Wednesday, 11th December 2024

ಮನೆ ಅಂದರೆ ಮೋದಿಗೇಕೆ ಸಿಟ್ಟು ?

ಮೂರ್ತಿಪೂಜೆ

ಕೆಲ ದಿನಗಳ ಹಿಂದೆ ಕೇಂದ್ರ ಸಚಿವರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ತಾವು ಬಂದ ಕಾರಣವನ್ನು
ವಿವರಿಸಲು ಮುಂದಾದ ಅವರು, ‘ನನ್ನ ಹೆಸರಿನಲ್ಲಿ ಒಂದು ನಿವೇಶನವಿದೆ. ಅದರಲ್ಲಿ ಒಂದು ಮನೆ ಕಟ್ಟಬೇಕು ಎಂದುಕೊಂಡಿದ್ದೇನೆ. ಯಾಕೆಂದರೆ ನಮ್ಮ ರಾಜ್ಯದ
ರಾಜಧಾನಿಗೆ ಹೋದಾಗಲೆಲ್ಲ ತುಂಬ ಜನ ನನ್ನನ್ನು ಭೇಟಿ ಮಾಡಲು ಬಯಸುತ್ತಾರೆ. ಅವರನ್ನು ಬರಮಾಡಿಕೊಳ್ಳಲು ನನಗೆ ಒಂದು ಸುಸಜ್ಜಿತ ಮನೆಯ ಅಗತ್ಯವಿದೆ’ ಎಂಬ ಒಂದು ಕೋರಿಕೆಯನ್ನು ಮುಂದಿಟ್ಟರಂತೆ.

ನಂತರ ಈ ಸಚಿವರು, ‘ಸರ್, ನನ್ನ ಕೋರಿಕೆಯನ್ನು ತಮ್ಮ ಮುಂದಿಟ್ಟಿದ್ದೇನೆ. ಇದಕ್ಕೆ ತಾವು ಒಪ್ಪಿಗೆ ನೀಡಿದರೆ ಮುಂದುವರಿಯುತ್ತೇನೆ’ ಅಂತ ಹೇಳಿದಾಗ ಮೋದಿಯವರು ಸ್ವಲ್ಪ ಹೊತ್ತು ಸುಮ್ಮನಿದ್ದರಂತೆ. ನಂತರ ಈ ಸಚಿವರನ್ನು ತದೇಕ ಚಿತ್ತದಿಂದ ನೋಡುತ್ತಾ, ‘ನಿಮ್ಮ ರಾಜ್ಯದಲ್ಲಿ ನಿಮಗೆ ಮನೆ ಇರಬೇಕಲ್ಲವೇ?’ ಎಂದರಂತೆ. ಆಗ ಸಚಿವರು, ‘ಇದೆ ಸರ್, ನನ್ನ ಕ್ಷೇತ್ರದಲ್ಲಿ ನನಗೆ ಮನೆ ಇದೆ. ರಾಜಧಾನಿಯಲ್ಲಿ ಒಂದು ಫ್ಲಾಟೂ ಇದೆ. ಆದರೆ ನನ್ನನ್ನು ಭೇಟಿ ಮಾಡಲು ಬರುವ
ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಸಜ್ಜಿತವಾದ ಮನೆ ಬೇಕು ಎಂಬುದು ನನ್ನ ಬಯಕೆ’ ಎಂದರು.

