Friday, 13th December 2024

ಕಾರಿನ ಬಳಕೆ ಪ್ರತಿಷ್ಠೆಯ ಸಂಕೇತವೇ ?

ಅಭಿಮತ

ಮಾಲಾ ಮ ಅಕ್ಕಿಶೆಟ್ಟಿ

ಮನುಷ್ಯ ಆಧುನಿಕ ಜೀವನಕ್ಕೆ ಹೊಂದಿಕೊಂಡು ಸೌಖ್ಯವನ್ನು ಜಾಸ್ತಿ ಬಯಸುತ್ತಾನೆ. ಆರಾಮದಾಯಕ ಜೀವನಶೈಲಿ ಮೊದಲ ಆದ್ಯತೆ. ದಿನವೂ ಪರಿಚಿತಗೊಳ್ಳುವ ಗ್ಯಾಜೆಟ್‌ಗಳನ್ನು ಬಳಸಲು ಹವಣಿಸುವುದು ಸ್ವಾಭಾವಿಕ. ಇಂಥ ಸವಲತ್ತುಗಳಿಗೆ ಅಂಟಿ ಕೊಂಡವ, ಅವುಗಳಿಲ್ಲದೇ ಜೀವನವೇ ಅಸಾಧ್ಯ ಎನ್ನುವ ಮಟ್ಟಿಗೆ ಮೊರೆ ಹೋಗಿದ್ದು ಸತ್ಯ. ಅವುಗಳಲ್ಲಿ ಕಾರು ಕೂಡ ಒಂದು.

ಮೊದಲೆಲ್ಲ ಕಾರುಗಳಿಲ್ಲದೇ ಜೀವನ ಸಾಗುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರೆ ‘ನಡೆಯುತ್ತಿತ್ತು, ಈಗ ಸೌಲಭ್ಯಗಳು ಇವೆ ಎಂದಾಗ ಯಾಕೆ ಬಳಸಬಾರದು’ ಎಂಬ ಮರು ಪ್ರಶ್ನೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಕಾರುಗಳು ಬೇಡವೆಂದಲ್ಲ. ಅವುಗಳ ಬಳಕೆ ಯನ್ನು ಕಡಿಮೆ ಮಾಡಬಹುದಾದ ಸಂದರ್ಭಗಳಿದ್ದರೂ ಮನುಷ್ಯ ಬಳಸಿಕೊಳ್ಳುತ್ತಿಲ್ಲ ಎಂಬ ಖೇದ. ಸೆಪ್ಟೆಂಬರ್ 22 ವಿಶ್ವ ಕಾರು ರಹಿತ ದಿನವೆಂದು (ವಲ್ಡ್ ಕಾರ್ ಫ್ರೀ ಡೇ) ಎಂದು ಜಗತ್ತು ಆಚರಿಸುವಾಗ ಈ ವಿಷಯ ಗಂಭೀರವಾಗುತ್ತದೆ. ಮನೆಯಲ್ಲಿ ರುವ ನಾಲ್ಕು ಜನರಿಗೆ, ನಾಲ್ಕು ಕಾರುಗಳಿದ್ದ ಉದಾಹರಣೆಗಳಿವೆ. ದುಡ್ಡಿನ ಸೌಲಭ್ಯ, ಕೆಲಸದ ಒತ್ತಡ, ಬೇರೆ ಬೇರೆಯಾದ ಕೆಲಸದ ವೇಳೆಗಳ ಸಬೂಬುಗಳನ್ನು ತೋರಿಸಿ ಬಳಸುವವರಿದ್ದಾರೆ. ಬಳಕೆ ಪ್ರತಿಷ್ಠೆಯ ಸಂಕೇತ. ಒಂದು ಕ್ಷಣ, ಎಲ್ಲರೂ ಇಲ್ಲಾದರೆ ಇಬ್ಬರಾದರೂ ಒಂದೇ ವೇಳೆ ಕೆಲಸಕ್ಕೆ ಹೋಗುವ ಹೊಂದಾಣಿಕೆ ಮಾಡಿಕೊಳ್ಳಬಹುದಾ ಎಂದು ಯೋಚಿಸ ಬಹುದು. ಇದು ದೊಡ್ಡ ದೊಡ್ದ ಶ್ರೀಮಂತರದು. ಮಧ್ಯಮ ವರ್ಗದ ಜನರೂ ಕಾರುಗಳನ್ನು ಬಳಸುತ್ತಿದ್ದಾರೆ. ಸಂತೋಷವೇ.

