Wednesday, 11th December 2024

ಬಹು ಆಯಾಮ ಬಡತನ ಮುಕ್ತ ವಿಕಸಿತ ಭಾರತ

ವಿತ್ತಲೋಕ

ಪ್ರೊ.ಆರ್‌.ಆರ್‌.ಬಿರಾದಾರ

ಭಾರತ ದೇಶವು ಜನಸಂಖ್ಯೆಯಲ್ಲಿ ಜಗತ್ತಿನ ಎರಡನೇ, ಭೌಗೋಳಿಕ ಕ್ಷೇತ್ರದಲ್ಲಿ ಏಳನೇ ಮತ್ತು ಒಟ್ಟು ಸ್ವದೇಶಿ ಉತ್ಪನ್ನ (ಜಿಡಿಪಿ)
ಯ್ಲಿ ಐದನೇ ಅತಿದೊಡ್ಡ ದೇಶ. ಅಲ್ಲದೆ, ೨೦೨೭ರೊಳಗೆ ಜಿಡಿಪಿಯಲ್ಲಿ ಮೂರನೇ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಲಿದೆ. ೨೦೪೭ಕ್ಕೆ ಅಂದರೆ ನಮ್ಮ ದೇಶವು ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸುವ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಘೋಷಣೆ ಮಾಡಿದ್ದಾರೆ.

ಆದರೆ ವಿಕಸಿತ ಭಾರತದ ಸಾಧನೆಯ ಹಾದಿಯಲ್ಲಿ ಬಡತನವು ಒಂದು ಬಹುದೊಡ್ಡ ಅಡಚಣೆಯಾಗಿದೆ. ಏಕೆಂದರೆ ಸ್ವಾತಂತ್ರ್ಯ ನಂತರ ಅನೇಕ ಬಡತನ ನಿರ್ಮೂಲನೆ ಮತ್ತು ಉದ್ಯೋಗ ಸೃಷ್ಟಿಯ ಯೋಜನೆಗಳನ್ನು ಅನುಷ್ಠಾನಗೊಳಿಸಿದರೂ ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ಬಡವರನ್ನು ಹೊಂದಿದ ಶ್ರೀಮಂತ ರಾಷ್ಟ್ರವಾಗಿದೆ. ಜಾಗತಿಕ ಬ್ಯಾಂಕಿನ ಪ್ರಕಾರ, ಬಡತನವು ಎಲ್ಲೇ ಇದ್ದರೂ, ಅದು ಎಲ್ಲಾ ಕಡೆಯ ಸಮೃದ್ಧಿಯನ್ನು ತಿಂದುಹಾಕುತ್ತದೆ. ಆದ್ದರಿಂದ ೨೦೩೦ರೊಳಗೆ ೨೦೧೫ರಲ್ಲಿನ ಬಹು ಆಯಾಮ ಬಡತನದ ಕನಿಷ್ಠ ಪಕ್ಷ ಅರ್ಧದಷ್ಟಾದರು ಕಡಿಮೆ ಮಾಡಬೇಕೆಂದು ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಇದು ಕೂಡ ಒಂದು ಮುಖ್ಯವಾದ ಗುರಿಯಾಗಿದೆ.

ಒಂದು ಸರ್ವೇ ಪ್ರಕಾರ ೨೦೧೩-೧೪ರಲ್ಲಿ ಶೇ.೨೯.೧೭ರಷ್ಟು ಇದ್ದದ್ದು, ೨೦೨೨-೨೩ರಲ್ಲಿ ಶೇ.೧೧.೨೮ರಷ್ಟಕ್ಕೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ೨೪.೮೨ ಕೋಟಿ ಜನರು ಬಡತನದಿಂದ ಪಾರಾಗಿದ್ದಾರೆ. ಹೀಗಾಗಿ ಬಹು ಆಯಾಮಬಡತನ ೨೦೩೦ರೊಳಗೆ ಅರ್ಧ ದಷ್ಟು ಕಡಿತಗೊಳಿಸುವಲ್ಲಿ ಭಾರತದ ಸಾಧನೆಯು ಮುನಚೂಣಿಯಲ್ಲಿರುವುದು ಶ್ಲಾಘನೀಯ.

