Saturday, 23rd November 2024

ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗೈದ ಮಾನವತಾವಾದಿಯ ಯಶೋಹಾದಿ !

ವಿನಾಯಕ ರಾಮ್ / ಶ್ಯಾಮ್ ಶಿವಮೊಗ್ಗ

ಯಾವುದೇ ಹಿನ್ನಲೆ ಇಲ್ಲದೆ, ಗಾಡ್ ಫಾದರ್‌ನ ಹಂಗಿಲ್ಲದೆ, ಆಸ್ತಿ ಅಂತಸ್ತಿನ ಸಹಾಯವಿಲ್ಲದೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಸುಲಭ ವೇನಲ್ಲ. ಆದರೆ ಓದಬೇಕೆಂಬ ಹಂಬಲ, ಉನ್ನತ ಸ್ಥಾನ ಗಿಟ್ಟಿಸಿಕೊಳ್ಳ ಬೇಕೆಂಬ ಹಪಹಪಿಯೇ ಈತನನ್ನು ಮೇಲುಸ್ತರಕ್ಕೆ ಕೊಂಡೊಯ್ದಿರು ವುದು. ತನ್ನ ಕಿರಿಯ ವಯಸ್ಸಿ ನಲ್ಲಿಯೇ ಮಹತ್ತರ ಸಾಧನೆಗೈದಿರುವವರು ಹಾರನಹಳ್ಳಿಯ ಸಿದ್ದೇಶ್. ವಿಶ್ವವಾಣಿಯ ವಿಯೇಟ್ನಾಂ ಗ್ಲೋಬಲ್ ಅಚೀವರ‍್ಸ್ ಅವಾರ್ಡ್‌ಗೆ ಆಯ್ಕೆಯಾಗಿರುವ ಸಿದ್ದೇಶ್ ಅವರ ಸಾಧನೆಯ ಹಾದಿ ಇಲ್ಲಿದೆ.

ಕೌಟುಂಬಿಕ ಹಿನ್ನೆಲೆ ಇಲ್ಲ. ಯಾರೊಬ್ಬರ ಪ್ರೋತ್ಸಾಹ ಇಲ್ಲ. ಮನೆಯಲ್ಲಿ ಹೇಳಿಕೊಳ್ಳುವಂಥ ಶ್ರೀಮಂತಿಕೆ ಇಲ್ಲ. ಆದರೂ ಆ ಹುಡುಗ ಹಿಡಿದ ಹಠ ಬಿಡಲಿಲ್ಲ. ಎಡಬಿಡದೇ ಸಾಧನೆ ಮಾಡೋದನ್ನು ನಿಲ್ಲಿಸಲಿಲ್ಲ. ಕಾರಣ ಆತನ ಕೈಯಲ್ಲಿ ಮೆರಿಟ್ ಎನ್ನುವ ದೊಡ್ಡ ಮಟ್ಟದ ಬ್ರಹ್ಮಾಸ್ತ್ರವೇ ಇತ್ತು. ಓದಬೇಕು, ಓದಿ ಜಯಿಸಬೇಕು ಎನ್ನುವ ಮಹೋನ್ನತ ಗುರಿ ಕಣ್ಣ ಮುಂದೆ ಸೂರ್ತಿದಾಯಕ ಗುರುವಾಗಿ ನಿಂತಿತ್ತು!

