Wednesday, 11th December 2024

ಸಾಲದ ಸಿಕ್ಕುಗಳಲ್ಲಿ ಮಂಕಾಗದಿರಲಿ ಖುಷಿ

ಶ್ವೇತಪತ್ರ

shwethabc@gmail.com

ಆಕಾಶಕ್ಕೆ ಕಪ್ಪುಮೋಡಗಳು ಆವರಿಸುವುದು ಎಷ್ಟು ಸಹಜವೋ, ಬದುಕಲ್ಲೂ ಸಮಸ್ಯೆ-ಸವಾಲುಗಳು ಬಂದೆರಗುವುದೂ ಅಷ್ಟೇ ಸಹಜ. ನಂಬಿಕೆ ಯೆಂಬ ಗಟ್ಟಿತನದೊಂದಿಗೆ ಬೆಳ್ಳಿರೇಖೆ ಮೂಡುವುದಕ್ಕೆ ಕಾಯಲೇಬೇಕು. ಎಷ್ಟೇ ಅದ್ಭುತವಾಗಿ ಪ್ಲಾನ್ ಮಾಡಿಕೊಂಡು ಬದುಕ ಹೊರಟರೂ, ಅನಿರೀಕ್ಷಿತ ತಿರುವುಗಳನ್ನು ಎದುರುಗೊಳ್ಳಲೇಬೇಕು.

ಜಗತ್ತಿನಲ್ಲಿ ಅತ್ಯಂತ ಖುಷಿಯಿಂದಿರುವ ಮತ್ತು ಶ್ರೀಮಂತ ವ್ಯಕ್ತಿ ಯಾರೆಂದರೆ ತುಂಬು ಆರೋಗ್ಯದ ಜತೆಗೆ ಸಾಲಗಳಿಲ್ಲದಿರುವಾತ. ನಮ್ಮ ದುಡ್ಡು ನಮ್ಮದೇ ಅಲ್ಲ ಎನ್ನುವಂತೆ ಬದುಕುವುದೇ ಸಾಲ. ಇದು ಬದುಕಿನ ಎದುರು ನಿಲ್ಲುವ ಬಹುದೊಡ್ಡ ಅಡಚಣೆ. ಸಾಲದ ಪರಿಣಾಮ ಕೇವಲ ನಮ್ಮ ಕ್ರೆಡಿಟ್ ಸ್ಕೋರ್ ಮೇಲಷ್ಟೇ ಅಲ್ಲ, ಮನಸ್ಸಿನ ಮೇಲೆ, ಖುಷಿಯ ಮೇಲೂ ನೆಗೆಟಿವ್ ಆಗಿ ಪ್ರತಿಬಿಂಬಿಸು ತ್ತದೆ.

ಇದೊಂದು ಕಪ್ಪುಛಾಯೆ ನಮ್ಮ ಆತ್ಮವಿಶ್ವಾಸವನ್ನು ಕಸಿಯುತ್ತ, ಗುರಿಗಳನ್ನು ದಿಕ್ಕು ತಪ್ಪಿಸುತ್ತ, ಪರಸ್ಪರ ಸಂಬಂಧಗಳನ್ನು ಹಾಳುಗೆಡವುತ್ತ ಸಾಗುತ್ತದೆ. ಸಾಲದ ಹೊರೆಗಳು ಮನಸ್ಸನ್ನು ಸಿಕ್ಕಾಗಿಯೂ, ಮಂಕಾಗಿಸಿಯೂಬಿಡುತ್ತವೆ. ಸಾಲದ ಹೊರೆ ಉಂಟುಮಾಡುವ ಒತ್ತಡವು ನಮ್ಮೆಲ್ಲ
ಸಂತೋಷಗಳನ್ನು ಕಸಿದುಬಿಡುತ್ತದೆ.

