Thursday, 19th September 2024

ಪತಿಯಷ್ಟೇ ಪ್ರಖರ ವರ್ಚಸ್ಸಿನ ಸತಿ : ಅರುಂಧತಿ

ತಿಳಿರು ತೋರಣ
ಶ್ರೀವತ್ಸ ಜೋಶಿ

ಅರುಂಧತೀ… ಅರುಂಧತಿ… ಎಲ್ಲಿದ್ದಿ ಮಗಳೇ?’ ತಾಯಿ ದೇವಹೂತಿಯು ಮಗಳನ್ನು ಹುಡುಕುತ್ತ, ‘ಹಸುಗಳ ಹಾಲು ಕರೆಯ ಲಿಕ್ಕಿದೆ. ನೀನು ಅವುಗಳಿಗೆ ಮೇವು ತಿನ್ನಿಸಿ ಆಯ್ತೇ?’ ಎಂದು ಕೇಳಿದಳು. ಅರುಂಧತಿಯಾದರೋ ಅಲ್ಲಿ ತಂದೆಯು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತ ತನ್ನದೇ ಪ್ರಪಂಚದಲ್ಲಿ ಮುಳುಗಿದ್ದಳು.

ತಂದೆ ಅಂಥಿಂಥ ವ್ಯಕ್ತಿಯಲ್ಲ, ವೇದ – ಪುರಾಣಗಳನ್ನೆಲ್ಲ ಅರಗಿಸಿಕೊಂಡು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದ ಕರ್ದಮ
ಮಹರ್ಷಿ. ಅರುಂಧತಿ ಅಲ್ಲಿಂದಲೇ ನುಡಿದಳು: ‘ತಂದೆಯವರು ಹೇಳಿಕೊಡುತ್ತಿರುವ ಪಾಠಗಳು ಈ ಮನೆಗೆಲಸಗಳಿಗಿಂತ ತುಂಬ
ಕುತೂಹಲಕಾರಿಯಾಗಿವೆ ಅಮ್ಮಾ, ಇನ್ನೊಂದು ಸ್ವಲ್ಪ ಹೊತ್ತು ಕೇಳಿ ಬರುತ್ತೇನೆ!’ ದೇವಹೂತಿ ಹುಸಿಮುನಿಸಿನಿಂದ ‘ಹೂಂ.
ತಂದೆಯ ಪಾಠಗಳಂತೆ. ಇನ್ನೇನು ಕೆಲ ದಿನಗಳಲ್ಲೇ ಇವಳ ಮದುವೆ. ಆ ಪಾಠಗಳೆಲ್ಲ ನಿನ್ನಂಥ ಹುಡುಗಿಯರಿಗೆ ಅಲ್ಲ!’ ಎಂದು ಗೊಣಗಿದಳು.

ಅದನ್ನೂ ಕೇಳಿಸಿಕೊಂಡ ಅರುಂಧತಿ ‘ಯಾರು ಹೇಳಿದ್ದು? ನಮಗೂ ಅವು ಪಾಠಗಳೇ. ಈ ದಿನ ತಂದೆಯವರು ಶಿವಪುರಾಣದಿಂದ ಉಮಾಮಹೇಶ್ವರರ ಅರ್ಧನಾರಿ ವಿಚಾರವನ್ನು ವಿವರಿಸುತ್ತಿದ್ದರು. ಪರಮೇಶ್ವರನು ತನ್ನ ಪತ್ನಿ ಪಾರ್ವತಿ ನಿಜವಾಗಿಯೂ ತನ್ನ ಅರ್ಧಾಂಗಿನಿ, ಅಂದರೆ ತನ್ನ ದೇಹದ್ದೇ ಒಂದು ಭಾಗವೆಂಬಂತೆ ಇರುವವಳು ಎಂದು ಒಪ್ಪಿಕೊಂಡಿದ್ದಾನೆ. ಆ ಮೂಲಕ ಸತಿ – ಪತಿ ಸಂಬಂಧ ಅನುರಾಗದ ಅನುಬಂಧ ಹೇಗಿರಬೇಕು ಎನ್ನುವ ಧರ್ಮವನ್ನು ನಮಗೆಲ್ಲ ಕಲಿಸಿಕೊಟ್ಟಿದ್ದಾನೆ!’ ಎಂದು ತಾಯಿಗೆ ಉತ್ತರಿಸಿದಳು.

ಅರುಂಧತಿಗೆ ಆಗಿನ್ನೂ ಹದಿನಾಲ್ಕು ವರ್ಷ ಪ್ರಾಯ. ಗುರುಕುಲದಲ್ಲಿದ್ದ ಇತರ ವಿದ್ಯಾರ್ಥಿಗಳ ಜೊತೆಗೂಡಿ ತನ್ನ ತಂದೆಯಿಂದ ವೇದವಿದ್ಯೆ ಕಲಿಯುವುದೆಂದರೆ ಅವಳಿಗೆ ಎಲ್ಲಿಲ್ಲದ ಉತ್ಸಾಹ. ತನ್ನ ಮನೆ, ತಂದೆಯ ಗುರುಕುಲ, ಸುತ್ತಲಿನ ಪರಿಸರ ಎಲ್ಲವನ್ನೂ ಅಪಾರವಾಗಿ ಮೆಚ್ಚುತ್ತ ಅವಳು ಸಂತಸದ ದಿನಗಳನ್ನು ಕಳೆದಿದ್ದಳು. ಈಗಿನ್ನು ಅವಳ ಮದುವೆ, ವಸಿಷ್ಠನೆಂಬ ಮಹಾ ಮೇಧಾವಿ ಋಷಿಯೊಂದಿಗೆ. ಬುದ್ಧಿಶಕ್ತಿ ಮತ್ತು ಪಾಂಡಿತ್ಯವನ್ನು ಯಾವತ್ತಿಗೂ ಗೌರವಿಸುತ್ತಿದ್ದ ಅರುಂಧತಿಗೆ ವಸಿಷ್ಠ ಮಹರ್ಷಿಯಲ್ಲಿ ಆಕರ್ಷಣೆ ಮೂಡಿದ್ದು ಸಹಜ. ಅಷ್ಟೇ ಅಲ್ಲ ಅದೇ ಕಾರಣಕ್ಕೆ ಆಮೇಲೆ ಹೊಂದಾಣಿಕೆಯಿಂದ ಬಾಳುವುದೂ ಸಾಧ್ಯವಾಯಿತು.

