Saturday, 14th December 2024

ಸುಪ್ತ ಪ್ರಜ್ಞೆ ಎಂಬ ಬದುಕಿನ ಪುಟಗಳ ನಡುವೆ…

ಶ್ವೇತಪತ್ರ

shwethabc@gmail.com

ನಮ್ಮ ಬದುಕಿನ ಪ್ರತಿ ಪುಟಗಳೂ ಸುಪ್ತಪ್ರಜ್ಞೆಯ ಭಾಗವೇ ಆಗಿರುತ್ತವೆ ಮತ್ತು ನಾವು ಈ ಪುಟಗಳನ್ನು ನಮ್ಮ ಆಲೋಚನೆ, ಕಲ್ಪನೆಗಳ ಮೂಲಕ
ತುಂಬಿಸುತ್ತಲೇ ಇರುತ್ತೇವೆ. ‘ಹೆಸರಲ್ಲೇನಿದೆ?’ ಎಂದು ಕೇಳಿದ್ದಾನೆ ಷೇಕ್ಸ್‌ಪಿಯರ್. ಆದರೆ, ಇಲ್ಲಿ ನಾನು ಹೇಳುತ್ತಿರುವ ಹೆಸರು ನಮ್ಮ ಲಿಂಗ, ದೇಶ, ಹಿನ್ನೆಲೆ, ತರಬೇತಿ, ಶಿಕ್ಷಣ, ಆರ್ಥಿಕತೆ, ಸಾಮಾಜಿಕ ಸ್ಥಿತಿ ಹಾಗೂ ನಮಗೆ ಸಂಬಂಧಿಸಿದ ಎಲ್ಲವೂ ಆಗಿದೆ.

ಷೇಕ್ಸ್‌ಪಿಯರ್ ಬರೆದ ಅನೇಕ ನಾಟಕಗಳ ಪೈಕಿ ‘ರೋಮಿಯೋ-ಜೂಲಿಯಟ್’ ಅನ್ನು ಪರಿಗಣಿಸಿ ದರೆ, ಇದು ನಮ್ಮ ಪ್ರಜ್ಞೆ ಹಾಗೂ ಸುಪ್ತಪ್ರಜ್ಞೆಗೆ ಪ್ರತೀಕವಾದ ಒಂದು ಉದಾಹರಣೆಯಂತಿರುವುದು ಅರಿವಿಗೆ ಬರುತ್ತದೆ. ಅಲ್ಲದೆ, ನಮ್ಮ ಪ್ರಜ್ಞೆ ಹಾಗೂ ಸುಪ್ತಪ್ರಜ್ಞೆಯು ಸಾಮರಸ್ಯದಿಂದ ಕಲೆತರೆ ಅಲ್ಲಿ ಮೂಡುವುದು ನೆಮ್ಮದಿ, ಖುಷಿ, ಸಂತೋಷ, ಆರೋಗ್ಯ, ಸಮೃದ್ಧಿ ಹಾಗೂ ಭದ್ರತೆ. ಇವೆರಡರ ನಡುವಿನ ಸಾಮರಸ್ಯದ ಕೊಂಡಿ ಕಳಚಿದರೆ, ಅದು ಬದುಕಲ್ಲಿ ದುಃಖ, ನೋವು, ಅನಾರೋಗ್ಯ, ಬಳಲಿಕೆಯನ್ನು ಮೂಡಿಸುತ್ತದೆ.