ನಿಮಗೆಲ್ಲ ಒಂದು ವಿಷಯ ನೆನಪಿರಲಿ: ಸಾಲ ನಮ್ಮೆಲ್ಲರಲ್ಲಿ ಅತಿಯಾದ ಸ್ಟ್ರೆಸ್ ಅನ್ನು ಉಂಟು ಮಾಡುವ ಬದುಕಿನ ಒಂದು ಘಟನೆ. ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ನಮ್ಮ ಹಿರಿಯರ ಅನುಭವದ ಮಾತನ್ನು ಇಂದಿನ ಇಎಂಐ ಯುಗದಲ್ಲಿರುವ ನಾವೆಲ್ಲ ಮಂತ್ರದಂತೆ ಬದುಕಿಗೆ ಅನ್ವಯಿಸಿ ಕೊಳ್ಳಬೇಕು. ಆಗಷ್ಟೇ ಸಂತೋಷ, ಸಂತೃಪ್ತಿ ಸಾಧ್ಯ. ಮೆಟೀರಿಯಲ್ ಪೊಸೆಷನ್‌ಗಳಾಚೆ ಸಿಗುವ ಖುಷಿಗಳು ನಮಗೆ ಮುಖ್ಯವಾಗಬೇಕು. ಕಾರು, ಅಪಾರ್ಟ್‌ಮೆಂಟು, ಐಫೋನು, ಮ್ಯಾಕ್‌ಬುಕ್ಕು ಎಲ್ಲವೂ ಬೇಕು. ಆದರೆ ಬದುಕಿಗೆ ಅದರ ಜತೆಯಲ್ಲೇ ಇರಬೇಕು ಅವಶ್ಯಕ ಆರ್ಥಿಕ ಶಿಸ್ತು.

ಮೈಸೂರಿನ ನನ್ನ ಕ್ಲೇಂಟ್ ಗಳಾಗಿರುವ ಗಂಡ-ಹೆಂಡತಿ ಸೇರಿ ಸಾವಯವ ಕೃಷಿ ಮಾಡಬೇಕೆಂದು ಸಾಲ ಮಾಡಿ ಜಮೀನು ಖರೀದಿಸಿ, ಬರೀ ಜಮೀನಿಗಷ್ಟೇ ಬ್ಯಾಂಕಲ್ಲಿ ಸಾಲ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೊಲ್ಯಾಟರಲ್‌ಗಾಗಿ ಪರ್ಸನಲ್ ಲೋನ್ ಮಾಡಿ ಸೈಟ್ ತೆಗೆದುಕೊಂಡು, ಆ ಪರ್ಸನಲ್ ಲೋನ್‌ನ ಇಎಂಐ ಕಟ್ಟಲಿಕ್ಕೆ ಪ್ರೈವೇಟ್‌ನವರ ಹತ್ತಿರ ಕೈಸಾಲ ಮಾಡಿ ಇನ್ನೇನು ಬ್ಯಾಂಕ್ ಲೋನ್ ಆಯಿತು ಎನ್ನುವಷ್ಟರಲ್ಲಿ ಕೋವಿಡ್ ಲಾಕ್‌ಡೌನ್ ಆಗಿಹೋಯಿತು. ಲಾಕ್‌ಡೌನ್ ಕಾಲವನ್ನು ಹೇಗೋ ತಳ್ಳಿಬಿಟ್ಟಿದ್ದಾರೆ, ಆಮೇಲೆ ನಿಜವಾದ ಸಂಕಷ್ಟಗಳು ಶುರುವಿಟ್ಟು ಕೊಂಡಿವೆ.

