ ಇಲ್ಲದ ನಾಚಿಕೆ ಧನ್ಯವಾದ ಹೇಳುವಾಗ ಎದುರಿಗೆ ಬಂದು ನಿಲ್ಲುತ್ತದೆ. ಸಹಾಯ ಕೇಳುವಾಗ ಕಾಣದ ಕೀಳರಿಮೆ ಧನ್ಯವಾದ ಹೇಳುವಾಗ ಅಡ್ಡ ಬರುತ್ತದೆ. ಹೀಗೆ ನಾನಾ ಕಾರಣದಿಂದ ಒಂದು ಧನ್ಯತೆಯ ಭಾವವನ್ನು ವ್ಯಕ್ತಪಡಿಸುವಲ್ಲಿ ಹಿಂದೇಟು ಹಾಕುತ್ತೇವೆ. ನಮ್ಮದೇ ಮಕ್ಕಳಿಗೆ ಯಾರೋ ಒಂದು ಚಾಕಲೇಟ್ ಕೊಟ್ಟರೆ ದುಂಬಾಲು ಬಿದ್ದು ‘ಥ್ಯಾಂಕ್ ಯು’ ಹೇಳಿಸುವ ನಾವು ಪಡೆದ ಸಹಾಯಕ್ಕೆ ಥ್ಯಾಂಕ್ ಯು ಹೇಳುವುದೇ ಇಲ್ಲ. ಈ ಒಂದೇ ತಪ್ಪನ್ನು ಹಲವಾರು ಕಾರಣಗಳನ್ನು ಮುಂದೆ ಇಟ್ಟು ಮಾಡುತ್ತಲೇ ಇರುತ್ತೇವೆ.

ಇನ್ನು ಕೆಲವರಿಗೆ ಸಹಾಯ ಮಾಡುವುದೇ ವೃತ್ತಿಯಾಗಿರುತ್ತದೆ. ಎಲ್ಲ ಸರಕಾರಿ ಕೆಲಸಗಳು ಕೂಡ ಅಂತೆಯೇ. ಆಸ್ಪತ್ರೆಯಲ್ಲಿನ ನರ್ಸ್, ಶಾಲೆಯಲ್ಲಿ ಪಾಠಮಾಡುವ ಶಿಕ್ಷಕರು ಹೀಗೆ. ಇವರೆಲ್ಲ ಮಾಡುವ ವೃತ್ತಿಗೆ ಸಂಭಾವನೆಯನ್ನು ಪಡೆಯುತ್ತಾರೆ.
ಸಂಭಾವನೆಯನ್ನು ಪಡೆಯುವವರು ಮಾಡುವ ಸಹಾಯ ಸಹಾಯವಲ್ಲ, ಕೇವಲ ಪುಕ್ಸಟ್ಟೆ ಮಾಡುವ ಸಹಾಯವಷ್ಟೇ
ಸಹಾಯ ಎನ್ನುವ ಭಾವನೆ ಕೂಡ ಹಲವರಲ್ಲಿದೆ. ಅವನಿಗೆ ಸಂಬಳ ಬರುತ್ತದೆ, ಏಕೆ ಥ್ಯಾಂಕ್ ಯು ಹೇಳಬೇಕು ಎನ್ನುವ
ಮೊಂಡು ವಾದ. ಸಂಬಳ ಪಡೆದು ಸಹಾಯ ಮಾಡುವವರ ಬಗ್ಗೆೆ ನಮಗೇನೋ ತಾತ್ಸಾರ. ಅಂಥವರಿಗೆ ಒಂದು ಧನ್ಯವಾದ
ಹೇಳಲಿಕ್ಕೆ ಎಲ್ಲಿಲ್ಲದ ಲೆಕ್ಕಾಚಾರ.

ಥ್ಯಾಂಕ್ ಯು ಎಂದರೆ ಏನು ? ನಮಗೆ ಸಹಾಯ ಮಾಡಿದವರಿಗೆ ಧನ್ಯತೆಯ ಭಾವವನ್ನು ಅರ್ಪಿಸುವುದೇ ಅಲ್ಲವೇ.
