ಶಿಶಿರ ಕಾಲ
shishirh@gmail.com
ನಾಗರಹಾವು ಒಂದು ವಿಷಪೂರಿತ ಸರೀಸೃಪ. ಮನೆಯ ಸುತ್ತ, ಕೊಟ್ಟಿಗೆಯಲ್ಲಿ, ಮಾಡಿನ ಚಡಿಯಲ್ಲಿ, ಹೀಗೆ ನಮ್ಮ ಸುತ್ತಮುತ್ತಲು ಓಡಾಡುವಾಗ ಅವುಗಳಿಗೆ ಅಕಸ್ಮಾತ್ ಏಟಾದರೆ ವಿಷದ ಕಡಿತ ಜೀವ ತೆಗೆಯಬಲ್ಲದು. ನಾಗರಹಾವು ಉಳಿದ ಹಾವುಗಳಿಗೆ ಹೋಲಿಸಿದರೆ ನಿಧಾನ. ಅದರಲ್ಲಿಯೂ ಇಲಿ, ಕಪ್ಪೆ ಏನಾದರು ನುಂಗಿಕೊಂಡಿದ್ದರೆ ನಾಗರಹಾವು ಇದ್ದಲ್ಲಿಯೇ ಹಂದಾಡುವುದಿಲ್ಲ. ನಾಗರಹಾವು ಸುಮ್ಮನೆ ಬಂದು ಕಚ್ಚುವುದಿಲ್ಲ.
ಭೂತಕೋಲ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಈ ಜಿಲ್ಲೆಗಳ ವಿಶೇಷ. ‘ಕಾಂತಾರ’ ಚಲನಚಿತ್ರ ಬಂದ ನಂತರ ಭೂತಕೋಲ ಅಂದರೆ ಏನೆಂದು ವಿವರಿಸುವ ಅವಶ್ಯಕತೆಯಿಲ್ಲ ಅಂದುಕೊಂಡಿದ್ದೇನೆ. ಆದರೆ ಆ ಚಲನಚಿತ್ರದಲ್ಲಿ ತೋರಿಸಿದ್ದು
ತುಳುನಾಡಿನ ವೈಭವದ ನೂರರ ಒಂದಂಶ ಮಾತ್ರ. ಅಸಂಖ್ಯ ವೈವಿಧ್ಯದ ದೈವಾರಾಧನೆ ನಮ್ಮ ಕರಾವಳಿಯಲ್ಲಿದೆ. ದೈವಗಳು ಪ್ರತಿ ಊರಿನಲ್ಲಿ ಹತ್ತಾರಿವೆ, ಎಲ್ಲ ಸೇರಿಸಿದರೆ ಸಾವಿರಾರಿವೆ.
ಪ್ರತಿಯೊಂದು ದೈವಕ್ಕೂ ಅದರದೇ ಆದ ನೀತಿ, ನಿಯಮ, ರಿವಾಜು, ಪೂಜಾ ವಿಧಾನಗಳಿವೆ. ಭೂತಕೋಲದಷ್ಟೇ ಪ್ರಚಲಿತ ದಲ್ಲಿರುವ ತುಳುನಾಡಿನ ಇನ್ನೊಂದು ಆಚರಣೆ ನಾಗಮಂಡಲ. ಇದು ಸಂಪೂರ್ಣ ವಿಭಿನ್ನವಾದ ಆರಾಧನೆ. ಇದು ಒಂದು ಪೂಜೆಯಲ್ಲ- ಒಂದಿಡೀ ಕಾರ್ಯಕ್ರಮ. ಹಾಲಿಟ್ಟು ಸೇವೆ, ಢಕ್ಕೆ/ಆಶ್ಲೇಷ ಬಲಿ, ನಾಗಮಂಡಲ- ಇವೆಲ್ಲ ನಾಗಪೂಜೆಯ ಪ್ರಕಾರಗಳು. ಅದರಲ್ಲಿ ನಾಗಮಂಡಲವೆಂದರೆ ವಿಶೇಷ. ದೊಡ್ಡದಾಗಿ ಮಾಡುವ ನಾಗಮಂಡಲ ಸೇವಾ ಪೂಜೆಗೆ ಹತ್ತರಿಂದ ಇಪ್ಪತ್ತು ಕೋಟಿ ಹಣದ ಬಳಕೆಯಾಗುತ್ತದೆ ಎಂದರೆ ಅದರ ಪ್ರಮಾಣ ಮತ್ತು ವೈಭವ ಅಂದಾಜಿಸಿಕೊಳ್ಳಿ.
ನಾಲ್ಕಾರು ಗಂಟೆ- ಕೆಲವೊಮ್ಮೆ ೮-೧೦ ಗಂಟೆಯ ಪೂಜೆ ಅದು. ನಾಗಮಂಡಲದಷ್ಟು ವೈಭವದ ದೈವಾರಾಧನೆಯನ್ನು ನಾನಂತೂ ಪ್ರಪಂಚದ ಬೇರಿನ್ನೆಲ್ಲೂ ನೋಡಿಲ್ಲ. ಈ ಜಿಲ್ಲೆಗಳಲ್ಲಿ ನಾಗರಹಾವನ್ನು ಯಾರೂ ಕೊಲ್ಲುವುದಿಲ್ಲ. ಬಿಡಿ, ಅದರತ್ತ ಕಲ್ಲೆಸೆಯುವುದು ಕೂಡ ಪಾಪದ ಕೆಲಸ. ರಸ್ತೆಯಲ್ಲಿ ಸತ್ತ ನಾಗರಹಾವು ಕಂಡರೆ ಅದನ್ನು ಮನುಷ್ಯರಂತೆ ಎತ್ತೊಯ್ದು ಸಂಸ್ಕಾರ ಮಾಡುವುದು ಸರ್ವೇಸಾಮಾನ್ಯ. ತಿಳಿದೋ, ತಿಳಿಯದೆಯೋ ನಾಗರಹಾವಿಗೆ ಯಾವುದೇ ರೀತಿಯ ಹಾನಿ ಮಾಡುವುದು, ಅದರ ದಾರಿಗೆ ಅಡ್ಡ ಬರುವುದು ಇವೆಲ್ಲ ಮಹಾಪಾಪವೆಂಬ ಅನನ್ಯ ನಂಬಿಕೆ ಇಂದಿಗೂ ಅಲ್ಲಿದೆ.