ಲೋನ್ ರಿಕವರಿ ಏಜೆಂಟ್‌ಗಳು, ಕೈಸಾಲದವರು ನನ್ನ ಕ್ಲೇಂಟ್ ಕೆಲಸ ಮಾಡುತ್ತಿದ್ದ ಪ್ರೈವೇಟ್ ಕಾಲೇಜಿನ ಬಳಿ ಹೋಗಿ, ಇಎಂಐ ಕಟ್ಟಿಲ್ಲವೆಂದೂ, ನಾವೆಲ್ಲರೂ ಲೋನ್ ರಿಕವರಿಗಾಗಿ ಬಂದಿದ್ದೇವೆಂದೂ ಅಲ್ಲಿನ ಅಟೆಂಡರ್‌ಗಳ ಬಳಿ, ಪ್ರಿನ್ಸಿಪಾಲ್ ಬಳಿ ಹೇಳಿ ಅವಮಾನಿಸುತ್ತಿದ್ದರು, ಹೆದರಿಸುತ್ತಿದ್ದರು. ಇದರಿಂದ ಆಕೆ ಎಷ್ಟು ಕುಸಿದು ಹೋಗಿದ್ದರೆಂದರೆ, ಆತ್ಮಹತ್ಯೆಯ ಆಲೋಚನೆಗಳು ಪದೇಪದೆ ಆಕೆಯನ್ನು ಕಾಡುತ್ತಲೇ ಇದ್ದವು. ತನ್ನ ಮನೆಯ ನಾಲ್ಕು ಗೋಡೆಗಳ ರೂಮ್ ಬಿಟ್ಟು ಆಕೆ ಆಚೆ ಬರುತ್ತಿರಲಿಲ್ಲ. ಮಕ್ಕಳೊಂದಿಗೆ ಮನೆಯವರೊಂದಿಗೂ ಸೇರುತ್ತಿರಲಿಲ್ಲ. ನಿದ್ರೆ ಮಾಡಿದರೆ ತನ್ನ ಸಾಲಗಳ ಸಿಕ್ಕುಗಳಿಂದ ಸ್ವಲ್ಪ ಹೊತ್ತಾದರೂ ರಿಲೀಫ್ ಪಡೆಯಬಹುದೆಂದು ನಿದ್ರೆಮಾತ್ರೆಗಳನ್ನು ತೆಗೆದುಕೊಂಡು ದಿನಗಟ್ಟಲೆ ಮಲಗಿಬಿಡುತ್ತಿದ್ದರು. ಕೌನ್ಸಿಲಿಂಗ್ ಮೂಲಕ ಎಷ್ಟೇ ಪುಷ್ ಮಾಡುತ್ತಲಿದ್ದರೂ ಕೊನೆಗೂ ಆಕೆ ಆತ್ಮವಿಶ್ವಾಸವನ್ನು ಮೂಡಿಸಿಕೊಂಡಿದ್ದು ತನ್ನೆಲ್ಲಾ ಸಾಲಗಳನ್ನು ತೀರಿಸಿ
ಕೊಳ್ಳುವ ಮೂಲಕ.

ಸಾಲಗಳು ತೀರಿದ ಮೇಲೆ ಫೋನ್ ಮಾಡಿ ಆಕೆ ಹೇಳಿದ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಿವೆ: ‘ಶ್ವೇತಾ, ನನ್ನ ಸಾಲ
ಗಳನ್ನೆಲ್ಲ ತೀರಿಸಿಕೊಳ್ಳುವ ವ್ಯವಸ್ಥೆಯಾಗಿದೆ. ಈಗ ನನ್ನ ಮನಸ್ಸು ಹಾಗೂ ಹೃದಯ ಎಷ್ಟೋ ನೆಮ್ಮದಿಯಿಂದಿವೆ. ನನ್ನ ಬದುಕಿನ ಖುಷಿಗಳು ನನಗೆ ಮರಳಿ ಸಿಕ್ಕಿವೆ. ಮಕ್ಕಳಿಗೆ ಬೇಕಾದ್ದನ್ನು ಕೊಡಿಸುವ, ಅವರ ಜತೆ ನೆಮ್ಮದಿಯಿಂದ ಆಟವಾಡುವ ಸಂತೋಷಕ್ಕಿಂತ ಬದುಕಲ್ಲಿ ಇನ್ನೇನು ಬೇಕು? I am back. ಸ್ಟ್ರೆಸ್ ನಿಧಾನವಾಗಿ ಕರಗುತ್ತಲಿದೆ.

