Saturday, 23rd November 2024

ಆಫ್ಘಾನ್ ತಂಡಕ್ಕೆ ಎರಡನೇ ಜಯ: ಪಾಕಿಸ್ತಾನಕ್ಕೆ ಮುಖಭಂಗ

ಚೆನ್ನೈ: ವಿಶ್ವಕಪ್‌ 2023ರ 22ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ನಿಗದಿತ 50 ಓವರ್‌ಗೆ 5 ವಿಕೆಟ್‌ಗೆ 282 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಅಫ್ಘಾನ್‌ ತಂಡವು ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ಪಾಕ್‌ ತಂಡಕ್ಕೆ ಬಿಗ್‌ ಶಾಕ್‌ ನೀಡಿತು.

ಅಂತಿಮವಾಗಿ ಅಫ್ಘಾನಿಸ್ತಾನವು ತಂಡವು 49 ಓವರ್‌ಗೆ 2 ವಿಕೆಟ್ ನಷ್ಟಕ್ಕೆ 286 ರನ್‌ ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಪಾಕ್‌ ತಂಡಕ್ಕೆ ಮತ್ತೊಂದು ಹೀನಾಯ ಸೋಲು ಅನುಭವಿಸಿ ಸೆಮೀಸ್‌ ಹಾದಿಯನ್ನು ಇನ್ನಷ್ಟು ಕಠಿಣ ಮಾಡಿಕೊಂಡಿದೆ.

ಟಾಸ್ ಸೋತು ಮೊದಲು ಬೌಲಿಂಗ್‌ ಮಾಡಿದರೂ ಉತ್ತಮ ದಾಳಿ ನಡೆಸಿದ ಅಫ್ಘಾನ್‌ ತಂಡ, ಬಳಿಕ ಪಾಕಿಸ್ತಾನ ನೀಡಿದ 283 ರನ್‌ಗಳ ಗುರಿಯನ್ನು ಉತ್ತಮ ಆರಂಭದೊಂದಿಗೆ ಬೆನ್ನಟ್ಟಿತು. ಅಫ್ಘಾನ್‌ ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝದ್ರಾನ್ ಬರೋಬ್ಬರಿ 130 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ಗೆಲುವಿನ ಆಸೆಯನ್ನು ಮೂಡಿಸಿದರು.

ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಅಂತಿಮವಾಗಿ ಅರ್ಧಶತಕದೊಂದಿಗೆ ಮಿಂಚಿದರು.

ಚೆನ್ನೈನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಮ್ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಮೊದಲು ಬ್ಯಾಟ್ ಮಾಡಿದ ಪಾಕಿ ಸ್ತಾನ ಪರ ಬಾಬರ್ ಅಜಮ್ (92 ಎಸೆತಗಳಲ್ಲಿ 74; 4 ಬೌಂಡರಿ, 1 ಸಿಕ್ಸರ್) ಅರ್ಧಶತಕದೊಂದಿಗೆ ಮಿಂಚಿದರು. ಅಬ್ದುಲ್ಲಾ ಶಫೀಕ್ (75 ಎಸೆತಗಳಲ್ಲಿ 58; 5 ಬೌಂಡರಿ, 2 ಸಿಕ್ಸರ್) ಕೂಡ ಅರ್ಧಶತಕ ಗಳಿಸಿದರು.

ಇಮಾಮುಲ್ ಹಕ್ (17), ರಿಜ್ವಾನ್ (8), ಸೌದ್ ಶಕೀಲ್ (25), ಅಂತಿಮವಾಗಿ ಶಾದಾಬ್ ಖಾನ್ (38 ಎಸೆತಗಳಲ್ಲಿ 40; 1 ಬೌಂಡರಿ, 1 ಸಿಕ್ಸರ್) ಮತ್ತು ಇಫ್ತಿಕರ್ ಅಹ್ಮದ್ (26 ಎಸೆತಗಳಲ್ಲಿ 40; 2 ಬೌಂಡರಿ, 4 ಸಿಕ್ಸರ್) ಅವರ ಆಟದಿಂದಾಗಿ ಪಾಕಿಸ್ತಾನ 282 ರನ್ ಗಳಿಸಲಷ್ಟೇ ಶಕ್ತವಾಯಿತು.