Saturday, 23rd November 2024

ರಾಜ್ಯ ಕಾಂಗ್ರೆಸ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಎಸ್.ಕೆ ಬೆಳ್ಳುಬ್ಬಿ

ಕೊಲ್ಹಾರ: ರಾಷ್ಟ್ರದ ಜನತೆ ಮಗದೊಮ್ಮೆ ನರೇಂದ್ರ ಮೋದಿಯವರ ಬಲಿಷ್ಠ ನಾಯಕತ್ವವನ್ನು ಮೆಚ್ಚಿ ದೇಶದ ಸೇವೆಗೈಯ್ಯುವ ಅವಕಾಶ ನೀಡಿರು ವುದು ಸುಭದ್ರ ರಾಷ್ಟ್ರ ಪರಿಕಲ್ಪನೆಗೆ ದೊರೆತ ಜಯ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು.

ಪಟ್ಟಣದ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ಕಾಂಗ್ರೆಸ್ಸಿನ ಪೊಳ್ಳೆ ಭರವಸೆಗಳನ್ನ ಜನತೆ ಸಾರಾಸಗಟವಾಗಿ ತಿರಸ್ಕರಿಸಿದ್ದಾರೆ. ಬಲಿಷ್ಠ ಹಾಗೂ ಸುಭದ್ರ ರಾಷ್ಟ್ರ ನಿರ್ಮಾಣದ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಬಿಜೆಪಿಗೆ ಹಾಗೂ ಎನ್.ಡಿ.ಎ ಮಿತ್ರ ಪಕ್ಷಗಳಿಗೆ
ಮಗದೊಮ್ಮೆ ಅಧಿಕಾರ ನೀಡುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸುವ ಅವಕಾಶ ಕಲ್ಪಿಸಿರುವುದು ಹರ್ಷವನ್ನುಂಟು ಮಾಡಿದೆ ಎಂದು ಪುನರುಚ್ಚರಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ, ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ ಸರ್ಕಾರದ ವಿರುದ್ಧ ಹರಿಹಾಯ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ ಹೊಣೆಹೊತ್ತು ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ನಾಗೇಂದ್ರ ಅವರ ರಾಜೀನಾಮೆ ಅಷ್ಟೇ ಸಾಲದು ಮುಖ್ಯಮಂತ್ರಿ ಸಿದ್ದರಾ ಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಕೂಡ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸಚಿವ ಶಿವಾನಂದ ಪಾಟೀಲ್ ರಾಜೀನಾಮೆಗೆ ಒತ್ತಾಯ: ಸಚಿವ ಶಿವಾನಂದ ಪಾಟೀಲ್ ಲೋಕಸಭಾ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಾವೇರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೀನಾಯವಾಗಿ ಸೋತಿರು ವುದರಿಂದ ಈ ಸೋಲಿನ ನೈತಿಕ ಹೊಣೆಯನ್ನು ಸಚಿವ ಶಿವಾನಂದ ಪಾಟೀಲರು ಹೊರುವ ಮೂಲಕ ರಾಜೀನಾಮೆ ನೀಡಬೇಕು ಎಂದು ಅವರು ಪುನರು ಚ್ಚರಿಸಿದರು. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲರ ಹಾವೇರಿಯಲ್ಲಿ ತಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದಾರೆ. ಬಾಗಲಕೋಟೆಯಲ್ಲಿ ಸಚಿವರ ಪುತ್ರಿ ಸಂಯುಕ್ತಾ ಸೋಲು ಕಂಡಿದ್ದಾರೆ, ಅಲ್ಲದೇ ಬಸವನ ಬಾಗೇವಾಡಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತದಾರರು 17500 ಹೆಚ್ಚಿನ ಮತಗಳನ್ನು ನೀಡುವ ಮೂಲಕ ಸಚಿವ ಶಿವಾನಂದ ಪಾಟೀಲರ ದೌರ್ಜನ್ಯ ದಬ್ಬಾಳಿಕೆಗೆ ಜನರು ತಕ್ಕ ಉತ್ತರ ನೀಡಿದ್ದಾರೆ ಕೂಡಲೇ ಶಿವಾನಂದ ಪಾಟೀಲರು ತಮ್ಮಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ವಿಜಯಪುರ ಮತ್ತು ಬಾಗಲಕೋಟೆ ಮತದಾರರು ರಮೇಶ ಜಿಗಜಿಣಗಿ ಮತ್ತು ಪಿ.ಸಿ ಗದ್ದಿಗೌಡರ ಅವನ್ನು ಅವಳಿ ಜಿಲ್ಲೆಯಿಂದ ಲೋಕಸಭೆಗೆ ಕಳುಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಿರುವುದು ಹರ್ಷವನ್ನುಂಟು ಮಾಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟಿ.ಟಿ ಹಗೆದಾಳ, ಆರ್.ಐ ಶೀಲವಂತ, ಮಾಜಿ ಪ ಪಂ ಅಧ್ಯಕ್ಷ ವಿರುಪಾಕ್ಷಿ ಕೋಲಕಾರ, ಪ.ಪಂ ಸದಸ್ಯ ಬಾಬು ಬಜಂತ್ರಿ, ಶ್ರೀಕಾಂತ್ ಬರಗಿ, ಅಶೋಕ್ ಗಿಡ್ಡಪ್ಪಗೋಳ,ಬಸಪ್ಪ ಬಾಟಿ, ಮಲ್ಲಪ್ಪ ಬರಗಿ ಹಾಗೂ ಇನ್ನಿತರು ಇದ್ದರು.