Saturday, 23rd November 2024

ಬಂಧನ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ನ್ಯೂಸ್ ಕ್ಲಿಕ್ ಸಂಸ್ಥಾಪಕ

ನವದೆಹಲಿ: ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಬಂಧನ ಮತ್ತು ರಿಮಾಂಡ್ ಅನ್ನು ರದ್ದುಪಡಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ನೇತೃತ್ವದ ಪೀಠವು ಪುರ ಕಾಯಸ್ಥ ಪರ ವಕೀಲ ಕಪಿಲ್ ಸಿಬಲ್ ಅವರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, “ಇದು ನ್ಯೂಸ್ ಕ್ಲಿಕ್ ಗೆ ಸಂಬಂಧಿಸಿದ ವಿಷಯವಾಗಿದೆ. ಪತ್ರಕರ್ತರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇಲ್ಲಿ ಆರೋಪಿ ಗಳಲ್ಲಿ ಒಬ್ಬರು 75 ವರ್ಷದ ವ್ಯಕ್ತಿ” ಎಂದರು. ತುರ್ತು ವಿಚಾರಣೆಯ ಮನವಿಯನ್ನು ಪರಿಗಣಿಸಲಾಗುವುದು ಎಂದು ಸಿಬಲ್ ಅವರಿಗೆ ನ್ಯಾಯಪೀಠ ಹೇಳಿತು.

ಯುಎಪಿಎ ಪ್ರಕರಣದಲ್ಲಿ ಪುರಕಾಯಸ್ಥ ಮತ್ತು ಚಕ್ರವರ್ತಿಯ ಬಂಧನ ಮತ್ತು ನಂತರದ ಪೊಲೀಸ್ ರಿಮಾಂಡ್ ವಿರುದ್ಧದ ಮನವಿಯನ್ನು ದೆಹಲಿ ಹೈಕೋರ್ಟ್ ಅಕ್ಟೋಬರ್ 13 ರಂದು ವಜಾಗೊಳಿಸಿತ್ತು. ಭಾರತದಲ್ಲಿ ಚೀನಾ ಪರ ಪ್ರಚಾರ ಮಾಡಲು ಹಣ ಸ್ವೀಕರಿಸಿದ ಆರೋಪದ ಮೇಲೆ ದೆಹಲಿ ಪೊಲೀಸರ ವಿಶೇಷ ಸೆಲ್ ಅಕ್ಟೋಬರ್ 3 ರಂದು ಪುರಕಾಯಸ್ಥ ಮತ್ತು ಚಕ್ರವರ್ತಿಯನ್ನು ಯುಎಪಿಎ ಆರೋಪಗಳ ಅಡಿ ಬಂಧಿಸಿತ್ತು.

ಭಾರತದ ಸಾರ್ವಭೌಮತ್ವವನ್ನು ದುರ್ಬಲಗೊಳಿಸಲು ಮತ್ತು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳ ಬೀಜ ಬಿತ್ತಲು ನ್ಯೂಸ್​ಕ್ಲಿಕ್ ಚೀನಾದಿಂದ ದೊಡ್ಡ ಮೊತ್ತದ ಹಣ ಸ್ವೀಕರಿಸಿದೆ ಎಂದು ಎಫ್‌ಐಆರ್ ನಲ್ಲಿ ಆರೋಪಿಸಲಾಗಿದೆ.