ಹಾಸನ ಜಿಲ್ಲೆಯ ಹಾರನಹಳ್ಳಿ ಎನ್ನುವ ಊರಿನವನಾದ ಸಿದ್ದೇಶ್, ತಮ್ಮ ಇಡೀ ವಿದ್ಯಾಭ್ಯಾಸವನ್ನು ಉಚಿತವಾಗಿ ಪೂರೈಸುತ್ತಾರೆ. ಅದಕ್ಕೆ ಕಾರಣ ಅವರಲ್ಲಿದ್ದ ವಿದ್ಯಾಭ್ಯಾಸದ ಮೇಲಿನ ಪರಮ ಭಕ್ತಿ, ಅಕ್ಷರಾಭ್ಯಾಸದ ಮೇಲಿನ ಪರಮ ಪ್ರೀತಿ, ಸಾಧಿಸಬೇಕು ಎನ್ನೋ ಪರಮ ಹಠ. ಜೀವನದಲ್ಲಿ ಗೆದ್ದೇ ಗೆಲ್ಲುತ್ತೇನೆ ಎನ್ನೋ ಪರಮ ಗುರಿ. ನವೋದಯ ಸ್ಕೂಲ್ ಅನ್ನುವುದು ತುಂಬಾ ಹುಡುಗರ ಪಾಲಿನ ಗುರುತರ ಪಾಠಶಾಲೆ. ಅಲ್ಲಿ ಕಲಿಯಲು ಒಂದು ಗುಣಮಟ್ಟದ ಯೋಗ್ಯತೆ ಬೇಕಾಗುತ್ತದೆ. ಚೆನ್ನಾಗಿ ಓದಬಲ್ಲವರಿಗೆ ಮಾತ್ರ ಅಲ್ಲಿ ಉಚಿತ ಅವಕಾಶ. ಸಿದ್ದೇಶ್ ಅವರಿಗೂ ಅದೇ ನವೋದಯ ನವೋ ಲ್ಲಾಸದ ನೆಚ್ಚಿನ ಸ್ಕೂಲಾಗಿತ್ತು. ಅಲ್ಲಿನ ಸೌಲಭ್ಯ ಮತ್ತು ಅತ್ಯದ್ಭುತ ವ್ಯವಸ್ಥೆಯನ್ನು ಇವತ್ತಿಗೂ ನೆನಪಿಸಿಕೊಂಡು ಆ ದಿನಗಳಿಗೆ ಮರಳುವ ಅವರು, ತಮ್ಮ ಶಾಲಾ ಕಾಲೇಜು ದಿನಗಳನ್ನು ಉಚಿತ ಸೌಲಭ್ಯದ ಮೂಲಕವೇ ಕಳೆದರು. ಅವರಲ್ಲಿದ್ದ ಮೆರಿಟ್ ಎನ್ನುವ ಪ್ಲಸ್ ಪಾಯಿಂಟ್ ಅವರನ್ನು ಆ ಸೌಲಭ್ಯದ ಫಲಾನುಭವಿಯನ್ನಾಗಿ ಮಾಡಿತು!

ವಿಶ್ವೇಶ್ವರಯ್ಯ ಕಾಲೇಜ್ ಟು ವಿಶ್ವವಾಣಿ ಅವಾರ್ಡ್!
ವೃತ್ತಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆಗಿರುವ ಸಿದ್ದೇಶ್ ಡಿಗ್ರಿ ಓದಿದ್ದು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಕಂಪ್ಯೂಟರ್ ಸೈನ್ಸ್ ಭಾಗದಲ್ಲಿ ಶಿಕ್ಷಣ ಪಡೆದಿರುವ ಸಿದ್ದೇಶ್, ಹತ್ತನೇ ತರಗತಿಯಲ್ಲಿ ನ್ಯಾಷನಲ್ ಟಾಪರ್. ಬಿಇಯಲ್ಲಿ ಡಿಸ್ಟಿಂಕ್ಷನ್ ಪಡೆದಿರೋ ವಿಧೇಯ ಹಾಗೂ ವಿಶೇಷ ಬ್ರೈನ್ ಇರುವ ವಿದ್ಯಾರ್ಥಿ. ಭಾರತ ಸರ್ಕಾರದ ಆಧಾರ್ ಪ್ರಾಜೆಕ್ಟ್‌ನಲ್ಲೂ ಕೆಲಸ ಮಾಡಿರುವ ಇವರು ಅಲ್ಲಿ ಸಹ ಸಾಕಷ್ಟು ಐಡಿಯಾಗಳನ್ನು ಶೇರ್ ಮಾಡಿ, ಒಂದು ರೀತಿಯ ‘ಆಧಾರ’ ಸ್ಥಂಭವೇ ಆಗಿದ್ದಾರೆ. ಬಯೋ ಮೆಟ್ರಿಕ್ ಮೂಲಕ ಆಧಾರ್ ನೊಂದಣಿ ಮಾಡಿಕೊಳ್ಳುವ ಕಾನ್ಸೆಪ್ಟ್ ಅನ್ನು ಬಿಲ್ಡ್ ಮಾಡುವಲ್ಲಿ ಸಿದ್ದೇಶ್ ಅವರ ಶ್ರಮವೂ ಅಡಗಿದೆ. ಅವರ ಅಳಿಲು ಸೇವೆಯೂ ಆ ಯೋಜನೆಗಿದೆ.