ಇದೊಂದು ರೀತಿಯಲ್ಲಿ ಸನ್ಮಾನ ಮತ್ತು ಹೊಗಳುವುದು. ಒಂದು ನೈಜ ಧನ್ಯವಾದ ಸಹಾಯ ಮಾಡಿದವರಿಗೆ ಕೊಡಮಾಡುವ ಮರ್ಯಾದೆ ಕೂಡ ಹೌದು. ಇದರ ಜತೆ ಧನ್ಯವಾದ ಹೇಳುವ ಮೂಲಕ ನೀವು ಎದುರಿನವರನ್ನು ಗ್ರಾಂಟೆಡ್ ಎಂದುತೆಗೆದು ಕೊಳ್ಳುತ್ತಿಲ್ಲ ಎನ್ನುವುದರ ಸೂಚಕವದು. ಇದು ಸಹಾಯ ಮಾಡಿದವರಿಗೆ ಇನ್ನಷ್ಟು, ಬೇರೆಯವರಿಗೆ ಸಹಾಯ ಮಾಡುವಂತೆ ಪ್ರೇರೇಪಿಸುತ್ತದೆ ಮತ್ತು ನಿಮ್ಮೆಡೆಗೆ ಅವರ ಒಲವು ಪ್ರೀತಿ ಕೂಡ ಹೆಚ್ಚಿಸುತ್ತದೆ. ಧನ್ಯವಾದವನ್ನು ಬಾಯಿ ಬಿಟ್ಟು ಹೇಳಬೇಕು. ಸಾಧ್ಯವಾದಲ್ಲಿ ಏಕೆ ಧನ್ಯವಾದ ಎಂದು ಚಿಕ್ಕದಾಗಿ ವಿವರಿಸಬೇಕು. ನಾವು ಸರಿಯಾಗಿ ಧನ್ಯವಾದ ಹೇಳುತ್ತೇವೆಯೇ ಎಂದು ಆಗಾಗ ಪ್ರಶ್ನಿಸಿಕೊಳ್ಳಬೇಕು.

ಒಂದೊಮ್ಮೆ ಧನ್ಯವಾದವನ್ನು ಹೇಳಲು ಮರೆತಲ್ಲಿ ಅಥವಾ ಅವಕಾಶವಿರದಿದ್ದಲ್ಲಿ ಇನ್ನೊಮ್ಮೆ ಅವಕಾಶ ಕಲ್ಪಿಸಿಕೊಂಡು ಅಥವಾ ನೆನಪಿಸಿಕೊಂಡು ಧನ್ಯವಾದ ಹೇಳಬೇಕು. ಧನ್ಯವಾದ ಹೇಳುವಾಗ ನಾಚುವಂತಿಲ್ಲ – ಹಿಂಜರಿಯುವಂತಿಲ್ಲ. ಅವಕಾಶ ಸಿಕ್ಕಾಗಲೇ ಧನ್ಯವಾದ ಅರ್ಪಿಸಿಬಿಡಬೇಕು. ಯಾವುದನ್ನು ಮುಂದೂಡಿದರೂ ಇದನ್ನು ಮಾತ್ರ ಮುಂದೂಡುವಂತಿಲ್ಲ.

