Thursday, 19th September 2024

ಓದುಗರೇ ನಿಜವಾದ ವಿಮರ್ಶಕರು!

ದಾಸ್ ಕ್ಯಾಪಿಟಲ್

ಟಿ.ದೇವದಾಸ್, ಬರಹಗಾರ ಶಿಕ್ಷಕ

ಎಂ.ಎನ್.ವ್ಯಾಸರಾವ್ ಒಮ್ಮೆ ನನ್ನಲ್ಲಿ ಹೇಳಿದ್ದು: ಭಿಕ್ಷುಕನೊಬ್ಬ ಕವಿಯೊಬ್ಬನ ಕವನವನ್ನು ಹಾರ್ಮೋನಿಯಂ, ತಬಲಾ ದೊಂದಿಗೆ ರಾಗ-ಲಯ-ಶ್ರುತಿಬದ್ಧವಾಗಿ ಹಾಡಿ ಜನರನ್ನು ಆಕರ್ಷಿಸುತ್ತ ಜನರ ಬಿಡಿಗಾಸಿನಲ್ಲಿ ನಿತ್ಯದ ಬದುಕನ್ನು ಸಾಗಿಸುತ್ತಾ ನೆಂದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಆ ಕವಿಗೆ, ಕವನಕ್ಕೆ ಬೇರೆ ಯಾವುದಿದೆ? ನೂರಾರು ಸಾವಿರಾರು ಜನರಿಗೆ ಹಾಡನ್ನು ಪರಿಚಯಿ ಸುವ ಅವನಿಂದ ಕವಿಯೊಬ್ಬನ ಪ್ರತಿಭೆಯು ನಿತ್ಯವೂ ಅನಾವರಣವಾಗುತ್ತದೆ.

ಇದೇ ದೊಡ್ಡ ಗೌರವವಲ್ಲವೆ, ಎಂದು! ಯಾಕೆ ಈ ಮಾತು ಹೇಳುತ್ತಿದ್ದೇನೆಂದರೆ, ಹಿಂದಿನ ಬುಧವಾರ ಜಯವೀರರು ಸುಧಾ ಮೂರ್ತಿಯವರ ಸಾಹಿತ್ಯ ಕೃಷಿಯನ್ನು ಕನ್ನಡ ವಿಮರ್ಶಾ ಲೋಕ ಪರಿಗಣಿಸಲಿಲ್ಲವೆಂಬ ವಿಷಾದವನ್ನು, ಆರೋಪವನ್ನು, ತಿರಸ್ಕಾರವನ್ನು ವ್ಯಕ್ತಪಡಿಸಿದ್ದರು. ಸುಧಾಮೂರ್ತಿಯವರ ಬಗ್ಗೆ ಜಯವೀರರು ಬರೆದದ್ದನ್ನು ಸೂಕ್ಷ್ಮವಾಗಿಸಿಕೊಂಡರೆ ಕನ್ನಡ ವಿಮರ್ಶಾ ಪ್ರಪಂಚದ ಒಳಸಿಕ್ಕುಗಳು ಎಷ್ಟು ಕಾಂಪ್ಲಿಕೇಟೆಡ್ ಎಂಬುದನ್ನು ಅರ್ಥೈಸಬಹುದು. ಭಾಷೆ ಯಾರಪ್ಪನ ಸ್ವತ್ತೂ
ಅಲ್ಲ. ಒಂದು ಭಾಷೆಯನ್ನು ಕಲಿಯುವುದು, ವ್ಯವಹರಿಸುವುದು, ಬರೆಯುವುದು, ಓದುವುದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿ ಸಿದ್ದು. ಇದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯ ಅಗತ್ಯವಿರುವುದಿಲ್ಲ. ಯಾವ ಮರದ ತೊಪ್ಪಲು ಬಿದ್ದು ಸುಧಾಮೂರ್ತಿ ಯವರ ಕೃತಿಯು ಪ್ರಚಾರ ಗಿಟ್ಟಿಸಿಕೊಳ್ಳುವ ಅಗತ್ಯವಿಲ್ಲ. ಅದಕ್ಕೆ ಈಗಾಗಲೇಜನಮನ್ನಣೆ ಸಿಕ್ಕಾಗಿದೆ. ಸುಧಾಮೂರ್ತಿಯವರ ಸಮಾಜ ಸೇವೆ, ದಾನ, ಸಾಹಿತ್ಯ ಸೇವೆ, ಮಾನವೀಯ ಅಂತಃಕರಣ ಇತ್ಯಾದಿ ವಿವರಗಳು, ವಿಚಾರಗಳೆಲ್ಲವೂ ಪಬ್ಲಿಕ್ ಸೀಕ್ರೆಟ್. ಸುಧಾಮೂರ್ತಿಯವರು ನೂರು ಕೃತಿಗಳ ಒಡತಿ. ಕೆಲವು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ.