ಮನೆಗೆಲಸಗಳನ್ನೆಲ್ಲ ಬೇಗಬೇಗ ಮಾಡಿ ಮುಗಿಸಿ, ವಿದ್ಯಾರ್ಥಿಗಳಿಗೆ ವೇದವಿದ್ಯೆ ಕಲಿಸುತ್ತಿದ್ದ ಪತಿಯ ಬಳಿ ಹೋಗಿ ಕುಳಿತುಕೊಳ್ಳು ವಳು. ಋಗ್ವೇದ, ಯಜುರ್ವೇದ, ಸಾಮವೇದಗಳನ್ನೆಲ್ಲ ಅರೆದು ಕುಡಿದಿದ್ದವಸಿಷ್ಠರದು ಪ್ರಖರ ವರ್ಚಸ್ಸು. ಅವರ ಪಾಠದಿಂದ ಇತರ ವಿದ್ಯಾರ್ಥಿಗಳಿಗಿಂತಲೂ ಶೀಘ್ರವಾಗಿ ಅರುಂಧತಿ ಕಲಿತಳು; ವೇದಗಳನ್ನೆಲ್ಲ ವ್ಯಾಖ್ಯಾನ ಮಾಡುವಷ್ಟು ಪರಿಣತಳಾದಳು. ಒಂದು ದಿನ ವಸಿಷ್ಠರು ಮನುಷ್ಯನ ಆಲೋಚನೆ ಮತ್ತು ಆಚರಣೆಗಳಲ್ಲಿ ಶುದ್ಧತೆ ಮತ್ತು ಬದ್ಧತೆ, ಎಲ್ಲರಿಗೂ  ಒಳಿತನ್ನು ಬಯಸುವ ನಿಸ್ವಾರ್ಥ ಕಾರ್ಯತತ್ಪರತೆಗಳು ಹೇಗೆ ಧರ್ಮದ ಮುಖ್ಯ ಭಾಗವಾಗಿವೆ ಎಂಬುದನ್ನು ವಿವರಿಸುತ್ತಿದ್ದರು. ‘ಇಲ್ಲಿಂದ ಪಾಠವನ್ನು ನಾನು ಮುಂದುವರಿಸಲೇ?’ ಎಂದಳು ಅರುಂಧತಿ.

ಗುರುವಿನ ಅನುಗ್ರಹ ಪಡೆದು ಪಾಠ ಆರಂಭಿಸಿಯೇಬಿಟ್ಟಳು! ಅವಳ ವಿಚಾರತೀಕ್ಷ್ಣತೆ ಮತ್ತು ಬೋಧನಾ ಸಾಮರ್ಥ್ಯಗಳನ್ನು ನೋಡಿ ವಸಿಷ್ಠರು ಅವಾಕ್ಕಾದರು. ‘ನೀನು ನಿಜವಾಗಿಯೂ ನನ್ನ ಅರ್ಧಾಂಗಿನಿ. ಇನ್ನು ಮುಂದೆ ನೀನು ನನ್ನ ತರಗತಿಗಳಲ್ಲಿ
ಬೋಧಕಿಯಾಗಬಹುದು’ ಎಂದು ಆಶೀರ್ವದಿಸಿದರು. ವಸಿಷ್ಠ – ಅರುಂಧತಿ ದಂಪತಿಗೆ ಬ್ರಹ್ಮನು ಕಾಮಧೇನುವಿನ ಹೆಣ್ಣು ಕರು ನಂದಿನಿಯನ್ನು ಉಡುಗೊರೆಯಾಗಿ ಕೊಟ್ಟನು.

ನಂದಿನಿಯೂ ಕಾಮಧೇನುವಿನಂತೆಯೇ ಬೇಡಿದ್ದನ್ನು ಕೊಡುವ ಹಸು. ಆ ಬೇಡಿಕೆ ಸ್ವಾರ್ಥದ್ದಾಗಿರಬಾರದು, ಪರರ ಒಳಿತಿಗಾಗಿ
ಇರಬೇಕು ಅಷ್ಟೇ. ವಸಿಷ್ಠ – ಅರುಂಧತಿಯರಾದರೂ ತಮಗೆ ನಂದಿನಿ ದೊರೆತಿದ್ದಕ್ಕೆ ಬ್ರಹ್ಮನಿಗೆ ಕೃತಜ್ಞರಾಗಿದ್ದು, ನಂದಿನಿಯ
ವಿಶೇಷ ಶಕ್ತಿಯನ್ನು ಪರರ ಉಪಯೋಗಕ್ಕೆ ಮಾತ್ರ ಬಳಸುತ್ತಿದ್ದರು. ಇಂತಿರಲು ಒಮ್ಮೆ ವಿಶ್ವಾಮಿತ್ರ ಮಹಾರಾಜನು ತನ್ನ
ಪಂಗಡ ಸಮೇತ ಬೇಟೆಗೆ ಹೋದವನು ಅರಮನೆಗೆ ಹಿಂದಿರುಗುತ್ತಿದ್ದಾಗ ಬಳಲಿಕೆಯ ನಿವಾರಣೆಗೆಂದು ವಸಿಷ್ಠರ ಆಶ್ರಮಕ್ಕೆ
ಬಂದನು. ‘ನನಗೆ ಕುಡಿಯಲಿಕ್ಕೆ ಸ್ವಲ್ಪ ನೀರು ಸಿಗಬಹುದೇ?’ ಎಂದಷ್ಟೇ ಆತ ಕೇಳಿದ್ದು, ಆ ಗುಡಿಸಲಿನಲ್ಲಿ ಇನ್ನೇನು ತಾನೆ
ಸಿಕ್ಕೀತು ಎಂಬ ತಾತ್ಸಾರಭಾವದಿಂದ. ಆದರೆ ಅಲ್ಲಿ ಆತನ ಪರಿವಾರಕ್ಕೆಲ್ಲ ಊಟ ಉಪಚಾರದ ಭಾರೀ ಸತ್ಕಾರವೇ ನಡೆಯಿತು.

