Thursday, 19th September 2024

ಆಲ್ಜೈಮರ್ ಕಾಯಿಲೆಯನ್ನು ತಡೆಗಟ್ಟಿ

ತನ್ನಿಮಿತ್ತ
ಡಾ.ನಾ.ಸೋಮೇಶ್ವರ

ಇಂದು ವಿಶ್ವ ಆಲ್ಜೈಮರ್ ದಿನ/ ವಿಶ್ವ ಆಲ್ಜೈಮರ್ ಮಾಸಾಚರಣೆ.

ನಿಮ್ಮ ಸಂಪರ್ಕಕ್ಕೆ ಬರುವ ಹಿರಿಯ ನಾಗರಿಕರನ್ನು ಗಮನಿಸಿ. ಕೆಲವರು ಆಡಿದ ಮಾತನ್ನೇ ಮತ್ತೆ ಮತ್ತೆ ಆಡುತ್ತಿರುತ್ತಾರೆ. ಕೇಳಿದ ಪ್ರಶ್ನೆಯನ್ನೇ ಪುನಃ ಪುನಃ ಕೇಳುತ್ತಾರೆ.  ನೀವೆಷ್ಟು ಸಲ ಉತ್ತರವನ್ನು ನೀಡಿದರೂ ಅವರು ಅದನ್ನು ಕೇಳಿಸಿಕೊಂಡಂತೆ ಕಾಣುವುದಿಲ್ಲ. ಕೇಳಿಸಿಕೊಂಡರೂ ಅವರಿಗೆ ಅರ್ಥವಾದಂತೆ ತೋರುವುದಿಲ್ಲ. ಸಂಭಾಷಣೆಯಲ್ಲಿ ತೊಡಗಿರುತ್ತಾರೆ. ಇದ್ದಕ್ಕಿದ್ದ ಹಾಗೆ ಮುಂದೇನು ಮಾತನಾಡಬೇಕೆಂದು ಹೊಳೆಯುವುದಿಲ್ಲ.

ಮಾತನಾಡುತ್ತಿದ್ದ ವಿಷಯವೂ ನೆನಪಿಗೆ ಬರುವುದಿಲ್ಲ. ಇಂತಹ ದಿನ, ಇಂತಿಷ್ಟು ಹೊತ್ತಿಗೆ ಮನೆಗೆ ಬರುವಂತೆ ಹೇಳಿರುತ್ತಾರೆ.
ನೀವು ಹೋದಾಗ ‘ಯಾರು ನೀವು, ಹೇಳದೆ ಕೇಳದೆ ಯಾಕೆ ಬಂದಿರಿ’ ಎಂದು ನಿಮ್ಮನ್ನೇ ಪ್ರಶ್ನಿಸಬಹುದು. ಅವರು ಬರಲು
ಹೇಳಿದ್ದನ್ನು ನೀವು ಹೇಳಿದರೂ, ಅದು ಅವರ ನೆನಪಿಗೆ ಬರುವುದಿಲ್ಲ.