ತೂಕ ಲೆಕ್ಕಾಚಾರ ಮಾಡಿ ಧನ್ಯವಾದ ಹೇಳುವವರು, ಅಥವಾ ಹೇಳದೇ ಇರುವವರು ಒಂದು ಕಡೆಯಾದರೆ ಇನ್ನು ಕೆಲವರಿರು ತ್ತಾರೆ, ಅವರಿಗೆ ನೀವು ಒಂದು ಚಿಕ್ಕ ಸಹಾಯ ಯಾವತ್ತೋ ಮಾಡಿದಿರೆಂದಿಟ್ಟುಕೊಳ್ಳಿ, ಎದುರಿಗೆ ಸಿಕ್ಕಾಗಲೆಲ್ಲ ಅವರು ಅದನ್ನು ನೆನಪಿಸಿಕೊಂಡು ಧನ್ಯವಾದ ಹೇಳುತ್ತಾರೆ.  ಇವರು ಇನ್ನೊಂದು ವಿಪರೀತ. ಸಿಕ್ಕಸಿಕ್ಕಲ್ಲೆಲ್ಲ ಕಿರಿಕಿರಿಯಾಗುವಷ್ಟು ಧನ್ಯವಾದ ಹೇಳುತ್ತಲೇ ಇರುತ್ತಾರೆ. ಇದು ಅವರಿಗೆ ಒಂದು ರೀತಿಯಲ್ಲಿ ಚಟವಾಗಿಬಿಟ್ಟಿರುತ್ತದೆ. ಅಂಥವರಿಗೆ ಇನ್ನೊಮ್ಮೆ ಸಹಾಯ ಮಾಡಲು ಕೂಡ ಹೆದರಿಕೆಯಾಗುವ ರೀತಿ ವರ್ತಿಸುತ್ತಿರುತ್ತಾರೆ. ಇವರಿಗೆ ಯಾಕಾದರೂ ಸಹಾಯ ಮಾಡಿದೆನೋ ಎನ್ನುವಷ್ಟರ ಮಟ್ಟಿಗೆ ಧನ್ಯವಾದ ಎಂದು ಹೇಳುತ್ತಲೇ ಇರುತ್ತಾರೆ.

ಅದೆಷ್ಟೋ ಕಾಲದಿಂದ ಬಿಬಿಸಿ ರೇಡಿಯೋ ಪ್ರತೀ ವಾರ ಒಂದು ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಆ ಕಾರ್ಯಕ್ರಮದ ಹೆಸರೇ ‘ಥ್ಯಾಂಕ್ ಯು’. ಕೇಳುಗರು ಅಜ್ಞಾತ ವ್ಯಕ್ತಿಗಳು ಹೇಗೆ ಸಹಾಯಮಾಡಿದರು ಎಂದು ಈ ಕಾರ್ಯಕ್ರಮಕ್ಕೆ ಬರೆದು ಅಥವಾ ರೆಕಾರ್ಡ್ ಮಾಡಿ ಕಳಿಸಿಕೊಡುತ್ತಾರೆ. ಕೆಲವೊಮ್ಮೆ ಕೇಳುಗರು ಅದೆಷ್ಟೋ ವರ್ಷ ಹಿಂದೆ ಪಡೆದ ಸಹಾಯವನ್ನು ಈ ಕಾರ್ಯಕ್ರಮದ ಮೂಲಕ ನೆನಪಿಸಿಕೊಳ್ಳುತ್ತಾರೆ. ಕೆಲವೊಂದು ಸಹಾಯ ತೀರಾ ಸಿಲ್ಲಿ ಅನಿಸುತ್ತದೆ, ಇನ್ನು ಕೆಲವು ಘಟನೆಗಳು ಮನಸ್ಸನ್ನು ಆರ್ದ್ರಗೊಳಿಸುತ್ತವೆ – ನಮಗೂ ಇನ್ಯಾರಿಗೋ ಸಹಾಯಮಾಡುವಂತೆ ಪ್ರೇರೇಪಿಸುತ್ತವೆ – ಮನುಷ್ಯತ್ವ ಇನ್ನೂ ಜೀವಂತವಿದೆ ಎನ್ನುವ ಭರವಸೆಯನ್ನು ಹುಟ್ಟಿಸುತ್ತದೆ. ಒಂದೊಂದು ಚಿಕ್ಕ ಘಟನೆಯ ವಿವರಣೆಯೂ ಒಂದೊಂದು ನೈಜ ಕಥೆಯನ್ನು ಎದುರಿಗೆ ತಂದುನಿಲ್ಲಿಸುವಂಥದ್ದು. ಯಾವುದನ್ನು ಬಿಟ್ಟರು ಈ ಒಂದು ಹತ್ತು ನಿಮಿಷದ ಕಾರ್ಯಕ್ರಮವನ್ನು ನಾನು ಪ್ರತೀ ವಾರ ತಪ್ಪಿಸಿಕೊಳ್ಳುವುದಿಲ್ಲ. ಕನ್ನಡದ ರೇಡಿಯೋ ಶೋ ಗಳಲ್ಲಿ ಕೂಡ ಇಂಥ ಕಾರ್ಯಕ್ರಮವಿರಬಹುದು, ಗೊತ್ತಿಲ್ಲ. ಬಹುತೇಕ ಧನ್ಯವಾದವನ್ನು ಹೇಳಲು ನಾನಾ ಕಾರಣದಿಂದ ಬಿಟ್ಟುಹೋದವರು ಇಲ್ಲಿ ಬಂದು ಅದನ್ನು ಹೇಳಿ ಕೊಳ್ಳಲು ಬಿಬಿಸಿ ಅವಕಾಶ ಕಲ್ಪಿಸುತ್ತದೆ. ಬಹಳ ಸುಂದರವಾದ ಕಾರ್ಯಕ್ರಮವದು.