ಹಾರನಹಳ್ಳಿಯ ಮನೆಮಗ
ಹಾರನಹಳ್ಳಿಯ ಹಳ್ಳಿಗರಿಗೆ ಸಿದ್ದೇಶ್ ಎಂದರೆ ಅತೀವ ಪ್ರೀತಿ, ಅನರ್ಘ್ಯ ಒಲವು, ವಿಶೇಷ ಕಾಳಜಿ. ಅದಕ್ಕೆ ಕಾರಣ ಸಿದ್ದೇಶ್ ಆ ಪ್ರತ್ಯಕ್ಷ ಹಾಗೂ ಪರೋಕ್ಷ ವಾಗಿ ಊರಿನ ಜನತೆಯ ಜತೆಗಿರುವುದು. ಅದು ಎಂಥದ್ದೇ ಕೆಲಸ ಇರಲಿ, ಇವತ್ತು ಆಗಲೇಬೇಕು ಎಂದುಕೊಳ್ಳುವ ಮೊದಲು ಊರಿಗರಿಗೆ ಸಿದ್ದೇಶ್ ಅವರೇ ನೆನಪಾಗುತ್ತಾರೆ. ನಮ್ಮೆಲ್ಲರ ಜತೆ ಸಿದ್ದೇಶ್ ಇದ್ದಾರೆ ಎನ್ನುವ ಸಾರ್ಥಕ ಭಾವ ಇಡೀ ಊರಿನ ಜನತೆಗಿದೆ. ಆ ಮಟ್ಟದಲ್ಲಿ ಸಿದ್ದೇಶ್ ಆ ಊರಿನ ಜನರೊಂದಿಗೆ ಬೆರೆತಿದ್ದಾರೆ. ಅಘೋಷಿತ ಆಪ್ತಬಂಧುವಾಗಿ ಸಿದ್ದೇಶ್ ಇವತ್ತಿಗೂ ಸಮಾಜಸೇವೆ ಮುಂದುವರೆಸಿದ್ದಾರೆ.