ಮನೆಯಲ್ಲಿರುವ ವಸ್ತುಗಳಿಗೆ ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸ್ಥಳವಿರುತ್ತದೆ. ಯಾವ ವಸ್ತುವನ್ನು ಎಲ್ಲಿಡಬೇಕು ಎನ್ನುವ ಪರಿಜ್ಞಾನವು ಇವರಿಗೆ ಇರುವುದಿಲ್ಲ. ಟಿವಿ ರಿಮೋಟನ್ನು ಬಾತ್ ರೂಮಿನಲ್ಲಿಡಬಹುದು. ನಂತರ ಹಾಗೆ ಇಟ್ಟ ಸ್ಥಳವೂ
ನೆನಪಿಗೆ ಬರುವುದಿಲ್ಲ.ಪರಿಚಿತ ಸ್ಥಳದಲ್ಲಿಯೇ ದಾರಿ ತಿಳಿಯದೆ ಕಂಗೆಡಬಹುದು. ತಮ್ಮ ಮನೆಯ ಮುಂದೆಯೇ ನಿಂತಿದ್ದರೂ,
ಇದು ತಮ್ಮದೇ ಮನೆ ಎಂಬುದು ನೆನಪಿಗೆ ಬರುವುದಿಲ್ಲ. ದೈನಂದಿನ ಬಳಕೆಯ ವಸ್ತುಗಳ ಹೆಸರು ಮರೆತುಹೋಗುತ್ತದೆ. ಕ್ರಮೇಣ ಮನೆಮಂದಿಯ ಹೆಸರೂ ಮರೆತುಹೋಗಬಹುದು. ಮಾತನಾಡುವಾಗ ಸೂಕ್ತ ಪದಕ್ಕಾಗಿ ತೊಳಲಾಡಬಹುದು. ತಕ್ಷಣ ನೆನಪಿಗೆ ಬರುವುದಿಲ್ಲ ಅಥವ ತಮ್ಮ ಮನಸ್ಸಿನ ಪರಿಕಲ್ಪನೆಯನ್ನು ವ್ಯಕ್ತಪಡಿಸಲು ವಿಫಲರಾಗ ಬಹುದು. ಹೆಚ್ಚು ಹೊತ್ತು ಯೋಚಿಸಲಾರರು. ಸ್ಪಷ್ಟವಾಗಿ ವಿಚಾರ ಮಾಡಲಾರರು.

ತೀರ್ಮಾನಗಳನ್ನು ನಿಖರವಾಗಿ ತೆಗೆದುಕೊಳ್ಳಲಾರರು. ಅಂಕಿ ಸಂಖ್ಯೆಗಳು ತೀರಾ ಗೊಂದಲ ಮಯವಾಗಿಬಿಡುತ್ತವೆ. ಕಟ್ಟಬೇಕಾದ ಸಾಲ, ಬರಬೇಕಾದ ಸಾಲ, ವಿದ್ಯುತ್ ಬಿಲ್ಲನ್ನು ಕಾಲಕ್ಕೆ ಸರಿಯಾಗಿ ಕಟ್ಟಬೇಕಾದ ಅಗತ್ಯತೆ ಎಲ್ಲವೂ ಗೊಂದಲಮಯವಾಗಿ ಬಿಡುತ್ತದೆ. ಬದುಕಿನ ಬಗ್ಗೆ, ಭವಿಷ್ಯದ ದಿನಗಳ ಬಗ್ಗೆ ಯೋಚಿಸ ಲಾರರು. ಯೋಚಿಸಬೇಕಾದ ಅಗತ್ಯವಿದೆ ಎನ್ನುವುದೂ ಅವರಿಗೆ ನೆನಪಿರುವುದಿಲ್ಲ. ಅವರ ತಮ್ಮ ನೆಚ್ಚಿನ ಹವ್ಯಾಸಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಕೊನೆಗೆ ನಿತ್ಯ ಹಲ್ಲುಜ್ಜುವುದು, ಸ್ನಾನ ಮಾಡುವುದು, ಶೌಚಕ್ಕೆ ಹೋಗುವುದನ್ನೂ ಮರೆಯಬಹುದು.