ಒಬ್ಬ ಉತ್ತಮ ಆಡಳಿತಗಾರನಾದವನ ಅತ್ಯವಶ್ಯಕ ಗುಣವೆಂದರೆ ಧನ್ಯವಾದ ಅರ್ಪಿಸುವುದು. ನ್ಯೂಜೆರ್ಸಿಯಲ್ಲಿ ‘ಕ್ಯಾಂಪಬೆಲ್ಸೂ ಪ್’ ಎನ್ನುವ ಆಹಾರ ಸಂಸ್ಕರಣೆ ಮತ್ತು ಮಾರಾಟ ಮಾಡುವ ಕಂಪನಿಯಿದೆ. ಅದರ ಹಿಂದಿನ ಸಿಇಒ ಡಗ್ ಕೊನೆಂಟ್ ಕಂಪನಿಯ ದಿಶೆಯನ್ನೇ ಬದಲಿಸಿದ ಯಶಸ್ವಿ ಸಿಇಒ. ಆತ ದಿನದ ಒಂದಿಷ್ಟು ಸಮಯವನ್ನು ಧನ್ಯವಾದ ಹೇಳಲೇ ಮೀಸಲಿಟ್ಟಿರುತ್ತಿದ್ದ. ಕಂಪನಿಯ ಯಾವೊಬ್ಬ ಕೆಲಸಗಾರನು ಉತ್ತಮ ಕೆಲಸ ಮಾಡಿದರೂ, ಕೆಲಸ, ಸಾಧನೆ ಎಷ್ಟೇ ಚಿಕ್ಕದಿದ್ದರೂ ಆತ ತನ್ನದೇ ಹಸ್ತಾಕ್ಷರದಲ್ಲಿ ಅವರಿಗೆ ಧನ್ಯವಾದ ಪತ್ರವನ್ನು ಬರೆದು ಕಳಿಸುತ್ತಿದ್ದ. ಇದೊಂದನ್ನು ಆತ ಧ್ಯಾನದಂತೆ
ನಡೆಸಿಕೊಂಡು ಹೋಗಿದ್ದ. ಆತ ಸಿಇಒ ಇದ್ದ ಅವಧಿಯಲ್ಲಿ ಸುಮಾರು ಮೂವತ್ತು ಸಾವಿರ ಇಂಥ ಧನ್ಯವಾದ ಅರ್ಪಿಸುವ
ಪತ್ರವನ್ನು ತನ್ನ ನೌಕರರಿಗೆ ಬರೆದಿದ್ದ. ಆ ಸಮಯದಲ್ಲಿ ಇಡೀ ಕಂಪನಿ ಇಪ್ಪತ್ತು ಸಾವಿರ ನೌಕರರನ್ನು ಹೊಂದಿತ್ತು. ಅದರರ್ಥ
ಆತ ಬಹುತೇಕ ತನ್ನ ನೌಕರರಿಗೆ ಒಂದಕ್ಕಿಂತ ಹೆಚ್ಚು ಬಾರಿ ಹಸ್ತಾಕ್ಷರದಲ್ಲಿ ಧನ್ಯವಾದ ಹೇಳಿದ್ದ. ಮುಂದೊಂದು ದಿನ, ಡಗ್
ನಿವೃತ್ತಿಯಾದ ನಂತರ ಒಂದು ಭೀಕರ ರಸ್ತೆ ಅಪಘಾತಕ್ಕೆ ಗುರಿಯಾಗುತ್ತಾನೆ.