ಹಾಗಾಗಿ ಬದುಕಿಗೆ ಹೊಸ ಹೆಸರನ್ನು, ಹೊಸ ಉದ್ದೇಶವನ್ನು, ಹೊಸ ನೀಲಿನಕ್ಷೆಯನ್ನು ನಮ್ಮದೇ ಪರಿಕಲ್ಪನೆಯಲ್ಲಿ ನೀಡುತ್ತಾ ಹೋಗಬೇಕು. ನಮಗೆ ನಮ್ಮೊಳಗಿನ ಮನಸ್ಸುಗಳಿಂದ, ಆಲೋಚನೆ ಗಳಿಂದ, ನಮ್ಮೊಳಗಿನ ನಮ್ಮಿಂದ ಬಿಡುಗಡೆ ಬೇಕಿದೆ. ಅನೇಕ ಅತಿರೇಕಗಳಿಂದ ನಾವು ಸುತ್ತುವರಿಯಲ್ಪಟ್ಟಿದ್ದೇವೆ. ಉದಾಹರಣೆಗೆ, ‘ಈ ಹವಾಗುಣ ನನಗೆ ನೆಗಡಿಯನ್ನು ತಂದೊಡ್ಡುತ್ತದೆ ಅಥವಾ ಈ ಹವಾಗುಣದಲ್ಲಿ ನನ್ನ ಕಾಲನ್ನು ಹೆಚ್ಚು ಹೊತ್ತು ನೆನೆಸಿದರೆ ನನಗೆ ನ್ಯುಮೋನಿಯಾ ಬಂದುಬಿಡಬಹುದು’ ಎಂದುಕೊಳ್ಳುವಿಕೆ. ಇನ್ಯಾರೋ ಸೀನಿದರೆ ಇಲ್ಲಿ ನಮಗೆ ಕ್ರಿಮಿಗಳ, ವೈರಸ್‌ನ ಚಿಂತೆ. ಹೀಗೆ ಬೇಡದ ಯೋಚನೆಗಳನ್ನು ನಿರೀಕ್ಷಿಸುತ್ತಾ ಕೂರುವುದು.

ಇನ್ನು ಕೆಲವರ ಕೊರಗು ಹೀಗಿರುತ್ತದೆ: ‘ನನಗ್ಯಾರೂ ಗಾಡ್-ದರ್ ಇಲ್ಲ, ಹಾಗಾಗಿ ನನಗೆಲ್ಲೂ ಕೆಲಸ ಸಿಗಲ್ಲ’. ಹೀಗೆ ಯೋಚಿಸುತ್ತಾ, ಕೊರಗುತ್ತಾ
ತಮ್ಮೊಳಗಿನ ಸೃಜನಶೀಲ ಶಕ್ತಿಯನ್ನು ಕಳೆದುಕೊಂಡುಬಿಟ್ಟಿರುತ್ತಾರೆ. ಮತ್ತೊಂದಷ್ಟು ಜನ ತಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆ ಯೂ ಸರ್ವಶಕ್ತಿಯ ಪ್ರಭಾವವೆಂದು ಭಾವಿಸುತ್ತಾ ಅದನ್ನು ವಿರೋಧಿಸಲು ಹೋಗುವುದಿಲ್ಲ ಅಥವಾ ಅದನ್ನು ಸವಾಲಾಗಿ ಸ್ವೀಕರಿಸಿ ಮುಂದುವರಿ ಯಲು ಪ್ರಯತ್ನಿಸುವುದಿಲ್ಲ. ಹೀಗಾಗಿ ನಾವೆಲ್ಲ ನಮ್ಮ ಮನದೊಳಗಣ ಅನಂತವಾದ ಕೊನೆಯಿಲ್ಲದ ಶಕ್ತಿಯ ಬಾಗಿಲುಗಳನ್ನು ಆದಷ್ಟು ಬೇಗ ತೆರೆಯಬೇಕಿದೆ.

