Wednesday, 11th December 2024

ಆರ್ಟ್ ಆಫ್ ಥಿಂಕಿಂಗ್: ಇದು ನಮ್ಮಲ್ಲಿರಬೇಕಾದ ಕಲೆ

ಶ್ವೇತ ಪತ್ರ

shwethabc@gmail.com

ದ್ವೇಷ, ದೂರು, ಭಯ, ದುಃಖ, ಆತಂಕದಂಥ ನಕಾರಾತ್ಮಕ ಆಲೋಚನೆಗಳು ಒಳ್ಳೆಯ ಕಂಪನಗಳನ್ನು, ಅಧ್ಯಾತ್ಮದ ಅರಿವನ್ನು ನಮ್ಮಿಂದ ದೂರ ಸರಿಸಿ ಬಿಡುತ್ತವೆ. ಕೆಟ್ಟ ನೀರಿಗೆ ಒಳ್ಳೆಯ ನೀರನ್ನು ಸುರಿದು ಸುರಿದು ಶುದ್ಧಿ ಮಾಡುವ ಹಾಗೆ, ಋಣಾತ್ಮಕ ಆಲೋಚನೆಗಳಿಗೆ ಸಕಾರಾತ್ಮಕ ಆಲೋಚನೆಗಳನ್ನು ತುಂಬುತ್ತಾ ತುಂಬುತ್ತಾ, ಅವನ್ನು ಸಕಾರಾತ್ಮಕವಾಗಿಸಿಬಿಡಬಹುದು.

ನಿಮಗೆ ಎಂದಾದರೂ ಅನಿಸಿದ್ದಿದೆಯೇ ನಮ್ಮ ಆಲೋಚನೆಗಳಿಗೂ ಜೀವವಿದೆಯೆಂದು? ನಮ್ಮ ಮನಸ್ಸೆಂಬ ಹೊಲದಲ್ಲಿ ನಾವೇ ಬಿತ್ತಿ ಬೆಳೆಸುವ ಬೀಜಗಳೇ ಈ ಆಲೋಚನೆಗಳು. ಮುಂದೆ ಇವು ಹೆಮ್ಮರವಾಗಿ ಬೆಳೆಯು ವುದು ಕೂಡ ನಮ್ಮ ಕಲಿಕೆ ಹಾಗೂ ಗ್ರಹಿಕೆಗಳ ಪೋಷಣೆಯಿಂದಾಗಿಯೇ. ಪಾಸಿಟಿವ್ ಮನೋಭಾವ ಪಾಸಿಟಿವ್ ಆಲೋಚನೆಯನ್ನೇ ಹೆಮ್ಮರ ವಾಗಿಸುತ್ತ ಬದುಕಿಗೆ ಇಂಬು ತುಂಬುತ್ತದೆ. ಅದೇ ನಾವು ನೆಗೆಟಿವಿಟಿ ಎಂಬ ಕಳೆಯನ್ನು ಬೆಳೆಯಲು ಬಿಟ್ಟರೆ ಅದು ಮನಸ್ಸಿನಾಳದಲ್ಲಿ ಬೇರೂರಿ ಮನಃಶಾಂತಿ ಹಾಗೂ ನಿರಂತರ ಖುಷಿಯನ್ನು ಕಸಿದುಬಿಡುತ್ತದೆ.