ಸುಧಾಮೂರ್ತಿ ಸಾಹಿತ್ಯ ಪ್ರತಿಷ್ಠಾನದಿಂದ ಪ್ರತಿವರ್ಷವೂ ಉತ್ತರ ಕರ್ನಾಟಕದ ಲೇಖಕಿಯರಿಗೆ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತದೆ. ದೃಷ್ಟಿದೋಷಕ್ಕೆ ಚಿಕಿತ್ಸೆ ಮಾಡಬಹುದು. ಹುಟ್ಟು ಕುರುಡಿದ್ದರೆ ಏನೂ ಮಾಡಲಸಾಧ್ಯ. ಆದರೆ ಒಳಗಣ್ಣು ಕುರುಡಾದರೆ ಯಾವ ಮದ್ದನ್ನು ಕೊಡಲು ಸಾಧ್ಯ? ದ್ವೇಷ, ಮತ್ಸರ, ಪಕ್ಷಪಾತ, ಜಾತಿಪ್ರೀತಿ, ಕೊಂಕು, ಸ್ವಶ್ರೇಷ್ಠತೆ ಇತ್ಯಾದಿ ಮನೋವಿಕಲತೆಗಳು ಒಳಗಣ್ಣು ಕುರುಡಾಗುವುದಕ್ಕೆ ಕಾರಣ. ಇವಕ್ಕೆ ಖಂಡಿತವಾಗಿಯೂ ಮದ್ದಿಲ್ಲ. ಆತ್ಮಾವಲೋಕನದಿಂದ ಸಾಧ್ಯ. ಒಂದು ಸಾಹಿತ್ಯ
ವನ್ನು ಭಾಷಾತೀತ ಗುಣಗಳಿಗಾಗಿ ಓದುವುದಿದೆ. ಭಾಷಾಬದ್ಧತೆಗಾಗಿ ಓದುವುದಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ, ಅವನ ಆಳರಿವನ್ನು, ಸಾಮರ್ಥ್ಯವನ್ನು, ಎತ್ತರವನ್ನು, ಸೃಷ್ಟಿಶೀಲ ತಾಕತ್ತನ್ನು ಮೆಚ್ಚಿ ಅವನ ಕೃತಿಗಳನ್ನು ನೋಡುವ ಪರಿಪಾಠ ವಿದ್ದ ಒಂದು ಕಾಲವಿತ್ತು; ಡಿವಿಜಿ, ಬೇಂದ್ರೆ ಮುಂತಾದವರಿದ್ದ ಕಾಲವದು.

ಕೇವಲ ಇದೊಂದೇ ಅಲ್ಲ, ಪ್ರಶಸ್ತಿಯೂ ಯೋಗ್ಯರಿಗೆ, ಅರ್ಹರಿಗೆ ಸಿಗುವ ಕಾಲವಿತ್ತು. ಈಗ ವಿಮರ್ಶೆಯೂ, ಪ್ರಶಸ್ತಿ ಪ್ರದಾನವೂ ಮೊದಲೇ ಫಿಕ್ಸ್‌ ಎಂಬಂತಿರುತ್ತದೆ. ಬೆಳಗಾಗುವುದರೊಳಗಾಗಿ ಯಾರು ಪ್ರಸಿದ್ಧಿ ಪಡೆಯುತ್ತಾರೋ, ಯಾವ ಕೃತಿ ಫೇಮಸ್ ಆಗಿ ಬಿಡುತ್ತೋ! ವಿಚಿತ್ರ ಅನುಭವಗಳು ಘಟಿಸಿ ಬಿಡುತ್ತವೆ. ಅದು ಕಾರಣವಾಗಿ ಸಾಹಿತ್ಯದಲ್ಲಿ ಶೂದ್ರ ಪ್ರಜ್ಞೆ, ದಲಿತ ಪ್ರಜ್ಞೆ, ಬ್ರಾಹ್ಮಣ ಪ್ರಜ್ಞೆ, ಎಡಪಂಥೀಯ ಪ್ರಜ್ಞೆ ಇವೆಲ್ಲ ಒಂದು ಕೃತಿಯ ಶ್ರೇಷ್ಠತೆಯ ಮಾನದಂಡವಾಗಿ ಏರುಮುಖದ ಕನ್ನಡ ಸಾಹಿತ್ಯ ಹಳಿ ತಪ್ಪಿತು!