ಹಾಗೆ ನೋಡಿದರೆ ನಾಗರಹಾವು ಒಂದು ವಿಷಪೂರಿತ ಸರೀಸೃಪ. ಮನೆಯ ಸುತ್ತ, ಕೊಟ್ಟಿಗೆಯಲ್ಲಿ, ಮಾಡಿನ ಚಡಿಯಲ್ಲಿ, ಹೀಗೆ ನಮ್ಮ ಸುತ್ತಮುತ್ತಲು ಓಡಾಡುವಾಗ ಅವುಗಳಿಗೆ ಅಕಸ್ಮಾತ್ ಏಟಾದರೆ ವಿಷದ ಕಡಿತ ಜೀವ ತೆಗೆಯಬಲ್ಲದು. ನಾಗರಹಾವು ಉಳಿದ ಹಾವುಗಳಿಗೆ ಹೋಲಿಸಿದರೆ ನಿಧಾನ. ಅದರಲ್ಲಿಯೂ ಇಲಿ, ಕಪ್ಪೆ ಏನಾದರು ನುಂಗಿಕೊಂಡಿದ್ದರೆ ನಾಗರಹಾವು ಇದ್ದಲ್ಲಿಯೇ ಹಂದಾಡುವುದಿಲ್ಲ. ಓಡಾಡುವ ದಾರಿಯಲ್ಲಿಯೇ ಅಂಚಿನಲ್ಲಿಯೇ ಅವುಗಳ ಬೆಡ್‌ರೂಮ್. ಕೆರೆ, ಬಾವಿ ಹೀಗೆ ನೀರಿನ ಸಮೀಪ, ತೋಟಗಳಲ್ಲಿ ಎಲ್ಲೆಂದ ರಲ್ಲಿ ನಾಗರಹಾವು. ನಾಗರಹಾವು ಸುಮ್ಮನೆ ಬಂದು ಕಚ್ಚುವುದಿಲ್ಲ ನಿಜ, ಆದರೆ ಅವುಗಳ ಸಂಖ್ಯೆ ಮೀರಿದರೆ ನಮ್ಮ ತಪ್ಪಿನಿಂದಲೇ ಅದು ಕಡಿದರೆ ಹಾನಿ ನಮಗೇ ಅಲ್ಲವೇ? ಇಂಥ ಡೇಂಜರಸ್ ಜೀವಿಯನ್ನು ದೈವವೆಂದು ಆರಾಧಿಸುವ ಸಂಸ್ಕೃತಿ ಬೆಳೆದುಬಂದದ್ದು ವಿಶೇಷ. ಇದು ನಮ್ಮ ಪೂರ್ವಜರ ಪರಿಸರ ಸೂಕ್ಷ್ಮಪ್ರeಯ ದ್ಯೋತಕ.
ಅವರಿಗೆ ನಾಗರಹಾವಿನ ಮಹತ್ವದ ಅರಿವಿನ ಸ್ಪಷ್ಟತೆಯಿತ್ತು. ದಕ್ಷಿಣ ಕನ್ನಡದ ನಾಗರಹಾವಿಗೆ ಒಂದು ವಿಶೇಷ ವಾಸನೆಯಿದೆ. ಅದು ಆಸುಪಾಸಿ ನಲ್ಲಿದ್ದರೆ ಸಣ್ಣಕ್ಕಿ (ಕೇಸರಿ ಬಾತಿಗೆ ಬಳಸುವ ಅಕ್ಕಿ) ಪರಿಮಳ ಅಲ್ಲೆಲ್ಲ ತುಂಬಿರುತ್ತದೆ. ಹಾಗಾಗಿ ನಾಗರಹಾವಿನ ಇರುವಿಕೆ ಹೆಚ್ಚಾಗಿ ವಾಸನೆಯಿಂದಲೇ ತಿಳಿದುಬಿಡುತ್ತದೆ. ಈಗೊಂದು ಆರು ತಿಂಗಳ ಹಿಂದೆ ರಜೆಗೆ ಭಾರತಕ್ಕೆ ಬಂದಾಗ ಈ ಜಿಲ್ಲೆಗಳಲ್ಲಿ ಓಡಾಡಿದ್ದೆ. ಆ ಸಮಯದಲ್ಲಿ ನನ್ನ ಗ್ರಹಿಕೆಗೆ ಬಂದ ಒಂದು ವಿಷಯವೆಂದರೆ ಈಗ ಆ ಪ್ರದೇಶ ದಲ್ಲಿ, ಅದರಲ್ಲಿಯೂ ಉಡುಪಿಯ ಒಂದೈವತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮೊದಲಿನಷ್ಟು ನಾಗರಹಾವು ಇಲ್ಲ. ನಾನೇನು ಅವುಗಳ ಲೆಕ್ಕಾಚಾರ ಮಾಡಿ ಇದನ್ನು ಹೇಳುತ್ತಿಲ್ಲ. ಬದಲಿಗೆ ಗಮನಕ್ಕೆ ಬರುವಷ್ಟು ಅವುಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅದು ಅಲ್ಲಿನ ಸ್ಥಳೀಯರಿಗೂ ಸ್ಪಷ್ಟವಾಗಿ ಗಮನಕ್ಕೆ ಬಂದಿದೆ.
