ತುಂಟರಗಾಳಿ
ಸಿನಿಗನ್ನಡ
ಸಿನಿಮಾ ನಟರು ಏನು ಮಾಡಿದರೂ ಅದು ನಮ್ಮ ಜನರಿಗೆ ಮನರಂಜನೆಯಂತೇ ಕಾಣುತ್ತದೆ. ಪಾಪ ನಮ್ಮ ಜನ ಕಾವೇರಿ ವಿಷಯದಲ್ಲಿ ಮಾತನಾಡದೇ
ಸುಮ್ಮನೇ ಇದ್ದ ಸಿನಿಮಾದವರನ್ನು ಕೆಣಕಿ ಅವರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸಾಲು ಸಾಲು ಪೋಸ್ಟ್ ಹಾಕಿಸಿದರು. ಇದರ ಜತೆಗೆ ಕನ್ನಡ ನಟರು ಬೀದಿಗಿಳಿದು ಹೋರಾಟ ಮಾಡಲ್ಲ ಅಂತ ಆರೋಪ ಮಾಡಿದ್ರು. ನಮ್ಮ ಪ್ಯಾನ್ ಇಂಡಿಯಾ ಸ್ಟಾರ್‌ಗಳಿಗೆ ಇದನ್ನೆಲ್ಲಾ ಮಾಡೋದು ಸ್ವಲ್ಪ ಕಷ್ಟ ಆದ್ರೂ ಕೆಲ ತಿಂಗಳ ಹಿಂದೆ ನಡೆದ ಬಂದ್‌ಗೆ ಬಂದು ಭಾಗವಹಿಸಿ ಕಾವೇರಿ ನಮ್ಮದು ಅಂತ ಮಾತಾಡಿ ಹೋದರು.
ಆದರೆ ಇಂಥ ಸಿನಿಮಾ ನಟರ ಸಭೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ನಟರು ವೇದಿಕೆಯ ಮೇಲೆ ಬಂದು ಹಿರಿಯ ನಟರ ಕಾಲಿಗೆ ನಮಸ್ಕರಿಸಿದ್ದನ್ನು ಕೆಲವು ಅಂಧಾಭಿಮಾನಿಗಳು ಆಡಿಕೊಂಡು ನಗುತ್ತಾರೆ. ಇದಕ್ಕೆ ನಮ್ಮ ನಟರೊಬ್ಬರು ಒಳ್ಳೇ ಉದಾಹರಣೆ. ಪಾಪ, ಅವರು ಕೆಟ್ಟ ವರ್ತನೆ ತೋರಿದರೂ ಅವರನ್ನು ನಿಂದಿಸುತ್ತಾರೆ. ಒಳ್ಳೆಯದು ಮಾಡಿದರೆ ಅದನ್ನೂ ಆಡಿಕೊಳ್ಳುತ್ತಾರೆ ಎನ್ನುವ ಹಾಗಾಗಿದೆ. ಅಂಥದ್ರಲ್ಲಿ ಇತ್ತೀಚೆಗೆ ತಮ್ಮ ಮುಂಗೋಪ, ಅಹಂಕಾರಗಳನ್ನು ಬಿಟ್ಟು ಬದಲಾಗುವ ಮನಸ್ಸಿರುವ ನಟನೊಬ್ಬ ಇನ್ನೊಬ್ಬರ ಕಾಲಿಗೆ ಗೌರವ ದಿಂದ ನಮಸ್ಕರಿಸಿದ್ದನ್ನೂ ಆಡಿಕೊಂಡರೆ, ಇನ್ನು ಅವರಿಂದ ಉತ್ತಮ ನಡತೆ ನಿರೀಕ್ಷೆ
ಮಾಡುವ ಹಕ್ಕು ಇಂಥ ಅಭಿಮಾನಿಗಳಿಗೆ ಇರುತ್ತಾ ಅನ್ನೋದು ಕೇಳಬೇಕಾದ ಪ್ರಶ್ನೆ.
ಒಬ್ಬ ಮನುಷ್ಯ ಇನ್ನೊಬ್ಬರಿಗೆ ತೋರಿಸುವ ಗೌರವವನ್ನೂ ಮನರಂಜನೆ ಅಂದುಕೊಂಡು ಉಡಾಫೆಯಿಂದ ಮಾತಾಡಿದರೆ ಅದೇ ಸೆಲೆಬ್ರಿಟಿ ತಪ್ಪು ಮಾಡಿದಾಗ ಅದನ್ನು ಟೀಕೆ ಮಾಡೋ ಯಾವ ಹಕ್ಕೂ ಇರೋದಿಲ್ಲ ಅನ್ನೋದು ಇಂಥವರಿಗೆ ಅರ್ಥ ಆದರೆ ಸಾಕು.