ಮನಸ್ಸಿನ ಭಾವವು ಪದೇ ಪದೆ ಬದಲಾಗಬಹುದು. ವಿನಾ ಕಾರಣ ಖಿನ್ನರಾಗಬಹುದು. ಸಾಮಾಜಿಕ ಚಟುವಟಿಕೆಗಳಿಂದ ದೂರವಾಗಬಹುದು. ನಿರಾಸಕ್ತಿ ತೀವ್ರವಾಗಬಹುದು. ಯಾರನ್ನೂ ನಂಬದಿರಬಹುದು. ವಿನಾಕಾರಣ ಅಸಹನೆ/ಕಿರಿಕಿರಿ
ಯನ್ನು ತೋರಬಹುದು. ನಿದ್ರಿಸುವ ಅವಧಿ ಮತ್ತು ಸಮಯ ಬದಲಾಗಬಹುದು. ಸಾಮಾಜಿಕ ರೀತಿ ರಿವಾಜು ಗಳನ್ನು
ಮರೆಯಬಹುದು. ಎಲ್ಲೆೆಂದರಲ್ಲಿಗೆ ನಡೆದುಕೊಂಡು ಹೋಗಿಬಿಡಬಹುದು. ತಮ್ಮ ವಸ್ತುಗಳನ್ನು ಯಾರೋ ಕದ್ದಿರುವ
ರೆಂದು ಗುಮಾನಿಯನ್ನು ವ್ಯಕ್ತಪಡಿಸಬಹುದು. ಕೆಲವರು ಇಂತಹ ಮರೆವಿನಿಂದ ಎಷ್ಟೇ ನರಳಿದರೂ ಸಹ ಕೆಲವು ವಿಚಾರಗಳು ನಿಚ್ಚಳವಾಗಿ ನೆನಪಿನಲ್ಲಿರುತ್ತವೆ. ಕಲಿತ ಸಂಗೀತವನ್ನು ಮರೆಯುವುದಿಲ್ಲ. ವಾದ್ಯಗಳನ್ನು ನುಡಿಸಬಲ್ಲರು. ಚಿತ್ರವನ್ನು ಬರೆಯಬಲ್ಲರು. ಪುಸ್ತಕಗಳನ್ನು ಓದಬಹುದು. ಸಂಗೀತವನ್ನು ಕೇಳಬಹುದು. ಕಾರನ್ನು ಕರಾರುವಾಕ್ಕಾಗಿ ನಡೆಸಬಹುದು. ಆದರೆ ಕಾರಿನಲ್ಲಿ ಎಲ್ಲಿಗೆ ಹೋಗಬೇಕು, ಯಾವ ಕಡೆಗೆ ಹೋಗಬೇಕು ಎನ್ನುವುದು ತಿಳಿಯದಿರಬಹುದು. ಮರೆವು ಅಂತಿಮ ಘಟ್ಟವನ್ನು
ತಲುಪಿದಾಗ, ಈ ವಿಶಿಷ್ಠ ಸಾಮರ್ಥ್ಯಗಳೆಲ್ಲವೂ ಒಂದೊಂದಾಗಿ ಮರೆಯಾಗಬಹುದು.

ಆಲ್ಜೈಮರ್ ಕಾಯಿಲೆ: ಇದುವರೆಗೂ ವಿವರಿಸಿದ ದೈಹಿಕ, ಮಾನಸಿಕ, ಸಾಮಾಜಿಕ ವಿಪರೀತ ವರ್ತನೆಗಳಿಗೆ ಕಾರಣ, ವ್ಯಕ್ತಿಯ ಮಿದುಳಿನಲ್ಲಿ ತಲೆದೋರುತ್ತಿರುವ ರಾಸಾಯನಿಕ ಬದಲಾವಣೆಗಳು. ಮನುಷ್ಯನ ಮಿದುಳಿನಲ್ಲಿ ‘ಹಿಪ್ಪೋಕ್ಯಾಂಪಸ್’ ಎಂಬ ನೆನಪಿನ ಭಂಡಾರ ಕ್ಷೇತ್ರವಿರುತ್ತದೆ. ನೆನಪುಗಳನ್ನು ಸಕಾಲದಲ್ಲಿ ಸ್ಮರಣೆಗೆ ತಂದುಕೊಳ್ಳಲು ಮಿದುಳಿನ ಕಪೋಲ ಭಾಗವು (ಟೆಂಪೊರಲ್ ಲೋಬ್) ನೆರವಾಗುತ್ತದೆ. ಪ್ಪೋಕ್ಯಾಂಪಸ್ ಮತ್ತು ಟೆಂಪೊರಲ್ ಲೋಬ್ – ಈ ಎರಡೂ ಭಾಗಗಳ ನಡುವೆ ಪರಸ್ಪರ ಸಂಪರ್ಕ ಹಾಗೂ ಸಾಮರಸ್ಯಗಳು ಏರುಪೇರಾದಾಗ, ಮೇಲ್ಕಂಡ ಸಮಸ್ಯೆೆಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತವೆ.