ನಾಗರಹಾವಿನ ಸಂಖ್ಯೆ ಕ್ಷೀಣಿಸಲು ಆ ಭಾಗದಲ್ಲಿನ ಗಣಿಗಾರಿಕೆ, ಕಪ್ಪು ಕಲ್ಲಿನ ಕ್ವಾರಿ ಮೊದಲಾದವು ಮೇಲ್ನೋಟಕ್ಕೆ ಕಾರಣವೆನಿಸಿದರೂ ಅವುಗಳ ಗಣನೀಯ ಇಳಿಕೆಗೆ ಮುಖ್ಯ ಕಾರಣ ನಮ್ಮ ರಾಷ್ಟ್ರೀಯ ಪಕ್ಷಿ ನವಿಲು. ಆ ಭಾಗದಲ್ಲಿ ಇಂದು ಲೆಕ್ಕ ಮೀರಿ ನವಿಲಿನ ಸಂಖ್ಯೆ ಹೆಚ್ಚಿಬಿಟ್ಟಿದೆ. ಮೊದಲು ಒಂದೋ ಎರಡೋ ನವಿಲುಗಳು ಸಾಯಂಕಾಲದ ದೂರದ ಕಾಡಿನಲ್ಲಿ ಕೂಗಿದ್ದು ಕೇಳುತ್ತಿತ್ತು. ಈಗ ಹಿಂದೂ ಹಿಂಡಾಗಿ ಗದ್ದೆಗಳಿಗೆ ನುಗ್ಗುತ್ತಿವೆ.
ನವಿಲನ್ನು ಕೊಲ್ಲುವಂತಿಲ್ಲ – ಏಕೆಂದರೆ ಅದು ರಾಷ್ಟ್ರೀಯ ಪಕ್ಷಿ, ಕೊಲ್ಲುವುದು ಅಪರಾಧ. ಅದನ್ನು ಸಹಜವಾಗಿ ಕೊಂದು ತಿನ್ನುವ ಹೆಬ್ಬಾವು, ತೋಳ, ನರಿ ಇತ್ಯಾದಿಗಳು ಈಗ ಉಳಿದಿಲ್ಲ. ಮೊದಲೇ ಆ ಭಾಗದಲ್ಲಿ ನವಿಲಿಗೆ ಆಹಾರವಾಗುವ ಹಾವುಗಳ ಸಂಖ್ಯೆ ಯಥೇಚ್ಛವಿದೆ. ಈ ಎಲ್ಲ ಕಾರಣದಿಂದ ಲೆಕ್ಕ ಮೀರಿ- ಯಾವ ಗದ್ದೆಯಲ್ಲಿ ಬೆಳಗಿನ ಜಾವ ನೋಡಿದರೂ ನವಿಲುಗಳ ದಂಡೇ ತುಂಬಿರುತ್ತದೆ. ಈ ನವಿಲು ನೋಡಲಿಕ್ಕೆ ಎಷ್ಟು ಚಂದವೋ ಅಷ್ಟೇ ಆಕ್ರಮಣಕಾರಿ. ಈ ಪಕ್ಷಿ ಸಿಕ್ಕಿದ, ತನಗಿಂತ ಚಿಕ್ಕದಿರುವ ಯಾವ ಪ್ರಾಣಿಯನ್ನೂ ಉಳಿಸುವುದಿಲ್ಲ.
ಹಾಗಾಗಿ ನವಿಲು ಹೆಚ್ಚಾಯಿತೆಂದರೆ ಹಾವಿನ ಸಂಖ್ಯೆ ಕಡಿಮೆ ಯಾಯಿತು ಎಂದೇ ಅರ್ಥ. ಜತೆಯಲ್ಲಿ ಆ ಭಾಗದಲ್ಲಿ ಮುಂಗುಸಿಯ ಸಂಖ್ಯೆಯೂ ಹೆಚ್ಚಿದೆ. ಒಟ್ಟಾರೆ ಹಾವಿನ ಸಂಖ್ಯೆ ಇಳಿಯುತ್ತಿದ್ದಂತೆ ಇಲಿ ಮೊದಲಾದ ಧಾನ್ಯಗಳನ್ನು ತಿನ್ನುವ ಉಪದ್ರವ ಜೀವಿಗಳ ಸಂಖ್ಯೆ ಹೆಚ್ಚಿದೆ. ಅಷ್ಟೇ ಅಲ್ಲ, ಒಂದು ನವಿಲು ದಿನಕ್ಕೆ ಸುಮಾರು ಕಾಲು ಕೆಜಿಯಷ್ಟು ಧಾನ್ಯಗಳನ್ನು ತಿನ್ನುತ್ತದೆ. ಒಂದು ಗದ್ದೆಗೆ ಇಪ್ಪತ್ತು ನವಿಲುಗಳು ದಾಳಿಯಿತ್ತವೆಂದುಕೊಳ್ಳಿ, ದಿನಕ್ಕೆ ಹತ್ತು ಕೆಜಿ ಧಾನ್ಯ ಅವುಗಳ ಹೊಟ್ಟೆಪಾಲಾಗುತ್ತದೆ. ಅಷ್ಟೇ ಅಲ್ಲ, ಅವು ಅಕ್ಕಿಯ ಗದ್ದೆಗೆ ನುಗ್ಗಿದರೆ ಅವು ತಿನ್ನುವುದಕ್ಕಿಂತ ಹಾಳುಮಾಡುವುದೇ ಜಾಸ್ತಿ.