ವಾಟಾಳ್ ನಾಗರಾಜ್
ಅಲ್ಲಾ ಸರ್, ಎಲ್ರೂ ಏನಾದ್ರೂ ಶುರು ಮಾಡಿ, ಕ್ರಿಯೇಟಿವ್ ಕೆಲ್ಸ ಮಾಡೋಣ ಅಂತ ಇಷ್ಟ ಪಟ್ರೆ, ನೀವು ಯಾವಾಗ್ಲೂ ಬಂದ್ ಮಾಡೋದೇ ಸಾಧನೆ
ಅಂತಿರ್ತೀರಲ್ಲ ಯಾಕೆ?
– ನೋಡೀ, ಯಾರಾದ್ರೂ ಸಿಕ್ಕಾಗ ಏನ್ ಸಮಾಚಾರ ಅನ್ನಿ ಸಾಕು. ಅವ್ರು ಮಾತಾಡೋಕೆ ಶುರುಮಾಡ್ತಾರೆ. ಶುರುಮಾಡ್ಸೋದು ಸುಲಭ. ಆದ್ರೆ ಈ ಟಿವಿ ಚಾನೆಲ್‌ಗಳಲ್ಲಿ ಡಿಬೇಟ್ ಮಾಡ್ತಾರಲ್ಲ, ಅಲ್ಲಿ ತಾವೇ ಮಾತಾಡ್ಬೇಕು ಅಂತ ಒಂದೇ ಸಮನೆ ಬಡ್ಕೊತಾ ಇರ್ತರಲ್ಲ, ಅವರ ಮಾತು ಬಂದ್ ಮಾಡಿಸೋಕೆ ಎಷ್ಟ್ ಕಷ್ಟ ಆಗುತ್ತೆ ಅಂತ ನೋಡಿದ್ದೀರಲ್ಲ. ಅದಕ್ಕೇ ನಾನ್ ಹೇಳೋದು ಬಂದ್ ಮಾಡೋದೇ ಗ್ರೇಟ್.
ಆದ್ರೂ, ಯಾವಾಗ್ಲೂ ಬಂದ್ ಮಾಡಿಸ್ತೀರ ಅಂತ ಜನ ನಿಮ್ಮನ್ನ ಬಯ್ಕೊತಾರಪ್ಪ…
– ಅದು ಸಹಜ. ನಾವು ಊರು, ರಾಜ್ಯ ಬಂದ್ ಮಾಡಿದ್ರೂ ಅದು ಸಮಸ್ಯೆಗಳ ಬಗ್ಗೆ ಜನಗಳ ಕಣ್ಣು ತೆರೆಸೋಕೆ. ಕಣ್ಣು ತೆರೆಸೋ ಒಳ್ಳೆ ಕೆಲಸ ಮಾಡೋರನ್ನ ನಮ್ಮ ಜನ ಬಯ್ಕೊಳ್ಳೋದು ಮೊದ್ಲಿಂದ ಇದ್ದಿದ್ದೇ ಬಿಡಿ.
ವಾವ್, ಏನ್ ಫಿಲಾಸಫಿ ಸರ್ ನಿಮ್ದು. ಗ್ರೇಟ್. ಸರಿ, ನೀವು ಇದುವರೆಗೂ ಎಷ್ಟ್ ಸಲ ಕಾವೇರಿ ನೀರಿಗಾಗಿ ಬಂದ್ ಮಾಡಿರೋದು?
– ಅಯ್ಯೋ, ನಂಗೇ ನೆನಪಿಲ್ಲಪ್ಪ, ಇದು ಹಿಂಗೇ ಮುಂದುವರಿದು ನಾನು ನೀರಿಗಾಗಿ ಬಂದ್ ಮಾಡಿಸ್ತಾನೇ ಇದ್ರೆ, ಮುಂದೆ ಇತಿಹಾಸ ನನ್ನನ್ನ ವಾಟಾಳ್
ನಾಗರಾಜ್ ಬದ್ಲು ‘ವಾಟರ್ ನಾಗರಾಜ್’ ಅಂತನೇ ನೆನಪಿಟ್ಕೊಳ್ಳುತ್ತೆ.