ಮನಸ್ಸೆಂಬ ಹೊಲದಲ್ಲಿ ನಾವು ಬಿತ್ತುವ ಬೆಳೆಯೇ ಮುಂದೆ ಆಲೋಚನೆ ಎಂಬ ಬೆಳೆಯಾಗಿ ಕೊಯ್ಲಿಗೆ ಬರುವುದು. ನನಗೆ ಯಾವಾಗಲೂ ಅನಿಸುವುದು ‘ಅನಿಸಿಕೆಗಳ, ಆಲೋಚನೆಗಳ ಗುಚ್ಛವೇ ನಾವು’ ಎಂದು. ಸಕಾರಾತ್ಮಕ ಮನೋಭಾವವು ಆಲೋಚನೆ ಎಂಬ ಗಿಡವನ್ನು ಆಳದಲ್ಲಿ ಗಟ್ಟಿಗೊಳಿಸಿದರೆ, ಋಣಾತ್ಮಕ
ಆಲೋಚನೆಯು ಕಳೆಯಾಗಿ ಮನಸ್ಸಿನಾಳದಲ್ಲಿ ಬೀಡು ಬಿಡುತ್ತದೆ. ಈ ಕಳೆ ಮುಂದೆ ನಮ್ಮ ಮನಸ್ಸಿನ ನೆಮ್ಮದಿಯನ್ನು, ಅನಂತ ಖುಷಿಗಳನ್ನು ಕಸಿದುಬಿಡುತ್ತದೆ. ನಾವೇನು ಯೋಚಿಸುತ್ತೇವೋ ಅದು ನಮ್ಮ ಮನಸ್ಸೆಂಬ ನೆಲದೊಳಗೆ ಹೊಕ್ಕು ಪ್ರತಿಯಾಗಿ ಬೆಳೆಯ ರೂಪದಲ್ಲಿ ನಮ್ಮನ್ನು ನಿಯಂತ್ರಿಸತೊಡಗುತ್ತದೆ.

ಪ್ರತಿ ಆಲೋಚನೆಯೂ ನಮ್ಮ ನಮ್ಮ ಬದುಕುಗಳಲ್ಲಿ ಕಂಪಿತ ರೂಪದಲ್ಲಿ ಪುನರಾವರ್ತನೆಗೊಳ್ಳುತ್ತಿರುತ್ತದೆ. ಜತೆಗೆ ಪ್ರತಿ ಆಲೋಚನೆಯೂ ಅದರದ್ದೇ ಆದ ವಿವಿಧ ನಿರ್ದೇಶಿತ ಶಕ್ತಿಯನ್ನು ಹೊಂದಿರುತ್ತದೆ. ನಾವು ಮನುಷ್ಯರು ಆಲೋಚನೆ ಹಾಗೂ ಅನಿಸಿಕೆಯ ಒಟ್ಟು ಮೊತ್ತವೇ ಆಗಿರುತ್ತೇವೆ. ಇವೇ ಪಾಸಿಟಿವ್ ಆಲೋಚನೆಗಳು ನಮ್ಮ ಪ್ರೀತಿ, ಖುಷಿ, ಚೇತನಗಳ ಸಾಮರಸ್ಯವನ್ನು ಎತ್ತಿ ಹಿಡಿದು ನಮ್ಮನ್ನು ಹಗುರಾಗಿಸುತ್ತವೆ. ನಮಗೆ ದುಡ್ಡು, ಸಂಬಂಧ, ಮನೆ, ಬಿಸಿನೆಸ್ಸು,
ವ್ಯಕ್ತಿಗಳೆಡೆಗಿರುವ ಆಲೋಚನೆಯೂ ಸೂಸುವ ಕಂಪನವು ಯಾವುದಕ್ಕೆಲ್ಲ ನಾವೆಷ್ಟು ಹತ್ತಿರವಾಗುತ್ತೆವೆಂಬುದನ್ನು ನಿರ್ಧರಿಸುತ್ತದೆ. ಆಲೋಚನೆಯ ಕಂಪನವೇ ಹಾಗೆ!