ಒಂದು ಜಿಂಕೆ ಎಷ್ಟು ಧಾನ್ಯ ಹಾಳುಮಾಡುತ್ತದೆಯೋ ಅಷ್ಟೇ ಧಾನ್ಯವನ್ನು ಎರಡು ನವಿಲು ಹಾಳುಮಾಡಬಲ್ಲವು. ಚಿಕ್ಕ ಹಿಡುವಳಿದಾರರ ಅವಸ್ಥೆ ಯಾರಿಗೂ ಬೇಡ. ಒಟ್ಟಾರೆ ಈಗ ಸುಂದರ ಮೋಡ ಕಂಡು ನರ್ತಿಸುವ ರಾಷ್ಟ್ರೀಯ ಪಕ್ಷಿ, ಆ ಭಾಗದ ಕೃಷಿಕರಿಗೆ ದೊಡ್ಡ ತಲೆನೋವಾಗಿದೆ. ಈಗ ಕೆಲವು ವರ್ಷಗಳ ಹಿಂದೆ ಅಮೆರಿಕದ ದಕ್ಷಿಣಕ್ಕಿರುವ ಚಿಕ್ಕ ದ್ವೀಪ ಸಮೂಹ ಕೆಯ್ಮನ್ ಐಲ್ಯಾಂಡ್‌ಗೆ ಹೋಗಿದ್ದೆ. ಅದು ಇಂದಿಗೂ ಬ್ರಿಟಿಷರ ಸುಪರ್ದಿಯಲ್ಲಿರುವ ಪ್ರದೇಶ. ಅಲ್ಲಿರುವುದು ಮೂರು ಮುಖ್ಯ ದ್ವೀಪಗಳು. ಮೂರನ್ನೂ ಸೇರಿಸಿದರೆ ಸುಮಾರು ೨೫೦ ಚದರ ಕಿಲೋಮೀಟರ್ ಪ್ರದೇಶ. ಭೂಪಟದ ಚಿತ್ರದಲ್ಲಿ ಇದನ್ನು ಗುರುತಿಸಲು ಕೂಡ ಸಾಧ್ಯ ವಿಲ್ಲದಷ್ಟು ಚಿಕ್ಕ ಜಾಗ. ಅಲ್ಲಿ ಎರಡು ರೀತಿಯ ಇಗುವಾನಾ (ಊಸರವಳ್ಳಿ ಪ್ರಭೇದ)ಗಳು ಕಾಣಲು ಸಿಗುತ್ತವೆ. ಒಂದು
ಅಲ್ಲಿನದು- ಸ್ಥಳೀಯ ಇಗುವಾನಾ, ಇನ್ನೊಂದು ಗ್ರೀನ್ ಇಗುವಾನಾ. ಈ ಗ್ರೀನ್ ಇಗುವಾನಾ ಗಾತ್ರದಲ್ಲಿ ಸುಮಾರು ಐದಾರು ಅಡಿ ಬೆಳೆಯುತ್ತದೆ.
ನೋಡಲಿಕ್ಕೆ ಚಂದ. ಆದರೆ ಈ ದೈತ್ಯ ಇಗುವಾನಾ ಮೂಲದಲ್ಲಿ ಆ ದ್ವೀಪದವಲ್ಲ. ೧೯೮೦ರಲ್ಲಿ ಈ ವಿಶೇಷ ಇಗುವಾನಾಗಳನ್ನು ಸಾಕುವ ಖಯಾಲಿ ಅಲ್ಲಿ
ಶುರುವಾಯಿತು. ಇವನ್ನು ಜನರು ದಕ್ಷಿಣ ಅಮೆರಿಕದಿಂದ ತರಿಸಿಕೊಂಡರು. ಕ್ರಮೇಣ ಇವು ಅಲ್ಲಿನ ಕಾಡನ್ನು ಸೇರಿ ಕೊಂಡವು. ಅಲ್ಲಿಂದ ಮುಂದೆ ಅವುಗಳದ್ದು ನಿರಂಕುಶ ಅನಾಚಾರ. ಇಗುವಾನಾಗಳು ಮರದ ತೊಗಟೆ, ಎಲೆ ತಿಂದು ಬದುಕುವ ಸಸ್ಯಾಹಾರಿಗಳು. ಸಸ್ಯಾಹಾರಿ ಎಂದರೆ ನಿರುಪದ್ರವಿ
ಎನ್ನುವಂತಿಲ್ಲ. ಇವು ಅಲ್ಲಿನ ಅದೆಷ್ಟೋ ಸಸ್ಯಸಂಕುಲದ ವಿನಾಶಕ್ಕೆ ಇಂದು ಕಾರಣವಾಗಿವೆ. ನಾನು ಆ ದ್ವೀಪಕ್ಕೆ ಹೋದದ್ದು ೨೦೧೬ರಲ್ಲಿ. ಆಗಲೇ ಈ ಹಸಿರು ದೈತ್ಯ ಇಗುವಾನಾಗಳು ಎಲ್ಲೆಂದರಲ್ಲಿ ಕಾಣಿಸುತ್ತಿದ್ದವು. ಈಗ ಆ ಚಿಕ್ಕ ದ್ವೀಪದಲ್ಲಿ ಅವುಗಳ ಸಂಖ್ಯೆ ಹತ್ತು ಲಕ್ಷ ಮೀರಿದೆಯಂತೆ.