ಹೊಸ ಬಟ್ಟೆೆಗಳನ್ನು ನೀಡಲಾಯಿತು. ಆವತ್ತು ರಾತ್ರಿ ಎಲ್ಲರೂ ಅಲ್ಲೇ ವಿಶ್ರಾಂತಿ ಪಡೆದರು. ಮಾರನೆದಿನ ಬೆಳಗ್ಗೆಯೂ ಅದೇ ರೀತಿ. ಎಲ್ಲರಿಗೂ ಬಿಸಿಬಿಸಿ ಹಾಲು, ಪುಷ್ಕಳ ಫಲಾಹಾರ ಸಿದ್ಧವಾಗಿತ್ತು. ಅಷ್ಟು ಚಿಕ್ಕ ಗುಡಿಸಲಿನಲ್ಲಿ ಇದೆಲ್ಲಹೇಗೆ ಸಾಧ್ಯವಾಯಿತು ಎಂದು ವಿಶ್ವಾಮಿತ್ರನಿಗೆ ಆಶ್ವರ್ಯ. ಕೊನೆಗೆ ವಸಿಷ್ಠರನ್ನೇ ಕೇಳಿದಾಗ ಅವರು ನಂದಿನಿಯ ಮಹಿಮೆಯನ್ನು ಬಣ್ಣಿಸಿದರು. ವಿಶ್ವಾಮಿತ್ರನ ಸ್ವಾರ್ಥಬುದ್ಧಿ ಒಡನೆಯೇ ಜಾಗೃತವಾಯಿತು. ‘ಓಹೋ! ಈ ಹಸುವೇ ನಂದಿನಿಯೇ? ಕೇಳಿದ್ದೆ ನಾನು ಈಕೆಯ ಬಗ್ಗೆೆ. ಇಂಥ ವಿಶೇಷ ಶಕ್ತಿಯಿರುವ ನಂದಿನಿಗೆ ಇಲ್ಲಿ ಈ ಗುಡಿಸಲಿನಲ್ಲೇನು ಕೆಲಸ? ಇವಳು ಇರಬೇಕಾದ್ದು ನನ್ನ ಅರಮನೆಯ ಗೋಶಾಲೆಯಲ್ಲಿ!’ ಎಂದುಬಿಟ್ಟನು. ‘ಆದರೆ ನಂದಿನಿಯು ನಮ್ಮನ್ನು ಬಿಟ್ಟುಹೋಗುವಂತಿಲ್ಲ. ನಮ್ಮನ್ನು ನೋಡಿಕೊಳ್ಳಲಿಕ್ಕೆಂದೇ ಬ್ರಹ್ಮನು ಅವಳನ್ನು ಕಳುಹಿಸಿದ್ದು. ಬೇರೆಡೆ ಅವಳು ವಾಸಿಸಲಾರಳು. ಅಲ್ಲಿ ಇವಳಿಗೆ ವಿಶೇಷ ಶಕ್ತಿಯೂ ಇರಲಾರದು’ ಎಂದು ವಸಿಷ್ಠರು ತಿಳಿಹೇಳಿದರು. ಆದರೆ ವಿಶ್ವಾಮಿತ್ರ ಎಲ್ಲಿ ಕೇಳುತ್ತಾನೆ? ‘ನಂದಿನಿಯ ಬದಲಿಗೆ ನಾನು ನಿಮಗೆ ಸಾವಿರ ಹಸುಗಳನ್ನು ಕೊಡುತ್ತೇನೆ. ಅವಳನ್ನು ಕೊಟ್ಟುಬಿಡಿ ನನಗೆ’ ಎಂದು ಒತ್ತಾಯಿಸಿದನು.

