Friday, 13th December 2024

ಹಲವು ಮಜಲುಗಳ ಕಂಡ ಹೈದರಾಬಾದ್ ಕರ್ನಾಟಕ

ವಿಮೋಚನೆ

ಡಾ.ಮಲ್ಲಿಕಾರ್ಜುನ ವೈ.ಸಂಧಿಮನಿ

ಹೈದರಾಬಾದ್ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕವು ಈಗಿನ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿದೆ. ಇದರಲ್ಲಿ ಕಲಬುರ್ಗಿ ಮತ್ತು ಬಳ್ಳಾರಿ ದೊಡ್ಡ ನಗರ ಗಳೆಂದೆನಿಸಿವೆ. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೆಪ್ಟೆಂಬರ್ ೧೭ರಂದು ‘ಕಲ್ಯಾಣ ಕರ್ನಾಟಕ’ ಎಂದು ಅಧಿ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ. ಹೈದರಾಬಾದ್ ಸಂಸ್ಥಾನವು ೧೯೪೮ರಲ್ಲಿ ಅಧಿಕೃತವಾಗಿ ಭಾರತದ ಒಕ್ಕೂಟ ಸರಕಾರದಲ್ಲಿ ವಿಲೀನಗೊಂಡಿತು.

ಕಲ್ಯಾಣ ಕರ್ನಾಟಕದ ಇತಿಹಾಸವನ್ನು ಗಮನಿಸಿದರೆ ಈ ಪ್ರದೇಶದ ಮೇಲೆ ಹೈದರಾಬಾದ್ ವಿಲೀನೀಕರಣ ಮತ್ತು ಕರ್ನಾಟಕ ಏಕೀಕರಣ ಚಳವಳಿಯ ಪ್ರಭಾವವನ್ನು ಕಾಣಬಹುದು. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ತರುವಾಯ ನಮ್ಮ ಸ್ವತಂತ್ರ ಸರಕಾರವು ಅನೇಕ ಆಂತರಿಕ ಸಮಸ್ಯೆಗಳನ್ನು ಎದುರಿಸ ಬೇಕಾಯಿತು. ನಿರಾಶ್ರಿತರಿಗೆ ಆಶ್ರಯ ನೀಡುವಿಕೆ, ಪ್ರತ್ಯೇಕ ಸಂವಿಧಾನ ರಚನೆ, ಆರ್ಥಿಕತೆಯ ಪುನಾರಚನೆ, ಮಹಾತ್ಮ ಗಾಂಧೀಜಿ ಹತ್ಯೆ, ಪ್ರಾಂತೀಯ ಪುನರ್‌ವಿಂಗಡಣೆ, ದೇಶಿಯ ಸಂಸ್ಥಾನಗಳ ವಿಲೀನೀಕರಣ, ಭಾಷಾವಾರು ಪ್ರಾಂತ್ಯಗಳ ರಚನೆ ಇತ್ಯಾದಿ ಅವುಗಳಲ್ಲಿ ಸೇರಿದ್ದವು.

ಅಕ್ಟೋಬರ್ ೧, ೧೯೫೩ರಲ್ಲಿ ಆಂಧ್ರ ಪ್ರಾಂತ್ಯ ಉದಯವಾಯಿತು. ಈ ಪ್ರತ್ಯೇಕ ಪ್ರಾಂತ್ಯದ ಉದಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಆಂಧ್ರ ಗಡಿ ಪ್ರದೇಶದ ಕನ್ನಡಿಗರ ಸ್ಥಿತಿಗತಿ ಡೋಲಾಯಮಾನ ವಾಗಿತ್ತು. ೧೯೪೮ರಲ್ಲಿ ‘ಆಪರೇಷನ್ ಪೋಲೋ’ ಎಂಬ ಪೊಲೀಸ್ ಕಾರ್ಯಾಚರಣೆ ನಡೆಸಿ ಸೆಪ್ಟೆಂಬರ್ ೧೭ರಂದು ಹೈದರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಲಾಯಿತು. ೧೯೫೬ರ ತರುವಾಯ ರಾಜ್ಯ ಪುನರ್ವಿಂಗಡನಾ ಸಂದರ್ಭದಲ್ಲಿ ಹೈದರಾಬಾದನ್ನು ೩ ಭಾಗಗಳಾಗಿ ವಿಭಜಿಸಿ ಬೇರೆ ಬೇರೆ ರಾಜ್ಯಗಳ ಜತೆ ವಿಲೀನಗೊಳಿಸಲಾಯಿತು. ಈ ಸಂದರ್ಭದಲ್ಲಿ ಹೈದರಾಬಾದ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಕನ್ನಡ ಭಾಷಿಕರ ಸ್ಥಳಗಳನ್ನು ಮೈಸೂರು ಪ್ರಾಂತ್ಯ ಅಂದರೆ ಈಗಿನ ಕರ್ನಾಟಕಕ್ಕೆ ಸೇರಿಸಲಾಯಿತು.

ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ೧೭೨೪ರಂದು ನೇಮಕಗೊಂಡ ನಿಜಾಂ ಉಲ್ ಮುಲ್ಕ್ ವಂಶಸ್ಥರು ಮೊಘಲರಿಂದ ಸ್ವತಂತ್ರರಾಗಿ ೭ ತಲೆಮಾರುಗಳ ತನಕ ಹೈದರಾಬಾದ್ ಸಂಸ್ಥಾನವನ್ನು ಆಳಿದರು. ಈ ಸಂಸ್ಥಾನದ ಕೊನೆಯ ದೊರೆ ಮೀರ್ ಉಸ್ಮಾ ನ್ ಅಲಿಖಾನ್. ನಿಜಾಮರ ಆಳ್ವಿಕೆಯ ಅಡಿಯಲ್ಲಿ ಬರುವ ಭೂಪ್ರದೇಶದಲ್ಲಿ ಕನ್ನಡ ಭಾಷಿಕರ ಪ್ರದೇಶವು ಸೇರಿತ್ತು. ೧೯೦೮ರಲ್ಲಿ ಗುಲ್ಬರ್ಗದಲ್ಲಿ ದೇವಳ್ಗಾಂವ್ಕರ್ ಕುಟುಂಬದವರ ಮುಂದಾಳತ್ವದಲ್ಲಿ ನೂತನ ವಿದ್ಯಾ ಲಯವನ್ನು ಆರಂಭಿಸಲಾಗಿತ್ತು. ೧೯೨೦ರ ದಶಕದಲ್ಲಿ ಪ್ರಾರಂಭಿಸಲಾದ ಅನೇಕ ವಿದ್ಯಾಸಂಸ್ಥೆಗಳು ಗುಲ್ಬರ್ಗ ಪ್ರದೇಶದ ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದವು.

೧೯೭೩ರಲ್ಲಿ ಕಾಂಗ್ರೆಸ್‌ನ ಅಖಿಲ ಭಾರತ ಅಧಿವೇಶನವು ಕಾಕಿನಾಡದಲ್ಲಿ ನಡೆದು ಇದು ಹೈದರಾಬಾದ್ ಸಂಸ್ಥಾನದ ಮೊದಲ ಅಧಿವೇಶನ ಎನಿಸಿಕೊಂಡಿತು. ಅದೇ ಸಂದರ್ಭದಲ್ಲಿ ಹುಟ್ಟಿಕೊಂಡ ಇತ್ತೆಹಾದುಲ್ ಮುಸಲ್ಮಾ ನ್ ಎಂಬ ಜಾತೀಯ ಸಂಸ್ಥೆ ಮತ್ತು ಕಾಶಿಮ್ ರಾಜ್ವಿ ನೇತೃತ್ವದ ರಜಾಕಾರರು ಎಂಬ ಸ್ವಯಂ ಸೇವಕ ದಳವು ಸರಕಾರದ ರಕ್ಷಣೆಯ ನೆಪವೊಡ್ಡಿ ಇಡೀ ಸಂಸ್ಥಾನದಲ್ಲಿ ಜನರ ಮೇಲೆ ಶೋಷಣೆ ಮಾಡಲಾರಂಭಿಸಿತ್ತು. ೧೯೩೪ರಲ್ಲಿ ರಾಯಚೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೂಕ್ಷ್ಮ ಸಂವೇದನೆಯ ಪಂಜೆ ಮಂಗೇಶರಾಯರು ಅಧ್ಯಕ್ಷತೆ ವಹಿಸಿದ್ದರು. ಈ ಸಮ್ಮೇಳನದಲ್ಲಿ ಕಾರ್ವಾನ್ ಶ್ರೀನಿವಾಸರಾಯರ ನೇತೃತ್ವದ ಹೈದರಾಬಾದ್ ಕರ್ನಾಟಕ ಪರಿಷತ್ತನ್ನು ಸ್ಥಾಪಿಸಲಾಯಿತು.

