Saturday, 23rd November 2024

ಅವರಿಗೆ 103 ವರ್ಷಗಳಾದವು, ಆದರೂ ನಿವೃತ್ತರಾಗಿಲ್ಲ !

ನೂರೆಂಟು ವಿಶ್ವ

vbhat@me.com

ಇಡೀ ಕರ್ನಾಟಕ, ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಮುಳುಗಿದ್ದಾಗ, ಭರದ ಚುನಾವಣಾ ಪ್ರಚಾರಕ್ಕೆ ತಂತ್ರಗಳನ್ನು ಹೊಸೆಯುತ್ತಿರುವಾಗ, ಯಾರು ಅಭ್ಯರ್ಥಿಗಳಾಗುತ್ತಾರೆಂದು ಇಡೀ ರಾಜ್ಯವೇ ಗಲ್ಲಕ್ಕೆ ಕೈಹಚ್ಚಿ ಕುಳಿತು  ಧೇನಿಸುತ್ತಿರುವಾಗ, ನಮ್ಮ ರಾಜ್ಯದವರೇ ಆದ ಒಬ್ಬರಿಗೆ ಅಂತಾರಾಷ್ಟ್ರೀಯ ಮಟ್ಟದ, ನೊಬೆಲ್ ಪ್ರಶಸ್ತಿಗೆ ಸಮನಾದ ಪ್ರಶಸ್ತಿಯೊಂದು ಬಂದಿದ್ದು ನಮಗ್ಯಾರಿಗೂ ಗೊತ್ತೇ ಆಗಲಿಲ್ಲ.

ಆ ಸಂದರ್ಭದಲ್ಲಿ ಅದು ನಮಗೆ ಬೇಡವಾದ ಸುದ್ದಿ ಎಂದೇ ಮಾಧ್ಯಮಗಳು ಪರಿಗಣಿಸಿದವಾ? ಗೊತ್ತಿಲ್ಲ. ಕಾರಣ ನ್ಯೂಸ್ ಚಾನೆಲ್‌ಗಳು ಬ್ರೇಕಿಂಗ್ ಸುದ್ದಿಯನ್ನು ಪ್ರಸಾರ ಮಾಡಲು ಮುಂಗಾಲಪುಟಿಕೆ ಹಾಕಿ ಕುಳಿತಿದ್ದವು. ಪತ್ರಿಕೆಗಳಿಗಂತೂ ಇಂಥ ಸುದ್ದಿಯನ್ನು ಪ್ರಕಟಿಸಲು ಜಾಗವೇ ಇರಲಿಲ್ಲ. ಚುನಾವಣಾ ಸುದ್ದಿಯ ಹೊರತಾಗಿ ಬೇರೆ ವಿಷಯಗಳನ್ನು ತಿಳಿದುಕೊಳ್ಳುವ ವ್ಯವಧಾನ ಜನರಿಗೂ ಇರಲಿಲ್ಲ. ಎಲ್ಲರ ತಲೆಯಲ್ಲೂ ಚುನಾವಣೆಯೇ ತುಂಬಿಕೊಂಡಿತ್ತು.

ಹೀಗಿರುವಾಗ ಅಂಥ ಪ್ರಮುಖ ಸುದ್ದಿಯನ್ನು ಒಂದೆರಡು ಪತ್ರಿಕೆಗಳು ಸಿಂಗಲ್ ಕಾಲಂ ಸುದ್ದಿಯನ್ನಾಗಿ ಪ್ರಕಟಿಸಿದ್ದನ್ನು ಬಿಟ್ಟರೆ, ಅದು ಯಾರ ಗಮನವನ್ನೂ ಸೆಳೆಯಲು ಇಲ್ಲ. ಆ ಸುದ್ದಿ ವಾಟ್ಸಾಪ್ ಯುನಿವರ್ಸಿಟಿಯಲ್ಲೂ ಶೇರ್, ಫಾರ್ವರ್ಡ್ ಆಗಲೇ ಇಲ್ಲ. ಅವರು ಕಲಿಂಪುಡಿ ರಾಧಾಕೃಷ್ಣ ರಾವ್, ಸಂಕ್ಷಿಪ್ತವಾಗಿ, ಸಿ.ಆರ್.ರಾವ್ !