ಕೆಲವೊಮ್ಮೆ ನಾವೇನಾದರೂ ನಕಾರಾತ್ಮಕವಾಗಿರುವುದನ್ನು ಮಾತಾಡಿದಾಗ ಕೆಲವರು, ‘ಹೇ… ಹಾಗೆ ಮಾತನಾಡಬಾರದು, ಟಚ್ ವುಡ್ (ಮರ ಮುಟ್ಟು)’ ಎನ್ನುತ್ತಾರೆ, ಮರಕ್ಕೋ, ಮರದ ತೊಗಟೆಗೋ ಏನೋ ಶಕ್ತಿ ಇದೆ ಎನ್ನುವಂತೆ. ನೋಡಿದ್ದೀರಾ? ಕೇಳಿದ್ದೀರಾ? ಹಾಗಿದ್ದರೆ ನಮ್ಮನ್ನು ನಿಯಂತ್ರಿಸುವ ಶಕ್ತಿ ಬೇರೆಯವರಿಗಿದೆಯೇ? ಪರಿಸರಕ್ಕಿದೆಯೇ? ಹವಾಗುಣಕ್ಕಿದೆಯೇ? ಇವೆಲ್ಲ ವಾದಗಳಲ್ಲಿ ಅರ್ಥವಿಲ್ಲದಿದ್ದರೂ, ಆ ಯಾವಕ್ಕೂ ನಮ್ಮನ್ನು ನಿಯಂತ್ರಿಸುವ ಶಕ್ತಿಯಿಲ್ಲ. ಆ ಶಕ್ತಿ ಇರುವುದು ನಮ್ಮೊಳಗಿನ ನಮಗಷ್ಟೇ, ನೆನಪಿರಲಿ!

ಕೆಲವರು ತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳುತ್ತಾರೆ ನೋಡಿದ್ದೀರಾ? ಕೇಳಿದ್ದೀರಾ? ಹೆಸರು ಬದಲಾಯಿಸಿ ಕೊಂಡುಬಿಟ್ಟರೆ ಹೊಸಹುಟ್ಟು ಪಡೆದಂತೆ ಎಂಬಂತಿರುತ್ತದೆ ಅವರ ಭಾವ. ಹೆಸರು ಬದಲಿಸಿಕೊಂಡಿದ್ದಕ್ಕೆ ತಮ್ಮ ಮನಸ್ಸು, ಬುದ್ಧಿ, ಭಾವ ಎಲ್ಲವಕ್ಕೂ ದೇವರ ಅನುಗ್ರಹ ತೆರೆದು ಕೊಂಡು, ಬದುಕೇ ಬದಲಾದ ಅನುಭವ ಅವರದಾಗಿರುತ್ತದೆ. ಹೆಸರು ಬದಲಿಸಿಕೊಂಡಾಕ್ಷಣ ಮನುಷ್ಯ ತನ್ನೆಲ್ಲ ಪಾಪಗಳನ್ನು ಕಳಚಿ ಬದಲಾಗಿ ಬಿಟ್ಟಿರುತ್ತಾನೆ, ದೇವರ ಅನುಗ್ರಹಕ್ಕೆ ಪಾತ್ರನಾಗಿಬಿಟ್ಟಿರುತ್ತಾನೆ ಎಂಬ ಭ್ರಮೆಯಲ್ಲಿ ಅನೇಕ ಜನರು ಬದುಕುತ್ತಿರುತ್ತಾರೆ.

ಇದು ನಿಮಗೆಲ್ಲ ಅರ್ಥ ಪೂರ್ಣವೆನಿಸುತ್ತದೆಯೇ? ಇಲ್ಲಿ ಬದಲಾಗಬೇಕಾದದ್ದು ಹೆಸರಲ್ಲ, ನಮ್ಮ ಸ್ವಭಾವ, ನಮ್ಮ ದೃಷ್ಟಿಕೋನ ಹಾಗೂ ನಮ್ಮ
ಬಗ್ಗೆ ನಮಗಿರುವ ಪರಿಕಲ್ಪನೆ. ಮನಸ್ಸಿನ ಆಳದಲ್ಲಿ ನಾವು ಬದಲಾಗಬೇಕು, ಹೆಸರಿನಲ್ಲಲ್ಲ. ಯಾವಾಗಲೂ ಸಿಡಿಸಿಡಿ ಎನ್ನುತ್ತಿದ್ದ ಸಿಡುಕು ಸ್ವಭಾವದ
ವ್ಯಕ್ತಿಯೊಬ್ಬ ಎಲ್ಲದರಲ್ಲೂ ತಪ್ಪನ್ನು ಹುಡುಕುತ್ತಿದ್ದ. ಯಾರಾದರೂ ಅವನಿಗೆ ‘ಗುಡ್ ಡೇ’ ಎಂದರೆ, ‘ಅದರಲ್ಲಿ ಗುಡ್ ಏನಿದೆ?’ ಎಂದು ವ್ಯಂಗ್ಯ ವಾಡುತ್ತಿದ್ದ.