ಈ ಪ್ರದೇಶಗಳಲ್ಲಿರುವ ನರಕೋಶಗಳು ನಿಧಾನವಾಗಿ ನಾಶವಾಗಲಾರಂಭಿಸುತ್ತವೆ. ಜೊತೆಗೆ ನರಕೋಶಗಳ ಸಹಜ ಕೆಲಸ ಕಾರ್ಯಗಳಿಗೆ ತೀರಾ ಅಗತ್ಯವಾದ ನರರಾಸಾಯನಿಕಗಳ (ನ್ಯೂರೋಟ್ರಾನ್ಸ್‌‌ಮಿಟರ್ಸ್), ಉದಾ: ಅಸಿಟೈಲ್ ಕೋಲಿನ್,
ಉತ್ಪಾದನೆಯು ಕಡಿಮೆ ಯಾಗುತ್ತದೆ ಅಥವಾ ನಿಂತುಹೋಗುತ್ತದೆ. ಆಗ ಮೇಲೆ ವಿವರಿಸಿದ ವಿಪರೀತ ವರ್ತನೆಗಳು ಆರಂಭವಾಗು ತ್ತವೆ/ಉಲ್ಬಣಗೊಳ್ಳುತ್ತವೆ. ಮೇಲಿನ ಲಕ್ಷಣಗಳಿಂದ ನರಳುವವರನ್ನು ನೋಡಿ, ನಮ್ಮ ಸಮಾಜದಲ್ಲಿ ‘ಅವನಿಗೆ ಅರಳು – ಮರಳು’ ಆಗಿದೆ ಎನ್ನುವುದನ್ನು ನಾನು ಕೇಳಬಹುದು.

ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಡಿಮೆನ್ಷಿಯ’ ಎನ್ನುವರು. ಈ ಅರಳು – ಮರಳು ತಲೆದೋರಲು ಪ್ರಮುಖ ಕಾರಣ ಆಲ್ಜೆ ಮರ್ ರೋಗ. ವಿವಿಧ ದೇಶಗಳಲ್ಲಿ ಅರಳು – ಮರಳಿಗೆ ಪೀಡಿತರಾಗುವ ಶೇ.50%-75% ಜನರಿಗೆ ಆಲ್ಜೆಮರ್ ಕಾಯಿಲೆ ಬಂದಿರುತ್ತದೆ. ಈ ವಿಶಿಷ್ಠ ವೈಪರೀತ್ಯವನ್ನು ಅಲಾಯ್ಸ್‌ ಆಲ್ಜೆಮರ್ (1864-1915) ಎನ್ನುವ ಜರ್ಮನ್ ಮನೋವೈದ್ಯ ಹಾಗೂ ನರರೋಗ  ಶಾಸ್ತ್ರಜ್ಞನು 1906ರಲ್ಲಿ ಗಮನಿಸಿದ ಹಾಗೂ ಅದರ ಬಗ್ಗೆ ವೈದ್ಯಕೀಯ ಲೋಕಕ್ಕೆ ಪರಿಚಯವನ್ನು ಮಾಡಿಕೊಟ್ಟ. ಹಾಗಾಗಿ ಈ ಕಾಯಿಲೆಗೆ ಆತನ ಹೆಸರನ್ನೇ ನೀಡಲಾಗಿದೆ.