ಅವರು ಇಡೀ ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಮೆಚ್ಚುವ ಖ್ಯಾತ ಸಂಖ್ಯಾಶಾಸ್ತ್ರಜ್ಞ (Statistician)ರು. ಗಣಿತ ಮತ್ತು ಸಂಖ್ಯಾಶಾಸಕ್ಕೆ ಅವರು ನೀಡಿದ ಮಹತ್ತರ ಯೋಗದಾನ (Groundbreaking contributions) ವನ್ನು ಪರಿಗಣಿಸಿ ಅವರಿಗೆ ‘ನೊಬೆಲ್ ಪ್ರಶಸ್ತಿ’ಗೆ ಸಮನಾದ ‘ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರ’ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸ ಲಾಯಿತು. ವಿಷಯ ಪರಿಣತರು ಹೇಳುವಂತೆ, ಜಗತ್ತಿನ ಹತ್ತು ಪ್ರಮುಖ ಗಣಿತಜ್ಞ-ಸಂಖ್ಯಾಶಾಸ್ತ್ರಜ್ಞರಲ್ಲಿ ಡಾ.ರಾವ್ ಕೂಡ ಒಬ್ಬರು. ಭಾರತದಲ್ಲಿ ಅವರ ಹೆಸರನ್ನು ಹೆಚ್ಚು ಮಂದಿ ಕೇಳಿರಲಿಕ್ಕಿಲ್ಲ.

ನಮ್ಮ ದೇಶದಲ್ಲಿ ರಾಜಕಾರಣಿಗಳು, ಸಿನಿಮಾ ನಟರು, ಕ್ರಿಕೆಟ್ ಆಟಗಾರರ ಮುಂದೆ ವಿಜ್ಞಾನಿಗಳು, ಅದರಲ್ಲೂ ಗಣಿತಜ್ಞ -ಸಂಖ್ಯಾಶಾಸ್ತ್ರಜ್ಞರೆಲ್ಲ ಯಾವ ಲೆಕ್ಕ? ಹೀಗಾಗಿ ಡಾ.ರಾವ್ ಇಂದಿಗೂ ಯಾವ ಮರದ ತೊಪ್ಪಲು ಅಥವಾ ಯಾವುದೋ ಮರದಲ್ಲಿನ ಎಲೆಮರೆ ಕಾಯಿ! ಆದರೆ ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಅವರು ಪ್ರಾತಃ ಸ್ಮರಣೀಯರು. ಇನ್ನೂ ಒಂದು ಸೋಜಿಗ ಅಂದ್ರೆ, ಮೊನ್ನೆ ಡಾ.ರಾವ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಬಂದಾಗ ಅವರಿಗೆ ೧೦೩ ವರ್ಷ!

ಇಂದಿಗೂ, ಈ ವಯಸ್ಸಿನಲ್ಲೂ, ಅವರು ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಎಮೆರಿಟಸ್ ಮತ್ತು ಬಫೆಲೋ ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಪ್ರೊಫೆಸರ್. ಡಾ.ರಾವ್ ಯೋಚನೆಯಲ್ಲಿ ಅಂಕಿ-ಸಂಖ್ಯೆಗಳ ಹೊರತಾಗಿ ಮತ್ತೇನೂ ಇಲ್ಲ. ಅವರು ಯಾವತ್ತೂ ಸಂಖ್ಯೆಗಳ ಮಗ್ನ, ಲೀನ. ಅವರಿಗೆ ಆ ಪ್ರಪಂಚದಿಂದ ಹೊರಬರುವುದೂ ಸಾಧ್ಯವೇ ಇಲ್ಲ. ಕಳೆದ ಎಂಬತ್ತು ವರ್ಷಗಳಿಂದ ಅವರಿಗೆ ಸಂಖ್ಯಾಶಾಸದ ಹೊರತು ಮತ್ತೇನೂ ಗೊತ್ತಿಲ್ಲ.

ಡಾ.ರಾವ್ ಅಂಕಿ-ಸಂಕಿಗಳ ಮೂಲಕವೇ ವ್ಯವಹರಿಸಬೇಕು, ಅವರು ಮನುಷ್ಯರ ಜತೆಗೆ ಒಡನಾಡುವುದು ಕಮ್ಮಿ ಎಂಬುದು ಅವರ ಬಗ್ಗೆ ಇರುವ ಮೆಚ್ಚುಗೆ ಮತ್ತು ಆಪಾದನೆ. ತಮ್ಮ ಜೀವನವನ್ನೇ ಸಂಖ್ಯಾಶಾಸ್ತ್ರದಂಥ ಕಬ್ಬಿಣ ಕಡಲೆ ಅಥವಾ ಅತ್ಯಂತ ನೀರಸ ವಿಷಯ ಸಂಶೋಧನೆಗೆ ಮುಡಿಪಾಗಿಟ್ಟ ಡಾ.ರಾವ್, ಆ ವಿಷಯದಲ್ಲಿ ಮಾಡಿದ ‘ಗಣಿಗಾರಿಕೆ’ ಮಾತ್ರ ಅಸಾಮಾನ್ಯ. ಸಂಖ್ಯಾಶಾಸದಲ್ಲಿ ಸಾಧ್ಯವೇ ಇಲ್ಲ ಎಂಬ ‘ಸೂತ್ರ’ಗಳನ್ನು ಹರಿದು, ಹೊಸ ಹಗ್ಗ ಹೊಸೆದ ಸೂತ್ರಧಾರ!