ಬಡತನದ ವಿಷಮ ಚಕ್ರ

ಬಡತನದ ಕಾರಣಗಳು ಗೊತ್ತಾದರೆ ಅದನ್ನು ನಿರ್ಮೂಲನೆ ಮಾಡಲು ಸುಲಭವಾಗುತ್ತದೆ. ಬಡತನಕ್ಕೆ ಹಲವಾರು ಮುಖ ಗಳಿದ್ದರೆ, ಅದಕ್ಕೆ ಹಲವಾರು ಕಾರಣಗಳಿವೆ. ಉತ್ಪಾದಕ (ದತ್ತಿ) ಆಸ್ತಿಗಳಾದ ಭೂಮಿ, ಜಾನುವಾರುಗಳು, ಮಾನವ ಬಂಡವಾಳ, ಗುಡಿ ಮತ್ತು ಸಣ್ಣ ಕೈಗಾರಿಕೆ ಮುಂತಾದವುಗಳ ಕೊರತೆಯಿಂದ ಜನರ ಆದಾಯ ಕಡಿಮೆಯಾಗಿ ಬಡತನಕ್ಕೆ ಮೂಲ ಕಾರಣ ವಾಗಿದೆ (ದತ್ತಿಗಳ ವೈಫಲ್ಯತೆ). ಉತ್ತಮ ಗುಣ ಮಟ್ಟದ ಶಿಕ್ಷಣ, ಆಧುನಿಕ ಕೌಶಲ, ಪೌಷ್ಠಿಕಾಂಶ ಮತ್ತು ಆರೋಗ್ಯ ಮೂಲ ಸೌಕರ್ಯಗಳ ತೀವ್ರ ಕೊರತೆ, ರಕ್ತ ಹೀನತೆ, ಸಾಮಾಜಿಕ ಪ್ರತ್ಯೇಕತೆ, ಲಿಂಗ ತಾರತಮ್ಯ ಮುಂತಾದವುಗಳಿಂದ ಉತ್ಪಾದನಾ ಸಾಮರ್ಥ್ಯ ಕುಂಠಿತಗೊಂಡು ಆದಾಯ ಕಡಿಮೆಯಾಗಿ ಬಡತನಕ್ಕೆ ಕಾರಣವಾಗಿದೆ (ಉತ್ಪನ್ನ ವೈಫಲ್ಯತೆ). ಭಾರತದಲ್ಲಿ ಶೇ.೮೬ ರಷ್ಟು ಅತಿ ಸಣ್ಣ ಮತ್ತು ಸಣ್ಣ ಗಾತ್ರದ ರೈತರಿದ್ದಾರೆ. ಇವರು ಕಷ್ಟಪಟ್ಟು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ದೊರಕದ ಕಾರಣ ಅವರ ನಿವ್ವಳ ಆದಾಯ ಗಣನೀಯವಾಗಿ ಕಡಿಮೆಯಿದೆ.

ಬಡತನ ನಿರ್ಮೂಲನೆಗಾಗಿ ಸರಕಾರವು ಸಾಮಾಜಿಕ ಸುರಕ್ಷಾ, ಉದ್ಯೋಗ ಮತ್ತು ಉತ್ಪಾದಕ ಸ್ವತ್ತುಗಳ ಸೃಷ್ಟಿಗೆ ಸಂಬಂಧಿಸಿ ದಂತೆ ಅನೇಕ ಯೋಜನೆಗಳು ಅನುಷ್ಠಾನಗೊಳಿಸಿದೆ. ಅದರ ಲಾಭಗಳು ನಿಜವಾಗಿರುವ ಬಡವರಾಗಿರು ವವರಿಗೆ ದೊರಕದ ಕಾರಣ, ಈಗಲೂ ಅನೇಕರು ಬಡತನದಲ್ಲಿಯೇ ಇದ್ದಾರೆ. ಇದನ್ನು ಸರಕಾರಗಳ ವೈಫಲ್ಯತೆ ಎನ್ನಬಹುದು.