ಬಡ ಮಕ್ಕಳಿಗೆ ಸಹಾಯ
ಸಿದ್ದೇಶ್ ಬಾಲ್ಯದಿಂದಲೂ ಕಷ್ಟಪಟ್ಟು, ಶ್ರಮಪಟ್ಟು, ಇಷ್ಟಪಟ್ಟು ಓದಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿರುವ ಕಾರಣಕ್ಕೆ ಅವರಿಗೆ ಬಡ ವಿದ್ಯಾರ್ಥಿ ಗಳು, ಆಸಕ್ತಿ ಇರುವ ಮಕ್ಕಳೆಂದರೆ ಬಲು ಕಾಳಜಿ. ತಾವು ಸಿವಿಲ್ ಕಾಂಟ್ರಾಕ್ಟ್ ಉದ್ಯಮದಲ್ಲಿ ದುಡಿದ ದುಡ್ಡಿನ ಒಂದು ಗುಣಮಟ್ಟದ ಭಾಗವನ್ನು ಬಡ ಮಕ್ಕಳ ಕಲ್ಯಾಣಕ್ಕೆ, ಅವರ ಪಾಲನೆ ಪೋಷಣೆಗೆ ಮೀಸಲಿಡುತ್ತಾರೆ. ತುಂಬು ಸಂಕೋಚದ ಸ್ವಭಾವ ದವರಾದ ಸಿದ್ದೇಶ್ ಅವರು, ಒಂದಷ್ಟು ವರ್ಷ ವಿದೇಶಿ ಕಂಪನಿಯೊಂದಕ್ಕೆ ಕೆಲಸ ಮಾಡುತ್ತಿದ್ದ ರಾದರೂ, ೨೦೧೮ರ ನಂತರ ತನ್ನೂರಿನ ಸೆಳೆತದ ಕಾರಣಕ್ಕೆ ಮರಳಿ ಮಣ್ಣಿಗೆ ಸೇರಿಕೊಂಡುಬಿಡುತ್ತಾರೆ. ಊರಿನವರ ಮಧ್ಯೆಯೇ ಇದ್ದು ಅವರ ಸೇವೆಯಲ್ಲಿ ಸಂಪನ್ನತೆ ಕಂಡುಕೊಳ್ಳುತ್ತಾರೆ. ತಂದೆ ಸಿದ್ದಪ್ಪಾಜಿ ಅವರ ಅಕಾಲಿಕ ಮರಣವೂ ಅದಕ್ಕೆ ಇನ್ನೊಂದು ಕಾರಣವಾಗಿರುತ್ತದೆ.

ಮನೆಗೆ ಅಚ್ಚುಮೆಚ್ಚಮ್ಮ, ಅಕ್ಕಂದಿರ ಇಷ್ಟದ ತಮ್ಮ

ಸಿದ್ದೇಶ್ ಅವರು ಕಷ್ಟಪಟ್ಟು ದುಡಿದ ದುಡ್ಡಲ್ಲಿ ತನ್ನ ಸಹೋದರಿಯರಿಬ್ಬರ ಕುಟುಂಬಕ್ಕೆ ಕೈಲಾದಮಟ್ಟಿಗೆ ಸಹಾಯ ಮಾಡುವುದರ ಜತೆಗೆ, ಅಕ್ಕಂದಿರ ಬದುಕಲ್ಲಿ ನೆಮ್ಮದಿ ಸಂತೋಷ ಇರಬೇಕು ಎಂದು ಅಪೇಕ್ಷೆ ಪಡುವ ಅಕಳಂಕ ತಮ್ಮ. ಅಕ್ಕಂದಿರಿಬ್ಬರಿಗೂ ತಮ್ಮನೆಂದರೆ, ಆತನ ಯೋಚನೆ-ಯೋಜನೆ-ಸಾಮಾಜಿಕ ಚಿಂತನೆ-ಸಹನೆ-ತಾಳ್ಮೆ-ಸತತ ಪರಿಶ್ರಮ ಎಂದರೆ ಎಲ್ಲಿಲ್ಲದ ಗೌರವ, ವಿಶೇಷ ಪ್ರೀತಿ! ಅಮ್ಮ ಮಂಗಳಮ್ಮ ಅವರ ಜತೆ ಸದ್ಯ ಹಾರನಹಳ್ಳಿ ಯಲ್ಲೇ ನೆಲೆಸಿರುವ ಸಿದ್ದೇಶ್, ತವರಿನಲ್ಲೇ ಸ್ವರ್ಗದ ಸಿರಿ ಕಾಣುವ ಹೃದಯವಂತ, ಗುಣವಂತ ಹಾಗೂ ಜನಮಾನಸದಲ್ಲಿ ಬೆರೆತುಹೋದ ಸರಳ ಸಿರಿವಂತ.