ಹಿಂದಣ ಹಾಗೂ ಈಗಣ ಕವಿಗಳು, ಚಿಂತಕರು, ವಿದ್ವಾಂಸರು, ಬರಹಗಾರರು ಮೆಚ್ಚಿಕೆಯಾಗಬೇಕಾದುದು ಅವರ ಚಿಂತನೆ ಗಳಿಂದ, ಮಾನವೀಯ ಮೌಲ್ಯಗಳ ಬೋಧನೆಯಿಂದ. ಆದರೆ ದುರಂತವೆಂದರೆ, ಸಂಸ್ಕೃತವನ್ನು ದ್ವೇಷಿಸುವವರಿಗೆ ವೇದ ವೇದಾಂಗಗಳು, ಗೀತೆ, ಗಾಯತ್ರೀ, ರಾಮಾಯಣ-ಮಹಾಭಾರತ, ಪುರಾಣಗಳು ಭಾರತೀಯ ತತ್ವಶಾಸ್ತ್ರ, ದರ್ಶನಗಳು ದ್ವೇಷರೂಢಿ ಯಾಗಿಯೇ ಬೆಳೆದು ಬಂದಿದೆ. ಅಂಥವರು ಭಾರತೀಯತೆಯನ್ನೂ ದ್ವೇಷಿಸುತ್ತಾರೆ. ಇವುಗಳಲ್ಲಿರುವ ಶ್ರೇಷ್ಠ ಮೌಲ್ಯಗಳನ್ನು ಸ್ವೀಕರಿಸಲು ಯಾರಿಗೂ ಯಾವ ಅಡ್ಡಿಯೂ ನಿಜಕ್ಕಾದರೆ ಇಲ್ಲ!

ಪೂರ್ವಗ್ರಹಗಳಂತೂ ಇರಲು ಸಾಧ್ಯವೇ ಇಲ್ಲ! ಆದರೂ ಇವುಗಳ ಬಗ್ಗೆೆ ಅಸಡ್ಡೆ, ಔದಾಸೀನ್ಯ ಬೆಳೆದುನಿಂತಿದೆ. ವಿಮರ್ಶಕರು ಪಾರದರ್ಶಕರಾಗಿರಬೇಕು. ಪ್ರಾಮಾಣಿಕತೆಯೇ ಅವರ ಮನೋಧರ್ಮ ಆಗಿರಬೇಕು. ಕನ್ನಡದಂಥ ಒಂದು ಭಾಷೆಯ ಸಾಹಿತ್ಯ ಊರ್ಧ್ವಮುಖಿಯಾಗಿ ಬೆಳೆಯು ವುದು ಅದರಲ್ಲಿನ ಸಾಹಿತ್ಯ ವಿಮರ್ಶೆಯು ಪ್ರಾಂಜಲರಾಗಿ ನಡೆದಾಗ ಮಾತ್ರ. ಈಗಲೂ ಲಂಕೇಶ್, ಅನಂತಮೂರ್ತಿ, ಕಾರ್ನಾಡ್, ತೇಜಸ್ವಿ ಮುಂತಾದವರ ಕೃತಿಗಳ ಬಗ್ಗೆ ಮತ್ತಷ್ಟು ಪ್ರಚಾರವನ್ನು ವಿಮರ್ಶೆಯ ನೆಪದಲ್ಲಿ ಕೊಡುತ್ತ ಹೋದರೆ ಸಾಹಿತ್ಯದ ವಿಕಾಸ ಪಥದಲ್ಲಿ ಹಲವರು ಮರೆಯಲ್ಲೇ ಉಳಿಯಬೇಕಾಗುತ್ತದೆ. ಹಾಗಾಗಬಾರದು. ಯಾರೇ ಬರೆದ ಕೃತಿಗಳಿದ್ದರೂ ಅವು ಜನರಿಗೆ ತಲುಪಬೇಕು. ಪುಸ್ತಕ ವಿಮರ್ಶೆ, ಸಮೀಕ್ಷೆಗಳು ಪತ್ರಿಕೆಗಳಲ್ಲಿ ನಡೆಯುತ್ತವೆ. ಆದರೆ ಕೆಲವು ದಕ್ಕೆ ಮಾತ್ರ ಸಿಂಹಪಾಲಿನ ಯಶಸ್ಸು ಸಿಗುತ್ತವೆ.