ಸಚಿವರು ಇಷ್ಟು ಸ್ಪಷ್ಟವಾಗಿ ಹೇಳಿದ ನಂತರವೂ ಪ್ರಧಾನಿ ಮೋದಿಯವರು, ‘ನೋ, ನೋ, ಈಗಾಗಲೇ ನಿಮ್ಮ ಕ್ಷೇತ್ರದಲ್ಲಿ ಮನೆ ಇದೆ, ರಾಜ್ಯದ ರಾಜಧಾನಿಯಲ್ಲಿ ಫ್ಲಾಟೂ ಇದೆ ಎಂದರೆ ನಿಮಗೆ ಮತ್ತೊಂದು ಮನೆಯ ಅಗತ್ಯವಿಲ್ಲ. ಒಂದು ವೇಳೆ ನೀವು ದೊಡ್ಡದೊಂದು ಮನೆ ಕಟ್ಟಿದಿರಿ ಎಂದುಕೊಳ್ಳಿ. ನೋಡುವ ಜನ ಸುಮ್ಮನಿರುವುದಿಲ್ಲ’ ಎಂದರು. ತಮ್ಮ ಮಾತು ಕೇಳಿ ಕೇಂದ್ರ ಸಚಿವರು ಮೌನವಾಗಿ ನಿಂತಾಗ ಪ್ರಧಾನಿಯವರು, ‘ನೋಡಿ, ಇವತ್ತು ನೀವು ರಾಜಧಾನಿಯಲ್ಲಿ ದೊಡ್ಡ ಮನೆ ಕಟ್ಟಿದಿರಿ ಎಂದುಕೊಳ್ಳಿ. ಜನ ಏನಂದುಕೊಳ್ಳುತ್ತಾರೆ? ಇವರೆಲ್ಲ ಹಿಂದೆ ಕಾಂಗ್ರೆಸ್ ಪಕ್ಷದವರ ಬಗ್ಗೆ ಆರೋಪ ಮಾಡುತ್ತಾ ಅಧಿಕಾರಕ್ಕೆ ಬಂದರು. ಈಗ
ತಾವೇ ಕಾಂಗ್ರೆಸ್ ನಾಯಕರನ್ನು ಮೀರಿಸುವಂತೆ ಆಸ್ತಿ ಮಾಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುವುದಿಲ್ಲವೇ? ಇದು ನಿಮ್ಮ ಇಮೇಜಿಗೆ ಮಾತ್ರವಲ್ಲ, ಕೇಂದ್ರ ಸರಕಾರದ ಇಮೇಜಿಗೂ ಡ್ಯಾಮೇಜು ಮಾಡುತ್ತದೆ’ ಎಂದರಂತೆ.

ಆಗ ಆ ಕೇಂದ್ರ ಸಚಿವರು, ‘ನೀವು ಹೇಳಿದ್ದು ನಿಜ ಸರ್, ನೀವು ಹೇಳಿದಂತೆಯೇ ಆಗಲಿ. ನನ್ನ ಮನಸ್ಸಿನಲ್ಲಿ ಬಂದ ಆಲೋಚನೆಯನ್ನು ನಿಮ್ಮ ಮುಂದಿಟ್ಟು ಅನುಮತಿ ಕೋರಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು’ ಎಂದಾಗ ಪ್ರಧಾನಿಯವರು ನಕ್ಕು ಸಚಿವರನ್ನು ಬೀಳ್ಕೊಟ್ಟರಂತೆ ಅಂದ ಹಾಗೆ, ರಾಜ್ಯದ ರಾಜಧಾನಿಯಲ್ಲಿ ತಮ್ಮ ದೊಡ್ಡ ಮನೆ ಕಟ್ಟಿಸಬೇಕು ಎಂಬ ಪ್ರಪೋಸಲ್ಲಿಗೆ ಪ್ರಧಾನಿಯವರು ಒಪ್ಪುವುದು ಕಷ್ಟ ಎಂಬ ಅನುಮಾನ ಈ ಸಚಿವರಿಗೂ ಇತ್ತಂತೆ. ಕಾರಣ? ಕೆಲ ಕಾಲದ ಹಿಂದೆ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದವರೊಬ್ಬರಿಗೆ ನರೇಂದ್ರ ಮೋದಿ ಅವರ ಸಂಪುಟದಿಂದ ಕೊಕ್ ಕೊಡಲಾಗಿತ್ತು. ಇದಕ್ಕೇನು ಕಾರಣ? ಎಂಬ ಪ್ರಶ್ನೆ ಬಂದಾಗ ಹಲವರು ಹಲವು ಬಗೆಯಲ್ಲಿ ವ್ಯಾಖ್ಯಾನಿಸಿದರೂ ಪ್ರಧಾನಿಯವರಿಗೆ ತುಂಬ ಆಪ್ತರಾಗಿದ್ದ ನಾಯಕರೊಬ್ಬರು ಆ ಕಾರಣವನ್ನು ಈ ಸಚಿವರಿಗೆ ವಿವರಿಸಿದ್ದರು.