ವಸಿಷ್ಠರು ಎಷ್ಟು ಬುದ್ಧಿವಾದ ಹೇಳಿದರೂ ವಿಶ್ವಾಮಿತ್ರ ಬಿಡಲಿಲ್ಲ. ನಂದಿನಿಯನ್ನು ಎಳೆದು ತರುವಂತೆ ತನ್ನ ಭಟರಿಗೆ ಆಜ್ಞಾಪಿ
ಸಿದನು. ಸುಮ್ಮನಿರಲು ನಂದಿನಿಯೇನು ಸಾಮಾನ್ಯ ಹಸುವೇ? ವಿಶ್ವಾಮಿತ್ರನ ಭಟರನ್ನೆಲ್ಲ ತಿವಿದು, ಕಾಲಿಂದ ಒದ್ದು ಚೆಲ್ಲಾಪಿಲ್ಲಿ ಯಾಗಿಸಿದಳು. ಅವರು ದಿಕ್ಕೆಟ್ಟು ಓಡತೊಡಗಿದರು. ವಿಶ್ವಾಮಿತ್ರ ಹತಾಶನಾಗಿ ಬರಿಗೈಯಲ್ಲಿ ತನ್ನ ಅರಮನೆಗೆ ಹಿಂದಿರುಗಿದನು.
ಆದರೂ ನಂದಿನಿ ಸಿಗಲಿಲ್ಲವಲ್ಲ ಎಂಬ ಕೊರಗು ಅವನನ್ನು ಬಾಧಿಸುತ್ತಿತ್ತು. ಅದಕ್ಕೋಸ್ಕರ ತಾನೂ ವಸಿಷ್ಠನಂತೆಯೇ
ಆಗುವೆನೆಂದು ನಿರ್ಧರಿಸಿದನು; ರಾಜ್ಯತ್ಯಾಗ ಮಾಡಿ ಘೋರ ತಪಸ್ಸನ್ನಾಚರಿಸಿದನು; ಆಮೇಲೆ ಋಷಿಯೂ ಆದನು. ಈ ನಡುವೆ ನಂದಿನಿಯ ಮೇಲೆ ಅಷ್ಟವಸುಗಳ ಕಣ್ಣು ಬಿತ್ತು. ಅವರು ಇಂದ್ರನ ಸೇವಕರು. ಅರುಂಧತಿ ಮತ್ತು ವಸಿಷ್ಠರು ಆಶ್ರಮದಲ್ಲಿ ರಾತ್ರಿ ಹೊತ್ತು ಗಾಢ ನಿದ್ದೆೆಯಲ್ಲಿದ್ದಾಗ, ವಸುಗಳ ಪೈಕಿ ಪ್ರಭಾಸ ಎಂಬುವವನು ಕಳ್ಳಹೆಜ್ಜೆ ಇಟ್ಟುಕೊಂಡು ಆಶ್ರಮಕ್ಕೆ ಬಂದನು.

ಬೆಳಗಿನ ಜಾವದಲ್ಲಿ ನಂದಿನಿಯ ಬಳಿ ಹೋಗಿ ತನ್ನೊಂದಿಗೆ ಬರುವಂತೆ ಕೇಳಿಕೊಂಡನು. ಅಷ್ಟವಸುಗಳೆಂದರೆ ದೇವತೆಗಳಿ ದ್ದಂತೆಯೇ, ಹಾಗಾಗಿ ಇದು ಮೋಸವಿರಲಿಕ್ಕಿಲ್ಲ ಎಂದು ನಂಬಿದ ನಂದಿನಿಯು ಪ್ರಭಾಸನ ಹಿಂದೆ ಹೋದಳು. ಬೆಳಗ್ಗೆ ಅರುಂಧತಿ ಎದ್ದು ಕೊಟ್ಟಿಗೆಗೆ ಹೋಗಿ ನೋಡಿದರೆ ನಂದಿನಿ ನಾಪತ್ತೆೆ! ಗಾಬರಿಗೊಂಡ ಆಕೆಗೆ ದುಃಖ ಉಮ್ಮಳಿಸಿತು. ವಸಿಷ್ಠರಿಗೆ ದಿವ್ಯದೃಷ್ಟಿ ಯಿಂದ ಇದು ಪ್ರಭಾಸನದೇ ಕೃತ್ಯವೆಂದು ಗೊತ್ತಾಯಿತು. ಎಂದೂ ಉಗ್ರರೂಪಿಯಾಗದವರಿಗೆ ಆವತ್ತು ಸಿಟ್ಟು ಬಂತು. ಭೂಲೋಕದಲ್ಲಿ ಹುಟ್ಟುವಂತೆ ಅಷ್ಟವಸುಗಳಿಗೆ ಶಾಪವಿತ್ತರು. ಅದರಂತೆ ಗಂಗೆಯು ಶಂತನುವನ್ನು ಮದುವೆಯಾದಾಗ
ಅವಳ ಎಂಟು ಜನ ಮಕ್ಕಳಾಗಿ ಹುಟ್ಟಿದರು. ಅವರಲ್ಲೊಬ್ಬನೇ ಭೀಷ್ಮ. ಇತ್ತ ವಸಿಷ್ಠರ ಆಶ್ರಮದಿಂದ ನಂದಿನಿ ಹೊರಟುಹೋದ
ಮೇಲೆ ಜೀವನ ದುರ್ಭರವಾಯಿತು. ಗಾಯದ ಮೇಲೆ ಬರೆ ಎಂಬಂತೆ ಕ್ಷಾಮ ಪರಿಸ್ಥಿತಿ ಬಂತು.

ವಸಿಷ್ಠರು ಅರುಂಧತಿಯ ಬಳಿ ‘ಲೋಕಕಲ್ಯಾಣಕ್ಕಾಗಿ ಕೆಲವು ಋಷಿಗಳು ಹಿಮಾಲಯಕ್ಕೆ ಹೋಗಿ ತಪಸ್ಸನ್ನಾಚರಿಸಲು ನಿರ್ಧರಿಸಿ ದ್ದಾರೆ. ನಾನೂ ಅವರೊಡನೆ ಹೋಗಬೇಕಾಗಿದೆ. ಕೆಲ ದಿನಗಳಲ್ಲೇ ಹಿಂದಿರುಗುತ್ತೇನೆ’ ಎಂದು ಹೇಳಿ ಉತ್ತರಕ್ಕೂ ಕಾಯದೆ ಹೊರಟೇಬಿಟ್ಟರು. ಅರುಂಧತಿ ಒಬ್ಬಂಟಿಗಳಾಗಿ ಆಶ್ರಮವನ್ನು ನೋಡಿಕೊಳ್ಳಬೇಕಾಯಿತು. ಕ್ರಮೇಣ ಗುರುಕುಲವನ್ನೂ ಮುಚ್ಚಲಾಯಿತು. ಅತ್ತ ಹಿಮಾಲಯದಲ್ಲಿ ಭೀಕರ ಹಿಮಪಾತವಾಗಿ ದಾರಿಗಳೆಲ್ಲ ಮುಚ್ಚಿದ್ದರಿಂದ ತಪಸ್ಸಿಗೆ ಹೋದ ಋಷಿಗಳು ಅಲ್ಲೇ ಉಳಿಯಬೇಕಾಯಿತು. ಸತಿ ಅರುಂಧತಿ ಕ್ಷೇಮವಾಗಿ ಇರುವಂತೆ ವಸಿಷ್ಠರೂ, ಪತಿಯು ಕ್ಷೇಮದಿಂದಿರುವಂತೆ ಅರುಂಧತಿ ಯೂ ಉಮಾಮಹೇಶ್ವರರನ್ನು ಬೇಡಿಕೊಳ್ಳುತ್ತಲೇ ಇದ್ದರು.