ಕಾರಣ ಅದರ ತಿರುಳಿರಬಹುದು. ನಿರೂಪಣೆ, ಶೈಲಿಯಿರ ಬಹುದು. ಆದರೆ ಜೀವನ ಮೌಲ್ಯಗಳನ್ನು ಪ್ರತಿನಿಧಿಸುವ ಕೃತಿಗಳು ಯಾರದ್ದೇ ಆದರೂ ವಿಮರ್ಶೆಗೊಳಪಡಲೇಬೇಕು. ಆ ಹಿನ್ನೆಲೆಯಲ್ಲಿ ಸುಧಾಮೂರ್ತಿಯವರ ಕೃತಿಗಳು ವಿಮರ್ಶಾ ಪ್ರಪಂಚಕ್ಕೆ ಇನ್ನೂ ತೆರೆದುಕೊಳ್ಳಲಿಲ್ಲವೆಂಬ ಜಯವೀರರ ಮಾತು ಸತ್ಯ!

ಕನಕ – ಪುರಂದರಾದಿಗಳೇ ಅಸಂಖ್ಯ ಹರಿದಾಸರ ಕೃತಿಗಳು ಯಾರೊಬ್ಬರ ಸ್ವತ್ತೂ ಅಲ್ಲ. ಅವು ಸಮಸ್ತ ಕನ್ನಡ ವಾಙ್ಮಯಕ್ಕೆ ಸೇರಿದವು. ಹಾಗೆಯೇ ವಚನ ವಾಙ್ಮಯವೂ ಕೂಡ. ಡಿವಿಜಿಯ ಕೃತಿಗಳ ವಿಮರ್ಶೆ ಕನ್ನಡದ ಮಟ್ಟಿಗೆ ಸರಿಯಾಗಿ ಇಂದಿಗೂ ದಕ್ಕಲೇ ಇಲ್ಲ. ಶತಾವಧಾನಿಗಳಂಥ ವಿದ್ವಾಂಸರು ಕೂಲಂಕಷವಾಗಿ ಬರೆಯಲು ಆರಂಭಿಸಿದ ಮೇಲೆ ಅವರ ಕೃತಿಗಳ ಅಳ, ಗಾತ್ರ, ವಿಸ್ತಾರ, ಹರಹು ತೆರೆದುಕೊಳ್ಳುತ್ತಿದೆ. ವಿಸ್ತರಿಸಿಕೊಳ್ಳುತ್ತಿದೆ. ಓದುಗರಿಗೆ ದೊರಕುವಂತಾಗಿದೆ. ಆದರೂ ಅವರು, ಅವರಂಥವ
ರಲ್ಲಿರುವ ಸ್ವೋಪಜ್ಞತೆ ಇಂದಿನ ಯುವಜನಾಂಗಕ್ಕೆ ದೊರಕಬೇಕು. ಅದನ್ನು ಬಿಟ್ಟು ಸಂಸ್ಕೃತದಲ್ಲಿರುವ ಭಾರತ, ಭಗವದ್ಗೀತೆಯ ನೆರಳಲ್ಲಿ ಕೃಷ್ಣ ಪರೀಕ್ಷಣಂ, ರಾಮಪರೀಕ್ಷಣಂ, ಅಂತಃಪುರ ಗೀತೆಗಳು, ಈಶೋಪನಿಷತ್ತು, ಪುರುಷಸೂಕ್ತಗಳ ಅನುವಾದ, ಗೀತೆಯನ್ನು ಜೀವನಧರ್ಮಯೋಗವೆಂದು ಬರೆದರು.

ಕನ್ನಡದಲ್ಲಿ ಬರೆದದ್ದು ಎರಡೇ: ಮಂಕುತಿಮ್ಮನ ಕಗ್ಗ, ಮರುಳು ಮುನಿಯನ ಕಗ್ಗ. ಇನ್ನು ಜೀವನ ಚರಿತ್ರೆ, ಪತ್ರಿಕೋದ್ಯಮ ಇವೆಲ್ಲ ಬೇರೆ. ಜ್ಞಾಪಕ ಚಿತ್ರಶಾಲೆಗಳಲ್ಲಿ ಬ್ರಾಹ್ಮಣಪ್ರಜ್ಞೆ ಇದೆಯೆಂದು ವಿಮರ್ಶಿಸಿದರೆ ಡಿವಿಜಿಯವರ ಬುದ್ಧಿಮತ್ತೆ, ಕ್ರತುಶಕ್ತಿ ಯನ್ನು ಸಾಹಿತ್ಯ ಪ್ರಪಂಚ ಅರ್ಥೈಸಿಕೊಳ್ಳುವುದು ಯಾವಾಗ, ಅರಿತುಕೊಳ್ಳುವುದು ಯಾವಾಗ? ಗೊತ್ತಾಗುವುದು ಯಾವಾಗ? ಪುತಿನ, ತೀನಂಶ್ರೀ, ಬಿಎಂಶ್ರೀ, ಕೃಷ್ಣಶಾಸ್ತ್ರೀ, ರಾಜರತ್ನಂ, ನರಸಿಂಹ ಶಾಸ್ತ್ರೀ, ತರಾಸು, ದೇವುಡು, ಸೀತಾರಾಮ ಶಾಸ್ತ್ರೀ, ಗೊರೂರು, ಮಾಸ್ತಿ, ಅಡಿಗ, ಮುಗಳಿ, ವಿಸೀ, ಗಳಗನಾಥರು ಇವರೆಲ್ಲರೂ ಕನ್ನಡದ ಪ್ರಪಂಚಕ್ಕೆ ದಕ್ಕಬೇಕಲ್ಲವೆ? ತಕ್ಕಮಟ್ಟಿಗೆ ದಕ್ಕಿದ್ದರೂ ಇನ್ನೂ ದಕ್ಕುವುದು ಬೆಟ್ಟದಷ್ಟಿದೆ!