ಅದರ ಪ್ರಕಾರ, ಆ ಸಚಿವರು ತಮ್ಮ ರಾಜ್ಯದ ರಾಜಧಾನಿಯಲ್ಲಿ ಕಟ್ಟಿಸಿದ ಭವ್ಯ ಬಂಗಲೆಯೇ ಸಂಪುಟದಿಂದ ಕೊಕ್ ನೀಡಲು ಕಾರಣವಾಗಿತ್ತು. ಅವರು ಈ ಬಂಗಲೆಯನ್ನು ಕಟ್ಟಿದ ವಿವರವನ್ನು ಪ್ರಧಾನಿಯವರಿಗೆ ನೀಡಿದ್ದ ಸೆಂಟ್ರಲ್ ಇಂಟಲಿಜೆನ್ಸ್ ಅಧಿಕಾರಿಗಳು, ‘ಈ ಸಚಿವರು ತಮ್ಮ ಬಂಗಲೆಯ ಎದುರು ಹಾಕಿಕೊಂಡ ನೇಮ್ ಪ್ಲೇಟನ್ನು ಗಮನಿಸುವ ಜನ ಕೆಟ್ಟದಾಗಿ ಮಾತನಾಡುತ್ತಾರೆ’ ಎಂದು ವಿವರಿಸಿದ್ದರಂತೆ. ಯಾವಾಗ ಇಂಥ ವರದಿ ತಮ್ಮ ಕೈ ತಲುಪಿತೋ, ಸಮಯಕ್ಕಾಗಿ ಕಾಯುತ್ತಿದ್ದ ಪ್ರಧಾನಿಯವರಿಗೆ ಸದರಿ ಸಚಿವರ ಬಗ್ಗೆ ಬೇರೊಂದು ದೂರು ಬಂದಿದ್ದೇ ಸಾಕಾಯಿತು. ಹೀಗಾಗಿ ಯಾವುದೇ ಮುಲಾಜಿಲ್ಲದೆ ತಮ್ಮ ಸಂಪುಟದಿಂದ ಆ
ಸಚಿವರನ್ನು ಕೈಬಿಟ್ಟರು. ಹೀಗೆ ರಾಜಧಾನಿಯಲ್ಲಿ ಬಂಗಲೆ ಕಟ್ಟಿದ ತಮ್ಮ ರಾಜ್ಯದ ಹಿರಿಯ ನಾಯಕರೊಬ್ಬರಿಗೆ ಇಂಥ ಗತಿ ಬಂದಿದೆ ಎಂಬುದು ಗೊತ್ತಾದ ಮೇಲೆ ತಾವು ಮನೆ ಕಟ್ಟಲು ಧೈರ್ಯ ಮಾಡುವುದು ಹೇಗೆ? ಅಂತ ಈ ಸಚಿವರಿಗೆ ತಲೆನೋವು ಶುರುವಾಗಿದೆ. ಹೀಗಾಗಿ ಯಾವುದಕ್ಕೂ ಇರಲಿ ಅಂತ ಪ್ರಧಾನಿಯ ವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ.

ಅವರು ಒಪ್ಪಿಗೆ ಕೊಟ್ಟರೆ -ನ್. ಕೊಡದೇ ಇದ್ದರೆ ಮುಂದಾಗುವ ಅನಾಹುತದಿಂದ ತಾವು ಬಚಾವ್ ಎಂಬುದು ಈ ಸಚಿವರ ಲೆಕ್ಕಾಚಾರ. ಈ ಲೆಕ್ಕಾಚಾರದಂತೆ ಅವರು ಬಚಾವಾದರು ಎಂಬುದೇನೋ ನಿಜ. ಆದರೆ ಈ ಬೆಳವಣಿಗೆಯಾದ ನಂತರ, ಬಂಗಲೆ ಕಟ್ಟಿ ಸೈಡ್‌ಲೈನಿಗೆ ಸರಿದ, ಮುಂದಿನ ದಿನಗಳಲ್ಲಿ ಸೈಡ್‌ಲೈನಿಗೆ ಸರಿಯಲು ಸಜ್ಜಾಗಿರುವ ನಾಯಕರ ಬಗ್ಗೆ ಕರ್ನಾಟಕದ ರಾಜಕೀಯ ವಲಯಗಳಲ್ಲಿ ಕುತೂಹಲಕಾರಿ ಕತೆಗಳು ಕೇಳಿಬರುತ್ತಿವೆ.