ಭಾರತದಂತಹ ಹಿಂದುಳಿದ ರಾಷ್ಟ್ರಗಳಲ್ಲಿ ಬಡತನವು ಕಾರಣ ಮತ್ತು ಪರಿಣಾಮವೂ ಅಗಿರುತ್ತದೆ. ಬಡತನದಿಂದ ಶಿಕ್ಷಣ, ಕೌಶಲ ಮತ್ತು ಆರೋಗ್ಯದ ಕೊರತೆ, ಇದರಿಂದಾಗಿ ಉತ್ಪಾದನಾ ಸಾಮರ್ಥ್ಯ ಕಮೆಯಾಗಿ ಅವರ ಆದಾಯ ಕುಂಠಿತಗೊಳ್ಳತ್ತದೆ. ಆ ಮೂಲಕ ಬಡತನ ಅವರಲ್ಲಿ ಮನೆಮಾಡಿಕೊಂಡಿದೆ. ಹೀಗೆ ಅನೇಕ ಬಡ ಕುಟುಂಬಗಳು ಈ ಬಡತನದ ವಿಷಮ ಚಕ್ರದ ಸುಳಿವಿಗೆ ಸಿಕ್ಕಿಕೊಂಡಿವೆ. ಭಾರತವು ೨೦೪೭ರೊಳಗೆ ವಿಕಸಿತ, ಸಂತೋಷ ಭರಿತ, ಕೌಶಲ ಭರಿತ ಲಿಂಗ ತಾರತಮ್ಯ ರಹಿತ ದೇಶವಾಗ ಬೇಕಾದರೆ ಬಹುಆಯಾಮ ಬಡತನ ನಿರ್ಮೂಲನೆಯಾಗಬೇಕಿದೆ.

ಇದಕ್ಕಾಗಿ ಅನೇಕ ಅಭಿವೃದ್ಧಿಯ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಮಾಡಬೇಕಿದೆ. ಪ್ರಮುಖವಾಗಿ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯಾಗಬೇಕಿದೆ. ಬಡವರ ಉತ್ಪಾದನಾ  ಸಾಮರ್ಥ್ಯವನ್ನು ವೃದ್ಧಿಸಲು, ಅವರಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ, ಉಚಿತ ಆಧುನಿಕ ಕೌಶಲ ಮತ್ತು ತರಬೇತಿ ನೀಡುವುದು ತುಂಬಾ ಅವಶ್ಯಕವಿದೆ. ಇದರಿಂದಾಗಿ ಅವರಲ್ಲಿ ಉದ್ಯೋಗಾರ್ಹತೆ ಅಧಿಕ ಗೊಂಡು ಲಾಭದಾಯಕವಾದ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.

ಚೀನಾದ ಒಂದು ನಾಡ್ನುಡಿ ಪ್ರಕಾರ, ವ್ಯಕ್ತಿಯೊಬ್ಬನಿಗೆ ಒಂದು ಮೀನು ಕೊಡುವುದರಿಂದ ಒಂದು ದಿನಕ್ಕೆ ಮಾತ್ರ ತಿನಿಸಿದಂತಾ ಗುತ್ತದೆ. ಆದರೆ ಅದೇ ಮೀನು ಹೇಗೆ ಹಿಡಿಯ ಬೇಕು ಎಂಬುದನ್ನು ಕಲಿಸಿದರೆ ಅವನ ಜೀವನದುದ್ದಕ್ಕೂ ತಿನಿಸಿದಂತೆ. ಆದ್ದರಿಂದ ಬಡವರಿಗೆ ಫ್ರೀ ಗ್ಯಾರಂಟಿಗಳು ಕೊಡುವುದರ ಬದಲಾಗಿ ತಮ್ಮ ಸ್ವಂತ ಪ್ರಯತ್ನದಿಂದ ತಮ್ಮ ಜೀವನಾಂಶವನ್ನು ಗಳಿಸಲು ಬೇಕಾಗುವ ಸಾಮರ್ಥ್ಯವನ್ನು ವೃದ್ಧಿಸುವ ಕೆಲಸ ಮಾಡಬೇಕಿದೆ. ಆದರೆ ಫ್ರೀ ಗ್ಯಾರಂಟಿಗಳು ಕೊಡುವುದರಿಂದ ಅವರು ಇನ್ನಷ್ಟು ಸೋಮಾರಿಗಳಾಗಿ ರಾಜಕೀಯ ಮತ್ತು ಸಾಮಾಜಿಕ ಆಶಾಂತಿಗೆ ಕಾರಣರಾಗುತ್ತಾರೆ. ಉಚಿತ ಆರೋಗ್ಯ ಕಾಳಜಿ ಮತ್ತು ಸೇವೆಗಳ ಪೂರೈಕೆ ಬಡತನ ಅನಾರೋಗ್ಯದ ಕಾರಣ ಹಾಗೂ ಪರಿಣಾಮವೂ ಹೌದು. ಅಂದರೆ ಬಡತನವು ಅನಾರೋಗ್ಯಕ್ಕೆ ಎಡೆಮಾಡಿ ಕೊಟ್ಟರೆ, ಅನಾರೋಗ್ಯವು ಬಡತನಕಕ್ಕೆ ಎಡೆಮಾಡಿಕೊಡುತ್ತದೆ.