ಯಾವ ಮತಧರ್ಮ ಪಂಥಗಳ ಹಂಗಿಲ್ಲದೆ ಸ್ವಪ್ರಜ್ಞೆ, ಸ್ವಂತ ದರ್ಶನದಿಂದ ಬರೆದವನು ಸಾಹಿತಿ ಎನಿಸಿಕೊಳ್ಳುತ್ತಾನೆ. ಅಂಥವನ ಕೃತಿಯಲ್ಲಿ ಮನುಷ್ಯಪ್ರಜ್ಞೆ ಗಾಢವಾಗಿರುತ್ತದೆ. ಕನ್ನಡ ಬೆಳೆಯಬೇಕು, ಸಾಹಿತ್ಯ ಹುಲುಸಾಗಬೇಕು. ಹಾಗಾಗಬೇಕಾದರೆ ಬರೆದವನ ಜಾತಿ ಕುಲ ಪ್ರದೇಶ ಗೋತ್ರ ಸ್ಥಾನಮಾನ ಯಾವುದೂ ಮುಖ್ಯವಾಗಬಾರದು. ಎಲ್ಲರನ್ನೂ ಒಂದುಗೂಡಿಸುವ ಸಾಹಿತ್ಯವೇ ಅಲ್ಲವೆ ಸಹಿತವನ್ನು ಬಯಸುವುದು! ನಮಗೆ ಕಾಳಿದಾಸನೂ ಬೇಕು, ಅಮರಸಿಂಹನೂ ಬೇಕು. ಕುವೆಂಪು ಅವರೂ ಬೇಕು, ಭೈರಪ್ಪರೂ ಬೇಕು. ಕಾರಂತರೂ ಬೇಕು. ಗೋವಿಂದ ಪೈಗಳು ಬೇಕು.

ಕನ್ನಡದಲ್ಲಿ ಸಿಗದಿದ್ದುದು ವರ್ಡ್‌ಸ್‌‌ವರ್ತ್, ಷೇಕ್ಸ್ಪಿಯರ್, ಗಯಟೆ, ಜಾನ್ ಕೀ್ಟ್ಸ್ ಅಂಥವರಲ್ಲಿ ಸಿಗುವುದಾದರೆ ಅವರ ಕೃತಿಗಳೂ ಬೇಕು, ಅಂತೆಯೇ ರಾಮಾಯಣ ಮಹಾಭಾರತದ ಕತೃಗಳೂ ಬೇಕು. ಆರ್ಷೇಯ ಪರಂಪರೆಯನ್ನು ಹೇಳಿದ ಋಷಿಮುನಿಗಳೂ ಬೇಕು. ಕಬೀರರನ್ನು, ಷರೀಫರನ್ನು, ರವೀಂದ್ರರನ್ನು ನಾವು ಒಪ್ಪಿ ಸ್ವೀಕರಿಸಲಿಲ್ಲವೆ? ಆಚಾರ್ಯತ್ರಯರನ್ನೂ ಅನುಸರಿಸಿದ ವರಲ್ಲವೇ ನಾವು? ಅರವಿಂದರನ್ನು ನಾವು ಮೆಚ್ಚಿದ್ದು ಅವರು ಇಂಗ್ಲಿಷಿನಲ್ಲಿ ಬರೆದರೆಂದಲ್ಲವಲ್ಲ! ಬಂಗಾಳಿ ಭಾಷೆಯನ್ನು ನೋಡಿ ನಾವು ವಂದೇ ಮಾತರಂ ಅನ್ನು ಹಾಡುತ್ತೇವೆಯೇ? ಮಾನವ ಜಾತಿ ತಾನೊಂದೆ ವಲಂ ಅಂದ ಪಂಪ.