ಸಿವಿಲ್ ಸ್ಕೋರ್ ಚೆನ್ನಾಗಿದೆ
ಭಾರತ ಮತ್ತು ಕರ್ನಾಟಕ ಸರ್ಕಾರದ ಸಿವಿಲ್ ಭಾಗಕ್ಕೆ ಒಂದಷ್ಟು ಬಿಡಿಭಾಗಗಳನ್ನು ಸಪ್ಲೇ ಮಾಡುವ ಕೆಲಸ ಮಾಡುತ್ತಿರುವ ಸಿದ್ದೇಶ್, ಸಿವಿಲ್ ಇಂಜಿನಿ ಯರಿಂಗ್ ಕ್ಷೇತ್ರಕ್ಕೇ ಅಪ್ರತಿಮ ಮಾದರಿ. ಕಾಯಕ ಇಂಜಿನಿಯರಿಂಗ್ ಸರ್ವೀಸಸ್ ಕಂಪನಿಯ ಮೂಲಕ ಕೋಟ್ಯಂತರ ಟರ್ನ್ ಓವರ್ ಮಾಡಿರುವ ಇವರ ಹೆಸರಲ್ಲಿ ಯಾವುದೇ ರೀತಿಯ ಕಪ್ಪುಚುಕ್ಕಿಯಾಗಲಿ, ಅಪ್ರಾಮಾಣಿಕತೆಯ ಛಾಯೆ ಇರುವ ವ್ಯವಹಾರ ವಾಗಲೀ ಇಲ್ಲ. ತಾನು ದುಡಿದ ದುಡ್ಡಲ್ಲಿ ಒಂದು ಭಾಗವಷ್ಟೇ ಅಲ್ಲದೇ ಒಂದಷ್ಟು ಭಾಗವನ್ನು ಜನಸೇವೆಗೆ ಮುಡಿಪಾಗಿಡುವ ಸಿದ್ದೇಶ್ ಅವರಿಗೆ ವೃತ್ತಿ ಕೈ ಹಿಡಿದಿದೆ. ಅತ್ಯುತ್ತಮ ಕೆಲಸ ಮಾಡುವ ಕಲೆ ಸಿದ್ದಿಸಿದೆ!

ಕೋವಿಡ್ ಸಮಯದಲ್ಲಿ ಸಹಾಯಹಸ್ತ
ಸಿದ್ದೇಶ್ ಅದಾಗಲೇ ಸಿಟಿ ಜೀವನಕ್ಕೆ ಗುಡ್‌ಬೈ ಹೇಳಿ, ಹಳ್ಳಿಗೆ ಹೊರಳಿಕೊಂಡಿದ್ದ ಸಂದರ್ಭದಲ್ಲಿ ಕೋವಿಡ್ ಅನ್ನುವ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿತು. ಅಂಥ ಕಡುಕಷ್ಟದ ಸಂದರ್ಭದಲ್ಲಿ ಸಿದ್ದೇಶ್ ಊರಿನ ಸಾಕಷ್ಟು ಬಡ ಬದುಕುಗಳಿಗೆ ಸಹಾಯಹಸ್ತ ಚಾಚಿದರು. ತಾವೇ ಓಡಾಡಿ ಒಂದಷ್ಟು ಯುವಕರ ಜೀವನೋಪಾಯಕ್ಕೆ ಬೆಂಗಾವಲಾಗಿ ನಿಂತರು!