ಡಾ.ರಾವ್ ಹುಟ್ಟಿದ್ದು ಬಳ್ಳಾರಿಯ ಹಡಗಲಿಯಲ್ಲಿ. ಅವರ ತಾಯಿ ಮೂಲತಃ ಹಡಗಲಿಯವರು. ತಂದೆ ಅಂಧ್ರದವರು. ಆರಂಭದ ಶಿಕ್ಷಣವನ್ನು ಅವರು ಹಡಗಲಿಯಲ್ಲಿಯೇ, ಕನ್ನಡದ ಮುಗಿಸಿದರು. ಇಂದಿಗೂ ಅವರನ್ನು ಕರ್ನಾಟಕದವರು ಭೇಟಿಯಾದರೆ ಕನ್ನಡದ ಮಾತಾಡುತ್ತಾರೆ. ಕರ್ನಾಟಕ ತಮ್ಮ ಮೂಲ ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ನಂತರ ಅವರ ತಂದೆಯವರು ಆಂಧ್ರಕ್ಕೆ ಉದ್ಯೋಗ ನಿಮಿತ್ತ ತೆರಳಿದ್ದರಿಂದ ಡಾ.ರಾವ್ ಮುಂದಿನ ವಿದ್ಯಾಭ್ಯಾಸವನ್ನು ಗುಡೂರ್, ನುಜ್ವಿದ್, ನಂದಿಗ್ರಾಮ ಮತ್ತು ವಿಶಾಖ ಪಟ್ಟಣಂನಲ್ಲಿ ಮುಂದುವರಿಸಿದರು.

ಅದಾದ ನಂತರ ಗಣಿತ ವಿಷಯದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಆಂಧ್ರ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಅದು ನಲವತ್ತರ ದಶಕ. ದೇಶ ಸ್ವಾತಂತ್ರ್ಯ ಚಳವಳಿಯಲ್ಲಿ ನಿರತವಾಗಿದ್ದ ದಿನಗಳು. ಡಾ.ರಾವ್ ಅವರ ಪಾಲಕರು ಅಷ್ಟೇನೂ ಧನಿ
ಕರೇನಲ್ಲ. ಆದರೆ ಅವರು ಪರಿಚಿತರ ಮನೆಯಲ್ಲಿ ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸವನ್ನು ಮುಗಿಸಿದರು. ೧೯೪೩ರಲ್ಲಿ ಕೋಲ್ಕೊತಾಕ್ಕೆ ಹೋಗಿ ಅಲ್ಲಿನ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ ವಿಷಯದಲ್ಲಿ ಎಂಎ ಪದವಿ ಗಳಿಸಿದರು. ಈ ಎರಡೂ ಸ್ನಾತಕೋತರ ಪದವಿಗಳಲ್ಲಿ ಡಾ.ರಾವ್ ಮೊದಲ Zh ಪಡೆದು ತೇರ್ಗಡೆಯಾಗಿದ್ದು ವಿಶೇಷ.