ಅದೂ ಸರಿನೇ, ಹಂಗಾದ್ರೆ, ನೀವ್ ಬಂದ್ ಮಾಡೋದ್ ಮಾತ್ರ ಬಿಡಲ್ಲ ಅಂತೀರಾ…
– ಯಾವುದೇ ಕಾರಣಕ್ಕೂ ಬಿಡಲ್ಲ, ಬೆಂದಕಾಳೂರು ಅನ್ನೋ ಹೆಸರು ಹೋಗಿ ‘ಬಂದ್’ ಕಾಳೂರು ಆದ್ರೂ ಪರವಾಗಿಲ್ಲ. ನಾನಂತೂ ಬಂದ್ ಮಾಡೇ ಮಾಡ್ತೀನಿ
ಆಯ್ತು ಸರ್, ಒಂದ್ ಕೊನೆ ಪ್ರಶ್ನೆ.
ಕಾವೇರಿ ಹೋರಾಟದಲ್ಲಿ ಈ ಬಂದ್ ಕಾನ್ಸೆಪ್ಟ್ ಯಾವಾಗ ಶುರು ಆಯ್ತು?
– ತುಂಬಾ ಸಿಂಪಲ್ ಕಣ್ರೀ. ಹಿಂದೆ ಒಂದ್ ಸಲ ತಮಿಳುನಾಡಿನವ್ರು ನೀವು ನಮಗೆ ನೀರು ಕೊಡ್ಲೇಬೇಕು ಅಂದ್ರು. ನಾವು ಅದಕ್ಕೆ ಹ್ಞೂ, ಬಿಟ್ಬುಡ್ತೀವಿ, ‘ಬಂದ್ ಬುಡಿ’
ಅಂದ್ವಿ. ಅದನ್ನ ಕೇಳಿ ಅವ್ರು ಕರ್ನಾಟಕದವ್ರು ‘ಬಂದ್’ ಮಾಡ್ತಾರೆ ಅಂತ ಗುಲ್ಲೆಬ್ಬಿಸಿದ್ರು. ನಾವು ಸಿಕ್ಕಿದ್ದೇ ಚಾನ್ಸ್ ಅಂತ ಬಂದ್ ಮಾಡೋಕೆ ಶುರುಹಚ್ಕೊಂಡ್ವಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಟ್ರೈನಲ್ಲಿ ಟಿಸಿ ಆಗಿದ್ದ. ಅವತ್ತು ಟ್ರೈನ್ ಫುಲ್‌ರಷ್ ಇತ್ತು. ಟ್ರೈನ್ ತುಂಬಾ ಗಿಜಿಗುಡುವಷ್ಟು ಜನ. ಹೇಗೋ ಟ್ರೈನ್ ಒಳಗೆ ಹತ್ತಿ ಬಂದು ತನ್ನ ಸೀಟಿನಲ್ಲಿ ಕೂರುವಷ್ಟರಲ್ಲಿ ಖೇಮು -ಲ್ ಸುಸ್ತು. ಖೇಮು ಪಕ್ಕದಲ್ಲಿ ಒಬ್ಬ ಸರ್ದಾರ್ಜಿ ಕೂತಿದ್ದ. ಟಿಸಿ ತನ್ನ ಪಕ್ಕದಲ್ಲೇ ಬಂದು ಕೂತಿದ್ದನ್ನು ನೋಡಿದ ಸರ್ದಾರ್ಜಿ ಖುಷಿ
ಯಾಗಿ, ‘ಸದ್ಯ’ ಅಂದುಕೊಂಡು, ‘ಸರ್, ನಾನು ಜಲಂಧರ್‌ನಲ್ಲಿ ಇಳಿಯಬೇಕು, ಈಗ ನಿದ್ದೆ ಬರ್ತಿದೆ. ನಾನು ಮಲಗಿರ್ತೀನಿ. ಜಲಂಧರ್ ಬಂದ ಕೂಡ್ಲೇ ಎಬ್ಬಿಸ್ತೀರಾ?’ ಅಂತ ಕೇಳಿದ. ಅದಕ್ಕೆ ಖೇಮು ‘ಆಯ್ತು ಬಿಡಿ ಅದಕ್ಕೇನು, ಎಬ್ಬಿಸ್ತೀನಿ’ ಅಂದ. ಅಲ್ಲಿಗೆ ಸುಮ್ಮ ನಾಗದ ಸರ್ದಾರ್ಜಿ, ‘ಸರ್, ಇನ್ನೊಂದು ಮಾತು, ನಾನು ಪೂರ್ತಿ ನಿದ್ದೆಯಲ್ಲಿ ದ್ದಾಗ ಯಾರಾದ್ರೂ ಎಚ್ಚರಿಸಿದ್ರೆ ಸ್ವಲ್ಪ ಕೋಪ ಬರುತ್ತೆ, ನಾನು ಏನೇ ಅಂದ್ರೂ ಬೇಜಾರು ಮಾಡ್ಕೊಬೇಡಿ, ನಾನು ಇಳಿಯಲ್ಲ ಅಂತ ಏನೇ ಹಠ ಮಾಡಿದ್ರೂ ಬಲವಂತವಾಗಿಯಾದ್ರೂ ನನ್ನನ್ನ ಜಲಂಧರ್‌ನಲ್ಲಿ ಇಳಿಸಿ’ ಅಂದ.