ಘಟ್ಟಗಳು: ಆಲ್ಜೆಮರ್ ಕಾಯಿಲೆಯು ಒಮ್ಮೆಲೆ ಘಟಿಸುವುದಿಲ್ಲ. ಇದು ವರ್ಷಗಳು ಅಥವಾ ದಶಕಗಳ ಅವಧಿಯಲ್ಲಿ ನಿಧಾನ ವಾಗಿ ಬೆಳೆಯುತ್ತದೆ. ಮೊದಲು ಲಕ್ಷಣಪೂರ್ವ ಹಂತವು (ಪ್ರಿ-ಕ್ಲಿನಿಕಲ್) ಕಾಣಿಸಿಕೊಳ್ಳುತ್ತದೆ. ಅಂದರೆ ಮೇಲೆ ವಿವರಿಸಿದ
ಲಕ್ಷಣಗಳು ಆರಂಭವಾಗುವ ಮೊದಲೇ ಮಿದುಳಿನಲ್ಲಿ ನರವಾಹಕ ರಾಸಾಯನಿಕಗಳ ಉತ್ಪಾದನೆಯು ಕುಂಠಿತವಾಗುತ್ತವೆ ಹಾಗೂ ನರಕೋಶಗಳು ಒಂದೊಂದಾಗಿ ಸಾಯುತ್ತಿರುತ್ತವೆ. ಮನುಷ್ಯನ ಮಿದುಳಿನಲ್ಲಿ ಒಂದು 10,000 ಕೋಟಿ (100 ಬಿಲಿಯನ್) ನರಕೋಶಗಳಿರುತ್ತವೆ. ಹಾಗಾಗಿ ಅವು ಒಂದೊಂದಾಗಿ ಸಾಯಲಾರಂಭಿಸಿದಾಗ, ಅದು ನಮ್ಮ ಗಮನಕ್ಕೆ ಬರುವುದಿಲ್ಲ ಹಾಗೂ ನಮ್ಮ ವರ್ತನೆಯಲ್ಲಿ ಅಂತಹ ಬದಲಾವಣೆಯೂ ಆಗುವುದಿಲ್ಲ. ವೈದ್ಯರನ್ನು ಒಳಗೊಂಡಂತೆ ನಮ್ಮ ಸುತ್ತಮುತ್ತಲಿನವರಿಗೂ ತಿಳಿಯುವುದಿಲ್ಲ. ಈ ಅವಧಿಯಲ್ಲಿ ವೈದ್ಯರನ್ನು ಭೇಟಿಯಾಗಿ ವಿಸ್ತತ ಪರೀಕ್ಷೆಗಳಿಗೆ ಒಳಪಟ್ಟರೆ ರೋಗ ನಿದಾನವು (ಡಯಾಗ್ನೋ ಸಿಸ್) ಸುಲಭವಾಗುತ್ತದೆ.