ಡಾ.ರಾವ್‌ಗೆ ಜೀವನದ ಮಹತ್ವದ ತಿರುವು ಸಿಕ್ಕಿದ್ದು ಅವರಿಗೆ ಬ್ರಿಟನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪಿಎಚ್.ಡಿ. ಮಾಡಲು ಅವಕಾಶ ಸಿಕ್ಕಾಗ. ಆ ದಿನಗಳಲ್ಲಿ ಕಿಂಗ್ಸ್ ಕಾಲೇಜಿನಲ್ಲಿ ಸಂಶೋಧನೆಗೆ ಅವಕಾಶ ಗಿಟ್ಟಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ಡಾ.ರಾವ್ ಅವರ ಶೈಕ್ಷಣಿಕ ಅರ್ಹತೆ, ಆಸಕ್ತಿ ಮತ್ತು ಸಂಶೋಧನೆಗೆ ಆಯ್ದುಕೊಂಡ ವಿಷಯವನ್ನು ನೋಡಿದ ಖ್ಯಾತ ಸಂಖ್ಯಾಶಾಸ್ತ್ರಜ್ಞ, ಗಣಿತಜ್ಞ, ಜೀವಶಾಸ್ತ್ರಜ್ಞ, ಜೀವತಳಿ ಪರಿಣತ ವಿಜ್ಞಾನಿ ಸರ್ ರೊನಾಲ್ಡ್ ಫಿಷರ್ ತಮ್ಮ ಸಂಶೋಧನಾ ವಿದ್ಯಾರ್ಥಿಯನ್ನಾಗಿ ಆಯ್ಕೆ ಮಾಡಿಕೊಂಡರು.

ಇದು ಡಾ.ರಾವ್ ಅವರ ಚಿಂತನೆಯನ್ನೇ ಬದಲಿಸಿತು. ಸರ್ ರೊನಾಲ್ಡ ಫಿಷರ್ ಅವರನ್ನು ಆಧುನಿಕ ಸಂಖ್ಯಾಶಾಸ್ತ್ರ ಪಿತಾಮಹ ಎಂದು ಪರಿಗಣಿಸುತ್ತಾರೆ. ಅಂಥವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದು ಡಾ.ರಾವ್ ಅದೃಷ್ಟ. ಆ ದಿನಗಳಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದ ಸಂಖ್ಯಾಶಾಸ್ತ್ರಜ್ಞರ, ಗಣಿತಜ್ಞರ ಸಂಪರ್ಕಕ್ಕೆ ಬಂದರು. ಕೇಂಬ್ರಿಜ್ಞ್ ವಿಶ್ವವಿದ್ಯಾಲಯದ ಮ್ಯೂಸಿಯಂ ಆಫ್ ಅಂತ್ರಪಾಲಜಿ ಮತ್ತು ಆರ್ಕಿಯಾಲಜಿ ಸಂಸ್ಥೆ ವಿಶೇಷ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುವಂತೆ ಡಾ.ರಾವ್ ಅವರನ್ನು ಆಹ್ವಾನಿಸಿತು.

ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಸಂಸ್ಥಾಪಕರಾದ ಪಿ.ಸಿ.ಮಹಾಲನೋಬಿಸ್ ಅಭಿವೃದ್ಧಿಪಡಿಸಿದ ವಿಧಾನವನ್ನು ಅರ್ಥ ಮಾಡಿಕೊಂಡು ಯೋಜನೆಗೆ ಅಳವಡಿಸುವುದು ಅವರಿಗೆ ನೀಡಿದ ಕೆಲಸವಾಗಿತ್ತು. ಅದನ್ನು ಅರ್ಥೈಸಿಕೊಳ್ಳುವುದು ಚಕ್ರವ್ಯೂಹವನ್ನು ಭೇದಿಸಿದಂತೆ ಎಂದು ಪರಿಣತರು ಭಾವಿಸಿದ್ದರು. ಆದರೆ ಡಾ.ರಾವ್ ಅದನ್ನು ಅತಿ ಕಡಿಮೆ ಅವಧಿಯಲ್ಲಿ ಅದರ ರಹಸ್ಯವನ್ನು ಅರ್ಥ ಮಾಡಿಕೊಂಡು, ಅದನ್ನು ಸರಳವಾಗಿ ಜಾರಿಗೊಳಿಸುವ ಮಾರ್ಗವನ್ನು ತಿಳಿಸಿಕೊಟ್ಟರು. ಆ ದಿನಗಳಲ್ಲಿ ಇದನ್ನು ಸಂಖ್ಯಾಶಾಸ್ತ್ರದ ಅಸಾಧಾರಣ ಸಾಧನೆ ಎಂದು ಪರಿಗಣಿಸಲಾಗಿತ್ತು.