ತಿಂಗಳುರುಳಿದವು. ಒಂದು ದಿನ ಆಶ್ರಮದ ಬಾಗಿಲು ಬಡಿದ ಶಬ್ದವನ್ನು ಕೇಳಿ ಅರುಂಧತಿ ಬಾಗಿಲು ತೆರೆಯಲು ಬಂದಾಗ
ಅಲ್ಲೊಬ್ಬ ಪುಟ್ಟ ಬಾಲಕ ಹಸಿನಿಂದ ಕಂಗಾಲಾಗಿ ನಿಂತಿದ್ದ. ‘ಅಮ್ಮಾ, ನನಗೆ ಹಸಿವೆಯಾಗಿದೆ. ತಿನ್ನಲಿಕ್ಕೆ ಏನನ್ನಾದರೂ ಕೊಡುವೆಯಾ?’ ಎಂದು ಕೇಳಿದ. ಕಷ್ಟದಲ್ಲಿ ದಿನ ದೂಡುತ್ತಿದ್ದ ಅರುಂಧತಿಯ ಬಳಿ ಏನಿತ್ತು ತಿನ್ನಲಿಕ್ಕೆ? ‘ಇಲ್ಲ ಮಗೂ. ಮನೆ ಯಲ್ಲಿ ದವಸಧಾನ್ಯಗಳಿಲ್ಲ. ಅನ್ನ ಮಾಡಿ ಬಡಿಸಲಾರೆ. ಆದರೆ ಪೀಚಲಾಗಿರುವ ಒಂದಿಷ್ಟು ಬೋರೆ ಹಣ್ಣುಗಳಿವೆ. ತೆಗೆದುಕೋ’ ಎಂದು ತಿನ್ನಲಿಕ್ಕೆ ಕೊಟ್ಟಳು.

ಹಸಿವೆ ನೀಗಿಸಿಕೊಂಡ ಬಾಲಕನು ‘ಅಮ್ಮಾ, ವಸಿಷ್ಠ ಮುನಿಗಳ ಆಶ್ರಮ ಇದೇ ತಾನೆ? ಅವರು ಮನೆಯಲ್ಲಿಲ್ಲವೇ? ನಾನು ಅವರ ಬಳಿ ವಿದ್ಯೆೆ ಕಲಿಯಬೇಕೆಂದು ಬಂದಿದ್ದೇನೆ’ ಎಂದನು. ಅರುಂಧತಿಯು ‘ಅವರೀಗ ಇಲ್ಲಿಲ್ಲ. ಆದರೆ ನಾನೂ ವಿದ್ಯೆೆ ಕಲಿಸಬಲ್ಲೆ. ನೀನು ನನ್ನ ವಿದ್ಯಾರ್ಥಿಯಾಗಬಹುದು’ ಎಂದುತ್ತರಿಸಿದಳು. ಬಾಲಕ ಒಪ್ಪಿದನು. ಸರಿಸುಮಾರು ಒಂದು ವರ್ಷ ಕಳೆದ ಮೇಲೆ ಋಷಿಗಳು ಹಿಮಾಲಯದಿಂದ ಆಶ್ರಮಗಳತ್ತ ಹಿಂದಿರುಗುವುದು ಸಾಧ್ಯವಾಯಿತು. ಅಷ್ಟು ಹೊತ್ತಿಗೆ ಅರುಂಧತಿ ತನಗೆ ಗೊತ್ತಿದ್ದ ವಿದ್ಯೆೆಯನ್ನೆಲ್ಲ ಆ ಬಾಲಕನಿಗೆ ಕಲಿಸಿ ಆಗಿತ್ತು. ವಸಿಷ್ಠರು ಆಶ್ರಮಕ್ಕೆ ಮರಳಿದಾಗ ಅರುಂಧತಿ ಹಿಗ್ಗಿನಿಂದ ಉಬ್ಬಿದಳು.

ಅವಳ ಸಂತೋಷಕ್ಕೆ ಇನ್ನೊಂದು ಕಾರಣವೂ ಇತ್ತು. ಬಾಲಕನನ್ನು ತೋರಿಸಿ ‘ನೋಡಿ. ಈತ ನನ್ನ ವಿದ್ಯಾಾರ್ಥಿ. ನನಗೆ ಗೊತ್ತಿರು ವುದನ್ನೆಲ್ಲ ಕಲಿಸಿದ್ದೇನೆ. ಉಮಾಮಹೇಶ್ವರನ ದಯೆಯಿಂದ ಈಗ ನೀವೂ ಸುಖರೂಪವಾಗಿ ಹಿಂದಿರುಗಿದಿರಿ’ ಎಂದಳು. ವಸಿಷ್ಠರು ಆ ಬಾಲಕನತ್ತ ದೃಷ್ಟಿ ಹಾಯಿಸಿದಾಗ ಅಲ್ಲಿ ಕಂಡದ್ದೇನು!? ಸಾಕ್ಷಾತ್ ಉಮಾಮಹೇಶ್ವರ! ದೇವರು ಅರುಂಧತಿಯತ್ತ ತಿರುಗಿ ‘ನಾನೇ ನಿನ್ನ ವಿದ್ಯಾರ್ಥಿಯಾಗಿದ್ದವನು. ನಿನ್ನನ್ನು ನೋಡಿಕೊಳ್ಳುವ ಹೊಣೆಯನ್ನು ನಿನ್ನ ಗಂಡ ನನಗೊಪ್ಪಿಸಿದ್ದನು, ನಾನ ದನ್ನು ನಿರಾಕರಿಸಲಿಲ್ಲ’ ಎಂದು ಹೇಳಿ ವಸಿಷ್ಠರತ್ತ ತಿರುಗಿ ‘ನಿನ್ನ ಯೋಗಕ್ಷೇಮಕ್ಕಾಗಿ ಅರುಂಧತಿ ಮಾಡಿದ ತ್ಯಾಗ – ತಪಸ್ಸು
ಮತ್ತೂ ಹೆಚ್ಚಿನದು. ಆಕೆ ನಿಜಕ್ಕೂ ನಿನ್ನ ಅರ್ಧಾಂಗಿನಿ. ಇನ್ನು ನೀಬ್ಬರೂ ಸದಾ ಒಟ್ಟಿಗೇ ಸುಖವಾಗಿ ಬಾಳುವಿರಿ’ ಎಂದು ಹೇಳಿ
ಅಂತರ್ಧಾನನಾದನು.