ದೇಶದ ಬಹುಮತ ನಮ್ಮಂಥ ಮಧ್ಯಮ ವರ್ಗದವರದೇ ಆಗಿದೆ. ಎಲ್ಲರೂ ಅಂದರೆ ಮನೆ ಮಂದಿಯೆಲ್ಲ ಕೂಡಿ ಹೋಗುವ ಸಂದರ್ಭದಲ್ಲಿ ಕಾರು ನಿಜವಾಗಲೂ ಸಹಾಯಕ. ಅವರಿಗಿದ್ದ ತೊಂದರೆಯೆಂದರೆ ತಮ್ಮ ಕಾರನ್ನು ಮನೆಯ ಕಂಪೌಂಡ್ ಒಳಗೆ ಇಟ್ಟುಕೊಳ್ಳಲಾಗುತ್ತಿಲ್ಲ. ಕಾಂಪೌಂಡ್ ಹೊರಗೆ ಇಡುತ್ತಾರೆ. ಇಡಲು ಸಹಾಯಕವಾಗಲೆಂದು ಮನೆ ಮುಂದೆ ನೆಟ್ಟ ದೊಡ್ಡ ದೊಡ್ಡ ಗಿಡಗಳನ್ನು ಉರುಳಿಸಿ, ಕಾರು ಪಾರ್ಕಿಂಗ್ ಜಾಗ ಮಾಡಿಕೊಂಡಿದ್ದಾರೆ. ಇಂಥ ಓಣಿಗಳನ್ನು ನೋಡಿದರೆ ಕಾರು ಪಾರ್ಕಿಂಗ್
ಏರಿಯಾಗಳಿಗೆ ಬಂದಂತೆ ಭಾಸವಾಗುತ್ತದೆ. ಏಕೆಂದರೆ ಇರುವ 30-40 ಪ್ಲಾಟ್‌ನಲ್ಲಿ ಮನೆಯನ್ನು ಎಷ್ಟು ಕಟ್ಟಿ ಎಷ್ಟು ಜಾಗ ಕಾರು ಪಾರ್ಕಿಂಗ್‌ಗೆ ಬಿಡುವುದು. ಕಷ್ಟ… ಇದೇ ಸಂದರ್ಭಕ್ಕೆ ಮತ್ತೊಂದು ಕಾರ್ ಬಂದರೆ ಆಚೆ ಈಚೆ ನಿಂತ ಕಾರ್ ಮಧ್ಯೆ ಇದ್ದ ಸ್ವಲ್ಪ ಜಾಗದಲ್ಲೇ ಹೋಗಬೇಕು. ಅಕಸ್ಮಾತ್ ಬೇರೆ ಕಾರೊಂದು ಈ ಕಡೆಗೆ ಬರಲು ಹವಣಿಸುತ್ತಿದ್ದರೆ ವೇಟ್ ಮಾಡಬೇಕಾಗುತ್ತದೆ. ದೊಡ್ಡ ಕಾರ್ ಇದ್ದರಂತೂ ದಾಟುವುದೇ ಇಲ್ಲ.

ತಮಾಷೆಗೆ ಆತ್ಮೀಯರೊಬ್ಬರನ್ನು ಸೆಪ್ಟೆಂಬರ್ 22ರಂದು ಒಂದು ದಿನ ಕಾರು ಬಳಕೆ ಬಿಡಬಹುದಾ ಎಂದಾಗ ಅರೆ, ಅವತ್ತೇ ಕಾರು ಉಪಯೋಗಿಸುವ ಅನಿವಾರ್ಯ ಬಂದರೆ ಏನು ಮಾಡುವುದು ಎಂಬ ಹಾಸ್ಯದ ಉತ್ತರ ಹಾರಿ ಬಂದಿತ್ತು. ಅನಿವಾರ್ಯ ಎಂಬು ದಕ್ಕೆ ಎಲ್ಲ ಕಾಲದಲ್ಲೂ ವಿನಾಯಿತಿ ಇದೆ. ಇದು ಒಂದು ದಿನದ ಪ್ರಯೋಗವೂ ಅಲ್ಲ. ಉದ್ದೇಶ ಕಾರುಗಳನ್ನು ಸಾಧ್ಯ ವಾದರೆ ಕಡಿಮೆ ಬಳಸಿ ಎಂಬುದು. ಈಗಿನ ಕರೋನಾ ದಿನಗಳಲ್ಲಿ ಜನ ಜಾಸ್ತಿನೇ ಕಾರು ಬಳಸುತ್ತಿದ್ದಾರೆ. ಸಾರ್ವಜನಿಕ ವಾಹನಗಳ ಬಳಕೆ ಕರೋನಾ ಸೋಂಕಿಗೆ ಆಹ್ವಾನವೆಂದು, ತುಟ್ಟಿ ಎನಿಸಿದರೂ ಅನಿವಾರ್ಯವಾಗಿ ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಈ ಸಂದರ್ಭಕ್ಕೆ ಅದು ಸರಿಯೇನೋ. 1973ರಲ್ಲಿ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಸ್ವಿಜರ್ ಲ್ಯಾಂಡ್ ದೇಶ ತನ್ನ ಜನರಿಗೆ 4 ದಿನಗಳ ವರೆಗೆ (ಒಂದು ದಿನ ಎನ್ನುತ್ತಾರೆ) ವೈಯಕ್ತಿಕ ವಾಹನ ಬಳಸದಿರುವಂತೆ ಕರೆ ನೀಡಿತ್ತಂತೆ. ಇದೇ ಮುಂದೆ ಸೆಪ್ಟೆೆಂಬರ್ 22ಕ್ಕೆ ಪೂರಕವಾಗಿದೆ ಎನ್ನಬಹುದು. ಬಹಳಷ್ಟು ನಗರಗಳು ಈ ದಿನ ದಿನವನ್ನು ಒಪ್ಪಿಕೊಂಡಿವೆ. EU ದೇಶಗಳು ಇದನ್ನು ಬೆಂಬಲಿಸಿವೆ.