ಇನ್ನು ನಮ್ಮ ಮನಸ್ಸು, ಅದೊಂಥರ ಕನ್ನಡಿ ಇದ್ದಹಾಗೆ. ನಾವೇನು ಹುಡುಕುತ್ತೇವೆಯೋ, ನೋಡುತ್ತೇವೆಯೋ ಅದೇ ಪ್ರತಿರೂಪವಾಗಿ ನಮ್ಮ ಮನಸ್ಸಿಗೆ ಹಿಂದಿರುಗುತ್ತದೆ. ಹಾಗಾಗಿ ಮನಸ್ಸಲ್ಲಿ ಅದ್ಭುತವಾದ ಆಲೋಚನೆ, ಸಂವೇದನೆಗಳನ್ನೇ ತುಂಬಿಕೊಂಡಿದ್ದರೆ ಅದರ ಫಲಿತಾಂಶ ಅಷ್ಟೇ ಸುಂದರ ವಾಗಿರುತ್ತದೆ. ‘ನೀವೇನು ಹುಡುಕುತ್ತಿರುವಿರೋ ಅದು ನಿಮ್ಮೊಳಗೇ ಇದೆ, ನೀವು ಬಯಸುತ್ತಿರುವುದು ನಿಮ್ಮನ್ನು ಪ್ರತಿಯಾಗಿ ಬಯಸುತ್ತಿರುತ್ತದೆ. ಸಾಧಿಸಬೇಕೆಂಬ ಆಸೆ
ಮತ್ತು ಅರ್ಪಣಾಭಾವ ನಿಮ್ಮೊಳಗಿರಬೇಕಷ್ಟೇ’ ಹೀಗೆ ವ್ಯಾಖ್ಯಾನಿಸುವ ಸೂಫಿ ಕವಿ ರುಮಿಯ ಮಾತುಗಳು ನಮ್ಮೆಲ್ಲರ ವ್ಯಕ್ತಿತ್ವ ವಿಕಸನಕ್ಕೆ ಪಾಠದಂತಿವೆ. ಅಧ್ಯಾತ್ಮಿಕ ಬೆಳವಣಿಗೆಗೆ ಅಸೀಮ ಶಕ್ತಿಯಾಗಿ ಇವತ್ತಿನ ದಿನಕ್ಕೆ ಹೆಚ್ಚು ಪ್ರಸ್ತುತವಾಗುತ್ತವೆ.

ಪ್ರಜ್ಞಾಪೂರ್ವಕವಾಗಿ ಅಥವಾ ಸುಪ್ತ ಪ್ರಜ್ಞೆಯ ಆಕಾಂಕ್ಷೆಗಳಲ್ಲಿ ನಾವೇನು ಬಯಸುತ್ತೇವೆಯೋ ಅದನ್ನು ನಮ್ಮ ಬದುಕು ಆಕರ್ಷಿಸುತ್ತಾ ಹೋಗುತ್ತದೆ. ಎಷ್ಟೋ ವರ್ಷಗಳಿಂದ ಖುಷಿಯಾಗಿ ಬದುಕುತ್ತಿರುವ ಅನೇಕ ವೈವಾಹಿಕ ಜೋಡಿಗಳನ್ನು ನಾನು ನೋಡಿದ್ದೇನೆ. ಮದುವೆಯಾದ ಹೊಸದರಲ್ಲಿ ಅವರುಗಳ ಮನಸ್ಥಿತಿಗಳಲ್ಲಿ,
ಆಯ್ಕೆಗಳಲ್ಲಿ, ಆಲೋಚನೆಗಳಲ್ಲಿ ವ್ಯತ್ಯಾಸಗಳಿದ್ದರೂ ಕ್ರಮೇಣ ಅವರು ಒಟ್ಟಿಗೆ ಬದುಕುತ್ತಾ ಅವರ ಗ್ರಹಿಕೆ ಹಾಗೂ ಆಲೋಚನೆ, ಜತೆಗೆ ವರ್ತನೆ ಒಂದೇ ರೀತಿ
ಯಾಗಿರುವುದನ್ನು ಗಮನಿಸಿದ್ದೇನೆ. ಎಷ್ಟರ ಮಟ್ಟಿಗೆಂದರೆ ‘ಬಾರ್ನ್ ಫಾರ್ ಈಚ್ ಅದರ್’ ಎನ್ನುವಷ್ಟರ ಮಟ್ಟಿಗೆ.