ಫೈನಾನ್ಸ್ ವಿಚಾರವಾಗಿ ಬದುಕು ಬ್ಯಾಲೆನ್ಸ್ ಕಾಣ್ತಾ ಇದೆ. ನಿಜವಾದ ಹ್ಯಾಪಿನೆಸ್ ಇದು. ಖುಷಿಗಳನ್ನು ಕಸಿಯುವ ಸಾಲಗಳನ್ನು ಇನ್ನೆಂದೂ ಮಾಡುವುದಿಲ್ಲ’ ಎಂದು ಆಕೆ ಹೇಳಿದ್ದರು. ಸಾಲವು ಕೇವಲ ನಂಬರ್‌ಗಳ ಲೆಕ್ಕವಷ್ಟೇ ಅಲ್ಲ, ಭಾವನೆಗಳ ಮೇಲಿನ ಹೊರೆಯೂ ಹೌದು. ಸಾಲದ ಬಾಧೆಗಳು ನಮ್ಮ ಲೈಫ್ ಅನ್ನೇ ಹೋಲ್ಡ್ ಮಾಡಿಬಿಡುತ್ತವೆ. ಸಾಲದ ಜತೆಗೆ ನಮ್ಮ ಕನಸುಗಳು, ಖುಷಿಗಳು, ಬದುಕಿನ ಗುರಿಗಳು ಕಮರಿಬಿಡುತ್ತವೆ. ಇಲ್ಲಿ ಬರೀ ದುಡ್ಡಷ್ಟೇ ಸೋಲುವುದಿಲ್ಲ, ಜೀವನದ ಅನೇಕ ಸಂದರ್ಭಗಳು ಸೋತುಹೋಗುತ್ತವೆ.

ಸಾಲದ ನಿಜವಾದ ಸ್ಟ್ರೆಸ್ಸು ಮನುಷ್ಯರನ್ನು ಒಳಗಿನಿಂದಲೇ ತಿನ್ನುತ್ತಾ ಬರುತ್ತದೆ. ಏಕೆಂದರೆ ಜನರು ಏನನ್ನು ಬೇಕಾದರೂ ಕ್ಷಮಿಸಿಯಾರು, ಆದರೆ ದುಡ್ಡುಕಾಸಿನ ನಂಬಿಕೆಯ ದ್ರೋಹವನ್ನಲ್ಲ. ಪ್ರಾಮಾಣಿಕವಾಗಿ ಮಾತನಾಡುವುದಾದರೆ, ದುಡ್ಡು ಖರ್ಚುಮಾಡಿ ಏನನ್ನಾದರೂ ತೆಗೆದುಕೊಳ್ಳುವಾಗ ಭಾವನೆಗಳು ಅರಳುತ್ತವೆ, ಖುಷಿ ಮೂಡುತ್ತದೆ. ಅದೇ ಸಾಲ ವಾಪಸ್ಸು ತೀರಿಸಬೇಕೆನ್ನು ವಾಗ, ಅದೇ ದುಡ್ಡು ಮತ್ತು ಸಂತೋಷದ ಈಕ್ವೇಷನ್
ಬದಲಾಗುತ್ತದೆ. ಸಾಲ, ಸಾಲದ ಮೇಲೆ ಸಾಲ ಮಾಡಿ ಡಿಪ್ರೆಶನ್, ಆತಂಕ ಮತ್ತು ಆತ್ಮಹತ್ಯೆಯ ಆಲೋಚನೆ ಗಳನ್ನು ಮನಸ್ಸಿನ ಜೋಳಿಗೆಗೆ ಹಾಕಿಕೊಳ್ಳುವುದಕ್ಕಿಂತ, ಆರ್ಥಿಕ ಶಿಸ್ತಿನಿಂದ ಖುಷಿ, ಸಂತೋಷ, ನೆಮ್ಮದಿಗಳನ್ನು ಬದುಕಿನ ಜೋಳಿಗೆಗೆ ತುಂಬಿಸಿಕೊಳ್ಳುತ್ತಾ ಸಾಗೋಣ.