ಪಾತಿವ್ರತ್ಯ, ಪರಿಶುದ್ಧತೆ, ಮತ್ತು ಮಿತಭೋಗಿತ್ವ ಈ ಎಲ್ಲ ಸದ್ಗುಣಗಳ ಗಣಿ ಅರುಂಧತಿ. ಹಲವಾರು ಪುರಾಣಗಳಲ್ಲಿ ಈಕೆಯನ್ನು ಅತ್ಯಂತ ಗೌರವಾನ್ವಿತ ಸ್ತ್ರೀ ಎಂದು ಬಣ್ಣಿಸಲಾಗಿದೆ. ಮೇಲೆ ಬಣ್ಣಿಸಿದ ಕಥೆಯು ಕರ್ದಮ – ದೇವಹೂತಿ ದಂಪತಿಗೆ ಅರುಂಧತಿ ಒಬ್ಬಳೇ ಮಗಳೇನೋ ಎಂಬಂತಿದೆ. ಆದರೆ ಹಾಗಲ್ಲ. ಉರ್ಜಾದೇವಿ ಎಂಬ ಹೆಸರೂ ಇದ್ದ ಅರುಂಧತಿಗೆ ಸಂಭೂತಿ, ಅನಸೂಯಾ, ಸ್ಮತಿ, ಪ್ರೀತಿ, ಕ್ಷಮಾ, ಮತ್ತು ಸನ್ನತಿ ಎಂಬ ಆರು ಸಹೋದರಿಯರೂ, ಕಪಿಲನೆಂಬ ಸಹೋದರನೂ ಇದ್ದರು ಎನ್ನುತ್ತವೆ ಬೇರೆ ಕೆಲವು ಆಕರಗಳು.

ಸ್ವಾಯಂಭುವ ಮನ್ವಂತರದ ಸಪ್ತರ್ಷಿಗಳಾದ ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ – ಈ ಏಳು ಋಷಿಗಳ ಪತ್ನಿಯರಾದರು ಏಳು ಜನ ಅಕ್ಕತಂಗಿಯರು. ಒಮ್ಮೆ ಅಗ್ನಿಯು ಸಪ್ತರ್ಷಿಗಳ ಪತ್ನಿಯರನ್ನು ಕಾಮಿಸಿದ್ದನಂತೆ. ಆರು ಸಹೋದರಿಯರು ಅಗ್ನಿಯ ಮೋಹಜಾಲಕ್ಕೆೆ ಬಿದ್ದರು. ಅಗ್ನಿಪ್ರಣಯಕ್ಕೆೆ ಒಪ್ಪಿದರು. ಅರುಂಧತಿ ಒಪ್ಪಲಿಲ್ಲ. ಅಲ್ಲದೆ ಅಗ್ನಿಯ ಹೆಂಡತಿ ಸ್ವಾಹಾಳೇ ಈ ಎಲ್ಲ ಋಷಿಪತ್ನಿಯರ ರೂಪ ಧರಿಸಿ ಅಗ್ನಿಯನ್ನು ತೃಪ್ತಿಗೊಳಿಸುತ್ತೇನೆಂದು ಹಾಗೆ ಮಾಡಿದಾಗ ಆರು ಸೋದರಿಯರ ರೂಪವನ್ನೇನೋ ಧರಿಸಿದಳಾದರೂ ಅರುಂಧತಿಯ ರೂಪವನ್ನು ಧರಿಸುವುದು ಆಕೆಯಿಂದ ಸಾಧ್ಯವಾಗಲಿಲ್ಲ ವಂತೆ.