ಇದು ಹೇಗೆ ಸಾಧ್ಯವಾಯಿತೆಂದೆನಿಸಿದಾಗ ಸಿಗುವ ಉತ್ತರವೇ, ಒಂದೇ ತೆರನಾದ ಆಲೋಚನೆಗಳು ಅದೇ ತರಹದ ಆಲೋಚನೆಗಳನ್ನು ಸೆಳೆಯುತ್ತವೆ, ಮ್ಯಾಗ್ನೆಟ್ ತರಹ ಎಂಬ ಉತ್ತರ. ನಾವು ಖುಷಿಯಾಗಿದ್ದರೆ ಖುಷಿಯಾಗಿರುವ ಆಲೋಚನೆಯ ಜನರನ್ನು ಬಯಸುತ್ತೇವೆ. ಅದೇ ನಾವು ಅಪ್ಸೆಟ್ ಆಗಿ ಏನೋ ಬೇಜಾರಿನಿಂದ ಇದ್ದರೆ ಇಡೀ ದಿನ, ವಾರ ಅದೇ ಗುಂಗಲ್ಲಿ ಕಳೆದುಬಿಡುತ್ತೇವೆ. ಸಾಮಾನ್ಯವಾಗಿ ಜನ ‘ಇವತ್ತಿನ ದಿನ ಕೆಟ್ಟದಾಗಿತ್ತು’ ಎಂದು ದೂರುವುದನ್ನು
ಕೇಳಿದ್ದೇವೆ, ಹೌದಲ್ಲವೇ? ಅವರಿಗೆ ಏಕೆ ಹಾಗೆ ಅನಿಸುತ್ತದೆ? ಅಂಥ ಜನರು ಸಣ್ಣಪುಟ್ಟ ವಿಚಾರಗಳಿಗೂ ಕಿರಿಕಿರಿ ಮಾಡಿಕೊಂಡು ಅಪ್ಸೆಟ್ ಆಗುವುದುಂಟು.

ಉದಾಹರಣೆಗೆ ಬೆಳಗ್ಗೆ ಬ್ರಷ್ ಮಾಡಲು ಹೋದಾಗ ಪೇಸ್ಟ್ ಖಾಲಿಯಾಗಿದೆ ಎಂದುಕೊಳ್ಳುವ ಜನರು; ಅದೊಂದು ಪುಟ್ಟ ಕಾರಣವೇ ಸಾಕು ಹಲವರಿಗೆ ಇಡೀ ದಿನವನ್ನು ಹಾಳು ಮಾಡಿಕೊಳ್ಳಲು. ಇಂಥ ಸಣ್ಣಪುಟ್ಟ ವಿಚಾರಗಳಿಗೆ ಇಡೀ ದಿನ ಬಲಿಯಾಗ ಬೇಕೆ, ಮತ್ತೆ ನೀವೇ ಯೋಚಿಸಿ? ಇನ್ನೊಂದು ಉದಾಹರಣೆ: ಇದು ನಮ್ಮ ಹೆಣ್ಣು ಮಕ್ಕಳಿಗೆ ಹೆಚ್ಚು ಅನ್ವಯಿಸಬಹುದು. ಬೆಳಗ್ಗೆ ಮನೆ ಕೆಲಸದಾಕೆ ‘ಅಕ್ಕ ನಾನಿವತ್ತು ಕೆಲಸಕ್ಕೆ ಬರಲ್ಲ’ ಎಂದು ಪೋನ್ ಮಾಡಿದರೆ ಇದೊಂದು ವಿಷಯ ಆ-ಕೋರ್ಸ್ ಮನೆಯ ಅನೇಕ ಕೆಲಸಗಳಲ್ಲಿ ವ್ಯತ್ಯಾಸವನ್ನು ತಂದ್ಡೊಬಹುದು, ಇರಲಿ.