ಸಾಮಾನ್ಯವಾಗಿ ಸ್ವಯಂ ರೋಗಿಯೇ ಅಥವಾ ಅವನ ಮನೆಯವರು ಮೇಲ್ಕಂಡ ಲಕ್ಷಣಗಳನ್ನು ಕೆಲವನ್ನು ಗಮನಿಸಿ ನರವೈದ್ಯ ರನ್ನು ಭೇಟಿಯಾಗುವ ಸಾಧ್ಯತೆಯು ಅಧಿಕವಾಗಿರುತ್ತದೆ. ಆಗ ವೈದ್ಯರು ಮೊದಲು ಎಲ್ಲ ವಿವರಗಳನ್ನು ಸಂಗ್ರಹಿಸುವರು. ನಂತರ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಪರೀಕ್ಷೆಯನ್ನು ಮಾಡುವರು. ಎಂ.ಆರ್.ಐ ಸ್ಕ್ಯಾನ್, ಫ್ಲೂರೋಡಿಯಾಕ್ಸಿ ಗ್ಲೂಕೋಸ್ ಪೆಟ್ ಸ್ಕ್ಯಾನ್, ಅಮೈಲಾಯ್ಡ್ ಪೆಟ್ ಸ್ಕ್ಯಾನ್, ಟೌ ಪೆಟ್ ಸ್ಕ್ಯಾನ್ ಮುಂತಾದ ಪರೀಕ್ಷೆಗಳನ್ನು ಸೂಚಿಸಬಹುದು. ನರಕೋಶಗಳ ನಾಶದ ನಂತರ ಅವುಗಳ ಸ್ಥಳದಲ್ಲಿ ‘ಬೀಟಾ – ಅಮೈಲಾಯ್ಡ್‌’ ಎನ್ನುವ ಪ್ರೋಟೀನ್ ಸಂಗ್ರಹವು ತಲೆದೋರುತ್ತದೆ. ಇದರ ಉಪಸ್ಥಿತಿಯು ಆಲ್ಜೆಮರ್ ಕಾಯಿಲೆಯ ಪ್ರಮುಖ ಲಕ್ಷಣ. ಜತೆಗೆ ನರತಂತುಗಳ ಸಿಕ್ಕು (ನ್ಯೂರೋಫೈಬ್ರಿಲ್ಲರಿ ಟ್ಯಾಂಗಲ್ಸ್‌)ಗಳು ಕಂಡುಬರುತ್ತವೆ.

ಇವೆರಡರ ಜತೆಗೆ ಕೆಲವು ಜೈವಸೂಚಕಗಳು (ಬಯೋ ಮಾರ್ಕರ್ಸ್) ಎಂದರೆ ರಕ್ತ ಪರೀಕ್ಷೆಗಳು, ರೋಗನಿಧಾನಕ್ಕೆ ಪೂರಕವಾಗ ಬಲ್ಲವು. ಒಂದು ಸಲ ಆಲ್ಜೆಮರ್ ಆರಂಭವಾಯಿತೆಂದರೆ, ನಂತರ ಇದು ಸೌಮ್ಯ ಹಂತ, ಮಧ್ಯಮ ಹಂತ ಹಾಗೂ ತೀವ್ರ ಹಂತಗಳನ್ನು ತಲುಪಿ ಕೊನೆಗೆ ಸಾವಿನಲ್ಲಿ ಕೊನೆಗೊಳ್ಳುತ್ತದೆ. ಈ ಮೂರು ಹಂತಗಳಲ್ಲಿ ಮೇಲೆ ವಿವರಿಸಿದ ಲಕ್ಷಣಗಳು ಸೌಮ್ಯ, ಮಧ್ಯಮ ಇಲ್ಲವೇ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತವೆ.

ಆಲ್ಜೆಮರ್ ಕಾಯಿಲೆಯನ್ನು ಸಂಪೂರ್ಣವಾಗಿ ತಡೆಗಟ್ಟಬಲ್ಲ ಇಲ್ಲವೇ ಗುಣಪಡಿಸಬಲ್ಲ ಔಷಧವಿಲ್ಲ. ರೋಗ ಲಕ್ಷಣಗಳ ತೀವ್ರತೆಯನ್ನು ಆಧರಿಸಿ ಡಾನೆಜಿಪಿಲ್, ರಿವಾಸ್ಟಿಗ್ಮೆನ್, ಮೆಮಂಟೈನ್, ಗ್ಯಾಲಂಟಮೈನ್ ಮುಂತಾದ ಔಷಧಗಳನ್ನು ಬಳಸ ಬಹುದು. ಇವು ತಾತ್ಕಾಲಿಕ ಲಕ್ಷಣ ಉಪಶಮನವನ್ನು ಮಾತ್ರ ನೀಡಬಲ್ಲವು ಹಾಗೂ ಸಾಕಷ್ಟುಪಾರ್ಶ್ವಪರಿಣಾಮಗಳನ್ನು ತೋರಬಲ್ಲವು. ಹಾಗಾಗಿ ಪ್ರಸ್ತುತ ನಮ್ಮ ಬಳಿ ಇರುವ ಪರಿಣಾಮಕಾರಿಯಾದ ಮಾರ್ಗವೆಂದರೆ ಆಲ್ಜೆಮರ್ ಕಾಯಿಲೆಯು ಬರದಂಥ ಜೀವನಶೈಲಿಯನ್ನು ರೂಪಿಸಿಕೊಳ್ಳುವುದು.