ಸ್ಪಿರಿಚುವಲ್ ಸಿದ್ದೇಶ್


ಸಿದ್ದೇಶ್ ಅವರಿಗೆ ಅಧ್ಯಾತ್ಮ ಎಂದರೆ ಅಪಾರ ಪ್ರೀತಿ. ಊರಿನ ಯಾವುದೇ ದೊಡ್ಡ ಕಾರ‍್ಯಕ್ರಮ ಆದರೂ ಅಲ್ಲಿ ಸಿದ್ದೇಶ್ ಅವರ ಮೋಟಿವೇಷನಲ್ ಸ್ಪೀಚ್ ಕೇಳಬೇಕು ಎನ್ನುವ ಒಂದು ಅಭಿಮಾನಿ ವರ್ಗವೇ ಇದೆ. ಅಷ್ಟು ಸುಲಲಿತವಾಗಿ, ಸುಶ್ರಾವ್ಯವಾಗಿ, ಸುಸಂಸ್ಕೃತರಾಗಿ ಮಾತನಾಡುವ ಅವರು, ಅಧ್ಯಾತ್ಮ ಮತ್ತು ಪಾಸಿಟಿವ್ ಥಿಂಕಿಂಗ್ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಸ್ವಾಮಿ ವಿವೇಕಾನಂದರ ಬದುಕಿನ ಹಾದಿ ಅವರಿಗೆ ಬಲು ಇಷ್ಟದ ವಿಷಯ. ವಿವೇಕಾನಂದರ ಬಗ್ಗೆ, ಅವರ ಸಾಧನೆಯ ಬಗ್ಗೆ ಗಂಟೆಗಟ್ಟಲೇ ಮಾತನಾಡಲೂ ಸಿದ್ದೇಶ್ ಸಿದ್ಧ!

ಇದು ವರ್ಜಿನ-ಲ್ ಮ್ಯಾಟರ್
ವಿಶ್ವೇಶ್ವರ ಭಟ್ ಅವರ ರಿಚರ್ಡ್ ಬ್ರಾನ್‌ಸನ್ ಬದುಕಿನ ವರ್ಜಿನ-ಲ್ ವಿಚಾರಗಳು ಪುಸ್ತಕ ಎಂದರೆ ಸಿದ್ದೇಶ್ ಅವರಿಗೆ ತುಂಬಾ ಇಷ್ಟ. ಬಿಡುವಿದ್ದಾಗ ಲೆಲ್ಲಾ ಆ ಪುಸ್ತಕದ ಅಕ್ಷರಗಳನ್ನು ಮೆಲುಕು ಹಾಕುತ್ತಾ ಇರುತ್ತಾರೆ. ರಿಚರ್ಡ್ ಎನ್ನೋ ದಿ ಬೆಸ್ಟ್ ಬಿಜಿನೆಸ್‌ಮನ್‌ನ ಜೀವನಪಾಠಗಳನ್ನು ಅವರು ತಮ್ಮ ಬದುಕಿಗೂ ಅಳವಡಿಸಿಕೊಳ್ಳುವಷ್ಟು ಪ್ರಚೋದಿತ ರಾಗಿದ್ದಾರೆ. ಜತೆಗೆ ವಿಶ್ವೇಶ್ವರ ಭಟ್ಟರ ಬದುಕು-ಬರಹ-ಸಾಧನೆ ಬಗ್ಗೆಯೂ ಸಿದ್ದೇಶ್ ಅಪಾರ ಆಸಕ್ತ ರಾಗಿದ್ದಾರೆ.