ಹೆಂಡತಿಯನ್ನು ಕಂಡರೆ ಅವನಿಗಾಗದು; ಸದಾ ಅವಳನ್ನು, ಅವಳು ಮಾಡುವ ಅಡುಗೆಯನ್ನು ಟೀಕಿಸುತ್ತಿದ್ದ. ಅವನ ಈ ಸ್ವಭಾವ, ಕೆಲವೊಮ್ಮೆ
ಅವನಿಗೇ ಅಸಹ್ಯ ತರಿಸುತ್ತಿತ್ತು. ತಾನು ಬದಲಾಗಬೇಕು ಎನಿಸಿ ಒಬ್ಬ ಮನೋವಿಜ್ಞಾನಿಯ ಬಳಿಗೆ ಬಂದ. ಇವನ ಸಿಡುಕುತನದ ಬಗ್ಗೆ ತಿಳಿದ ಮನೋವಿಜ್ಞಾನಿ, ಆತನ ಇಡೀ ಸ್ವಭಾವವನ್ನು ಬದಲಾಯಿಸಿಕೊಳ್ಳುವಂತೆ ತಿಳಿಸಿದರು: ‘ಆಫೀಸಿಗೆ ಹೋದಾಗ ಸಹೋದ್ಯೋಗಿಗಳೊಂದಿಗೆ ಸ್ನೇಹಮಯವಾಗಿರಿ, ಅವರ ಒಳ್ಳೆಯ ಗುಣಗಳನ್ನು ಪ್ರಶಂಸಿಸಿ, ಮುಗುಳ್ನಗಿ, ಚೆಂದಾಗಿರುವ ಏನನ್ನಾದರೂ ಕಂಡಾಗ ಅದನ್ನು ಹೊಗಳಿ, ನಿಮ್ಮ ಹೆಂಡತಿಯ ಅಡುಗೆಯನ್ನು ಇಷ್ಟಪಡಿ, ಅವಳಿಗೆ ಇಷ್ಟವಾಗುವಂತೆ ನಡೆದು ಕೊಳ್ಳಿ, ಅವಳ ಅಂದ-ಚಂದಗಳನ್ನು ಹೊಗಳಿ’ ಹೀಗೆ.

ಮನೋವಿಜ್ಞಾನಿ ಹೇಳಿದ ಎಲ್ಲವನ್ನೂ ಕೇಳಿಸಿಕೊಂಡ ಆ ವ್ಯಕ್ತಿ, ‘ಹೀಗೆ ಮಾಡಿದರೆ ಅದು ಬೂಟಾಟಿಕೆ ಎನಿಸುವುದಿಲ್ಲವೇ? ನಾಟಕೀಯ ಎನಿಸುವು ದಿಲ್ಲವೇ?’ ಎಂದು ಮನೋ ವಿಜ್ಞಾನಿಯನ್ನು ಮರುಪ್ರಶ್ನಿಸಿದ. ಮುಗುಳ್ನಕ್ಕ ಮನೋ ವಿಜ್ಞಾನಿ, ‘ಮೊದಲು ನಾನು ಹೇಳಿದ ಎಲ್ಲವನ್ನೂ ಮಾಡಲು ಪ್ರಯತ್ನಿಸಿ, ನಿಧಾನವಾಗಿ ಶುರುಮಾಡಿ ನಿಮ್ಮೊಳಗೆ ಹೆಪ್ಪುಗಟ್ಟಿಸುವ ಮಂಜುಗಡ್ಡೆಯನ್ನು ಒಡೆಯಿರಿ. ಎಲ್ಲವೂ ಸಾಧ್ಯವಾಗುತ್ತದೆ’ ಎಂದರು. ಒಂದು ತಿಂಗಳ ನಂತರ ಅನೇಕ ಸಂಗತಿಗಳು ಆ ವ್ಯಕ್ತಿಯ ಅರಿವಿಗೆ ಬರತೊಡಗಿದವು. ಆತನ ಸುಪ್ತಪ್ರಜ್ಞೆಯೊಳಗೆ ಅನೇಕ ಬದಲಾವಣೆಗಳಾಗಿದ್ದವು.