ದಿಲ್ಲಿ ತಲುಪಲಿದೆ ಸೀಕ್ರೆಟ್ ಫೈಲು
ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಮಾಜಿ ಸಚಿವ ವಿ.ಸೋಮಣ್ಣ ನಡೆಸು ತ್ತಿರುವ ಹೋರಾಟ ತಾರ್ಕಿಕ ಅಂತ್ಯ ಕಾಣಲಿದೆಯಂತೆ. ಡಿಸೆಂಬರ್ ಎರಡನೇ ವಾರ ದಿಲ್ಲಿಗೆ ಧಾವಿಸಲಿರುವ ಸೋಮಣ್ಣ ಅವರು ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ತಾವು ಅನುಭವಿಸಿದ ಸೋಲಿಗೆ ಏನು ಕಾರಣ? ಎಂಬ ಕುರಿತು ಆಡಿಯೋ-ವಿಡಿಯೋ ದಾಖಲೆ ಗಳಿರುವ ಸೀಕ್ರೆಟ್ ಫೈಲನ್ನು ಅಮಿತ್ ಶಾ ಅವರಿಗೆ ನೀಡಲಿದ್ದಾರೆ.

‘ನೀವು ಹೇಳಿದಿರಿ ಅಂತ ನಾನು ಸ್ಪರ್ಧಿಸಿದ್ದೆ. ಆದರೆ ಇದು ಗೊತ್ತಿದ್ದರೂ ಯಡಿಯೂರಪ್ಪನವರು ನನ್ನನ್ನು ಸೋಲಿಸಲು ಕೆಲಸ ಮಾಡಿದರು. ಇಷ್ಟಾದ ಮೇಲೂ ಇವರ ನಾಯಕತ್ವವನ್ನು ಒಪ್ಪಿ ಕೆಲಸ ಮಾಡಬೇಕು ಎನ್ನುತ್ತೀರಾ? ಅಥವಾ ನನಗೆ ನ್ಯಾಯ ಕೊಡಿಸುತ್ತೀರಾ?’ ಅಂತ ಈ ಸಂದರ್ಭದಲ್ಲಿ ಸೋಮಣ್ಣ ಕೇಳಲಿದ್ದಾ ರಂತೆ. ಒಂದು ವೇಳೆ ತಮಗಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ಸಿಕ್ಕರೆ -ನ್. ಇಲ್ಲದಿದ್ದರೆ ಮುಂದಿನ ದಾರಿ ಏನು? ಅಂತ ನಿರ್ಧರಿಸಲು ಸೋಮಣ್ಣ ತಯಾರಾಗಿ ದ್ದಾರೆ. ಅಂದ ಹಾಗೆ, ಸಿಟ್ಟಿಗೆದ್ದಿರುವ ಸೋಮಣ್ಣ ಮತ್ತವರ ಪುತ್ರ ಅರುಣ್ ಸೋಮಣ್ಣ ಅವರನ್ನು ಸೆಳೆಯಲು ಕಾಂಗ್ರೆಸ್ ನಾಯಕರು ಉತ್ಸುಕ ರಾಗಿದ್ದಾರೆ. ಅದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇರಬಹುದು, ಗೃಹ ಸಚಿವ ಡಾ.ಪರಮೇಶ್ವರ್ ಇರಬಹುದು ಅಥವಾ ಸಹಕಾರ ಸಚಿವ ಕೆ.ಎನ್.ರಾಜಣ್ಣ ಇರಬಹುದು. ಒಟ್ಟಿನಲ್ಲಿ ಎಲ್ಲರಿಗೂ ಸೋಮಣ್ಣ ಅವರನ್ನು ಪಕ್ಷಕ್ಕೆ ಸೆಳೆಯುವ ಆಸಕ್ತಿ ಇದೆ. ಹೀಗೆ ಸೋಮಣ್ಣ ಅವರನ್ನು ಕರೆತಂದು ತುಮಕೂರು ಲೋಕಸಭಾ ಕ್ಷೇತ್ರದ ಕ್ಯಾಂಡಿಡೇಟ್ ಮಾಡಿದರೆ ಲಿಂಗಾಯತ ಪ್ಲಸ್ ಅಹಿಂದ ಮತಗಳು ಕನ್ ಸಾಲಿಡೇಟ್ ಆಗಿ ಗೆಲ್ಲುವುದು ಸುಲಭ ಎಂಬುದು ಈ ನಾಯಕರ ಲೆಕ್ಕಾಚಾರ.