ಆಗ ಜಗತ್ತಿನ ಶ್ರೀಮಂತ ವ್ಯಕ್ತಿಗಳು ನಾವಾಗುತ್ತೇವೆ. ‘ಸಾಲವನು ಕೊಂಬಾಗ ಹಾಲೋಗರುಡಂತೆ, ಸಾಲಿಗನು ಕೊಂಡು ಎಳೆವಾಗ, ಕಿಬ್ಬದಿಯ ಕೀಲು ಮುರಿದಂತೆ’ ಎಂದಿದ್ದಾನೆ ಸರ್ವಜ್ಞ. ಸಾಲದ ಕುರಿತಾದ ಸರ್ವಜ್ಞನ ಈ ಸಾರ್ವಕಾಲಿಕ ಸಲಹೆಯನ್ನು ಮರೆಯಬಾರದು. ಆಕಾಶಕ್ಕೆ ಕಪ್ಪುಮೋಡಗಳು ಆವರಿಸುವುದು ಎಷ್ಟು ಸಹಜವೋ, ನಮ್ಮೆಲ್ಲರ ಬದುಕಲ್ಲೂ ಸಮಸ್ಯೆ, ಸವಾಲು, ಕಷ್ಟಗಳು ಬಂದೆರಗುವುದೂ ಅಷ್ಟೇ ಸಹಜ.
ನಂಬಿಕೆಯೆಂಬ ಗಟ್ಟಿತನದೊಂದಿಗೆ ಬೆಳ್ಳಿರೇಖೆ ಮೂಡುವುದಕ್ಕೆ ಕಾಯಲೇಬೇಕು. ಎಷ್ಟೇ ಅದ್ಭುತವಾಗಿ ಪ್ಲಾನ್ ಮಾಡಿಕೊಂಡು ಬದುಕ ಹೊರಟರೂ,
ಅನಿರೀಕ್ಷಿತ ತಿರುವುಗಳನ್ನು ಎದುರುಗೊಳ್ಳಲೇಬೇಕು.

ಈ ತಿರುವುಗಳನ್ನು ಎದುರಿಸಲು ಬೇಕಿರುವುದು ಖುಷಿಯ ಪಾಸಿಟಿವ್ ಮೈಂಡ್‌ಸೆಟ್. ಎಲ್ಲಾ ಸಂದರ್ಭ, ಸನ್ನಿವೇಶಗಳಲ್ಲೂ ಈ ಮೈಂಡ್‌ಸೆಟ್ ಹೊಂದಲು ಸಾಧ್ಯವೇ? ಅದು ಹೇಳಿದಷ್ಟು ಸುಲಭವಲ್ಲ. ಮುಖ್ಯವಾದ ಕೆಲಸಕ್ಕೆ ಹೊರಟಿರುತ್ತೀರಿ, ಅವತ್ತೇ ಆ ದಾರಿಯಲ್ಲಿ ಟ್ರಾಫಿಕ್ ಜಾಮ್. ಇನ್ನೇನು ಮನೆಗೆ ಹೊರಡಬೇಕು, ಅಷ್ಟರಲ್ಲೇ ಬಾಸು ಮೀಟಿಂಗ್ ಸ್ಕೆಡ್ಯೂಲ್ ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ಕೈಗೊಡುವ ಗ್ಯಾಸ್, ವಾಟರ್ ಹೀಟರ್, ಸ್ಕೂಟರ್ ಇವೆಲ್ಲ ದಿನನಿತ್ಯದ ಜಂಜಾಟಗಳು.

ನಿರುದ್ಯೋಗ, ಅನಾರೋಗ್ಯ, ಪ್ರೀತಿಪಾತ್ರರ ಸಾವು, ಗುರಿಮುಟ್ಟಲಾಗದಿರುವುದು, ಎಲ್ಲ ಕಡೆಯಲ್ಲೂ ವೈಫಲ್ಯ ಹೀಗೆ ಎಲ್ಲವೂ ಸೇರಿ ನಮ್ಮನ್ನು -ಸ್ಟ್ರೇಟ್ ಮಾಡಿಬಿಡುತ್ತವೆ. ಈ -ಸ್ಟ್ರೇಷನ್ ಗಳು ಮನಸ್ಸನ್ನು ಆವರಿಸಿ ಬದುಕನ್ನೇ ನುಂಗಿಹಾಕಿ ಬಿಡುತ್ತವೆ. ಪಾಸಿಟಿವ್ ಆಗಿರಬೇಕೆಂಬ ನಿಮ್ಮ ದೃಢತೆ ನಿಮ್ಮದೇ ಸಾಮರ್ಥ್ಯವನ್ನು ಎಂಥದೇ ಸಂದರ್ಭದಲ್ಲೂ ಸದ್ದಿಲ್ಲದೆ ಹೆಚ್ಚಿಸಿಬಿಡುತ್ತದೆ. ಆಗ ನೀವೇ ನಿಮ್ಮಲ್ಲಿ ಇನ್ನೂ ಹೆಚ್ಚಿನ ಆತ್ಮವಿಶ್ವಾಸವನ್ನು ಮರುಪೂರಣ ಮಾಡಿಕೊಳ್ಳುತ್ತೀರಿ.