ಆತ ನಿಜಕ್ಕೂ ಬದಲಾಗಿದ್ದ, ಮುಗು ಳ್ನಕ್ಕಿದ್ದ, ಪ್ರೀತಿಸಿದ್ದ, ಜನಾನುರಾಗಿಯಾಗಿದ್ದ, ಸೌಹಾರ್ದಯುತವಾಗಿ ನಡೆದುಕೊಂಡಿದ್ದ, ಜನರ ವಿಶ್ವಾಸವನ್ನು
ಗಳಿಸಿದ್ದ. ಆತನೊಳಗೆ ಮಾನಸಿಕವಾಗಿ, ಭಾವನಾತ್ಮಕವಾಗಿ, ಅಧ್ಯಾತ್ಮಿಕವಾಗಿ ಬದಲಾವಣೆಯಾಗಿತ್ತು. ತನ್ನೊಳಗೆ ತಾನು ಪ್ರೀತಿಯನ್ನು ಕಂಡುಕೊಂಡು, ಅದನ್ನು ಇತರರಿಗೂ ಹಂಚಿದ್ದ. ನಮ್ಮ ಸುಪ್ತಪ್ರಜ್ಞೆಯೊಳಗೆ ಅನೇಕ ಅಂಶಗಳು ಅಡಗಿ ಬಿಟ್ಟಿರುತ್ತವೆ. ಕೀಳರಿಮೆ ಮಾತ್ರವಲ್ಲದೆ, ‘ನನ್ನ ಕೈಯಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ, ಅಯ್ಯೋ ನಾನು ಸೋತುಹೋಗುತ್ತೇನೆ, ಸತ್ತುಹೋಗುತ್ತೇನೆ’ ಹೀಗೆ ಇನ್ನೂ ಅನೇಕ ಊಹಿಸಲಸಾಧ್ಯವಾದ ನಕಾರಾತ್ಮಕ ಅಂಶಗಳು ತುಂಬಿ ಕೊಂಡುಬಿಟ್ಟಿರುತ್ತವೆ.

ಸುಪ್ತಪ್ರಜ್ಞೆಯ ಈ ಹೊರೆಗಳು ಪ್ರಜ್ಞಾವಸ್ಥೆಯಲ್ಲಿ ನಾವು ಮಾಡುವ ಕೆಲಸವನ್ನು ಪ್ರಭಾವಿಸುತ್ತಲೇ ಇರುತ್ತವೆ. ಗೆಲ್ಲಲು, ಖುಷಿಯಾಗಿರಲು ನಾವೆಷ್ಟೇ ಪ್ರಯತ್ನಿಸಿದರೂ ಸೋಲತೊಡಗುತ್ತೇವೆ. ಇಲ್ಲಿ ನಮ್ಮ ಪ್ರಜ್ಞೆಯನ್ನು ಸುಪ್ತಪ್ರಜ್ಞೆ ಹಿಂಬಾಲಿಸುತ್ತಾ ಪ್ರಭಾವಿಸುತ್ತಲೇ ಇರುತ್ತದೆ. ಪ್ರಜ್ಞಾವಸ್ಥೆಗೂ ಸುಪ್ರಪ್ರಜ್ಞಾವಸ್ಥೆಗೂ ನಡುವಿನ ಕೊಂಡಿ ಕಳಚಿದಾಗ ಈ ತೆರನಾದ ನಕಾರಾತ್ಮಕ ಮನಸ್ಥಿತಿಯ ಜತೆಗೆ ಸೋಲುಗಳು ನಮ್ಮದಾಗುತ್ತಾ
ಹೋಗುತ್ತವೆ. ನಾವು ಬದಲಾಗಬಹುದು, ಬದಲಾಯಿಸಿಕೊಳ್ಳಬಹುದು; ಆದರೆ ಅದು ಸಾಧ್ಯವಾಗುವುದು ನಮ್ಮ ಸುಪ್ತಪ್ರಜ್ಞೆಯಲ್ಲಿ ಅಡಗಿ ಕುಳಿತಿರುವ ಅತಾರ್ಕಿಕ ವಿಷಯಗಳನ್ನು ಮನಸ್ಸಿನ ಆಚೆಗೆ ಗುಡಿಸಿ ಹಾಕಿದಾಗ ಮಾತ್ರ.