ಸರ್ ರೊನಾಲ್ಡ್ ಫಿಷರ್‌ಗೆ ಡಾ.ರಾವ್ ಅಂದ್ರೆ ಶೇಷ ಮಮತೆ. ಯಾರಿಂದಲೂ ಸಾಧ್ಯವಾಗದ ಸಮಸ್ಯೆಯನ್ನು ಕೊಟ್ಟರೆ, ತಮ್ಮ ಶಿಷ್ಯ ಪರಿಹಾರವಿಲ್ಲದೇ ಮರಳುವುದಿಲ್ಲ ಎಂಬ ಭರವಸೆ. ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಸರ್ ಫಿಷರ್, ‘ಡಾ.ರಾವ್ ಅವರಂಥ ಪರಿಣತರಿಂದ ಯಾರೂ ಊಹಿಸಲು ಆಗದ ಸಾಧನೆಯನ್ನು ನಿರೀಕ್ಷಿಸಬಹುದು. ಅವರು ಸಂಖ್ಯಾ ಶಾಸ್ತ್ರದ ಅಡಿಪಾಯವನ್ನು ವಿಸ್ತರಿಸಿದವರು’ ಎಂದು ಕೊಂಡಾಡಿದ್ದರು.

ಮುಂದೆ ಸರ್ ರೊನಾಲ್ಡ್ ಫಿಷರ್ ಮತ್ತು ಡಾ.ರಾವ್ ಇಬ್ಬರೂ ಜತೆಗೂಡಿ ಒಂದು ಥೇರಮ್ ಕಂಡು ಹಿಡಿದರು. ಈ ಥೇರಮ್ಮನ್ನು ಅಂತಾರಾಷ್ಟೀಯ ಜರ್ನಲ್ ಪ್ರಕಟಿಸುವ ಸಂದರ್ಭದಲ್ಲಿ ಡಾ.ರಾವ್ ಹೆಸರನ್ನು ಕೈಬಿಟ್ಟಿದ್ದರೂ ಆಗುತ್ತಿತ್ತು. ಸಾಮಾನ್ಯವಾಗಿ ರೀಸರ್ಚ್ ಗೈಡ್‌ಗಳು  ದನ್ನೇ ಮಾಡುತ್ತಿದ್ದರು. ಆದರೆ ಸರ್ ಫಿಷರ್ ಹಾಗೆ ಮಾಡಲಿಲ್ಲ. ಡಾ.ರಾವ್ ಹೆಸರನ್ನೂ ಸೇರಿಸುವಂತೆ ಹಠ ಹಿಡಿದರು.

ಇಂದಿಗೂ ಸಂಖ್ಯಾಶಾಸ್ತ್ರದಲ್ಲಿ ಅದನ್ನು ಫಿಷರ್ – ರಾವ್ ಥೇರಮ್ ಎಂದೇ ಜನಜನಿತವಾಗಿದೆ. ತಮ್ಮ ವಿದ್ಯಾರ್ಥಿಯನ್ನು ಸರ್ ಫಿಷರ್ ಬಿಟ್ಟುಕೊಡಲಿಲ್ಲ. ಅದಾದ ಬಳಿಕ ಅವರು ಯಾರ ಜತೆಯಲ್ಲಿ ಕೆಲಸ ಮಾಡಿದರೋ, ಅವರೆಲ್ಲ ತಮ್ಮ ಸಂಶೋಧನಾ ಕಾಣ್ಕೆಗೆ ರಾವ್ ಹೆಸರನ್ನೂ ಸೇರಿಸಿರುವುದನ್ನು ಗಮನಿಸಬಹುದು. ಕ್ರಮೇರ್ – ರಾವ್ ಥೇರಮ, ರಾವ್-ಬ್ಲಾಕ್ ವೆಲ್ ಥೇರಮ, ರಾ ಡಿಫರೆನ್ಷಿಯಲ್ ಜಿಯೋಮೆಟ್ರಿ ಸಂಖ್ಯಾಶಾಸ್ತ್ರಕ್ಕೆ ಅವರು ನೀಡಿದ ಮಹತ್ತರ ಕೊಡುಗೆಗಳಾಗಿವೆ.

ಭಾರತೀಯ ಸಂಖ್ಯಾಶಾಸ ಸಂಸ್ಥೆಯ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯಲ್ಲಿ ಸುಮಾರು ನಲವತ್ತು ವರ್ಷಗಳ
ಕಾಲ ನಿರ್ದೇಶಕರಾಗಿ ಹಾಗೂ ಮುಖ್ಯಸ್ಥರಾಗಿ ಕೆಲಸ  ಮಾಡಿದ ಅವರು, ಈ ವಿಷಯದಲ್ಲಿ ದೇಶವೇ ಅಭಿಮಾನ ಪಡುವ ವಿಷಯ ಪರಿಣತರನ್ನು ರೂಪಿಸಿದರು. ಡಾ.ರಾವ್ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಏಶಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್‌ನ್ನು ಟೋಕಿಯೋದಲ್ಲಿ ಸ್ಥಾಪಿಸಿದ್ದು ಗಮನಾರ್ಹ.