ಅದರರ್ಥ ಕೊಲೆಗಡುಕ, ವಂಚಕ, ಭ್ರಷ್ಟ, ಮತಾಂತರಿ, ಹಿಂಸ್ರಕ, ಕಾಡುಗಳ್ಳ, ಮರಗಳ್ಳ, ಭೂವಂಚಕ, ಲಂಚಕೋರ ಎಲ್ಲರೂ ಒಂದೇ ಎಂಬ ಅರ್ಥವನ್ನು ಸಮೀಕರಿಸಿಬಿಟ್ಟರೆ ಅನರ್ಥವಲ್ಲವೆ? ಪಂಪ ಹೇಳಿದ್ದು ಮಾನವ ಕುಲ ಧ್ಯೇಯದ  ಬಗ್ಗೆ, ವಾಸ್ತವ ಬೇರೆಯೇ! ವಿದ್ಯಾವಿನಯ ಸಂಪನ್ನೇ, ಬ್ರಾಹ್ಮಣೇ ಗವಿ ಹಸ್ತಿನಿ ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ಎಂಬ ಗೀತೆಯ ಉಕ್ತಿಯಲ್ಲಿ, ಬ್ರಾಹ್ಮಣ ನಾಯಿ ಆನೆ ಗೋವು ನಾಯಿ ತಿನ್ನುವವನು ಎಲ್ಲ ಒಂದೇ ಎಂಬ ಅರ್ಥ ಮಾಡಬಾರದಲ್ಲ! ಗೀತೆಯನ್ನು ಜೀವನ ಧರ್ಮಯೋಗ ಎಂದರು ಡಿವಿಜಿ. ಗೀತೆಯನ್ನು ಸಮಗ್ರ ವಾಗಿ ಪರಿಚಯಿಸಿದ ರೀತಿಯದು. ಗೀತೆಯನ್ನು ವಿಶ್ವಮಾನ್ಯ
ಅಗ್ರಕಾವ್ಯ ಎಂದವನು ಗಯಟೆ. ಗೀತೆಯನ್ನು ರಾಮಾಯಣ – ಮಹಾಭಾರತವನ್ನು ಅವಹೇಳನ ಮಾಡುವವರಿಗೆ ಇದು ಕಾಣ ಬೇಕು! ಹಿಡಿದ ಪೂರ್ವಗ್ರಹ ದಿಂದ ನಮ್ಮ ವಿಮರ್ಶಾ ಲೋಕ ಹೊರಬರಬೇಕು.

ಅಂದಾಗ ಮಾತ್ರ ಎಲ್ಲವೂ ಬೆಳಕಾಗುತ್ತದೆ. ಸುಧಾಮೂರ್ತಿಯಂಥವರ ಕೃತಿಗಳು ಆ ಬೆಳಕಲ್ಲಿ ಹೊಳೆಯುತ್ತದೆ. ಕನ್ನಡದ
ವಿಶ್ವಪ್ರಜ್ಞೆ ಮಾತಿನಲ್ಲಿ ಮಾತ್ರವಲ್ಲ, ಕೃತಿಯಲ್ಲೂ ಕಾಣಬೇಕು. ಆಗ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ, ಬಾಳುತ್ತದೆ.
ರಾಮಾಯಣ, ಮಹಾಭಾರತ, ವೇದಗಳು, ಪುರಾಣಗಳ ಬಗ್ಗೆ ಕೆ.ಎಸ್.ನಾರಾಯಣ ಆಚಾರ್ಯ, ಬನ್ನಂಜೆ ಗೋವಿಂದಾಚಾರ್ಯ, ಶತಾವಧಾನಿಗಳಂಥ ಹಿರಿಯ ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು ಬರೆದ ಕೃತಿಗಳಿಗೆ ಕನ್ನಡ ವಿಮರ್ಶಾಲೋಕ ಎಷ್ಟು ನ್ಯಾಯವನ್ನು ನೀಡಿದೆ? ಗಂಭೀರವಾಗಿ ಅಲೋಚಿಸಬೇಕಾದ ವಿಚಾರವಿದು.

