Wednesday, 11th December 2024

ಅವಿಭಕ್ತ ಕುಟುಂಬದ 7 ಮಂದಿಯ ಕೊಡಲಿಯಿಂದ ಹತ್ಯೆ, ಆರೋಪಿ ಆತ್ಮಹತ್ಯೆ

ಭೋಪಾಲ್‌: ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಅವಿಭಕ್ತ ಕುಟುಂಬದ 7 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಚಿಂದ್ವಾರಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿದ್ದಾರೆ.

ಮಾನಸಿಕ ಅಸ್ವಸ್ಥನಾಗಿದ್ದ ಕುಟುಂಬದ ಸದಸ್ಯನೊಬ್ಬ ತನ್ನ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ತನ್ನ ಕುಟುಂಬದ ಮೇಲೆ ದಾಳಿ ನಡೆಸಿ, ತನ್ನ ಸಹೋದರ, ಅತ್ತಿಗೆ, ಪತ್ನಿ, ಚಿಕ್ಕ ಮಗು ಮತ್ತಿತರರನ್ನು ಕೊಂದಿದ್ದಾನೆ. ಬಳಿಕ ಆತ ಗ್ರಾಮದಿಂದ ಸುಮಾರು 100 ಮೀಟರ್ ದೂರದಲ್ಲಿರುವ ಚರಂಡಿಯ ಬಳಿಯ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ಘಟನೆಯ ಭೀಕರತೆಯನ್ನು ತೆರೆದಿಟ್ಟಿದ್ದಾರೆ.

ಇದೇ ಮಾದರಿಯ ಘಟನೆ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿಯೂ ನಡೆದಿತ್ತು. ಉತ್ತರ ಪ್ರದೇಶದ ಪಾಲಾಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ 5 ಸದಸ್ಯರನ್ನು ಕ್ರೂರವಾಗಿ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ. ಮಾನಸಿಕ ಅಸ್ವಸ್ಥನಾಗಿದ್ದ ಆರೋಪಿ ಮೊದಲು ಗುಂಡಿಕ್ಕಿ ತನ್ನ ತಾಯಿಯನ್ನು ಕೊಂದಿದ್ದ.