ಈ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕಾರ ಮತ್ತು ಕೈಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಸಂಖ್ಯಾಶಾಸ್ತ್ರ ನಿರ್ವಹಣೆಯಲ್ಲಿ ತರಬೇತಿ ನೀಡುತ್ತಿದೆ. ಸಂಖ್ಯಾಶಾಸ್ತ್ರ ಮತ್ತು ಗಣಿತ-ಸಂಖ್ಯಾಶಾಸ್ತ್ರ ವಿಷಯದಲ್ಲಿ ಡಾ.ರಾವ್ ಜಗತ್ತಿನ ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸ ನೀಡಿದ ಮೊದಲ ಭಾರತೀಯ. ಹತ್ತೊಂಬತ್ತು ದೇಶಗಳ ನಲವತ್ತು ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುವುದೇ ಇದಕ್ಕೆ ನಿದರ್ಶನ. ಭಾರತ, ಬ್ರಿಟನ್, ಇಟಲಿ ಮತ್ತು ಅಮೆರಿಕದ ಎಂಟು ರಾಷ್ಟ್ರೀಯ ಅಕಾಡೆಮಿಗಳಿಗೆ ಅವರು ಸದಸ್ಯರಾಗಿದ್ದಾರೆ.

ಸಂಖ್ಯಾಶಾಸ್ತ್ರಕೆ ಸಂಬಧಿಸಿದ ಭಾರತ ಮತ್ತು ಅಂತಾರಾಷ್ಟ್ರೀಯ ಸ್ಥರದ ಎಲ್ಲಾ ಸಂಸ್ಥೆಗಳಿಗೆ (ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರ ಸಂಸ್ಥೆ, ಇನ್ಸ್ಟಿಟ್ಯೂಟ್ ಆಫ್ ಮಥೇಮೆಟಿಕಲ್ ಸ್ಟ್ಯಾಟಿಸ್ಟಿಕ್ಸ್, ಅಂತಾರಾಷ್ಟ್ರೀಯ ಬಯೋಮೆಟ್ರಿಕ್ ಸೊಸೈಟಿ
ಸೇರಿ) ಡಾ.ರಾವ್ ಮುಖ್ಯಸ್ಥರಾಗಿ, ಸದಸ್ಯರಾಗಿ, ಸಲಹೆಗಾರರಾಗಿ, ಒಂದಿಂದು ರೀತಿಯಲ್ಲಿ ಸಂಪರ್ಕವನ್ನು ಹೊಂದಿದ್ದಾರೆ.

೧೯೯೧ ರಲ್ಲಿ The Journal of Quantitative Economics ಇಡೀ ಸಂಚಿಕೆಯನ್ನು ಡಾ.ರಾವ್ ಅವರಿಗೇ ಮೀಸಲಾಗಿಟ್ಟು ಅವರ ಸೇವೆಯನ್ನು ಸ್ಮರಿಸಿತ್ತು. ಈ ರೀತಿಯ ಗೌರವ ಸಂದಿರುವುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ.
ಸಂಖ್ಯಾಶಾಸದಲ್ಲಿ ಅಗಾಧ ಸಾಧನೆ ಮಾಡಿದ ಡಾ.ರಾವ್‌ಗೆ ‘ನಿಮಗೆಷ್ಟು ಪ್ರಶಸ್ತಿಗಳು ಬಂದಿವೆ?’ ಎಂದು ಕೇಳಿದರೆ ತಡ
ಕಾಡುತ್ತಾರೆ. ‘ಅವನ್ನೆ ಲೆಕ್ಕವಿಟ್ಟವರು ಯಾರು?’ ಎಂದು ಕೇಳುತ್ತಾರೆ. ಒಂದು ಅಂದಾಜಿನ ಪ್ರಕಾರ ಅವರಿಗೆ, ಎರಡು
ಸಾವಿರಕ್ಕಿಂತ ಅಽಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಬಂದಿವೆಯಂತೆ.

ನಾನು ಡಾ.ರಾವ್ ಕುರಿತು ಅಭಿಮಾನ ಪಡಲು ಇದಕ್ಕೂ ಹೆಚ್ಚಿನ ಕಾರಣಗಳಿವೆ. ೧೯೮೦ ರಲ್ಲಿ ಸರಕಾರದ ಸೇವೆಯಿಂದ
ನಿವೃತ್ತರಾದ ಡಾ.ರಾವ್, ಬಳಿಕ ಒಂದು ವರ್ಷ ಬೇರೆ ಬೇರೆ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದರು. ನಂತರ
ಅಮೆರಿಕದಲ್ಲಿ ನೆಲೆಸಿರುವ ತಮ್ಮ ಮಗಳು ಮತ್ತು ಮೊಮ್ಮಕ್ಕಳೊಂದಿಗೆ ಕೆಲದಿನಗಳ ಕಾಲ ಇರಲು ಅಲ್ಲಿಗೆ ಹೋದರು. ಡಾ.ರಾವ್ ಅವರ ನಿವೃತ್ತಿ ಮತ್ತು ಅವರ ಸಾಧನೆಯನ್ನು ಬಲ್ಲ ಅಮೆರಿಕದ ವಿಶ್ವವಿದ್ಯಾಲಯಗಳು ಅವರನ್ನು ಆಹ್ವಾನಿಸಿದವು.
ಅವರು ತಮ್ಮ ೬೨ನೇ ವಯಸ್ಸಿನಲ್ಲಿ ಪಿಟ್ಸಬರ್ಗ್ ಯುನಿವರ್ಸಿಟಿಯಲ್ಲಿ ಸಂಖ್ಯಾಶಾಸ ಪ್ರೊಫೆಸರ್ ಆಗಿ ಸೇರಿಕೊಂಡರು.

ಡಾ.ರಾವ್ ಮೊದಲಿಗಿಂತ ಹೆಚ್ಚು ಕ್ರಿಯಾಶೀಲರಾದರು. ಅವರ ಸುತ್ತಾಟವೂ ಹೆಚ್ಚಿತು. ವಿಶ್ರಾಂತ ಜೀವನ ಅವರಿಂದ
ದೂರವಾಯಿತು. ಎಪ್ಪತ್ತನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಡಾ.ರಾವ್ ಅವರಿಗೆ ವಿಭಾಗದ ಮುಖ್ಯಸ್ಥ
ರಾಗುವಂತೆ ಆಹ್ವಾನಿಸಿತು. ತಮ್ಮ ಎಪ್ಪತ್ತೈದನೇ ವಯಸ್ಸಿನಲ್ಲಿ ಅವರು ಅಮೆರಿಕದ ನಾಗರಿಕತ್ವ ಪಡೆದುಕೊಂಡರು.

ಪ್ರತಿ ತಿಂಗಳು ಅವರು ಏನಿಲ್ಲವೆಂದರೂ ಐದು ವಿಶ್ವವಿದ್ಯಾಲಯ ಗಳಿಗೆ ಅತಿಥಿ ಉಪನ್ಯಾಸಕರಾಗಿ, ನಾಲ್ಕು ವರ್ಷಗಳ ಕಾಲ
ಹೋದರು. ಡಾ.ರಾವ್‌ಗೆ ೮೨ ವರ್ಷಗಳಾದಾಗ, ಅಮೆರಿಕದ ವೈಟ್ ಹೌಸ್, ಪ್ರತಿಷ್ಠಿತ ‘ನ್ಯಾಷನಲ್ ಮೆಡಲ್ ಫಾರ್ ಸೈ’
ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಸ್ವತಃ ಅಮೆರಿಕದ ಅಧ್ಯಕ್ಷರೇ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ೧೯೬೮
ರ ಭಾರತ ಸರಕಾರ ಡಾ.ರಾವ್‌ಗೆ ಪದ್ಮಭೂಷಣ ನೀಡಿತು. ಅದಾಗಿ ೩೩ ವರ್ಷಗಳ ಬಳಿಕ ಪದ್ಮವಿಭೂಷಣ ನೀಡಿತು.
ನನಗೆ ಸೋಜಿಗವಾಗಿರುವ ಸಂಗತಿಯೆಂದರೆ, ಡಾ.ರಾವ್ ಗೆ ನೂರಾ ಮೂರು ವರ್ಷಗಳಾದವು. ಆದರೆ ಅವರಿನ್ನೂ
ನಿವೃತ್ತರಾಗಿಲ್ಲ. ಯುವಕರೂ ನಾಚುವಂತೆ, ಇಂದಿಗೂ ದಿನಕ್ಕೆ ಹದಿನಾಲ್ಕು ಗಂಟೆ ಕೆಲಸ ಮಾಡುತ್ತಾರೆ.