ಎಷ್ಟು ವರ್ಷಗಳಿಂದ ಅವರು ಬರೆಯುತ್ತಿದ್ದಾರೆಂಬುದು ಕನ್ನಡ ವಿಮರ್ಶಾ ಸಾಹಿತ್ಯಕ್ಕೆ ಅರಿವಿದೆಯೇ? ಇವರು ಬರೆದ
ಪುಸ್ತಕಗಳನ್ನು ಅವರ ಅಭಿಮಾನಿಗಳು, ಅಂಥ ವಿಷಯಗಳಲ್ಲಿ ಆಸಕ್ತಿ ಅಭಿರುಚಿಯಿರುವವರು ಓದಿಯೇ ಓದುತ್ತಾರೆಂಬ
ವಿಚಾರ ಬೇರೆ. ಆದರೆ ಪ್ರಶ್ನೆಯಿರುವುದು, ಇವರು ಕನ್ನಡ ಸಾಹಿತ್ಯಕ್ಕೆ ಇವರು ಹೊರಗಿನವರೇ? ಸಾಹಿತ್ಯದಲ್ಲಿ ಕೀಳು ದರ್ಜೆಯ ಸಾಹಿತ್ಯವನ್ನು ಓದುವವರಿದ್ದಾರೆ. ತಿರಸ್ಕರಿಸುವವರಿದ್ದಾರೆ. ಯಾವ ಸಾಹಿತ್ಯವನ್ನು ಯಾವ ಮಾನದಂಡದಲ್ಲಿ ಕೀಳು ಅಥವಾ ಮೇಲು ಎಂದು ಪರಿಗಣಿಸಲ್ಪಡುತ್ತದೆ ಮತ್ತು ಹಾಗೆ ವಿಂಗಡಿಸುವವರು ಯಾರು ಎಂಬುದೇ ಗಹನವಾದ ಪ್ರಶ್ನೆ. ಸಂಗೀತಕ್ಕಾದರೆ
ಸಂಗೀತವೇ ಯಜಮಾನ. ಸಾಹಿತ್ಯಕ್ಕಾದರೆ ವಿಮರ್ಶಕರು ಪರೋಕ್ಷ ಯಜಮಾನರಂತೆ ಕಾಣಿಸುತ್ತಾರೆ. ಆದರೆ ಓದುಗರೇ ನಿಜವಾದ ವಿಮರ್ಶಕರು. ನೂರು ಪುಸ್ತಕಗಳ ಒಡತಿ ಶ್ರೀಮತಿ ಸುಧಾಮೂರ್ತಿಯವರನ್ನೂ ಸೇರಿ ಕನ್ನಡದ ಅನೇಕ ಹಿರಿಯ ಕಿರಿಯ ಬರಹಗಾರರು ಬೆಳಕಿಗೆ ಬರಬೇಕು ಅಂದರೆ ಅವರ ಕೃತಿಗಳು ವಿಮರ್ಶೆಗೆ ಒಳಪಡಬೇಕು.

ಅವುಗಳ ಸಾರಸತ್ವವೂ ಓದುಗರಿಗೆ ಗೊತ್ತಾಗಬೇಕು. ಎಡಪಂಥೀಯ ಚಿಂತನೆಯು ಬಲಪಂಥೀಯ ಚಿಂತನೆಯನ್ನು ತಿರಸ್ಕರಿಸುವ ಅಥವಾ ನಿರಾಕರಿಸುವ, ಅಲ್ಲಗಳೆಯುವ ಮನೋಭಾವವೇ ಕನ್ನಡ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಆರೋಗ್ಯಯುತ ವಲ್ಲ. ಕನ್ನಡದ ಸಮಗ್ರತೆಗೂ ಇದು ಹಿತವಲ್ಲ. ಇಂತಿಷ್ಟು ಪುಟಗಳ ಪುಸ್ತಕಕ್ಕೆ ಇಷ್ಟು ರೇಟನ್ನು ಇಡಬೇಕೆಂದು ನಿರ್ಧರಿಸುವ
ಮಟ್ಟಿಗೆ ವಿಮರ್ಶಕರು ಪುಸ್ತಕದ ವಿಮರ್ಶೆ ಮಾಡುವ ಲೆವಲ್ಲಿಗೆ ವಿಮರ್ಶೆಯ ಹಾದಿ ಸಾಗಿದೆಯೆಂದರೆ ಅಂದಾಜಿಸಿ! ವಿಮರ್ಶಕರು ಪರಮಾಧಿಕಾರವನ್ನು ಹೊಂದಿದವರಂತೆ ವರ್ತಿಸುತ್ತಾರೆ. ಪುಸ್ತಕದ ರೇಟನ್ನು ಫಿಕ್ಸ್ ಮಾಡುವ ಜಬಾಬ್ದಾರಿ ಇರುವುದು ಪ್ರಕಾಶಕರಿಗೆ ಹೊರತು ವಿಮರ್ಶಕರದ್ದಲ್ಲ. ಪುಸ್ತಕದ ಬೆಲೆಯನ್ನು ನಿರ್ಧರಿಸುವ ಅನಗತ್ಯ ಮತ್ತು ಔದ್ಧಟ್ಯದ ವರ್ತನೆ ಪ್ರಕಾಶಕರ ಹಕ್ಕನ್ನು ಕಸಿದುಕೊಂಡಂತೆ. ಲೇಖಕರನ್ನು ಡಿಗ್ರೇಡ್ ಮಾಡಿದಂತೆ.