ಸರಿ, ಟ್ರೈನ್ ಹೊರಟಿತು. ಖೇಮು ತನ್ನ ಕೆಲಸದಲ್ಲಿ ಬ್ಯುಸಿ ಆದ. ಎಲ್ಲರೂ ನಿದ್ದೆ ಹೋದರು. ಸರ್ದಾರ್ಜಿ ನಿದ್ರೆಯಿಂದ ಎದ್ದು ನೋಡುವಾಗ ಬೆಳಗಾಗಿತ್ತು. ಇನ್ನೂ ಜಲಂಧರ್ ಬಂದಿಲ್ವಾ ಅಂತ ಹೊರಗೆ ನೋಡಿದಾಗ. ಜಲಂಧರ್ ಆಗ್ಲೇ ಹಿಂದೆ ಹೋಗಿದೆ ಅಂತ ಗೊತ್ತಾಗಿ ಅವನಿಗೆ ಬೇಜಾರು, ಸಿಟ್ಟು ಎರಡೂ ಬಂತು. ಟಿಸಿ ಖೇಮು ಹತ್ರ ಸೀದಾ ಬಂದವನೇ, ‘ಜಲಂಧರ್‌ನಲ್ಲಿ ಇಳಿಸಿ ಅಂತ ನಾನು ಹೇಳಿರಲಿಲ್ವಾ ನಿಮಗೆ? ಆಗಲ್ಲ ಅಂದ್ರೆ ಮೊದ್ಲೇ ಹೇಳಬೇಕಿತ್ತು. ನಾನು ಬೇರೆಯವರಿಗೆ ಹೇಳ್ತಾ ಇದ್ದೆ. ಹಿಂಗಾ ನೀವು ಕೆಲ್ಸ ಮಾಡೋದು?’ ಅಂತ ಕೆಟ್ಟ ಕೆಟ್ಟ ಪದಗಳನ್ನೆಲ್ಲಾ ಪ್ರಯೋಗಿಸಿ ಹಿಗ್ಗಾಮುಗ್ಗಾ ಝಾಡಿಸತೊಡಗಿದ. ಅವನನ್ನು ನೋಡಿ ಖೇಮು ಗರಬಡಿದವನಂತೆ ನಿಂತಿದ್ದನೇ ಹೊರತು ಒಂದು ಮಾತೂ ಆಡಲಿಲ್ಲ. ಪಕ್ಕದಲ್ಲಿದ್ದ ಜನ ಖೇಮುವನ್ನು ನೋಡಿ, ‘ಅಲ್ರೀ, ಅವನು ನಿಮಗೆ ಅಷ್ಟೊಂದು ಬಯ್ತಾ ಇದ್ದಾನೆ. ಸ್ವಲ್ಪ ಸಮಾಧಾನ ಮಾಡೋದ್ ಬಿಟ್ಟು ಏನ್ ಯೋಚ್ನೆ ಮಾಡ್ತಾ ಇದ್ದೀರ?’ ಅಂತ ಕೇಳಿದ್ರು. ಅದಕ್ಕೆ ಖೇಮು ಮೆಲ್ಲಗೆ ಹೇಳಿದ- ‘ಇವಂದು
ಹೋಗ್ಲಿ ಬಿಡಿ, ಆವಾಗ್ಲೇ ನಾನು ಒಬ್ಬ ಸರ್ದಾರ್ಜಿಯನ್ನ ಜಲಂಧರ್‌ನಲ್ಲಿ, ಬೇಡ ನಾನ್ ಇಳಿಯಲ್ಲ, ಇಳಿಸಬೇಡಿ ಅಂತ ಎಷ್ಟು ಬೇಡಿಕೊಂಡ್ರೂ ಕೇಳದೆ, ಒದ್ದು ಒದ್ದು