ಅವು ಅಲ್ಲಿನ ಎಲ್ಲಾ ಜಾತಿಯ ಮರಗಿಡಗಳನ್ನು ತಿಂದು ತೇಗುತ್ತಿವೆಯಂತೆ. ಅಲ್ಲಿನ ಸರಕಾರ ಪ್ರತಿವರ್ಷ ಹಣ ತೆತ್ತು ಈ ಇಗುವಾನಾಗಳನ್ನು ಕೊಲ್ಲಿಸುತ್ತದೆ. ಆದರೆ ಅವುಗಳ ಸಂಖ್ಯಾವೃದ್ಧಿಯ ವೇಗ ಎಷ್ಟಿದೆಯೆಂದರೆ, ಇನ್ನು ನಾಲ್ಕು ವರ್ಷದಲ್ಲಿ ಅವುಗಳ ಸಂಖ್ಯೆ ಇಪ್ಪತ್ತು ಲಕ್ಷ ಮೀರಲಿದೆಯಂತೆ.
ಕ್ರಮೇಣ ಆ ಸುಂದರ ದ್ವೀಪದ ಹಸಿರೆಲ್ಲ ಮಾಯವಾಗಿ ಬೋಳುಗುಡ್ಡೆಯಾಗುವ ದಿನ ದೂರವಿಲ್ಲ ಎಂಬುದು ಅಲ್ಲಿನವರ ಆತಂಕ. ಅವರ ಈ ರೋದನಕ್ಕೆ ಅರ್ಥವಿದೆ. ಒಂದು ಪ್ರಾಣಿ ಒಂದು ಪ್ರದೇಶ, ದ್ವೀಪವನ್ನು ಸಂಪೂರ್ಣ ತನ್ನ ವಶಕ್ಕೆ ತೆಗೆದುಕೊಂಡು ಖುದ್ದು ಮನುಷ್ಯನಿಗೆ ಬದುಕ ಲಾಗದ ಸ್ಥಿತಿಗೆ ತಲುಪಿಸಬಹುದು ಎಂಬುದು ಅತಿಶಯವೆನಿಸ ಬಹುದು.
೧೬ನೇ ಶತಮಾನ. ಸಮುದ್ರದಲ್ಲಿ, ಹಡಗನ್ನು ಏರಿ, ಅನ್ಯದೇಶಗಳಿಗೆ ಹೋಗುವುದು, ವ್ಯಾಪಾರ, ಲೂಟಿ ಇವೆಲ್ಲ ನಡೆಯುತ್ತಿದ್ದ ಕಾಲವದು. ಆ ಸಮಯದಲ್ಲಿ ಯುರೋಪಿಯನ್ನರು ಸಮುದ್ರ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ, ದ್ವೀಪಗಳಲ್ಲಿ ಕೆಲಕಾಲ ತಂಗುತ್ತಿದ್ದರು. ಉತ್ತರ ಮತ್ತು ದಕ್ಷಿಣ ಅಮೆರಿಕದ
ನಡುವೆ ಹಡಗುಗಳು ಓಡಾಡುತ್ತಿದ್ದವು. ಅಲ್ಲಿನ ಮಾರ್ಗ ಮಧ್ಯದಲ್ಲಿ ಗ್ಯಾಲಪ್ಯಾಗಸ್ ಎಂಬ ಚಿಕ್ಕ ದ್ವೀಪ ಸಮೂಹವಿದೆ. ಅಲ್ಲಿ ಈ ಹಡಗುಗಳ ಸವಾರಿ ನಿಲ್ಲುತ್ತಿತ್ತು. ಅದು ಖಾಲಿ ದ್ವೀಪ. ಅಲ್ಲಿ ಮರಗಿಡಗಳು ಬಿಟ್ಟರೆ ಬೇರೆ ಪ್ರಾಣಿಗಳಿರಲಿಲ್ಲ. ಹಾಗಾಗಿ ಅಲ್ಲಿ ತಂಗಬೇಕೆಂದರೆ ಆಹಾರಕ್ಕೆ ಬೇಕಾಗುವ ಪ್ರಾಣಿಗಳನ್ನು ಹಡಗಿನಲ್ಲಿಯೇ ತಂದುಕೊಳ್ಳಬೇಕಿತ್ತು. ಹಡಗಿನಲ್ಲಿ ಆಹಾರ ಕ್ಕೆಂದು ಜೀವಂತ ಕುರಿಗಳನ್ನು ಒಯ್ಯುವುದಿತ್ತು. ಹೀಗೆ ತಮ್ಮ ಜತೆಯಲ್ಲಿ ತಂದಿದ್ದ, ಆಹಾರಕ್ಕೆ ಮಿಕ್ಕಿ ಉಳಿದಿದ್ದ ಕುರಿಗಳನ್ನು ಅಲ್ಲಿಯೇ ಜೀವಂತ ಬಿಟ್ಟು ಹೋಗುತ್ತಿದ್ದರು. ಅವು ಮತ್ತೊಮ್ಮೆ ಬರುವುದರೊಳಗೆ ಮರಿಗಳಾಗಿ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿತು. ಅದು ನಂತರದಲ್ಲಿ ರಂಜನೆಯ ಬೇಟೆಗೆ, ಆಹಾರಕ್ಕೆ.