ಆಗ ಆತನಿಗೆ ಸಾವಿರಾರು ಹಾರೈಕೆಯ ಹಸ್ತ ಪತ್ರಗಳನ್ನು ಆತನ ಹಿಂದಿನ ಸಹವರ್ತಿಗಳು ಕಳುಸುತ್ತಾರೆ. ಆತ ಮುಂದೊಂದು ದಿನ ಇಂಟರ್ವ್ಯೂೆನಲ್ಲಿ ತನ್ನ ಚೇತರಿಕೆಗೆ ಆ ಪತ್ರಗಳೇ ಕಾರಣ ಎಂದು ಹೇಳಿಕೊಳ್ಳುತ್ತಾನೆ. ಧನ್ಯವಾದ ಹೇಳಿದಾಗ ಸಹಾಯ ಮಾಡಿದವರ ಜೊತೆ ಒಂದು ವಿನೂತನ ಸಂಬಂಧ ಏರ್ಪಡುತ್ತದೆ. ಅದು ಥ್ಯಾಂಕ್ ಯು ನ ಇನ್ನೊಂದು ತಾಕತ್ತು. ಒಂದು ಸಹಜ ಧನ್ಯವಾದ ನೀವು ಎದುರಿಗಿನವರು ನಿಮ್ಮ ಜೀವನದಲ್ಲಿ ಉಂಟುಮಾಡಿದ ಧನಾತ್ಮಕ ವಿಚಾರವನ್ನು ಗುರುತಿಸುವ ಪ್ರಕ್ರಿಯೆ.

ಧನ್ಯವಾದ ಯಾವತ್ತೂ ಕೂಡ ನೈಜತೆಯಿಂದ ತುಂಬಿರಬೇಕು – ಕಾಟಾಚಾಕ್ಕಾಗಬಾರದು. ಧನ್ಯತೆಯ ಭಾವದೊಂದಿಗೆ ನಾವು
ಹೇಳುವ ಶಬ್ದ ಕೂಡಿರಬೇಕು. ಆಗ ಮಾತ್ರ ಈ ಇಡೀ ಪ್ರಕ್ರಿಯೆಗೆ ಒಂದು ಅರ್ಥವಿರುತ್ತದೆ. ಡೋಚರ್ ಕೆಲ್ಟ್ನರ್ ತನ್ನ ಪುಸ್ತಕ “Power of Paradox’ ದಲ್ಲಿ ಬಹಳ ಸುಂದರವಾಗಿ ಇಡೀ ಧನ್ಯವಾದ ಅರ್ಪಣೆಯ ಧನಾತ್ಮಕ ಗುಣಗಳನ್ನು ವಿವರಿಸುತ್ತಾನೆ. ಹೇಗೆ ಈ ಪ್ರಕ್ರಿಯೆಯಿಂದ ಧನ್ಯವಾದ ಅರ್ಪಿಸುವವನಲ್ಲಿ ಮತ್ತು ಸ್ವೀಕರಿಸುವವನಲ್ಲಿ ಉತ್ತಮ ಭಾಂದವ್ಯವನ್ನು ಹುಟ್ಟುತ್ತದೆ ಎಂದು ವಿವರಿಸುತ್ತಾನೆ. ಯಾರು ತಮ್ಮ ಉತ್ತಮ ಕೆಲಸದಿಂದ ಧನ್ಯವಾದವನ್ನು ಸ್ವೀಕರಿಸುತ್ತಾರೋ ಅವರು ಇನ್ನಷ್ಟು ಸಹಾಯಕ್ಕೆ ಮುಂದಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚು. ಆದರೆ ಕೆಲವರು ಜೀವನದ ಒಂದು ಹಂತ ತಲುಪಿದ ನಂತರ ಧನ್ಯವಾದ ಹೇಳುವುದನ್ನು ಸಂಪೂರ್ಣ ನಿಲ್ಲಿಸಿಬಿಡುತ್ತಾರಂತೆ. ಇದನ್ನೇ ಆತ ತನ್ನ ಪುಸ್ತಕದಲ್ಲಿ ಜೀವನದ ಅಭಾಸ ಎಂದು ವಿವರಿಸುತ್ತಾನೆ.