ಅರುಂಧತಿಯ ಪಾತಿವ್ರತ್ಯ ಪರಿಶುದ್ಧತೆ ಶ್ರೇಷ್ಠವಾದದ್ದು, ಅಪ್ಪಟ ಚಿನ್ನದಂಥದ್ದು ಎಂಬುದು ಆ ಕಥೆಯ ಸಾರ. ಅರುಂಧತಿಯ ಹುಟ್ಟಿನ ಬಗ್ಗೆ ಬೇರೆಯೇ ಒಂದು ಸ್ವಾರಸ್ಯಕರ ಕಥೆಯೂ ಇದೆ. ಅದರ ಪ್ರಕಾರ, ಬ್ರಹ್ಮನ ಮಾನಸ ಪುತ್ರಿ ಸಂಧ್ಯಾ. ಆಕೆಯಲ್ಲೇ ಬ್ರಹ್ಮನಿಗೆ ಮೋಹವುಂಟಾದಾಗ ಪರಮೇಶ್ವರನು ಬ್ರಹ್ಮನನ್ನು ತೀವ್ರವಾಗಿ ಲೇವಡಿ ಮಾಡುತ್ತಾನೆ. ಕುಪಿತನಾದ ಬ್ರಹ್ಮ ಒಂದಲ್ಲ ಒಂದು ದಿನ ಪರಮೇಶ್ವರನಿಗೂ ಕಾಮವಾಂಛೆ ಬರುವಂತೆ ಮಾಡುತ್ತೇನೆಂದುಕೊಳ್ಳುತ್ತಾನೆ. ಆಗ ವಿಷ್ಣುವು ನೀವು ಒಬ್ಬರಿಗೊಬ್ಬರ ತಂಟೆಗೆ ಹೋಗಬೇಡಿ, ಅನಾವಶ್ಯವಾಗಿ ಲೋಕಕ್ಕೆಲ್ಲ ಅದು ಮಾರಕವಾಗುತ್ತದೆ, ಸುಮ್ಮನಿರಿ ಎಂದು ಮಧ್ಯಸ್ಥಿಕೆ ವಹಿಸುತ್ತಾನೆ. ಆದರೆ ಇದೆಲ್ಲದರಿಂದ ಅವಮಾನಿತಳಾದ ಸಂಧ್ಯಾ ಒಂದು ಸಾವಿರ ವರ್ಷ ಕಾಲ ಅಜ್ಞಾತಳಾಗಿರಲು ಹೋಗುತ್ತಾಳೆ. ಅವಳು ಆಶ್ರಯ ಪಡೆದದ್ದು ವಸಿಷ್ಠರ ಬಳಿ. ಆದರೂ ವಸಿಷ್ಠರು ಆಕೆಗೆ ಮುನಿಯಾಗಿ ಕಾಣಿಸಿಕೊಂಡದ್ದಲ್ಲ, ಒಬ್ಬ ವಿಪ್ರನಾಗಿ. ಅವನ ನಿರ್ದೇಶನದಂತೆ ಸಂಧ್ಯಾ ಶಿವನನ್ನು ಕುರಿತು ತಪಸ್ಸು ಮಾಡುತ್ತಾಳೆ. ಫಲಕಾರಿಯಾಗದಿದ್ದಾಗ ಯಜ್ಞಕುಂಡಕ್ಕೆ ಹಾರಲು ಯತ್ನಿಸುತ್ತಾಳೆ. ಅಷ್ಟುಹೊತ್ತಿಗೆ  ಪರಶಿವನು ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಹೇಳಿದಾಗ ಸಂಧ್ಯಾ ಕೇಳಿದ್ದು: ತನ್ನ ವಂಶ ದಲ್ಲಾರೂ ಕಾಮಪಿಪಾಸುಗಳಾಬಾರದು; ತಾನು ಪರಿಶುದ್ಧಳಾಗಿ ಹುಟ್ಟಬೇಕು; ಮತ್ತು ತಾನು ಮದುವೆಯಾಗುವ ಪತಿಯನ್ನು ಸೇರಿ ಆದರ್ಶ ದಂಪತಿ ಎನಿಸಬೇಕು ಎಂದು. ಎಲ್ಲದಕ್ಕೂ ತಥಾಸ್ತು ಎಂದ ಪರಮೇಶ್ವರನು ಅವಳಿಗೆ ಯಜ್ಞ ಕುಂಡೊಳಕ್ಕೆ ಹಾರುವಂತೆ ನಿರ್ದೇಶಿಸುತ್ತಾನೆ. ಅವಳ ಸುಟ್ಟ ದೇಹದಿಂದ ಪ್ರಾಣವಾಯುವು ಸೌರಮಂಡಲಕ್ಕೆ ಹೋಗಿ ಸೂರ್ಯನು ಅದನ್ನು ಪ್ರಾತಃಸಂಧ್ಯಾ, ಮಾಧ್ಯಾಹ್ನಿಕಸಂಧ್ಯಾ, ಮತ್ತು ಸಾಯಂಸಂಧ್ಯಾ ಎಂದು ಮೂರು ಗುರುತುಗಳಾಗಿಸು ತ್ತಾನೆ. ಯಜ್ಞಕುಂಡದಿಂದ ಉದ್ಭಸಿದ ಸುಂದರ ಬಾಲಿಕೆಯನ್ನು ನೋಡಿ ಅಲ್ಲಿದ್ದ ಋಷಿಮುನಿಗಳಿಗೆ ಬೆರಗು. ಆಕೆಗೆ ಅರುಂಧತಿ ಎಂಬ ಹೆಸರನ್ನಿಡುತ್ತಾರೆ. ಮುಂದೆ ದೊಡ್ಡವಳಾಗಿ ಆಕೆ ವಸಿಷ್ಠರನ್ನು ಮದುವೆಯಾಗುತ್ತಾಳೆ. ಮತ್ತೊಂದು ಕಥೆಯ ಪ್ರಕಾರ, ಕಶ್ಯಪ ಮುನಿಯ ಮಗಳಾಗಿ, ನಾರದ ಮತ್ತು ಪರ್ವತರ ಸೋದರಿಯಾಗಿ ಹುಟ್ಟಿದ ಅರುಂಧತಿ, ನಾರದರ ಮಾತಿನಂತೆ ವಸಿಷ್ಠ ರನ್ನು ವಿವಾಹವಾಗುತ್ತಾಳೆ.