ಆದರೆ ಅದಕ್ಕೆ ಪ್ರತಿಕ್ರಿಯಿಸುವ ರೀತಿಯಲ್ಲಿ ನಾವು ಪಾಸಿ ಟಿವಿಟಿಯನ್ನು ತುಂಬಿಕೊಂಡರೆ ಅಲ್ಲಿ ಒಂದು ಸಣ್ಣ ವ್ಯತ್ಯಾಸವನ್ನು ಮೂಡಿಸಬಹುದಾಗಿರುತ್ತದೆ. ಆದರೆ ನಮ್ಮ ಹೆಣ್ಣು ಮಕ್ಕಳು ಮಾಡುವುದೇನು, ತಾವು ಒತ್ತಡ ಆತಂಕಕ್ಕೊಳಗಾಗಿ ಆ ಕೆಲಸ ಆಗಿಲ್ಲ ಈ ಕೆಲಸವಾಗಿಲ್ಲವೆಂಬ ತಮ್ಮೆಲ್ಲ ಹತಾಶೆಗಳನ್ನು ಗಂಡ, ಮಕ್ಕಳ ಮೇಲೆ ಹಾಕಿ ಕೂಗಾಡಿ, ಕಿರುಚಾಡಿ ಇಡೀ ದಿನವನ್ನೇ ಹಾಳುಮಾಡಿಕೊಳ್ಳುತ್ತಾರೆ. ಸಮಾಧಾನದ ಒಂದು ಆಲೋಚನೆ ಈ ಪರಿಸ್ಥಿತಿಯನ್ನು ಬದಲಾಯಿಸ
ಬಲ್ಲದು, ಹೌದಲ್ಲವೇ? ಇಡೀ ದಿನ ನಾವು ಅನೇಕ ಮಂದಿಯ ಜತೆ ಒಡನಾಡಬೇಕಾಗಿರುತ್ತದೆ.

ಪ್ರತಿ ವ್ಯಕ್ತಿಯು ನಾವೆಣಿಸಿದ ಹಾಗೆ ಇರಲು ಸಾಧ್ಯವಿಲ್ಲ. ಅದರಲ್ಲೂ ವಿಶೇಷವಾಗಿ ಯೋಚಿಸುವ ಧಾಟಿಯಲ್ಲಿ. ಹಾಗಾಗಿ ಪಾಸಿಟಿವ್ ಆಲೋಚನೆಗಳನ್ನು ಬದುಕಿನ ಜೋಳಿ ಗೆಗೆ ತುಂಬುವವರನ್ನು ನಿಮ್ಮೆಡೆಗೆ ಸೆಳೆದುಕೊಳ್ಳಿರಿ. ಮಿಕ್ಕವರಿಗೆ ಮುಗುಳ್ನಕ್ಕು ಮುನ್ನಡೆಯಿರಿ. ಯಾವುದಾದರೂ ಒಂದು ಆಲೋಚನೆ ನಿಮ್ಮನ್ನು ಹರ್ಷಚಿತ್ತಗೊಳಿಸುತ್ತದೆಯೇ, ಅಂಥ ಆಲೋಚನೆಯನ್ನು ದೀರ್ಘಕಾಲದ ವರೆಗೂ ಜತೆಗಿರಿಸಿಕೊಳ್ಳಿ. ಅದು ನಿಮ್ಮ ಕನಸಿನ ಆಶಯಗಳನ್ನು ಈಡೇರಿಸಲು ಪಕ್ಕಾ ಸಹಕಾರಿಯಾಗಿರುತ್ತದೆ.

