ಢಾಕಾ: ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.
ಬಾಂಗ್ಲಾ ಕ್ರಿಕೆಟ್ ನ ಸೂಪರ್ ಸ್ಟಾರ್ ಶಕೀಬ್ ಅವರು ರಾಜಕೀಯಕ್ಕೆ ಧುಮುಕಿದ್ದಾರೆ. ಜನವರಿ 7 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ಪರ ಸ್ಪರ್ಧೆಗೆ ಇಳಿಯಲು ತಯಾರಾಗಿದ್ದಾರೆ.
ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಶಕೀಬ್ ಪಕ್ಷದಿಂದ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಅವಾಮಿ ಲೀಗ್ ಜಂಟಿ ಕಾರ್ಯ ದರ್ಶಿ ಬಹಾವುದ್ದೀನ್ ನಾಸಿಮ್ ತಿಳಿಸಿದ್ದಾರೆ.”ಅವರು ಸೆಲೆಬ್ರಿಟಿ ಮತ್ತು ದೇಶದ ಯುವಜನರಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿದ್ದಾರೆ” ಎಂದು ನಾಸಿಮ್ ಹೇಳಿದರು.
ಶಕೀಬ್ ಅವರ ಉಮೇದುವಾರಿಕೆಯನ್ನು ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಆಡಳಿತ ಪಕ್ಷದ ಸಂಸದೀಯ ಮಂಡಳಿಯು ದೃಢಪಡಿಸಬೇಕಾಗಿದೆ. ಅವರು ಮಗರಾದಲ್ಲಿ ಅಥವಾ ರಾಜಧಾನಿ ಢಾಕಾದಲ್ಲಿ ಸ್ಪರ್ಧಿಸಲು ಆಶಿಸುತ್ತಿದ್ದಾರೆ ಎಂದು ನಾಸಿಮ್ ಹೇಳಿದರು. ಹಸೀನಾ ಅವರು ಕಳೆದ 15 ವರ್ಷ ಗಳಿಂದ ಸುಮಾರು 170 ಮಿಲಿಯನ್ ಜನ ಸಂಖ್ಯೆಯ ಬಾಂಗ್ಲಾದೇಶವನ್ನು ಮುನ್ನಡೆಸಿದ್ದಾರೆ. ಶೇಖ್ ಹಸೀನಾ ಕಬ್ಬಿಣದ ಮುಷ್ಟಿಯಿಂದ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.