ಕ್ರಮೇಣ ಹಡಗು ಆಧುನೀಕರಣಗೊಂಡಂತೆ ಈ ರೀತಿ ದ್ವೀಪದಲ್ಲಿ ತಂಗಿ ಮುಂದೆ ಸಾಗುವ ಅವಶ್ಯಕತೆ ನಿಂತಿತು. ಕುರಿಗಳು ಅಲ್ಲಿಯೇ
ಉಳಿದುಕೊಂಡಿದ್ದವಲ್ಲ, ನಂತರದಲ್ಲಿ ಈ ಕುರಿಯ ಸಂಖ್ಯೆ ಹೆಚ್ಚಾಗಲು ಶುರುವಾಯಿತು. ಅಲ್ಲಿ ಯಥೇಚ್ಛ ಕಾಡಿತ್ತು, ಜತೆಯಲ್ಲಿ ಬೇಕಾದಷ್ಟು ಕುರಿಗಳು. ದಕ್ಷಿಣ ಅಮೆರಿಕದ ಇಕ್ವಡಾರ್ ದೇಶದವರು ಒಂದಿಷ್ಟು ಮಂದಿ ಆ ಆಡಿನ ದ್ವೀಪಕ್ಕೆ ವಲಸೆ ಹೋದರು. ಕ್ರಮೇಣ ಕುರಿಗಳನ್ನು ಕೊಂದು ಮಾಂಸ ಪಡೆಯುವುದು, ಉಣ್ಣೆ ತಯಾರಿಸುವುದು ಇವೆಲ್ಲ ಉದ್ಯೋಗವಾದವು. ಕ್ರಮೇಣ ಈ ಕುರಿಗಳು ಅಲ್ಲಿನ ಅರಣ್ಯವನ್ನು ನಾಶಮಾಡಲು ಶುರುಮಾಡಿ
ದವು. ಅಷ್ಟೇ ಅಲ್ಲ, ಲಕ್ಷೋಪಾದಿಯಲ್ಲಿ ಅವುಗಳ ಸಂಖ್ಯೆ ಹೆಚ್ಚಿತು. ಮನುಷ್ಯ ಅವುಗಳನ್ನು ಕೊಲ್ಲುತ್ತಿದ್ದ ನಿಜ. ಆದರೆ ಅವುಗಳ ಸಂಖ್ಯಾವೃದ್ಧಿಯ ಮುಂದೆ ಈ ಪ್ರಮಾಣ ಚಿಕ್ಕದಿತ್ತು. ಈಗ ಅಲ್ಲಿ ಹೇಗಾಗಿದೆಯೆಂದರೆ ಅಲ್ಲಿನ ಒಂದು ಲಕ್ಷ ಹೆಕ್ಟೇರ್ ದ್ವೀಪದಲ್ಲಿ ಕುರಿಗಳ ಸಂಖ್ಯೆ ಒಂದು ಲಕ್ಷ ಮೀರಿದೆ. ಅವುಗಳು ಮೆಂದು ತಿಂದು, ಈಗ ಇಡೀ ದ್ವೀಪದಲ್ಲಿ ಅವುಗಳಿಗೆ ಆಹಾರವೇ ಇಲ್ಲದಂತಾಗಿದೆ. ದ್ವೀಪಕ್ಕೆ ದ್ವೀಪವೇ ಬರಡಾಗಿದೆ.
ಇದರಿಂದಾಗಿ ಈ ಕುರಿಗಳು ಕೃಶಕಾಯವಾಗಿವೆ. ಕುಪೋಷಣೆ ಯಿಂದಾಗಿ ಅವು ಆಹಾರಕ್ಕೆ ಯೋಗ್ಯವಾಗಿಲ್ಲ. ರಫ್ತು ಮಾಡುವ ಗುಣಮಟ್ಟದ ಮಾಂಸ ಹೊಂದಿಲ್ಲ. ಅಲ್ಲದೆ ಕೃತಕ ಉಣ್ಣೆಯ ಬಳಕೆ ಹೆಚ್ಚಿದಾಗಿನಿಂದ ಆ ಕುರಿಗಳ ಉಣ್ಣೆಗೆ ಬೆಲೆ ಇಲ್ಲದಂತಾಗಿದೆ. ಇದರಿಂದಾಗಿ ಅಲ್ಲಿನ ಜನರು ಅವುಗಳನ್ನು
ಕೊಲ್ಲುವುದು ಕಡಿಮೆಯಾಗಿ ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಈಗ ಆಹಾರದ ಕೊರತೆಯಿಂದಾಗಿ ಅವುಗಳು ಎಲ್ಲೆಂದರಲ್ಲಿ ಸತ್ತು ಬೀಳುತ್ತಿವೆ. ಇದೆಲ್ಲದರಿಂದ ಇಡೀ ದ್ವೀಪವೇ ಮನುಷ್ಯ ವಸತಿಗೆ ಅಸಾಧ್ಯವಾಗಿಬಿಟ್ಟಿದೆ.
ಈ ರೀತಿ ಮನುಷ್ಯಕೃತ ಅಪರಾಧಗಳು ಬೇಕಾದಷ್ಟಿವೆ. ಅಮೆರಿಕದ ನ್ಯೂಜರ್ಸಿ, ನ್ಯೂಯಾರ್ಕ್ ತೀರದ ಸಮುದ್ರದಲ್ಲಿ ಲಯನ್ ಫಿಶ್ ಈ ಭಾಗದ ಹೆಚ್ಚು ಕಡಿಮೆ ಎಲ್ಲ ಜೀವ ಸಂಕುಲದ ನಾಶಕ್ಕೆ ಕಾರಣವಾಗುತ್ತಿದೆಯಂತೆ. ಈ ಮೀನನ್ನು ಕೂಡ ಅಮೆರಿಕಕ್ಕೆ ಸಾಕಲೆಂದು ಬೇರೆಡೆಯಿಂದ ತಂದದ್ದು.