ಇನ್ನು ಕೆಲವು ವಿಮರ್ಶಕರು ಇಂಥ ಪುಸ್ತಕವನ್ನು ಬರೆಯುವ ಅಗತ್ಯವೇ ಇರಲಿಲ್ಲ ಎಂದು ಅಧಿಕಪ್ರಸಂಗದ ಮಾತೂ ಆಡುವವರಿದ್ದಾರೆ. ದಶಕಗಳಿಂದ ಪುಸ್ತಕಗಳನ್ನು ಬರೆದ ಲೇಖಕನನ್ನು ನಿನ್ನೆ ಮೊನ್ನೆ ಡಿಗ್ರಿ ಓದಿಕೊಂಡವನೂ ವಿಮರ್ಶೆ
ಮಾಡುವ ಸಾಹಸಕ್ಕೆ ಕೈ ಹಾಕಿ ತನ್ನ ಅಜ್ಞಾನವನ್ನು ಪ್ರದರ್ಶಿಸುತ್ತಾನೆ. ಇಂಥ ಬೆಳವಣಿಗೆಗಳೆಲ್ಲ ಸಾವಿರ ವರ್ಷಗಳ  ಚರಿತ್ರೆಯನ್ನು ಹೊಂದಿ ಬೆಳೆದು ನಿಂತ ಕನ್ನಡದಂಥ ಸದೃಢ ಭಾಷೆಯ ಪ್ರಜ್ಞಾ ವಿಕಾಸಕ್ಕೆ ಒಳ್ಳೆಯದಲ್ಲ.

ಕನ್ನಡದ ನೆಲದಲ್ಲಿ ಕನ್ನಡದ ಉಸಿರು ನಿಲ್ಲಬಾರದು. ಕನ್ನಡ ಸತ್ತರೆ ನಾವು ಸತ್ತಂತೆ. ಸಾಹಿತ್ಯ ಮತ್ತು ರಾಜಕೀಯ ಬೇರೆ ಬೇರೆ. ಸಾಹಿತ್ಯದ ಹಿನ್ನೆೆಲೆಯುಳ್ಳವರು, ಸಾಹಿತಿಗಳು ರಾಜಕೀಯಕ್ಕೆ ಬರುವುದರಲ್ಲಿ ತಪ್ಪಿಲ್ಲ. ಆದರೆ ಸಾಹಿತ್ಯದಲ್ಲಿ ರಾಜಕೀಯ ನುಸುಳಬಾರದು. ಸಾಹಿತ್ಯದ ಉಸಿರು ಇರುವುದು ರಾಜಕೀಯದಲ್ಲಲ್ಲ. ಹೊಲಸು ಅಭಾರತೀಯ ಸೆಕ್ಯುಲರಿಸಲ್ಲಿ ಅಲ್ಲ. ಅದು ಸಾಹಿತ್ಯವನ್ನು ಪ್ರವೇಶಿಸಿದರೆ ವಿಮರ್ಶೆಯ ಗತಿ ತಪ್ಪುತ್ತದೆ. ಸದ್ವಿಮರ್ಶೆಯ ಪಥ ಸಾಹಿತ್ಯಕ್ಕೆ ಸೀಮಿತವಾಗಿರಲಿ. ರಾಜಕೀಯದ ಮೂಸೆಯಲ್ಲಿ ವಿಮರ್ಶೆ ಹದಗೆಡುವುದು ಬೇಡ. ಅಂದಾಗ ಮಾತ್ರ ನಮ್ಮ ಭಾಷೆ ಬೆಳೆಯುತ್ತದೆ ಜಾತಿ – ಮತ – ಧರ್ಮ – ಪಂಥಗಳ ವಾಸನೆ ಯಿಂದ ಸಾಹಿತ್ಯ ಪ್ರಪಂಚ ಹೊರಗಿದ್ದರೆ ಸುಧಾಮೂರ್ತಿ ಯಂಥವರ ಕೃತಿಗಳು ಜನಮಾನಸಕ್ಕೆ ಹತ್ತಿರವಾಗುತ್ತದೆ.

ಅಂದಹಾಗೆ, How I taught my grand mother to read (ನನ್ನ ಅಜ್ಜಿಗೆ ನಾ ಹೇಗೆ ಓದಲು ಕಲಿಸಿದೆ) ಎಂಬ ಮೊದಲ ಕೃತಿಯನ್ನು ನಾನೀಗ ಓದಬೇಕಿದೆ. ನೀವೂ ಓದಿ, ಏನಂತೀರಾ?