೧೯೩೮ರಲ್ಲಿ ಹೈದರಾಬಾದ್ ಪ್ರದೇಶ ಕಾಂಗ್ರೆಸ್ ಸ್ಥಾಪನೆ ಆದಾಗ ಸ್ವಾ ಮಿ ರಮಾನಂದರು ಅದರ ಅಧ್ಯಕ್ಷತೆ ವಹಿಸಿದ್ದರು. ಇವರು ಮೂಲತಃ ಬಿಜಾಪುರ ಜಿಲ್ಲೆಯ ಸಿಂದಗಿಯವರಾಗಿದ್ದರು. ೧೯೪೦ರಲ್ಲಿ ಬೀದರ್‌ನಲ್ಲಿ ೨ನೇ ಕರ್ನಾಟಕ ರಾಜಕೀಯ ಪರಿಷತ್ತು ಜರುಗಿದ ಸಂದರ್ಭದಲ್ಲಿ ಅಲ್ಲಿ ಭಾರಿ ಜಾತೀಯ ದಂಗೆಗಳಾಗಿ ಮಾರುಕಟ್ಟೆ ಪ್ರದೇಶಗಳು ಹೊತ್ತಿ ಉರಿದವು. ೧೯೪೬ರಲ್ಲಿ ಜಾರಿಗೊಳಿಸಿದ ಸಂವಿಧಾನದಂತೆ ಮುಜಿಲಿಸ್ ಎಂಬ ಪಕ್ಷದ ಮೀರ್ ಲಾಯಕ್ ಅಲಿ ಹೈದರಾಬಾದಿನ ಪ್ರಧಾನಿಯಾದರು.

ಭಾರತದ ಸಂವಿಧಾನದ ಸಮಿತಿಗೆ ಪ್ರತಿನಿಧಿಗಳನ್ನು ಕಳುಹಿಸಲು ಪತ್ರ ಬಂದಾಗ ನಿಜಾಮರು ಪ್ರತಿಕ್ರಿಯೆ ತೋರಿಸಲಿಲ್ಲ. ತಾವು ಸ್ವತಂತ್ರರಾಗಬೇಕೆಂದು ಬಯಸಿ ಶಸಾಸ ಸಂಗ್ರಹದಲ್ಲಿ ತೊಡಗಿದರು. ತಮ್ಮ ಸಂಸ್ಥಾನದಿಂದ ಗೋವೆಯನ್ನು ಸಂಪರ್ಕಿಸಲು ಹೆದ್ದಾರಿ ರಚಿಸಲು ಬ್ರಿಟಿಷರ ಅನುಮತಿ ಕೋರಿದ್ದರು. ಏಕೆಂದರೆ ಅಲ್ಲಿಂದ ಅವರು ಶಸ್ತ್ರಾಸ್ತ್ರ ಸಂಗ್ರಹ ಮಾಡಲು ಸುಲಭವಾಗುತ್ತಿತ್ತು. ೧೯೪೭ರಲ್ಲಿ ಭಾರತವು ಸ್ವಾತಂತ್ರ್ಯದ ಹೊಸ್ತಿಲಿನಲ್ಲಿದ್ದಾಗ ರಜಾಕಾರರ ಪುಂಡಾಟ ಹೆಚ್ಚಾಗಿ ಸಹಸ್ರ ಸಂಖ್ಯೆಯಲ್ಲಿ ಹಿಂದೂಗಳ ಮಾರಣಹೋಮ ನಡೆಯಿತು. ಅಲ್ಲದೆ ಈ ಗುಂಪು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಹೇಯ ಕೃತ್ಯವನ್ನು ಸಹ ಮಾಡುತಿತ್ತು. ಆದುದರಿಂದ ಲಕ್ಷಾಂತರ ಮಂದಿ ತಮ್ಮ ಪ್ರಾಣ, ಮಾನ, ಸ್ವಾತಂತ್ಯದ ರಕ್ಷಣೆಗಾಗಿ ಸ್ವತಂತ್ರ ಭಾರತ ಸರಕಾರದ ಮೊರೆಹೋದರು.