ನೀವು ಹಿಂದಿ ಚಲನಚಿತ್ರ ಮುನ್ನಾ ಭಾಯಿ ಎಂಬಿಬಿಎಸ್ ನೋಡಿದ್ದರೆ ‘ಜಾದು ಕಿ ಝಪ್ಪಿ’ ಮರೆಯಲು ಸಾಧ್ಯವೇ ಇಲ್ಲ.
ಆಸ್ಪತ್ರೆಯಲ್ಲಿ ನೆಲ ಒರೆಸುವವನು ಆಗ ತಾನೇ ಒರೆಸಿದೆ ಒದ್ದೆ ನೆಲದ ಮೇಲೆ ನಡೆದು ಬರುವವರ ಮೇಲೆ ಕೂಗಾಡುತ್ತಿರುತ್ತಾನೆ. ಅದನ್ನು ನೋಡಿದ ಚಿತ್ರದ ನಾಯಕ ಆ ನೆಲ ಒರೆಸುವವನನ್ನು ಗಟ್ಟಿಯಾಗಿ ತಬ್ಬಿ ಧನ್ಯವಾದ ಹೇಳುತ್ತಾನೆ. ಏಕೆ ಧನ್ಯವಾದ ಹೇಳುತ್ತಿದ್ದೇನೆ, ನಿನ್ನ ಪಾತ್ರ ಏಕೆ ಮುಖ್ಯ ಎಂದು ಚಿಕ್ಕದಾಗಿ ತಬ್ಬಿಯೇ ವಿವರಿಸುತ್ತಾನೆ. ಅಲ್ಲಿಯವರೆಗೆ ಸಿಡಿಮಿಡಿಗೊಳ್ಳುತ್ತಿದ್ದ ಆತ ಈ ಒಂದು ಘಟನೆಯಿಂದ ಮೃದುವಾಗಿ ಬಿಡುತ್ತಾನೆ. ಚಿತ್ರ ನೋಡಿದ ಎಂಥವರಲ್ಲಿಯೂ ಆ ಘಟನೆ ಅತಿ ಚಿಕ್ಕದಾದರೂ ಮನಸ್ಸಿಗೆ ತಾಗುವಂಥದ್ದು. Showing gratitude is one of the simplest yet most powerful things humans can do for each other. – Randy Pausch.  ಈ ಜಗತ್ತನ್ನು ಉತ್ತಮಗೊಳಿಸುವ ಇರಾದೆ ನಿಮ್ಮಲ್ಲಿದ್ದರೆ ಅದಕ್ಕಿರುವ ಅತೀ ಸುಲಭದ ಮಾರ್ಗ – ಸಹಜ ಮತ್ತು ನೈಜ ಧನ್ಯವಾದ ಅರ್ಪಣೆ, ಎಲ್ಲ ಬಿಗುಮಾನ, ಸಂಕೋಚ, ನಾಚಿಕೆ ಬಿಟ್ಟು ಧನ್ಯವಾದ, ಥ್ಯಾಂಕ್ ಯು ಹೇಳುವುದು. ಥ್ಯಾಂಕ್ ಯು ಎನ್ನುವ ಶಬ್ದದ ಸಮಂಜಸ ಬಳಕೆ ಸಮಾಜದ ಮತ್ತು ಜೀವನದ ದಿಶೆಯನ್ನೇ ಬದಲಿಸುವಷ್ಟು ಶಕ್ತಿಯುತ ಮತ್ತು ಪ್ರಭಾವಶಾಲಿ. ಅಂದಹಾಗೆ ಈ ಇಡೀ ಲೇಖನ ಓದಿದ್ದಕ್ಕೆ ಥ್ಯಾಂಕ್ ಯು – ಧನ್ಯವಾದ.