ಮನೋವಿಜ್ಞಾನದ ಎಲ್ಲಾ ಪಠ್ಯಪುಸ್ತಕಗಳೂ ಹೇಳುವುದು ಅದನ್ನೇ. ವ್ಯಕ್ತಿಯೂ ತಾನೇನು ಯೋಚಿಸುತ್ತಾನೋ ಅಕ್ಷರಶಃ ಅದು ತಾನೇ ಆಗಿರುತ್ತಾನೆ. ಆಲೋ
ಚನೆಯ ಒಟ್ಟು ಮೊತ್ತವೇ ವ್ಯಕ್ತಿಯ ವ್ಯಕ್ತಿತ್ವವಾಗಿರುತ್ತದೆ. ವ್ಯಕ್ತಿಯ ವ್ಯಕ್ತಿತ್ವ, ಗುಣಲಕ್ಷಣವೂ ಆತನು ಯೋಚಿಸುವ ಅಭ್ಯಾಸಕ್ರಮವೇ ಆಗಿಬಿಟ್ಟಿರುತ್ತದೆ. ನಿಮ್ಮ ಆಲೋಚನೆಯ ಅಭ್ಯಾಸಗಳಾಗಿ ನೀವೇನನ್ನು ಪರಿಗಣಿಸುತ್ತಿರೋ ಅಂತಿಮ ವಾಗಿ ಅದು ನಿಮ್ಮ ನಡತೆಯಾಗಿ ರೂಪುಗೊಳ್ಳುತ್ತದೆ. ‘ನನ್ನ ವ್ಯಕ್ತಿತ್ವವನ್ನು ವೃದ್ಧಿಗೊಳಿಸಿಕೊಳ್ಳಲು ಸದ್ಭಾವನೆಯ ಆಲೋಚನೆಯನ್ನು ರೂಡಿಸಿಕೊಳ್ಳುತ್ತೇನೆ’, ‘ನಾನು ಮಾಡುವ ಕೆಲಸದಲ್ಲಿ ಸದಾ ಮುಗುಳ್ನಗೆಯನ್ನು ಪಸರಿಸುತ್ತೇನೆ’ ಹೀಗೆ
ಆಲೋಚನೆಗಳು ಪಾಸಿಟಿವ್ ಆದಷ್ಟೂ ಬದುಕು ಹಗುರ ವಾಗುತ್ತಾ ಸಾಗುತ್ತದೆ.

ಆಪ್ತಸಲಹೆಗಾಗಿ ನನ್ನ ಬಳಿ ಬರುವ ಅನೇಕರು ಬದುಕಿನ ಬಗ್ಗೆ ದಣಿವನ್ನು, ಆಯಾಸವನ್ನು, ನೆಗೆಟಿವಿಟಿಯನ್ನು ಆಲಿಂಗಿಸಿಕೊಂಡುಬಿಟ್ಟಿರುತ್ತಾರೆ. ನನಗೆ ಸಿಗುವ ಪುಟ್ಟ ಅವಽಯಲ್ಲಿ ಅವರ ಆಲೋಚನೆಗಳನ್ನು ಬದಲಾಯಿಸಿ ಬದುಕಿನ ಬಗೆಗೆ ಪ್ರೀತಿ, ಖುಷಿಯನ್ನು ತುಂಬಲು ಪ್ರಯತ್ನಿಸುತ್ತೇನೆ. ಸದಾ ನಾನು ಚಾಕಲೇಟು
ಗಳನ್ನು ನನ್ನ ಜತೆಯಲ್ಲೇ ಇರಿಸಿಕೊಂಡಿರುತ್ತೇನೆ. ನನಗೆ ಎದುರಾಗುವ ಪುಟ್ಟ ಮಕ್ಕಳಿಗೂ, ನನ್ನ ವಿದ್ಯಾರ್ಥಿನಿ ಯರಿಗೂ ಅವುಗಳನ್ನು ನೀಡುತ್ತಿರುತ್ತೇನೆ. ಈ ತೆರನಾದ ಪುಟ್ಟ ಖುಷಿಗಳೇ ಬದುಕಿನ ತುಂಬ ಆವರಿಸಿ ಬದುಕಿನ ಬಂಡಿ ಎಳೆಯಲು ಸ್ಫೂರ್ತಿಯಾಗಿ, ಪ್ರೇರಣೆಯೂ ಆಗು ವುದು. ನಿಮ್ಮ ಆಲೋಚನೆಗಳನ್ನು ನೀವೇ ಜಡ್ಜ್ ಮಾಡಿ ಕೊಳ್ಳಿ. ಅವು ಸಕಾರಾತ್ಮಕವೋ, ಋಣಾತ್ಮಕವೋ ವಿಮರ್ಶಿಸಿಕೊಳ್ಳಿ. ದ್ವೇಷ, ದೂರು, ಭಯ, ದುಃಖ, ಆತಂಕ ಹೀಗೆ ಋಣಾತ್ಮಕವಾದ ಆಲೋಚನೆಗಳು ಒಳ್ಳೆಯ ಕಂಪನಗಳನ್ನು, ಅಧ್ಯಾತ್ಮದ ಅರಿವನ್ನು, ಪಾಸಿಟಿವಿಟಿ ಯನ್ನು ನಿಮ್ಮಿಂದ ದೂರ ಸರಿಸಿಬಿಡುತ್ತವೆ.