ಆಗಸ್ಟ್ ೭ರಂದು ರಾಯಚೂರಿನಲ್ಲಿ ವಿಲೀನ ಬೆಂಬಲಿಸಿದ ಗುಡಿಹಾಳ ಹಣಮಂತರಾವ್, ರಾ.ಗು. ಜೋಶಿ, ಹಾಗೂ ಧೋಮ ಕುಂಟ ನಾರಾಯಣಪ್ಪ ಬಂಧಿತ ರಾದರು. ಆಗಸ್ಟ್ ೧೪ರ ರಾತ್ರಿ ರಾಯಚೂರು ಸರಕಾರಿ ಕಚೇರಿ ಮೇಲೆ ಎಂ. ನಾಗಪ್ಪ ಮತ್ತು ಇತರರು ರಾಷ್ಟ್ರಧ್ವಜ ಹಾರಿಸಿದರು. ಕೊಪ್ಪಳದಲ್ಲಿ ಶಿರೂರು ವೀರಭದ್ರಪ್ಪ ಹಾಗೂ ಇನ್ನಿಬ್ಬರು ಇದೇ ಸಾಹಸ ಮಾಡಿದರೆ, ಗುಲ್ಬರ್ಗದಲ್ಲಿ ಅನಿರುದ್ಧ ದೇಸಾಯಿ ವಿದ್ಯಾರ್ಥಿಗಳೊಂದಿಗೆ ಧ್ವಜ ಮೆರವಣಿಗೆ ಮಾಡಿದರು. ಬಸವ ಕಲ್ಯಾಣದ ಚಂದ್ರಶೇಖರ್ ಆಜಾದ್, ವಸಂತ ಗಾಜಕಿ ಅದೇ ದಿನ ಬಂಧಿಸಲ್ಪಟ್ಟರು.

ರಜಾಕಾರರ ಅಟ್ಟಹಾಸವನ್ನು ತಡೆಯಲು ಗಡಿ ಯುದ್ದಕ್ಕೂ ಸ್ವಯಂಸೇವಕರು ಶಿಬಿರಗಳನ್ನು ಸ್ಥಾಪಿಸಿದರು. ಕರ್ನಾಟಕದ ಸಿಂದಗಿ, ಕಕ್ಕಳಮೇಟಿ, ಕೇಸರ ಜಾವಳ, ವಾಗಜರಿ, ಗೌಡ ಗಾಂಽ, ಮುಂಡರಗಿ ಮುಂತಾ ದೆಡೆ ಶಿಬಿರ ಗಳು ಸ್ಥಾಪಿಸಲ್ಪಟ್ಟವು. ರಜಾಕಾರರ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯಲ್ಲಿದ್ದವ ರೆಂದರೆ ಹಗರಟಗಿ ಮಹಾಂತ ಗೌಡರು, ಹುಣಸಗಿಯ ಹತ್ತಿರದ ರಾಜನ ಕೊಳೋರಿನ ವಿರೂಪಾಕ್ಷ ಗೌಡರು, ಶಹಾಪೂರ ತಾಲೂಕಿನ ದುಮದ್ರಿ ಶರಣ ಗೌಡರು, ಸುರಪುರದ ಬ್ಯಾರಿಸ್ಟರ್ ವೆಂಕಟಪ್ಪ ನಾಯಕ, ಸಗರದ ಅಚ್ಚಪ್ಪ ಗೌಡರು. ಅಲ್ಲಲ್ಲಿ ಅಗ್ನಿ ಸ್ಫೋಟ, ಕೊಲೆ, ಸುಲಿಗೆ ರಕ್ತದೋಕುಳಿ ಉಂಟಾಗಿ ಕೊನೆಗೆ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲರ ಆದೇಶದ ಮೇರೆಗೆ ಪೊಲೀಸ್ ಕಾರ್ಯಾಚರಣೆ ನಡೆದು ಐದು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ ೧೨ರಿಂದ ೧೭ರ ಅವಧಿಯಲ್ಲಿ ಹೈದರಾಬಾದ್ ಮುಕ್ತಗೊಂಡಿತು. ಈ ಸಂಸ್ಥಾನಕ್ಕೆ ಸೇರಿದ ಕರ್ನಾಟಕದ ಭಾಗಗಳು ಸಹ ಮುಕ್ತ ಗೊಂಡವು. ಆ ಪ್ರದೇಶದ ಜನರು ಈಗಲೂ ೨ ಸ್ವಾತಂತ್ರ್ಯ ದಿನಗಳನ್ನು ಆಚರಿಸುತ್ತಾರೆ.