ಎಷ್ಟೋ ಬಾರಿ, ನಮ್ಮ ಬದುಕಲ್ಲಾದ ಯಾವುದೋ ಅಹಿತಕರ ಘಟನೆ, ನೋವು, ಕಷ್ಟಗಳು ಸುಪ್ತಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟಿರುತ್ತವೆ. ಪ್ರಜ್ಞಾವಸ್ಥೆಯಲ್ಲಿ ಏನೇ ಕೆಲಸ ಮಾಡಹೊರಟರೂ ಈ ವಿಚಾರಗಳು ಭಯದ ರೂಪದಲ್ಲಿ ನಮ್ಮನ್ನು ಕಾಡುತ್ತಲೇ ಇರುತ್ತವೆ. ಆಗೆಲ್ಲ ನಾವು ಕುಸಿಯುವುದುಂಟು, ಕುಗ್ಗುವುದುಂಟು. ಸುಪ್ತಾವಸ್ಥೆಯನ್ನು ಆದಷ್ಟು ಸಕಾರಾತ್ಮಕ ವಿಷಯಗಳಿಂದ ತುಂಬುವುದೇ ಇದಕ್ಕಿರುವ ಏಕೈಕ ಪರಿಹಾರ.
‘ನಾನು ಹುಟ್ಟಿರುವುದೇ ಗೆಲ್ಲಲು, ಅನಂತವಾದದ್ದೆಂದೂ ಸೋಲುವುದಿಲ್ಲ’ ಹೀಗೆ ನಮಗೆ ಹೇಗೆ ಬೇಕೋ ಹಾಗೆ ಸುಪ್ತಮನಸ್ಸಿಗೆ ಒಂದು ವಿನ್ಯಾಸವನ್ನು ರಚಿಸಬೇಕು.

ಇಲ್ಲವಾದರೆ, ನಾವು ಕೋಪಗೊಂಡಾಗಲೂ, ಅನುಮಾನ ಗೊಂಡಾಗಲೂ, ಭಯಗೊಂಡಾಗಲೂ ಸುಪ್ತಮನಸ್ಸಿನ ಕೆಟ್ಟ ಶಕ್ತಿಗಳು ನಮ್ಮನ್ನು ಗಲಿಬಿಲಿ ಗೊಳಿಸಿಬಿಡಬಹುದು. ಕೆಟ್ಟದ್ದನ್ನು ಮಾತ್ರ ಯೋಚಿಸುವಂತೆ, ಕೆಟ್ಟದ್ದನ್ನು ಮಾಡುವಂತೆ ಪ್ರೇರೇಪಿಸಲೂಬಹುದು. ಖುಷಿಯಾಗಿರಲು ಯತ್ನಿಸಿದರೂ ನಿಮ್ಮನ್ನು ದುಃಖಕ್ಕೆ ತಳ್ಳಿಬಿಡಬಹುದು, ಒಳ್ಳೆಯದೇನನ್ನೋ ಮಾಡಲು ಹೊರಟರೆ ಅದು ಕೆಟ್ಟದ್ದಕ್ಕೆ ಕಾರಣವಾಗಿಬಿಡುವಂತೆ ಮಾಡಿಬಿಡಬಹುದು.