ಓದಲು ಸೈ, ಬರೆಯಲು ಸೈ!
ಸಿದ್ದೇಶ್ ಅವರಿಗೆ ಓದು ಮತ್ತು ಬರಹ ಎರಡೂ ಕ್ಷೇತ್ರಗಳೂ ಇಷ್ಟ. ತನ್ನ ಪ್ರೀತಿಗರಿಗೆ, ಸ್ನೇಹಿತರಿಗೆ ಸ್ಪೂರ್ತಿ ಆಗಲಿ ಎಂಬ ಕಾರಣಕ್ಕೆ ಕೆಲವೊಂದು ಬರಹ
ಗಳನ್ನು, ಸ್ಪೂರ್ತಿದಾಯಕ ಸಾಲು ಗಳನ್ನೂ ಬರೆದು ಪೋಸ್ಟ್ ಮಾಡುವ ಇವರ ಬರವಣಿಗೆಗೆ ಅದರದೇ ಆದ ಘನತೆಯಿದೆ, ಗೌರವ ವಿದೆ. ಅವರು ಬರೆ ಯುವ ಸಾಲುಗಳಲ್ಲಿ ಸ್ವಾದವಿದೆ, ಸ್ವಾದಿಷ್ಟತನವಿದೆ. ಬರವಣಿಗೆಯ ಘಮವಿದೆ, ಘಮಲಿದೆ. ಅದಕ್ಕೊಂದು ಸ್ಯಾಂಪಲ್ ಇಲ್ಲಿದೆ..!

ಸಾಧನೆಗೆ ಸಂದ ಗೌರವ
ಸಿದ್ದೇಶ್ ನೋಡಲು ಅತೀವ ಸರಳ, ಅಷ್ಟೇ ವಿನೀತ ವ್ಯಕ್ತಿ. ತಮ್ಮ ಕ್ಷೇತ್ರ ದಲ್ಲಿ ಅಪಾರ ಹೆಸರು, ಗೌರವ, ಹಣ, ಕೀರ್ತಿ ಎಲ್ಲವನ್ನೂ ಸಂಪಾದಿಸಿದ್ದರೂ ತಾನೊಬ್ಬ ಸಾಮಾನ್ಯರಲ್ಲಿ ಸಾಮಾನ್ಯ ಎಂದು ಬದುಕು ತ್ತಿರುವ ಮೂವತ್ತಮೂರರ ಯುವ ಸಾಧಕನಿಗೆ ಈ ಸಾಲಿನ ವಿಯೇಟ್ನಂ ಗ್ಲೋಬಲ್ ಅಚೀವರ್ ಅವಾರ್ಡ್ ನೀಡಲಾಗುತ್ತಿದೆ. ಅವರ ಕಾರ್ಯ ಪ್ರವೃತ್ತಿ, ಕಾರ್ಯ ಶ್ರದ್ಧೆ, ಕಾರ್ಯಾಚರಣೆಗೆ ಈ ವಿಶೇಷ ಗೌರವ ನೀಡಿ ಪುರಸ್ಕರಿಸಲಾಗುತ್ತಿದೆ!

*

ಈ ಬಗ್ಗೆ ನಾನು ತುಂಬಾ ಎಕ್ಸೈಟ್ ಆಗಿದ್ದೇನೆ. ವಿಶ್ವಮಟ್ಟದ ಹೆಸರುಳ್ಳ ವಿಶ್ವೇಶ್ವರ ಭಟ್ ಅನ್ನುವ ಸಾಧನಶೀಲ, ಸೃಜನಶೀಲ ವ್ಯಕ್ತಿತ್ವದ ಜತೆ ಒಂದು ನಿಮಿಷ ಕಳೆಯುವುದೂ ಅದೃಷ್ಟವೇ. ಅಂಥದ್ದರಲ್ಲಿ ಆರು ದಿನ ಅವರ ಜತೆ ಕಳೆಯುವ ಅಮೃತ ಘಳಿಗೆಗೆ ತುದಿಗಾಲಲ್ಲಿ ಕಾಯುತ್ತಿದ್ದೇನೆ. ಈ ಪ್ರಶಸ್ತಿಯನ್ನು ನನ್ನ ಊರಿನ ಜನತೆಗೆ, ನನ್ನ ಕುಟುಂಬಕ್ಕೆ ಅರ್ಪಿಸುತ್ತೇನೆ!
– ಸಿದ್ದೇಶ್ ಹಾರನಹಳ್ಳಿ, ಯುವ ಸಾಧಕ, ಸಿವಿಲ್ ಕಾಂಟ್ರಾಕ್ಟರ್