ಆಲ್ಜೆಮರ್ ಮಾಸ: ಪ್ರತಿ ವರ್ಷ ಸೆಪ್ಟೆಂಬರ್‌ 21ನೆಯ ದಿನಾಂಕವನ್ನು ಆಲ್ಜೆಮರ್ ದಿನವನ್ನಾಗಿ (ವಿಶ್ವ ಆಲ್ಜೆಮರ್ ದಿನ) ಆಚರಿಸುತ್ತಾರೆ. ಜತೆಗೆ 2012ರಿಂದ, ಇಡೀ ಸೆಪ್ಟೆೆಂಬರ್ ತಿಂಗಳನ್ನು ವಿಶ್ವ ಆಲ್ಜೆಮರ್ ಮಾಸ (ವರ್ಲ್‌ಡ್‌ ಅಲ್ಜೆಮರ್ಸ್ಮಂಥ್) ಮಾಸವನ್ನಾಗಿಯೂ ಆಚರಿಸುವ ಪದ್ಧತಿಯು ಬೆಳೆದಿದೆ. ಈ ಅವಧಿಯಲ್ಲಿ ಆಲ್ಜೆಮರ್ ಕಾಯಿಲೆಯ ಬಗ್ಗೆ  ಜನಜಾಗೃತಿ ಯನ್ನುಂಟು ಮಾಡುವ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಅವುಗಳಲ್ಲಿ ಆಲ್ಜೆೆಮರ್ ಕಾಯಿಲೆಗೆ ತುತ್ತಾದವರ ಆರೈಕೆ ಹಾಗೂ ಪುನರ್ವಸತಿಯ ಬಗ್ಗೆ ಚಿಂಥನ – ಮಂಥನಗಳು ನಡೆಯುತ್ತವೆ.

‘ಆಲ್ಜೆೆಮರ್ಸ್ ಡಿಸೀಸ್ ಇಂಟರ್ ನ್ಯಾಶನಲ್’ ಎನ್ನುವ ಸಂಸ್ಥೆಯಿದೆ. ಈ ಸಂಸ್ಥೆಯು ಆಲ್ಜೆೆಮರ್ ಕಾಯಿಲೆಯ ಬಗ್ಗೆ ವಿಸ್ತತ ಅಧ್ಯಯನವನ್ನು ಮಾಡಿ ‘ವರ್ಲ್‌ಡ್‌ ಆಲ್ಜೆೆಮರ್ಸ್ ರಿಪೋರ್ಟ್ – 2020’ ಎನ್ನುವ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಆಲ್ಜೆೆಮರ್ ಕಾಯಿಲೆಯನ್ನು ತಡೆಗಟ್ಟುವ ಹಾಗೂ ರೋಗಿಗಳಿಗೆ ಪುನರ್ವಸತಿಯನ್ನು ಕಲ್ಪಿಸುವ ಬಗ್ಗೆ ವಿಸ್ತತವಾಗಿ ಚರ್ಚಿಸಲಾಗಿದೆ. ವ್ಯಕ್ತಿ, ಕುಟುಂಬ, ಸಮಾಜ ಹಾಗೂ ಸರಕಾರವು ಆಲ್ಜೆಮರ್ ಕಾಯಿಲೆಯನ್ನು ತಡೆಗಟ್ಟುವ ಕಾರ್ಯಕ್ರಮ ಗಳನ್ನು/ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ.