ವಿಶೇಷವಾಗಿ, ನಾವು ನಕಾರಾತ್ಮಕ ಮನಸ್ಥಿತಿಯಲ್ಲಿದ್ದಾಗ, ನಮ್ಮ ಭಾವನೆಗಳು ನಮ್ಮ ಹತೋಟಿಯಲ್ಲಿ ಇಲ್ಲದೆಹೋದಾಗ ಈ ಸಾಧ್ಯತೆಗಳು ಹೆಚ್ಚಾಗಿಬಿಡುತ್ತವೆ. ಹಾಗಾಗಿ ನಮ್ಮ ಯಾವುದೇ ಆಲೋಚನೆ, ನಂಬಿಕೆ, ಅಭಿಪ್ರಾಯ, ಸಿದ್ಧಾಂತಗಳನ್ನು ನಾವು ನಮ್ಮ ಸುಪ್ತಪ್ರಜ್ಞೆಯ ಮೇಲೆ ಹೇಗೆ
ಪ್ರಭಾವಿಸುತ್ತೇವೆ ಎಂಬುದರ ಆಧಾರದ ಮೇಲೆ, ಅವು ನಮ್ಮ ನಿಜಪ್ರಜ್ಞೆಯಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ನಾವು ಸುಪ್ತಪ್ರಜ್ಞಾವಸ್ಥೆಯೊಳಗೆ ಬರೆಯುವ ಪ್ರತಿ ವಿಚಾರಗಳು, ಹೊರಗೆ ಪ್ರಜ್ಞಾವಸ್ಥೆ ಯಲ್ಲಿ ಅನುಭವಗಳ ರೂಪದಲ್ಲಿ ಹೊರಹೊಮ್ಮುತ್ತವೆ.

ನಮ್ಮ ಬದುಕಿಗೆ ಎರಡು ಮುಖಗಳು: ಒಂದು ಉದ್ದೇಶಪೂರ್ವಕ ವಾಗಿದ್ದರೆ ಮತ್ತೊಂದು ಕಾಲ್ಪನಿಕವಾದದ್ದು. ಒಂದು ಕಾಣುವಂತಿದ್ದರೆ, ಮತ್ತೊಂದು ಅದೃಶ್ಯವಾದದ್ದು. ಒಂದು ಆಲೋಚನೆಯಾಗಿದ್ದರೆ ಮತ್ತೊಂದು ಅಭಿವ್ಯಕ್ತವಾದದ್ದು. ಹಾಗೆಯೇ ನಮ್ಮ ಬದುಕಿಗೆ ಏಳು ಮುದ್ರೆಗಳಿವೆ. ಈ ಮುದ್ರೆ ಗಳನ್ನು ಸರಿಯಾಗಿ ಒತ್ತಿದರೆ ಬದುಕಿನ ಪುಟಗಳು ಅರಳುತ್ತವೆ, ಇಲ್ಲವಾದಲ್ಲಿ ಕಮರಿಬಿಡುತ್ತವೆ. ಮೊದಲನೆಯ ಮುದ್ರೆ ನೋಟ. ಹೀಗೆಂದರೆ ಯಾವುದೇ ಸಂದರ್ಭದಲ್ಲೂ ಸತ್ಯವನ್ನಷ್ಟೇ ಕಾಣುವುದು, ಕಾಯಿಲೆಯ ನಡುವೆಯೂ ಆರೋಗ್ಯವನ್ನು ನೋಡುವುದು, ಅಸಾಮರಸ್ಯದ ನಡುವೆಯೂ ಸಾಮರಸ್ಯವನ್ನು ಕಾಣುವುದು, ದ್ವೇಷದಲ್ಲೂ ಪ್ರೀತಿಯನ್ನು ಹುಡುಕುವುದು ತನ್ಮೂಲಕ ಬದುಕಿನ ಸತ್ಯವನ್ನು ನಮ್ಮದಾಗಿಸಿಕೊಳ್ಳುವುದು. ಎರಡನೆಯ ಮುದ್ರೆ ಕೇಳುವುದು. ಅಂದರೆ ಒಳ್ಳೆಯ ಸುದ್ದಿಗಳನ್ನು ನಮ್ಮದಾಗಿಸಿಕೊಳ್ಳುವುದು. ನಮ್ಮ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿ ಬಂದು ತಾನು ಪೂರ್ಣವಾಗಿ ಗುಣಮುಖಳಾದೆನೆಂದು ಹೇಳಿದರೂ, ನಮ್ಮ ಮನಸ್ಸು ಕೆಟ್ಟದನ್ನೇನೋ ಕಲ್ಪಿಸಿಕೊಳ್ಳತೊಡಗುತ್ತಿರುತ್ತದೆ. ಆಗ ನಾವು ಕೇಳಿಸಿಕೊಳ್ಳಬೇಕಾದದ್ದು ಆಕೆಯು ಗುಣಮುಖವಾದ ಸುದ್ದಿಯನ್ನಷ್ಟೇ. ಅಲ್ಲಿ ನಾವು ಸತ್ಯವನ್ನು ನಮ್ಮದಾಗಿಸಿಕೊಳ್ಳುತ್ತೇವೆ.