ಕುತೂಹಲದ ಸಂಗತಿ ಎಂದರೆ, ಮೊನ್ನೆ ಮೊನ್ನೆಯ ತನಕ ಸೋಮಣ್ಣ ಎಂದರೆ ಸಿಡಿದು ಬೀಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈಗ ಸಾಫ್ಟ್ ಅಗಿದ್ದಾರಂತೆ. ಸೋಮಣ್ಣ ಅವರನ್ನು ಪಕ್ಷಕ್ಕೆ ಕರೆತಂದು ತುಮಕೂರಿನಲ್ಲಿ ಗೆಲ್ಲುವಂತೆ ನೋಡಿಕೊಂಡರೆ ಲಿಂಗಾಯತ ಪಾಳಯಕ್ಕೆ ಪಾಸಿಟಿವ್ ಮೆಸೇಜು ತಲುಪಿಸಿದಂತಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಆದರೆ ಕಾಂಗ್ರೆಸ್ ಪಾಳಯದ ಈ ಲೆಕ್ಕಾಚಾರದಿಂದ ಆತಂಕಗೊಂಡಿರುವ ಯಡಿಯೂರಪ್ಪ ವಿರೋಧಿ ಬಣ, ನವೆಂಬರ್ ೧೭ರಂದು ಸೋಮಣ್ಣ ಅವರನ್ನು ಭೇಟಿ ಮಾಡಿದೆ.

ಯಾವ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಅಂತ ಆಣೆ-ಪ್ರಮಾಣ ಮಾಡಿಸಿಕೊಂಡಿದೆ. ಅದರ ಪ್ರಕಾರ, ಸೋಮಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ
ಪಕ್ಷದ ಕ್ಯಾಂಡಿಡೇಟ್ ಆಗುವ ಬದಲು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸೇಫ್. ಕಾರಣ? ಮೊದಲೇ ಅದು ಬಿಜೆಪಿಯ ಭದ್ರಕ್ಷೇತ್ರ. ಅದೇ ರೀತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸೋಮಣ್ಣ ಅವರಿಗೆ ಹಿಡಿತವೂ ಇದೆ. ಹೀಗಾಗಿ ವರಿಷ್ಠರಿಗೆ ಹೇಳಿ ಅಲ್ಲಿಂದ ಟಿಕೆಟ್ ಪಡೆದರೆ ಒಳ್ಳೆಯದು. ಇದನ್ನು ಬಿಟ್ಟು ತುಮಕೂರಿನಿಂದ ಸ್ಪರ್ಧಿಸಿದರೆ ಯಥಾ ಪ್ರಕಾರ ವರುಣಾ ಮತ್ತು ಚಾಮರಾಜನಗರದ ಎಪಿಸೋಡು ಪುನರಾವರ್ತನೆಯಾಗಬಹುದು. ಆದರೆ ಬೆಂಗಳೂರು ದಕ್ಷಿಣ
ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಯಾರೂ ಆಟವಾಡಲು ಸಾಧ್ಯವಿಲ್ಲ ಎಂಬುದು ಅದರ ಮೆಸೇಜು. ಅಂದ ಹಾಗೆ, ಬಿಜೆಪಿಯಿಂದ ಸ್ಪರ್ಧಿಸಿ ಲೋಕಸಭೆಗೆ ಹೋದರೆ ನಾಳೆ ಕೇಂದ್ರ ಮಂತ್ರಿಯಾಗುವುದು ಸುಲಭ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹೋದರೆ ಇದು ಕಷ್ಟ ಎಂದು ಈ ಟೀಮು ಸೋಮಣ್ಣ ಅವರಿಗೆ ವಿವರಿಸಿದೆ.
ಆದರೆ ಈ ವಿಷಯದಲ್ಲಿ ಯಾವ ರಿಯಾಕ್ಷನ್ನೂ ತೋರಿಸದ ಸೋಮಣ್ಣ ಅವರು, ‘ದಿಲ್ಲಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿ ಮಾಡುವ ತನಕ ಏನೂ ಮಾತನಾ ಡಲಾರೆ’ ಎಂದಿದ್ದಾರಂತೆ. ಒಂದು ವೇಳೆ ಸೋಮಣ್ಣ ಅವರ ದೂರನ್ನು ಕೇಳಿದ ಅಮಿತ್ ಶಾ ಅದಕ್ಕೆ ಪರಿಹಾರ ನೀಡದೆ ತೇಪೆ ಹಚ್ಚಿದರೆ ಆಟ ಬದಲಾಗಬಹುದು.