ಒಬ್ಬರೇ ದೇಶ-ವಿದೇಶ ಸುತ್ತಾಡುತ್ತಾರೆ. ಗಂಟೆಗಟ್ಟಲೆ ನಿಂತು ಪಾಠ ಮಾಡುತ್ತಾರೆ, ಉಪನ್ಯಾಸ ನೀಡುತ್ತಾರೆ. ದಿನದಲ್ಲಿ ಎರಡು ಗಂಟೆ ಅಧ್ಯಯನಕ್ಕೆ ಮುಡಿಪಾಗಿಡುತ್ತಾರೆ. ಯಾವ ಕಾಯಿಲೆಯೂ ಅವರ ಸುತ್ತ ಸುಳಿದಿಲ್ಲ. ಇಂದಿಗೂ ಅವರು ಫಿಟ್! ಅರವತ್ತಾಗುತ್ತಿದ್ದಂತೆ, ನಿವೃತ್ತರಾದರೆ ತಮ್ಮ ಜೀವನವೇ ಮುಗಿಯಿತು ಎಂದು ಅನೇಕರು ಭಾವಿಸುತ್ತಾರೆ. ಇನ್ನು ಕೆಲವರು ಅದಕ್ಕೂ ಮುನ್ನವೇ ಟಯರ್ಡ್, ರಿಟಯರ್ಡ್ ಆಗಿರುತ್ತಾರೆ. ಆದರೆ ಡಾ.ರಾವ್ ಮಾತ್ರ ತಾವು ಚಿರಯುವಕ ಎಂದು ಭಾವಿಸಿಕೊಂಡಂತಿದೆ. ಅದಕ್ಕೆ ಅವರ ದೇಹವೂ ಸಹಕರಿಸುತ್ತಿರುವುದು ಆಶ್ಚರ್ಯವೇ ಸರಿ.

ಕೆಲ ವರ್ಷಗಳ ಹಿಂದೆ, ಡಾ.ರಾವ್ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘ಬ್ಯಾಲೆ ಡಾನ್ಸರ್‌ಗೆ ಜನ, ಸ್ಥಳದ ಎದ್ದು ನಿಂತು ಕರತಾಡನ ಮಾಡಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಆದರೆ ಮನುಕುಲಕ್ಕೆ ಉಪಕಾರಿಯಾಗುವಂಥ ಸಂಶೋಧನೆ ಮಾಡಿದರೂ, ವಿಜ್ಞಾನಿಗೆ ಆತನ ಜೀವಿತ ಕಾಲದ ಕೊನೆಯಲ್ಲಿ ಮಾನ್ಯತೆ, ಸಮ್ಮಾನ ಸಿಗಬಹುದು, ಸಿಗದೇ ಹೋಗಬಹುದು.
ಅದರಲ್ಲೂ ಸಂಖ್ಯಾಶಾಸ ವಿಜ್ಞಾನಿ ಇಂಥ ಯಾವುದನ್ನೂ ನಿರೀಕ್ಷಿಸಲೇ ಬಾರದು. ಒಂದು ವೇಳೆ ನಮ್ಮ ಕೆಲಸವನ್ನು ಗುರುತಿಸಿ ದರೆ, ಅದು ನಮ್ಮವರಲ್ಲ, ವಿದೇಶಿಯರು. ವಿದೇಶಿಯರು ಗುರುತಿಸಿದ ಬಳಿಕ ನಮ್ಮವರು ಗೌರವಿಸುತ್ತಾರೆ.

ಆದರೆ ಗಣಿತ-ಸಂಖ್ಯಾಶಾಸ್ತ್ರಜ್ಞರು ಇದ್ಯಾವುದನ್ನೂ ಲೆಕ್ಕಿಸದೇ ತಮ್ಮ ಪಾಡಿಗೆ ಕೆಲಸ ಮಾಡಬೇಕು. ನಾನು ಇದನ್ನೇ
ಮಾಡಿದ್ದೇನೆ. ನಮ್ಮ ಕೆಲಸವೇ ನಮಗೆ ಸಮಾಧಾನ, ಸಮ್ಮಾನ ಕೊಟ್ಟರೆ ಸಾಕು’ ಎಂದು ಹೇಳಿದ್ದರು. ನಿವೃತ್ತರಾದವರಿಗೆ ಮತ್ತು ನಿವೃತ್ತರಾಗದವರಿಗೆ ಡಾ.ರಾವ್ ಒಬ್ಬ ಅತ್ಯುತ್ತಮ ರೋಲ್ ಮಾಡೆಲ್!