ಅಮೆರಿಕದಲ್ಲಿ ಉಪ್ಪುನೀರಿನ ಅಕ್ವೇರಿಯಂನ ಖಯಾಲಿ ಬಹಳ ಇದೆ. ಈ ಸಿಂಹ ಮೀನು ಸಮುದ್ರ ಸೇರಿದಾಗಿನಿಂದ ನ್ಯೂಯಾರ್ಕ್‌ನ ಕರಾವಳಿ ಬರಡಾಗುತ್ತಿದೆ. ಈಗಾಗಲೇ ಕೆಲವು ಜೀವಸಂಕುಲ ಈ ಮೀನಿಂದಾಗಿ ಅಲ್ಲಿ ಅವಸಾನ ಹೊಂದಿ ಆಗಿದೆ. ಈ ಮೀನು ತನಗಿಂತ ಚಿಕ್ಕದಿರುವ ಎಲ್ಲ ಮೀನು
ಗಳನ್ನು, ಅವುಗಳ ಮೊಟ್ಟೆಗಳನ್ನು ತಿನ್ನುತ್ತದೆ. ಹಾಗಂತ ಇದನ್ನು ತಿನ್ನುವ ಇನ್ನೊಂದು ಮೀನು ಈ ತೀರದಲ್ಲಿ ಸಹಜವಾಗಿ ಇಲ್ಲ. ಈ ಕಾರಣಕ್ಕೆ, ಸಮುದ್ರದಲ್ಲಿಯೂ ಮರುಭೂಮಿ ನಿರ್ಮಾಣ ವಾಗುತ್ತಿದೆ.
ಹಿಂದಿನ ವಾರ ಪಶ್ಚಿಮ ಘಟ್ಟದ ಅಪರೂಪದ ಮಾವಿನ ತಳಿಗಳು ಅವಸಾನವಾಗುತ್ತಿರುವ ವಿಷಯದ ಬಗ್ಗೆ ಬರೆದಿದ್ದೆ. ಅದಕ್ಕೆ ಬಂದ ಬಹುತೇಕ ಪ್ರತಿಕ್ರಿಯೆಗಳು ನನ್ನ ಆತಂಕವನ್ನುಅನುಮೋದಿಸಿದ್ದವು. ಆ ಲೇಖನಕ್ಕೆ ಪ್ರತಿಕ್ರಿಯಿಸುತ್ತ ಮನೋಹರ್ ಉಪಾಧ್ಯಾಯ ಅವರು ತಾವು ಮತ್ತು ಕೆಲವು
ಸ್ನೇಹಿತರು ಮಾಡುತ್ತಿರುವ ನಾಡುಮಾವಿನ ಸಂರಕ್ಷಣೆಯ ಕೆಲಸವನ್ನು ಗಮನಕ್ಕೆ ತಂದರು. ಅವರೊಂದಿಷ್ಟು ಸ್ನೇಹಿತರು ಸೇರಿ ನಾಡುಮಾವು ಮಿತ್ರರು (ನಾಮಾಮಿ) ಎಂಬ ಗುಂಪೊಂದನ್ನು ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಸಂಚರಿಸಿ ಅಲ್ಲಿ
ಮನೆಮಾತಾಗಿರುವ ಸುಮಾರು ೩೫೦ ನಾಡಮಾವು ತಳಿಗಳ ಜೀನ್ ಬ್ಯಾಂಕನ್ನು ಶುರುಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಗುಂಪಾಗಿ ಹೋಗಿ ಆಯ್ದ ಮರದ ಕಸಿಕಡ್ಡಿ (oಜಿಟ್ಞ)ಗಳನ್ನು ಸಂಗ್ರಹಿಸಿ, ಕಸಿಗಿಡ ಮಾಡಿ ಕೃಷಿಕರಿಗೆ ಹಂಚುತ್ತಾರೆ.
ಅಂತೆಯೇ ಸ್ಥಳೀಯ ಹಲಸು, ಸ್ಥಳೀಯ ಕಿತ್ತಳೆಗಳ ಸಂರಕ್ಷಣೆಯ ಕೆಲಸವೂ ಜತೆಯಲ್ಲಿ. ಅವರ ಈ ಆಂದೋಲನ ಇನ್ನಷ್ಟು ಮಂದಿಯನ್ನು ಈ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದೆ. ಈಗಾಗಲೇ ಈ ಮೂರು ಜಿಲ್ಲೆಗಳಲ್ಲಿ ಆಯ್ದ ನಾಡಮಾವು ತಳಿಗಳನ್ನು ಐದು ಎಕರೆ ಇಳಿಜಾರಿನ ಗುಡ್ಡದಲ್ಲಿ ನೆಟ್ಟಿದ್ದಾರೆ. ವಿಟ್ಲ ಪಡ್ನೂರು, ಬಂಟ್ವಾಳ ಗ್ರಾಮದಲ್ಲಿ ಈಗಾ ಗಲೇ ೩೫೦ ನಾಡಮಾವು ತಳಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಜತೆಯಲ್ಲಿ ೭೦-೮೦ ಸ್ಥಳೀಯ ಹಲಸು ತಳಿಗಳ ಸಂರಕ್ಷಣೆ ಯನ್ನೂ ಈ ನಾಡಮಾವು ಮಿತ್ರರು ಮಾಡುತ್ತಿದ್ದಾರೆ.