ಆಗಸ್ಟ್ ೧೫ರಂದು ದೇಶದ ಸ್ವಾತಂತ್ರ್ಯವಾದರೆ, ಸೆಪ್ಟೆಂಬರ್ ೧೭ರಂದು ಪ್ರಾಂತೀಯ ಸ್ವಾತಂತ್ರ್ಯ. ಹೈದರಾಬಾದ್ ಕರ್ನಾಟಕ ಪ್ರದೇಶ ಕರ್ನಾಟಕ ರಾಜ್ಯದ
ಆಡಳಿತಕ್ಕೆ ಒಳಪಟ್ಟು ೭೫ ವರ್ಷಗಳಾಗುತ್ತಾ ಬಂದಿದೆ. ಇಂದಿಗೂ ಅಲ್ಲಿ ಹಲವಾರು ಅಭಿವೃದ್ಧಿಗಳು ಆಗುವುದು ಬ ಕಿಯಿದೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಸಾರ್ವಜನಿಕ ಸೇವೆಗಳು, ಮಾನವ ಅಭಿವೃದ್ಧಿಯ ಕೆಲಸಗಳಾಗಬೇಕಿವೆ. ಸ್ವತಂತ್ರ ಭಾರತದಲ್ಲಿ ೫೬೦ಕ್ಕೂ ಅಧಿಕ ರಾಜಸಂಸ್ಥಾನ ಗಳಿದ್ದವು. ಅಲ್ಲಿನ ಸಾಮಾ ಜಿಕ, ಆರ್ಥಿಕ ಸಾಂಸ್ಕೃತಿಕ ವ್ಯವಸ್ಥೆಗಳು ಏಕರೂಪತೆ ಹೊಂದಿರಲಿಲ್ಲ.

ಈ ರೀತಿಯ ವಿಭಿನ್ನ ಪರಿಸ್ಥಿತಿಯ ಪ್ರದೇಶಗಳಲ್ಲಿ ವಿಶೇಷ ಕಾನೂನು ರಚನೆ ಮಾಡುವ ಅಧಿಕಾರವನ್ನು ಸಂವಿಧಾನದ ೩೭೧ನೇ ವಿಧಿಯಲ್ಲಿ ನೀಡಲಾಗಿದೆ. ೧೯೫೬ರಲ್ಲಿ ಮೈಸೂರು ರಾಜ್ಯವನ್ನು ಸೇರಿದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ವಿಧಿ ೩೭೧ ಜೆ ಅಡಿಯಲ್ಲಿ ವಿಶೇಷ ಕಾನೂನಿನ ಸೌಲಭ್ಯ ವನ್ನು ನೀಡಲಾಯಿತು. ಹೈದರಾಬಾದ್ ಕರ್ನಾಟಕ ಪ್ರದೇಶವು ಈಗ ೬ ಜಿಲ್ಲೆಗಳನ್ನು ಒಳಗೊಂಡ ಕಂದಾಯ ವಿಭಾಗವಾಗಿದ್ದು ಇಂದಿಗೂ ಅಲ್ಲಿ ಅಭಿವೃದ್ಧಿ
ಎನ್ನುವುದು ಮರೀಚಿಕೆಯಾಗಿದೆ. ಎಂ. ಧರ್ಮಸಿಂಗ್ ಮುಖ್ಯಮಂತ್ರಿ ಯಾಗುವವರೆಗೆ ಹೈದರಾಬಾದ್ ಕರ್ನಾಟಕ ದಲ್ಲಿ ಒಂದೇ ಒಂದು ಸರಕಾರಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ಇರಲಿಲ್ಲ.