ಆದ್ದರಿಂದ ಆರೋಗ್ಯವಿಮೆಯು ಸಾರ್ವತ್ರಿಕರಣಗೊಳಿಸುವುದರ ಜೊತೆಗೆ ಬಡ ಕುಟುಂಬಗಳಿಗೆ ಉತ್ತಮ ಗುಣಮಟ್ಟದ ಉಚಿತ ಆರೋಗ್ಯ ಕಾಳಜಿ ಮತ್ತು ಸೇವೆಗಳನ್ನು ಪೂರೈಕೆ ಮಾಡಬೇಕು. ಬಹಳಷ್ಟು ಬಡವರು ಕೃಷಿ ವಲಯದಲ್ಲಿರುವುದರಿಂದ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಅಂದರೆ ವಿಶೇಷವಾಗಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ರೈತರು ಬೆಳೆ ಉತ್ಪಾದನೆ ಯೊಂದಿಗೆ ತೋಟಗಾರಿಕೆ ಬೆಳೆ, ಕೃಷಿ ಅರಣ್ಯ, ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಗಳನ್ನು ಅಳವಡಿಸಿಕೊಂಡರೆ ರೈತರ ಆದಾಯ ಅತ್ಯಧಿಕ ಮತ್ತು ನಿರಂತರವಾಗಿ ಹೆಚ್ಚಾಗಲು ಸಾಧ್ಯ. ಕೃಷಿಕರ ಆದಾಯವನ್ನು ವೃದ್ಧಿಸಲು ಕೃಷಿ ಸರಕುಗಳ, ಸಂಸ್ಕರಣೆ ಆಧುನಿಕ ಸಂಗ್ರಹಣೆ, ಸೂಕ್ತ ಬೆಲೆಗೆ ಮಾರಾಟ, ಉತ್ತಮ ಗುಣಮಟ್ಟದ ಬೀಜಗೊಬ್ಬರಗಳ ಪೂರೈಕೆ, ನೀರಾವರಿ ಸೌಲಭ್ಯ, ನಿರಂತರ ವಿದ್ಯುತಶ್ಚಕ್ತಿ, ಕೃಷಿ ವಿಸ್ತರಣಾ ಸೇವೆಗಳ ಪೂರೈಕೆ ಇವೇ ಮುಂತಾದ ಕ್ರಮಗಳಿಂದ ಅವರ ಆದಾಯ ಹೆಚ್ಚಾಗಿ ಬಡತನದಿಂದ ಮುಕ್ತಿ ಪಡೆಯಲು ಸಾಧ್ಯ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಬಡತನ ನಿರ್ಮೂಲನೆ ಮತ್ತು ಉದ್ಯೋಗ ಸೃಷ್ಟಿಯ ಯೋಜನೆಗಳು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಬೇಕಿದೆ. ಬಡಕುಟುಂಬಗಳಲ್ಲಿ ಉತ್ಪಾದಕ ಸ್ವತ್ತುಗಳ ನಿರ್ಮಾಣಕ್ಕಾಗಿ ಜಾರಿ ತಂದಿರುವ ದೀನ್ ದಯಾಳ ಅಂತ್ಯೋದಯ ಯೋಜನೆ ಮತ್ತು ಉದ್ಯೋಗ ಸೃಷ್ಟಿಸುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೊಜನೆ, ರಾಷ್ಟ್ರೀಯ ಸಾಮಾಜಿಕ ಸುರಕ್ಷೆ ಯೋಜನೆ ಇವೇ ಮುಂತಾದ ಯೊಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸ ಬೇಕು.