ಮುಂದಿನ ತಲೆಮಾರುಗಳಿಗೆ ಕೆಲವಾದರೂ ನಾಡಮಾವು, ಹಲಸು ತಳಿಗಳನ್ನು ಉಳಿಸಿ, ಬೆಳೆಸಿ, ದಾಟಿಸುವುದೇ ಅವರ ಉದ್ದೇಶ. ಮಾವಿನ -ಲಾಪೇಕ್ಷೆ ಮಾತ್ರ. ಈ ಯೋಜನೆ (ಜೀನ್ ಬ್ಯಾಂಕ್) ಗೆ ಅವರಿಟ್ಟುಕೊಂಡ ಹೆಸರು ಕೂಡ ಅಷ್ಟೇ ಚಂದ, ಮಾವು ಮಂಟಪ. ಹಿಂದಿನ ವಾರದ ಲೇಖನದಲ್ಲಿ, ಹೇಗೆ ಅಕೇಶಿಯಾ ಗಿಡ ಉತ್ತರ ಕರಾವಳಿಯಲ್ಲಿ, ಅರೆ ಮಲೆನಾಡಿನಲ್ಲಿ ಮಾವು ಸೇರಿ ದಂತೆ ಉಳಿದ ಸಸ್ಯವರ್ಗಕ್ಕೆ ಮಾರಕವಾಗಿದೆ ಎಂಬುದನ್ನು ಚಿಕ್ಕದಾಗಿ ವಿವರಿಸಿದ್ದೆ. ಒಂದು ಕಡೆ ನಾಡಮಾವು ಮಿತ್ರರಂಥ ವರು ಅಳಿವಿನಂಚಿನಲ್ಲಿರುವ ಸಸ್ಯವರ್ಗದ ಸಂರಕ್ಷಣೆಗೆ ಮುಂದಾದರೆ ಇಂಥದ್ದನ್ನು ಸರಕಾರ ಗುರುತಿಸಬೇಕು, ಬೆನ್ನೆಲುಬಾಗಿರಬೇಕು. ಅದು ಬಿಟ್ಟು ಇದೆಲ್ಲದಕ್ಕೆ ವ್ಯತಿರಿಕ್ತವಾಗುವ, ಇನ್ನೊಂದು ಆಕ್ರಮಣಕಾರಿ ಸಸ್ಯವನ್ನು ಅವೈಜ್ಞಾನಿಕ
ವಾಗಿ ಸರಕಾರವೇ ಬೆಳೆಸಲು ಮುಂದಾಗುವುದು, ಅದರಿಂದ ಒಂದಿಡೀ ಪರಿಸರ ಅಸಮತೋಲನಕ್ಕೆ ಕಾರಣವಾಗುವುದು ಅದೆಷ್ಟು ವಿರೋಧಾಭಾಸ ವಲ್ಲವೇ? ಇದು ನಮ್ಮನ್ನಾಳುವವರ ಅಲಕ್ಷ್ಯ ಮತ್ತು ಅಜ್ಞಾನವಲ್ಲದೇ ಇನ್ನೇನು? ನಮಗೆ ಆಕ್ರಮಣಕಾರಿ ಸಸ್ಯಗಳೇನೂ ಹೊಸತಲ್ಲ.
ಪಾರ್ಥೇನಿಯಮ್ ಮೊದಲಾದ ಕಳೆಗಳು ಅದೆಷ್ಟೋ ಪ್ರಮಾಣದ ನಷ್ಟವನ್ನು ನಮ್ಮ ಪರಿಸರಕ್ಕೆ, ಕೃಷಿಕರಿಗೆ ಇಂದಿಗೂ ಮಾಡುತ್ತಿವೆ. ಅದರ ಲೆಕ್ಕವಿಟ್ಟವ ರಿಲ್ಲ. ಆದರೆ ಅವೆಲ್ಲ ಅಕೇಶಿಯಾದಂತೆ ಸರಕಾರವೇ ಬೆಳೆಸಿದ್ದಲ್ಲ. ಒಂದು ಪ್ರಾಣಿಗೆ ಅಥವಾ ಸಸ್ಯಕ್ಕೆ ಅವಶ್ಯವಿರುವ ವಾತಾವರಣ, ಯಥೇಚ್ಛ ಆಹಾರ ಲಭ್ಯತೆ, -ಲವತ್ತತೆ, ಜತೆಯಲ್ಲಿ ಅದನ್ನು ಭಕ್ಷಿಸುವ ಇನ್ನೊಂದು ಪ್ರಾಣಿ ಆ ಪ್ರದೇಶದಲ್ಲಿ ಇಲ್ಲದಿದ್ದಲ್ಲಿ ಅಲ್ಲಿ ಸಂಭವಿಸುವ ಅಸಮತೋಲನ ಅಸಹನೀಯವಾಗಿರುತ್ತದೆ. ಆಸ್ಟ್ರೇಲಿಯಾದಲ್ಲಿ ಮೊಲಗಳ ಸಮಸ್ಯೆಯೂ ಇಂಥದ್ದೇ. ಬ್ರಿಟಿಷರು ಅಲ್ಲಿ ತಂದು ಬಿಟ್ಟ ಮೊಲಗಳು ಇಂದು ಲಕ್ಷೋ ಪಾದಿಯಲ್ಲಿ ನಿರಂಕುಶ ವೃದ್ಧಿಸುತ್ತಿವೆ. ಹೀಗೆ, ಒಂದು ಪ್ರಾಣಿ ಅಥವಾ ಸಸ್ಯ ಇಡೀ ಪರಿಸರದ ಮೇಲೆ ದಬ್ಬಾಳಿಕೆ ಹೇಗೆ ಮಾಡಬಲ್ಲದು ಎಂಬುದಕ್ಕೆ ಸಾಲು ಸಾಲು ಉದಾಹರಣೆ ಕೊಡಬಹುದು. ಸಸ್ಯವಿರಲಿ, ಪ್ರಾಣಿಯಿರಲಿ – ಒಂದು ಪ್ರದೇಶದಲ್ಲಿ ನಾವು ಮಾಡುವ ಯಡವಟ್ಟುಗಳಿಂದಾಗಿ ಲೆಕ್ಕ ಮೀರುವಾಗ ಅದನ್ನು ಹತೋಟಿಗೆ ತರುವುದು ಕೂಡ ನಮ್ಮದೇ ಕರ್ತವ್ಯ, ಅನಿವಾರ್ಯತೆ. ಅದಕ್ಕೆ ವ್ಯತಿರಿಕ್ತವಾಗಿ ಸರಕಾರ ನಡೆದುಕೊಂಡರೆ ಅದು ಮೂರ್ಖತನ.