ಇಂದಿಗೂ ವೃತ್ತಿಪರ, ತಾಂತ್ರಿಕ, ಕೌಶಲ ಅಭಿವೃದ್ಧಿ ಸಂಸ್ಥೆಗಳು ಬಹಳ ವಿರಳ. ೨೦೧೧ರ ತನಕ ಕೇವಲ ಗುಲ್ಬರ್ಗ ವಿಶ್ವವಿದ್ಯಾಲಯವು ಈ ಭಾಗದ ಉನ್ನತ
ಶಿಕ್ಷಣ ಸಂಸ್ಥೆ ಆಗಿತ್ತು. ಗ್ರಾಮೀಣ ಭಾಗದ ವಿದ್ಯಾಸಂಸ್ಥೆಗಳಲ್ಲಿ ಇಂದಿಗೂ ಪೂರ್ಣಪ್ರಮಾಣದ ಉಪನ್ಯಾಸಕರಿಲ್ಲ. ಹೈದರಾಬಾದ್ ಕರ್ನಾ ಟಕದಲ್ಲಿರುವಂಥ ನಿರುದ್ಯೋಗ ಸಮಸ್ಯೆ, ಬಡತನದಿಂದಾಗಿ ಇಲ್ಲಿನ ಜನ ವರ್ಷಂಪ್ರತಿ ಮಹಾನಗರ ಗಳಿಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ. ಇದರಿಂದ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ, ಶಾಲೆಯಿಂದ ಹೊರಗುಳಿದ ಮಕ್ಕಳು, ಉನ್ನತ ಶಿಕ್ಷಣದಿಂದ ವಂಚಿತರಾದ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂದಿದೆ. ಇಲ್ಲಿ ಆರೋಗ್ಯ ಸೇವೆಗಳ ಪರಿಸ್ಥಿತಿಯೂ ತೀರಾ ಹದಗೆಟ್ಟಿದೆ. ಗ್ರಾಮೀಣ ಭಾಗದ ಆಸ್ಪತ್ರೆಗಳು ವೈದ್ಯರಿಲ್ಲದೆ, ದಾದಿಯರಿಲ್ಲದೆ ಬಿಕೋ ಎನ್ನುತ್ತಿವೆ.

ಇಂಥ ಪರಿಸ್ಥಿತಿಯಲ್ಲಿ ಘನ ಸರಕಾರವು ದೂರದೃಷ್ಟಿಯುಳ್ಳ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ. ಹೈದರಾಬಾದ್ ಕರ್ನಾಟಕ ಶ್ರೀಮಂತ ನೈಸರ್ಗಿಕ ಸಂಪನ್ಮೂಲವನ್ನು ಹೊಂದಿದೆ. ನಿಸರ್ಗದತ್ತ ಖನಿಜಗಳಾದ ಕಬ್ಬಿಣದ ಅದಿರು, ತಾಮ್ರದ ಅದಿರು, ಗುಲ್ಬರ್ಗ ಜಿಲ್ಲೆಯ ಸುಣ್ಣದಕಲ್ಲು,
ಇತ್ತೀಚೆಗೆ ಶಹಾಪುರ ತಾಲೂಕಿನ ಗೋಗಿಯಲ್ಲಿ ಯುರೇನಿಯಂ ಅದಿರು ಸಹ ಸಿಗುತ್ತಿದೆ ಎನ್ನಲಾಗಿದೆ. ಅಲ್ಲದೆ ಕೃಷ್ಣಾ, ಗೋದಾವರಿ ನದಿಗಳು ಹರಿಯುವುದರಿಂದ
ಕೃಷಿ ಅಭಿವೃದ್ಧಿಗೆ ಪೂರಕ ವಾತಾವರಣವಿದೆ. ಮಳೆಗಾಲದಲ್ಲಿ ಸಾವಿರಾರು ಟಿಎಂಸಿ ಅಡಿ ನೀರು ನದಿಗಳಲ್ಲಿ ಹರಿಯುತ್ತಿದ್ದರೂ ಯಾವುದಕ್ಕೂ ಉಪಯೋಗಕ್ಕೆ ಬರುತ್ತಿಲ್ಲ.

ರಾಜ್ಯ ಸರಕಾರ ನಿರ್ದಿಷ್ಟ ಯೋಜನೆಯನ್ನು ರೂಪಿಸಿ ಅಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲವನ್ನೇ ಸಮರ್ಪಕವಾಗಿ ಬಳಕೆ ಮಾಡಿ ದಲ್ಲಿ ಪ್ರದೇಶದ ಅಭಿವೃದ್ಧಿಯು ಸಾಧ್ಯವಿದೆ. ಜತೆಗೆ ಉದ್ಯೋಗಸೃಷ್ಟಿಯೂ ಆಗುತ್ತದೆ. ವಿದ್ಯಾವಂತ ಯುವಕರು ವಿಧಿ ೩೭೧ ಜೆ ಇದರ ಸದುಪಯೋಗಪಡಿಸಿಕೊಂಡರೆ ಪ್ರದೇಶದ ಅಭಿವೃದ್ಧಿ ಖಂಡಿತ ಸಾಧ್ಯವಿದೆ.

( ಲೇಖಕರು ಪ್ರಾಧ್ಯಾಪಕರು, ಸರಕಾರಿ
ಪ್ರಥಮ ದರ್ಜೆ ಕಾಲೇಜು, ಗೊಳಸಂಗಿ)