ಮೂರನೆಯ ಮುದ್ರೆ ವಾಸನೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಅದರಲ್ಲೊಂದು ಸತ್ಯದ ಸ್ಪರ್ಶವಿರಲಿ. ನಾಯಿ ತನ್ನ ಅನ್ನವನ್ನು ಮೂಸುತ್ತದೆ, ತಿನ್ನಲು ಯೋಗ್ಯ ವಾಗಿರದಿದ್ದರೆ ಅನ್ನವನ್ನು ತಿರಸ್ಕರಿಸುತ್ತದೆ. ಹಾಗೆಯೇ ನಾವು ನಮ್ಮ ಆತ್ಮಕ್ಕೆ ಖುಷಿಕೊಡದ ಬೇಡದ ಯೋಚನೆ, ಐಡಿಯಾ, ಅಭಿಪ್ರಾಯಗಳನ್ನು ಮೂಸಿನೋಡಿ ತಿರಸ್ಕರಿಸಬೇಕು. ನಾಲ್ಕನೆಯ ಮುದ್ರೆ ರುಚಿ. ನಮಗೇನು ಬೇಕೋ ಅದನ್ನು ನಮ್ಮದಾಗಿಸಿಕೊಳ್ಳಲು ಧ್ಯಾನವೆಂಬ ರುಚಿಯನ್ನು ಪ್ರಯತ್ನಿಸ ಬೇಕು. ಐದನೆಯ ಮುದ್ರೆ ಖುಷಿ. ಖುಷಿಯನ್ನು ಮಾನಸಿಕ ವಾಗಿ, ಭಾವನಾತ್ಮಕವಾಗಿ ನಮ್ಮದಾಗಿಸಿಕೊಂಡರೆ ವಾಸ್ತವದ ಅರಿವು ನಮ್ಮದಾಗುತ್ತದೆ.

ಮಿಕ್ಕೆರಡು ಮುದ್ರೆಗಳು ನಮ್ಮ ಪ್ರಜ್ಞೆ ಹಾಗೂ ಸುಪ್ತಪ್ರಜ್ಞೆ. ಮೇಲಿನ ಐದು ಮುದ್ರೆಗಳನ್ನು ಸಮರ್ಥವಾಗಿ ಟಂಕಿಸಿದರೆ, ಈ ಎರಡರಲ್ಲೂ
ಸಾಮರಸ್ಯವನ್ನು ಕಾಣಬಹುದು, ಬದುಕಿನಲ್ಲಿ!