ಟ್ರೈನಿಂದ ಕೆಳಗೆ ಇಳಿಸಿದ್ದೆ. ಆಕ್ಚುಯಲಿ ನಾನು ಅವನ ಪರಿಸ್ಥಿತಿ ಬಗ್ಗೆ ಯೋಚನೆ ಮಾಡ್ತಾ ಇದ್ದೀನಿ…’
ಲೈನ್ ಮ್ಯಾನ್
ದುಡ್ಡಿನ ವಿಚಾರದಲ್ಲಿನ ಫಿಲಾಸಫಿ
– ಹನಿ ಹನಿ ಸೇರಿದ್ರೆ ಹಳ್ಳ, ಹನಿ ಹನಿ ಸೋರಿದ್ರೆ ಹಳ್ಳ
ಜೀವನ ಅನ್ನೋದು ಒಂಥರಾ ಆರ್ಕೆಸ್ಟ್ರಾ ಇದ್ದಂಗೆ
– ಜೀವನ ಎಂಡ್ ಆಗೋದು ಸ್ಮಶಾನದಲ್ಲಿ
– ಆರ್ಕೆಸ್ಟ್ರಾ ಎಂಡ್ ಆಗೋದು
‘ಕುಲದಲ್ಲಿ ಕೀಳ್ಯಾವುದೋ’ ಅನ್ನೋ ಸ್ಮಶಾನದ ಸಾಂಗ್‌ನಲ್ಲಿ
ರಸ್ತೆಯಲ್ಲಿ ಅಡ್ಡಾದಿಡ್ಡಿ ಗಾಡಿ ಓಡಿಸುವವರು ಯಾರು?
– ಎಲ್ ಬೋರ್ಡ್‌ಗಳು, ಎಲ್ಲೋ ಬೋರ್ಡ್‌ಗಳು ಮತ್ತು ಲೇಡಿ ಬರ್ಡ್ ಗಳು
ದೇವಸ್ಥಾನದ ಶಂಖ ಕದ್ದಿದ್ದಾರೆ ಅನ್ನೋ ಆರೋಪದಲ್ಲಿ ಬಂಧಿತರಾದವರು
– ಶಂಖಿತರು
ಗೀತಾ ಪ್ರಕಾರಗಳು
– ಸ್ಯಾಡ್ ಸಾಂಗ್- ಶೋಕಗೀತೆ
– ಡಿವೋಶನಲ್ ಸಾಂಗ್-
ಶ್ಲೋಕಗೀತೆ
– ಐಟಂ ಸಾಂಗ್- ಶಾಖಗೀತೆ
ಮೀಡಿಯಾಗಳು ಮಾಡುವ ಸಾಧಾರಣ ಸಾಧನೆ
– ಮೀಡಿಯಾಕರ್
ಕೆಆರ್‌ಎಸ್‌ನಲ್ಲಿ ಬಳಕೆಗೆ ಯೋಗ್ಯ ವಲ್ಲದ ನೀರೇ ಜಾಸ್ತಿ ಇದೆಯಂತೆ
– ಬೆಳ್ಳಗಿರುವುದೆಲ್ಲಾ ಹಾಲಲ್ಲ, ಕೊಳ್ಳದಲ್ಲಿರುವದೆಲ್ಲಾ ನೀರಲ್ಲ
ಕಾಳು ಹಾಕಿದ ಮೇಲೆ ಹುಡುಗಿಯ ಪ್ರೀತಿಯಲ್ಲಿ ಬಿದ್ದಾಗ ಬರುವ ಜ್ವರ
– ಹಕ್ಕಿ ಜ್ವರ
ಮುಂದುವರಿಯುತ್ತಿರುವ ಟಿವಿ ಚಾನಲ್ ಒಂದರ ಸಾಧನೆ
– ‘ಚನಲ’ಶೀಲತೆ
ಯಾರೋ ಶ್ರೀಮಂತ ಚಿನ್ನದ ಕಾರನ್ನೇ ತೆಗೆದುಕೊಂಡಿದ್ದಾನಂತೆ
– ಉಜ್ಜಿಕೊಂಡು ಹೋದವನಿಗೂ ಲಾಭ ಬಿಡಿ!