ಇವರು ಜೆಡಿಎಸ್ ಕ್ಯಾಂಡಿಡೇಟುಗಳಂತೆ

ಇನ್ನು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಯಾರಾಗಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮೌನ ವಾಗಿದ್ದರೂ, ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಒಂದು ಹೆಜ್ಜೆ ಮುಂದಿಟ್ಟಿರುವಂತೆ ಕಾಣಿಸುತ್ತಿದೆ. ಮೂಲಗಳ ಪ್ರಕಾರ, ಮುಂದಿನ ಚುನಾವಣೆ ಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿರುವ ಜೆಡಿಎಸ್ ೪ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ಈ ಪೈಕಿ ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸಲಿ ಎಂಬ ಅಭಿಪ್ರಾಯ ಕೇಳಿ ಬಂದಿದ್ದರೆ, ಮಂಡ್ಯದಲ್ಲಿ ಮಾಜಿ ಸಂಸದ ಪುಟ್ಟರಾಜು ಸ್ಪರ್ಧಿಸುವುದು ಬಹುತೇಕ ಪಕ್ಕಾ. ಉಳಿದಂತೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚಿಂತೆ ಮಾಡುತ್ತಿದ್ದ ಜೆಡಿಎಸ್
ನಾಯಕರಿಗೆ ಹಿರಿಯ ನಾಯಕ ಮುದ್ದಹನುಮೇಗೌಡರಿಂದ ಸಂದೇಶಗಳು ಬರುತ್ತಿವೆಯಂತೆ. ಟಿಕೆಟ್ ಕೊಡುತ್ತೇವೆ ಎಂದರೆ ನಿಮ್ಮ ಪಕ್ಷಕ್ಕೆ ಬರುತ್ತೇನೆ ಅಂತ ಮುದ್ದಹನುಮೇಗೌಡರು ಸಂದೇಶ ಕಳಿಸುವ ಹೊತ್ತಿಗೇ ಕೋಲಾರ ಕ್ಷೇತ್ರದಿಂದ ಸ್ಪಽಸಲು ಟಿಕೆಟ್ ಕೊಡುತ್ತೀರಾ ಅಂತ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕೇಳಿದ್ದಾರಂತೆ.

ಹೀಗೆ ತುಮಕೂರು, ಕೋಲಾರ ಲೋಕಸಭಾ ಕ್ಷೇತ್ರಗಳ ವ್ಯವಹಾರ ಸುಲಭವಾಗಿ ಸೆಟ್ಲಾದರೆ ಹಾಸನ, ಮಂಡ್ಯವೂ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಈಗಿನಿಂದಲೇ ಸಮರ ತಯಾರಿ ಆರಂಭಿಸಬಹುದು ಎಂಬುದು ದೇವೇಗೌಡರು- ಕುಮಾರಸ್ವಾಮಿ ಅವರ ಲೆಕ್ಕಾಚಾರ. ಮುಂದೇನಾಗುತ್ತದೋ? ಕಾದು ನೋಡಬೇಕು.