– ಮಂತ್ರಿ ಸತೀಶ ಜಾರಕಿಹೊಳಿ ಹೇಳಿಕೆ ಸಮರ್ಥಿಸಿದ ರಾಯರೆಡ್ಡಿ
ಕೊಪ್ಪಳ: ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ. ರಾಜ್ಯದಲ್ಲಿ ಇನ್ನೂ 4 ಡಿಸಿಎಂ ಹುದ್ದೆ ಸೃಷ್ಠಿ ಮಾಡಿದರೂ ತಪ್ಪಿಲ್ಲ ಎನ್ನುವ ಮೂಲಕ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಡಿಕೆಶಿಗೆ ಟಾಂಗ್ ನೀಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಡಿಸಿಎಂ ಹುದ್ದೆ ಸೃಷ್ಠಿ ಕುರಿತು ಸತೀಶ ಜಾರಕಿಹೋಳಿ ಮತ್ತು ಇತರರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಈ ಹಿಂದೆ ಬಿಜೆಪಿಗರು ಮೂವರನ್ನು ಡಿಸಿಎಂ ಮಾಡಿದ್ದರು. ಡಿಸಿಎಂ ಹುದ್ದೆ ಕೇವಲ ಗೌರವಾನ್ವಿತ ಹುದ್ದೆ. ಇದನ್ನು ಇಷ್ಟೊಂದು ದೊಡ್ಡದು ಮಾಡೋದು ಅಗತ್ಯ. ಕೊನೆಯಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಸಿಎಂ ಹಾಗೂ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಸರಕಾರ ರಚನೆ ವೇಳೆ ಸಿಎಂ ನನ್ನನ್ನು ಮಂತ್ರಿ ಮಾಡಿದ್ದರು. ಅರಣ್ಯ, ಪರಿಸರ ಹಾಗೂ ಯೋಜನಾ ಖಾತೆ ನೀಡಿದ್ದರು. ಆದರೆ, ಬದಲಾದ ರಾಜಕೀಯ ದಲ್ಲಿ ನಾನು ಮಂತ್ರಿ ಆಲಿಲ್ಲ. ಈ ವೇಳೆ 2024ರ ಜುಲೈ ವೇಳೆಗೆ ಮಂತ್ರಿ ಮಾಡುತ್ತೇನೆ ಎಂದು ಆಗ ಸಿಎಂ ಹೇಳಿದ್ದರು. ಜೂನ್ – ಜುಲೈ ನಂತರ ಸಂಪುಟ ಪುನರ್ ರಚನೆಯಾದರೆ ನಾನು ಮಂತ್ರಿ ಆಗಬಹುದು ಎಂಬ ನಿರೀಕ್ಷೆ ಇದೆ. ಮಂತ್ರಿ ಆಗದೇನೂ ಇರಬಹುದು. ಸಿಎಂ ನನಗೆ ಬಾಂಡ್ ಮೇಲೆ ಬರೆದು ಕೊಟ್ಟಿಲ್ಲ ಎನ್ನುವ ಮೂಲಕ ತಮ್ಮ ಹೇಳಿಕೆಗೆ ತೇಪೆ ಹಚ್ಚಿದರು.
ಮಂತ್ರಿ ಆಗಲು ಯಾವುದೇ ಮಾನದಂಡ ಬೇಕಾಗಿಲ್ಲ. ರಾಜಕೀಯದಲ್ಲಿ ಸಿನಿಯಾರಿಟಿ, ಜ್ಯೂನಿಯಾರಿಟಿ ಇಲ್ಲ. ರಾಜಕೀಯದಲ್ಲಿ ಭರವಸೆ ಮೇಲೆ ಬದುಕ ಬೇಕು. ಸಮಯ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಸಿಎಂ ಆರ್ಥಿಕ ಸಲಹೆಗಾರ ಹುದ್ದೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವಿರೋಧಕ್ಕೆ ಪ್ರತಿಯಿಸಿ, ಪರ ವಿರೋಧ ಮಾಡುವುದು ಸಾಮಾನ್ಯ. ವಿರೋಧ ಮಾಡಿದರೆ ನನಗೆ ಬೇಜಾರಾಗಲ್ಲ. ಹೊಗಳಿದರೆ ನನಗೆ ಖುಷಿ ಆಗಲ್ಲ. ನಾನೇನು ಅರ್ಥಿಕ ತಜ್ಞ ಅಂತ ಹೇಳಿಲ್ಲ. ಬೇಸಿಕ್ ನಾಲೇಡ್ಜ್ ಇದೆ. ಈ ಹುದ್ದೆ ನಿರ್ವಹಣೆ ಮಾಡುತ್ತೇನೆ ಎಂದರು.