ಒಟ್ಟಿನಲ್ಲಿ, ಅರುಂಧತಿಯ ಹುಟ್ಟಿನ ಬಗ್ಗೆ ಬೇರೆಬೇರೆ ಕಥೆಗಳಿದ್ದರೂ ವಸಿಷ್ಠರನ್ನು ಮದುವೆಯಾಗುವ ವಿಚಾರಕ್ಕೆ ಬಂದಾಗ ಆ ಕಥೆಗಳೆಲ್ಲವೂ ಒಂದೇ ಬಿಂದುನಲ್ಲಿ ಸಂಗಮವಾಗುತ್ತವೆ. ಅರುಂಧತಿ – ವಸಿಷ್ಠರ ನೂರು ಮಕ್ಕಳು ವಿಶ್ವಾಮಿತ್ರನಿಂದಾಗಿ ಹತರಾಗುತ್ತಾರೆ; ಆಮೇಲಿನ ಎಂಟು ಮಕ್ಕಳ ಪೈಕಿ ಒಬ್ಬ ಶಕ್ತಿ ಎಂಬ ಮಗ, ಮೊಮ್ಮಗ ಪರಾಶರ, ಮರಿ ಮಗ ವೇದವ್ಯಾಸ – ಹೀಗೆ ವಂಶವೃಕ್ಷ ಬೆಳೆಯುತ್ತದೆ. ಶಕ್ತಿ ಮತ್ತು ಸುಯಜ್ಞ ಎಂಬ ಇನ್ನೊೊಬ್ಬ ಮಗ ವಸಿಷ್ಠರ ಗುರುಕುಲದಲ್ಲಿ ಶ್ರೀರಾಮನ ಸಹಪಾಠಿಗಳಾಗಿದ್ದರೆಂದು ವಾಲ್ಮೀಕಿ ರಾಮಯಣ ದಲ್ಲಿ ಉಲ್ಲೇಖವಿದೆಯಂತೆ. ರಾಮನು ಸೀತೆಯ ಪರಿತ್ಯಾಗ ಮಾಡಬೇಕಾಗಿ ಬಂದಾಗ ಜನಕಮಹಾರಾಜ, ಅಯೋಧ್ಯೆೆಯ ಪ್ರಜೆಗಳು, ಮತ್ತು ಶ್ರೀರಾಮಚಂದ್ರನ ಮಧ್ಯೆ ಧರ್ಮಸಂಕಟದ ತೀವ್ರ ತೊಳಲಾಟ ಉಂಟಾದಾಗ ಅದನ್ನು ಅತ್ಯಂತ ಸೂಕ್ಷ್ಮ ಜಾಣತನದಿಂದ ಬಗೆಹರಿಸಿದ್ದು ಅರುಂಧತಿ ಎಂಬ ವಿವರಗಳೂ ರಾಮಾಯಣ ದಲ್ಲಿವೆಯಂತೆ. ಕಾಳಿದಾಸನ ಕುಮಾರಸಂಭವ ಕಾವ್ಯದಲ್ಲಿ ಶಿವನು ಪಾರ್ವತಿಯ ಕೈಡಿಯುವಂತೆ ಪ್ರೇರಣೆ ನೀಡಿದ ಕೆಲಸ ಮಾಡಿದ್ದೂ ಅರುಂಧತಿಯೇ.

ಅರುಂಧತಿ ನಿಷ್ಕಳಂಕ, ಸ್ಫೂರ್ತಿದಾಯಕ, ಮತ್ತು ಅನುಸರಣೀಯ ವ್ಯಕ್ತಿತ್ವದವಳು. ಎಲ್ಲರಿಗೂ ಎಂದೆಂದಿಗೂ ಗೌರವಾರ್ಹಳು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಲ್ಲಿ ಹಾಡಿಸುವ ಏಕಾತ್ಮತಾ ಸ್ತೋತ್ರದಲ್ಲಿ ನಿತ್ಯವಂದನೀಯ ಭಾರತೀಯ ಆದರ್ಶನಾರಿಯರ ಹೆಸರುಗಳನ್ನೊಳಗೊಂಡ ಎರಡು ಶ್ಲೋಕಗಳಿವೆ: ‘ಅರುಂಧತ್ಯನಸೂಯಾ ಚ ಸಾತ್ರೀ ಜಾನಕೀ ಸತೀ ದ್ರೌಪದೀ ಕಣ್ಣಗೀ ಗಾರ್ಗೀ ಮೀರಾ ದುರ್ಗಾ ವತೀ ತಥಾ॥ ಲಕ್ಷ್ಮೀರಹಲ್ಯಾ ಚನ್ನಮ್ಮಾ ರುದ್ರಮಾಂಬಾ ಕ್ರಮಾ ನಿವೇದಿತಾ ಶಾರದಾ ಚ ಪ್ರಣಮ್ಯಾ ಮಾತೃದೇವತಾಃ॥’ ಈ ಪಟ್ಟಿಯಲ್ಲಿ ಮೊತ್ತಮೊದಲ ಹೆಸರೇ ಅರುಂಧತಿಯದು!

ಈಕೆ ಪತಿಯಷ್ಟೇ ಪ್ರಖರ ವರ್ಚಸ್ಸುಳ್ಳ ಸತಿ ಎಂಬ ನಂಬಿಕೆಯಿಂದಲೇ ಹಿಂದೂ ಧರ್ಮದಲ್ಲಿ ಈಗಲೂ ವಿವಾಹಮಹೋತ್ಸವ ಸಂದರ್ಭದಲ್ಲಿ ಸಪ್ತಪದಿ ಆದ ಮೇಲೆ ವಧುವಿಗೆ ವರನು ಅರುಂಧತಿ ನಕ್ಷತ್ರವನ್ನು ತೋರಿಸಿ ಆಶೀರ್ವಾದ ಪಡೆಯುವ ಸಂಪ್ರದಾಯವಿರುವುದು. ಅರುಂಧತೀನಕ್ಷತ್ರದರ್ಶನದ ಬಗ್ಗೆೆಇನ್ನಷ್ಟು ಸ್ವಾರಸ್ಯಕರ ವಿವರಗಳನ್ನು ಮುಂದಿನ ವಾರ ತಿಳಿದು ಕೊಳ್ಳೋಣ.