ಪಾಸಿಟಿವಿಟಿಯನ್ನು ಆಯ್ಕೆ ಮಾಡುವ ಶಕ್ತಿ ಇದೆ ಎಂದು ಹೇಳಿಕೊಳ್ಳುತ್ತಲೇ ನೆಗೆಟಿವಿಟಿಯನ್ನು ಹೊಡೆದುರುಳಿಸಿಬಿಟ್ಟಿರುತ್ತೀರಿ. ದಟ್ಸ್ ಪಾಸಿಟಿವಿಟಿ, ದಟ್ಸ್ ಹ್ಯಾಪಿನೆಸ್. ಬಹಳ ಕಾಲದ ಹಿಂದೆ ಒಂದೂರಿನಲ್ಲಿ ಬಡಕುಟುಂಬ ವೊಂದು ವಾಸವಾಗಿತ್ತು. ಅಪ್ಪ-ಅಮ್ಮ ಮತ್ತು ಇಬ್ಬರು ಗಂಡುಮಕ್ಕಳು. ಅಪ್ಪನಿಗೆ ಕೆಲಸವಿರಲಿಲ್ಲ. ಪ್ರತಿದಿನವೂ ಕೆಲಸ ಹುಡುಕುವುದು, ಸೋತು ಮನೆಗೆ ಬರುವುದು, ಮನೆಯಲ್ಲಿರುವ ಯಾವುದಾದರೂ ವಸ್ತುವನ್ನು ಮಾರಿ
ಬದುಕು ನಡೆಸುವುದು. ಮನೆಯಲ್ಲಿ ಇದ್ದಬದ್ದ ವಸ್ತುಗಳನ್ನೆಲ್ಲ ಮಾರಾಟ ಮಾಡಿ ಆಯಿತು. ಕೊನೆಗೆ ಏನೂ ಉಳಿಯದೆ ಹೋದಾಗ, ಊರಿನ ವ್ಯಾಪಾರಿಗೆ ತಮ್ಮ ಇಬ್ಬರು ಮಕ್ಕಳನ್ನು ಮಾರಾಟ ಮಾಡದ ಹೊರತು ಗಂಡ-ಹೆಂಡತಿಗೆ ಬೇರೇನೂ ಆಯ್ಕೆ ಉಳಿದಿರಲಿಲ್ಲ.