ಮದ್ಯಸೇವನೆ, ಬೀಡಿ ಸಿಗರೇಟು ಮತ್ತು ತಂಬಾಕು ಸೇವನೆಯಿಂದ ಅನೇಕ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಇದರಿಂದಾಗಿ ಅವರ ಉತ್ಪಾದನಾ ಸಾಮರ್ಥ್ಯ ಮತ್ತು ಮಾನವ ಕೆಲಸದ ದಿನಗಳು ಹಾನಿಯಾಗಿ ಆದಾಯ ಕಡಿತವಾಗುತ್ತಿದೆ. ಅಲ್ಲದೆ ಆರೋಗ್ಯದ ಮೇಲಿನ ವೆಚ್ಚವೂ ಕೂಡ ಹೆಚ್ಚಾಗಿ ಅವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಬಡ ಜನರ ಹಿತದೃಷ್ಟಿಯಿಂದ ಹಂತ ಹಂತವಾಗಿ ಮದ್ಯಪಾನದ ಸೇವನೆ, ಬೀಡಿ, ಸೀಗರೇಟು ಮತ್ತು ತಂಬಾಕು ಉತ್ಪಾದನೆ ಮತ್ತು ಸೇವನೆಯನ್ನು ತುರ್ತಾಗಿ ನಿಷೇಧಿಸಬೇಕಿದೆ.

ಬಡತನವು ಒಂದು ಸಾಂಕ್ರಾಮಿಕ ಸಾಮಾಜಿಕ ರೋಗ. ಅದನ್ನು ಸೂಕ್ತವಾದ ಬಹುಯೋಜನೆಗಳ ಮೂಲಕ ಬೇರು ಸಹಿತ ಕಿತ್ತುಹಾಕದಿದ್ದರೆ ಅದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾವಣೆಯಾಗುತ್ತದೆ. ಆದ್ದರಿಂದ ೨೦೪೭ರೊಳಗೆ ವಿಕಸಿತ ಭಾರತದ ಕನಸು ನನಸಾಗಬೇಕಾದರೆ ಬಡತನ ನಿರ್ಮೂಲನೆಗೆ ಇನ್ನು ಹೆಚ್ಚಿನ ಅದ್ಯತೆ ನೀಡಬೇಕು. ಹೀಗಾಗಿ ಸಮಗ್ರ ಕೃಷಿ ಪದ್ಧತಿ, ಕೃಷಿ ಮೂಲಸೌಕರ್ಯ, ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯ, ಉಚಿತ ಆರೋಗ್ಯ ಕಾಳಜಿ ಮತ್ತು ಸೇವೆಗಳ ಪೂರೈಕೆ, ಬಡತನ ನಿರ್ಮೂಲನೆ ಮತ್ತು ಉದ್ಯೋಗ ಸೃಷ್ಟಿಯ ಯೊಜನೆಗಳ ಪರಿಣಾಮಕಾರಿ ಅನುಷ್ಠಾನ, ಹಂತ ಹಂತವಾಗಿ
ಧೂಮ ಮತ್ತು ಮದ್ಯಪಾನಗಳ ನಿಷೇಧ ಇವೇ ಮುಂತಾದ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಮಾಡುವುದರಿಂದ ಭಾರತವು ಬಡತನದಿಂದ ಮುಕ್ತಗೊಳಿಸಿ ವಿಕಸಿತ ಭಾರತದ ಕನಸು ನನಸಾಗಿಸಲು ಸಾಧ್ಯ. ಈ ದಿಶೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ನಾಗರಿಕ ಸಮಾಜ, ಸರ್ಕಾರೇತರ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸಂಘಟಿತ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

(ಲೇಖಕರು : ಕುಲಸಚಿವರು, ಕರ್ನಾಟಕ ಕೇಂದ್ರೀಯ
ವಿಶ್ವವಿದ್ಯಾಲಯ, ಕಲಬುರಗಿ)