ಕೆಟ್ಟ ನೀರಿಗೆ ಒಳ್ಳೆಯ ನೀರನ್ನು ಸುರಿದು ಸುರಿದು ಅದನ್ನು ಶುದ್ಧಿ ಮಾಡುವ ಹಾಗೆ, ಋಣಾತ್ಮಕ ಆಲೋಚನೆಗಳಿಗೆ ಸಕಾರಾತ್ಮಕ ಆಲೋಚನೆಗಳನ್ನು ತುಂಬುತ್ತಾ ತುಂಬುತ್ತಾ, ಅವುಗಳನ್ನು ಸಕಾರಾತ್ಮಕವಾಗಿಸಿಬಿಡಬಹುದು. ನಾವು ಪುಟ್ಟವರಿದ್ದಾಗ ನಮ್ಮೂರಲ್ಲಿ ಗೌಸಿ ಸಾಹೇಬ್ರು ಅಂತ ಒಬ್ಬರು ಪಿ.ಟಿ. ಮಾಸ್ಟರ್ ಇದ್ದರು. ಪರೀಕ್ಷೆಗಳ ಸಮಯದಲ್ಲಿ ನಾವು ಅವರತ್ತಿರ ಹೋಗಿ ‘ಒಳ್ಳೆಯದಾಗಲಿ ಅಂತ ವಿಶ್ ಮಾಡಿ ಸರ್’ ಅಂದ್ರೆ, ‘ಆಶೀರ್ವಾದಗಳೆಲ್ಲವೂ ನಿಮ್ಮ ಜೇಬಲ್ಲೆ ಇವೆ, ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ, ಖುಷಿಯಾಗಿರಿ. ನೀವೇನು ಹುಡುಕುತ್ತಿರುವಿರೋ ಅದು ನಿಮಗೆ ಸಿಗುತ್ತದೆ’ ಎನ್ನುತ್ತಿದ್ದರು. ನಮ್ಮ ಪ್ರಜ್ಞೆ, ಸುಪ್ತ ಪ್ರeಯ ಆಲೋಚನೆ, ಗ್ರಹಿಕೆಗಳು ನಮ್ಮನ್ನು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇಂದು ನಾವೇನಾಗಿದ್ದೆವೋ ಅದು ನಮ್ಮ ಆಲೋಚನೆಯ ಶಕ್ತಿಯಿಂದ. ಹಾಗಾಗಿ ಬುದ್ಧಿವಂತಿಕೆ
ಯಿಂದ ನಮ್ಮ ಆಲೋಚನೆಯನ್ನು ನೇಯೋಣ!