ತಂದೆ ಅಳುತ್ತಲೇ ಮಕ್ಕಳನ್ನು ವ್ಯಾಪಾರಿ ಬಳಿಗೆ ಕರೆದುಕೊಂಡು ಹೊರಟ. ಮಕ್ಕಳು ಅಳುತ್ತಲೇ ಒಲ್ಲದ ಮನಸ್ಸಿನಿಂದಲೇ ಹೊರಟರು. ಹೀಗೇ ಹೋಗುತ್ತಿರಬೇಕಾದರೆ ಮಾರ್ಗಮಧ್ಯದಲ್ಲಿ ಒಂದು ನದಿ ಬಂತು. ನದಿಯಲ್ಲಿ ಯಾರೋ ವ್ಯಕ್ತಿ ಮುಳುಗುತ್ತಿದ್ದುದು ಕಂಡುಬಂತು. ಇಬ್ಬರೂ ಮಕ್ಕಳು ಓಡಿಹೋಗಿ ಮುಳುಗುತ್ತಿದ್ದಾತನನ್ನು ರಕ್ಷಿಸಿದರು. ಆತ ಬೇರಾರೂ ಆಗಿರದೆ ಪಕ್ಕದ ಪ್ರಾಂತ್ಯದ ರಾಜನೇ ಆಗಿದ್ದ. ತನ್ನನ್ನು ರಕ್ಷಿಸಿದ ಹುಡುಗರ ಕಥೆಯನ್ನೆಲ್ಲ ಕೇಳಿದ ಮೇಲೆ ರಾಜ ಸಾಕಷ್ಟು ಸಹಾಯಮಾಡಿದ, ಆ ಮಕ್ಕಳ ತಂದೆಗೆ ಕೆಲಸ ಕೊಡಿಸಿದ. ಬದುಕಿನ ಎಲ್ಲ ಸಂದರ್ಭಗಳೂ ನಮ್ಮ
ವಿರುದ್ಧವೇ ಇದ್ದರೂ, ಕಪ್ಪುಮೋಡದ ಹಿಂದೆ ಮೂಡುವ ಬೆಳ್ಳಿರೇಖೆಯಂತೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಖಂಡಿತವಾಗಿಯೂ ಇರುತ್ತದೆ, ಚಿಯರ್ಸ್!
ಒಮ್ಮೆ ಸಂದರ್ಶನವೊಂದರಲ್ಲಿ ಗುರು ದಲೈಲಾಮಾರನ್ನು, ‘ನೀವು ಹೇಗೆ ಆಂತರಿಕ ನೆಮ್ಮದಿ, ಶಾಂತತೆ ಮತ್ತು ಖುಷಿಗಳನ್ನು ಕಂಡುಕೊಳ್ಳಲು  ಸಾಧ್ಯವಾಯಿತು?’ ಎಂದು ಪ್ರಶ್ನಿಸಲಾಯಿತು.

ಆಗ ಅವರು ಅಷ್ಟೇ ಶಾಂತತೆಯಿಂದ ಹೀಗೆ ಉತ್ತರಿಸುತ್ತಾರೆ: ‘ವ್ಯಕ್ತಿಯೊಬ್ಬ ತನ್ನಲ್ಲಿ ಏನಿದೆಯೋ ಅದರಲ್ಲೇ ಖುಷಿ ಕಂಡುಕೊಳ್ಳುವುದನ್ನು ಕಲಿಯಬೇಕು. ತನ್ನಲ್ಲಿ ಇಲ್ಲದವುಗಳಿಂದ ಖುಷಿಯನ್ನು ಪಡೆಯಲಾಗುವುದಿಲ್ಲ. ನಮ್ಮೆಲ್ಲರ ಅಸ್ತಿತ್ವದ ಉದ್ದೇಶವೇ ಖುಷಿಯಾಗಿರುವುದು. ಈ ಖುಷಿ
ಯನ್ನು ಪಡೆದುಕೊಳ್ಳುವುದಕ್ಕೆ ನಿರ್ದಿಷ್ಟವಾದ ಹಾದಿ ಯನ್ನು ಆಯ್ಕೆಮಾಡಿಕೊಂಡು ಸಾಗಬೇಕು. ನಮ್ಮನ್ನು ಬಳಲಿಸುವ ವಿಚಾರಗಳಾವುವು, ಖುಷಿಪಡಿಸುವ ಅಂಶಗಳಾವುವು ಎಂಬುದನ್ನು ಗುರುತಿಸುತ್ತ, ಬಳಲಿಕೆಗೆ ಕಾರಣವಾಗುವ ವಿಚಾರಗಳನ್ನು ತೊಡೆದುಹಾಕುತ್ತಾ ಖುಷಿಗಳನ್ನು ಬೆಳೆಸಿಕೊಳ್ಳುತ್ತಾ ಮುನ್ನಡೆಯಬೇಕು.

ಇದೇ ಆರ್ಟ್ ಆಫ್ ಹ್ಯಾಪಿನೆಸ್’.
ನಿಜ ಅಲ್ಲವೇ!