ಕಾರಣಗಳು: ವಿಶ್ವದಲ್ಲಿ 50 ದಶಲಕ್ಷ ಜನರಿಗೆ ಆಲ್ಜೆಮರ್ ಕಾಯಿಲೆಯಿದೆ. 2050ರ ಹೊತ್ತಿಗೆ ಈ ಸಂಖ್ಯೆಯು 152 ದಶಲಕ್ಷ
ಗಳಾಗಲಿವೆ. ಹೆಚ್ಚಾಗಿ ಅಲ್ಪ ಹಾಗೂ ಮಧ್ಯಮ ಪ್ರಮಾಣದ ಆದಾಯರುವ ದೇಶಗಳ ಜನರು ಆಲ್ಜೆಮರ್ ಕಾಯಿಲೆಗೆ ಹೆಚ್ಚು ತುತ್ತಾಗಲಿದ್ದಾರೆ. ಲ್ಯಾನ್ಸೆಟ್ ಪತ್ರಿಕೆಯು ಡಿಮೆನ್ಷಿಯ ಮತ್ತು ಆಲ್ಜೆಮರ್ ಕಾಯಿಲೆಯ ಅಧ್ಯಯನಕ್ಕೆ ಒಂದು ಆಯೋಗವನ್ನು ರೂಪಿಸಿತು. ಈ ಆಯೋಗವು ಕಾಲ ಕಾಲಕ್ಕೆ ವರದಿಯನ್ನು ನೀಡುತ್ತಿದೆ. 2020ರಲ್ಲಿ ‘ಲ್ಯಾನ್ಸೆಟ್ ಕಮಿಷನ್ ಆನ್ ಡಿಮೆನ್ಷಿಯ
ಪ್ರಿವೆನ್ಷನ್, ಇಂಟರ್ವೆನ್ಷನ್ ಅಂಡ್ ಕೇರ್’ ಎನ್ನುವ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಅನ್ವಯ ನಾವು 12 ಅಂಶಗಳ ಬಗ್ಗೆೆ ಮುಂಜಾಗ್ರತೆಯನ್ನು ವಹಿಸಿದರೆ, ಡಿಮೆನ್ಷಿಯವನ್ನು (ಶೇ.50-75ರಷ್ಟು ಆಲ್ಜೆಮರನ್ನು) ತಡೆಗಟ್ಟಬಹುದು ಅಥವಾ ರೋಗ ಪ್ರಗತಿಯ ತೀವ್ರತೆಯನ್ನು ಶೇ.40ರಷ್ಟು ಮಂದಗೊಳಿಸಬಹುದು. ಡಿಮೆನ್ಷಿಯವನ್ನು ತಡೆಗಟ್ಟಲು ಅಗತ್ಯವಾದ ಜೀವನಶೈಲಿಯನ್ನು ಮೂರು ವಯೋಮಾನ ಗಳಲ್ಲಿ ವಿಂಗಡಿಸಬಹುದು.

45 ವರ್ಷಗಳಿಗಿಂತ ಮೊದಲು: ಅಗತ್ಯ ಶಿಕ್ಷಣ. 45-65 ವರ್ಷಗಳ ನಡುವೆ: ಕಿವುಡುತನ, ತಲೆಗೆ ಬೀಳುವ ಪೆಟ್ಟು, ರಕ್ತದ ಏರೊತ್ತಡ, ಮದ್ಯಪಾನ ಸೇವನೆ ಮತ್ತು ಬೊಜ್ಜು.

65 ವರ್ಷಗಳ ನಂತರ: ಧೂಮಪಾನ, ಖಿನ್ನತೆ, ಸಾಮಾಜಿಕವಾಗಿ ಏಕಾಂಗಿತನ, ಶಾರೀರಿಕ ಚಟುವಟಿಕೆ ಗಳಿಲ್ಲದಿರುವಿಕೆ,
ಮಧುಮೇಹ ಮತ್ತು ವಾಯು ಮಾಲಿನ್ಯ.

(ಮುಂದುವರಿಯಲಿದೆ)