ಕನ್ನಡ ಚಿತ್ರೋದ್ಯಮ ಈಗ ಬೇಡದ ಕಾರಣಗಳಿಗೆ ಸುದ್ದಿಯಾಗುತ್ತಿದೆ. ತಮ್ಮ ಅಭಿಮಾನಿಯೊಬ್ಬರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಹೆಸರು ಕೇಳಿ ಬಂದಿರುವುದು ಕನ್ನಡ ಚಿತ್ರಪ್ರೇಮಿಗಳಿಗೆ ಆಘಾತವನ್ನುಂಟು ಮಾಡಿದೆ. ಈ ಪ್ರಕರಣದ ಸತ್ಯಾಸತ್ಯತೆ ಏನೇ ಇರಲಿ, ಚಿತ್ರನಟನ ಅಭಿಮಾನಿ ಯೊಬ್ಬರು ಕ್ಷುಲ್ಲಕ ಕಾರಣಕ್ಕೆ ಈ ರೀತಿ ಬರ್ಬರವಾಗಿ ಕೊಲೆಯಾಗಿರುವುದು ರಾಜ್ಯದ ಜನತೆ ಕೇಳರಿಯದ ಸಂಗತಿ.
ತಮ್ಮ ವಿನೀತ ನಡೆ-ನುಡಿಯ ಮೂಲಕ ಜನರಿಗೆ ಆದರ್ಶದ ಮಾದರಿಯಾಗಿದ್ದ ಡಾ.ರಾಜ್ ಕುಮಾರ್ ಅಭಿಮಾನಿಗಳಿಗೆ ದೇವರ ಸ್ಥಾನ ನೀಡಿದ್ದರು. ಅವರನ್ನೇ ಮೇರು ಪುರುಷರನ್ನಾಗಿ ಕಂಡು ಆರಾಧಿಸುತ್ತಿದ್ದ ಚಿತ್ರೋದ್ಯಮದಲ್ಲಿ ಇಂತಹ ಘಟನೆಯೊಂದು ನಡೆದಿರುವುದು ಖಂಡನೀಯ. ಪ್ರತಿಭಾವಂತ ನಟ ದರ್ಶನ್ ತಮ್ಮ ಸ್ವಪ್ರತಿಭೆಯಿಂದ ಕನ್ನಡ ಚಿತ್ರರಂಗದಲ್ಲಿ ಬೆಳೆದು ನಿಂತವರು. ಹಿರಿಯ ನಟ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ ಆರಂಭದಲ್ಲಿ ಚಿತ್ರರಂಗ ಪ್ರವೇಶಿಸಲು ಅವರು ಬಹಳ ಶ್ರಮ ಪಟ್ಟಿದ್ದರು.
ಸಹಾಯಕ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದ ಅವರು ೨೦೦೧ರಲ್ಲಿ ಮೆಜೆಸ್ಟಿಕ್ ಚಿತ್ರದ ಯಶಸ್ಸಿನೊಂದಿಗೆ ನಾಯಕನ ಪಟ್ಟ ಅಲಂಕರಿಸಿದ್ದರು. ಇಲ್ಲಿಂದ ಯಶಸ್ಸಿನ ಮೆಟ್ಟಿಲನ್ನೇರುತ್ತಲೇ ಸಾಗಿದ ದರ್ಶನ್, ತಮ್ಮ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಕಾಣಲಿಲ್ಲ. ೨೦೧೧ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ದರ್ಶನ್ ಬಂಧನವಾಗಿತ್ತು. ಈ ವಿಷಯ ಕೋರ್ಟ್ ಹೊರಗೆ ಇತ್ಯರ್ಥವಾದರೂ ನಂತರದ ದಿನಗಳಲ್ಲಿ ದಂಪತಿ ನಡುವಣ ಬಾಂಧವ್ಯ ಅಷ್ಟೇನೂ ಚೆನ್ನಾಗಿರಲಿಲ್ಲ ಎನ್ನುವುದು ಕೇಳಿ ಬರುತ್ತಿರುವ ಮಾತು. ಕಿರುತೆರೆ ನಟಿ ಪವಿತ್ರಾ ಗೌಡ, ದರ್ಶನ್ ಜೊತೆಗಿನ ಪ್ರೀತಿಯ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ಈಗ ಅಭಿಮಾನಿಯೊಬ್ಬರ ಸಾವಿನಲ್ಲಿ ಪರ‍್ಯಾವಸಾನಗೊಂಡಿದೆ ಎನ್ನಲಾಗುತ್ತಿದೆ.
ಸಿನಿಮಾ ನಾಯಕ ನಟ-ನಟಿಯರು ನಮ್ಮಂತೆಯೇ ಮನುಷ್ಯರು. ಅವರೂ ತಪ್ಪುಗಳನ್ನು ಮಾಡುತ್ತಾರೆ. ಅವರಿಗೂ ವೈಯಕ್ತಿಕ ಜೀವನವಿದೆ. ಅವರ ಖಾಸಗಿತನವನ್ನು ನಾವು ಗೌರವಿಸಬೇಕು ಎಂಬ ಮಾತು ನಿಜ.ಆದರೆ ಯಾವುದೇ ವ್ಯಕ್ತಿ, ಸಾರ್ವಜನಿಕವಾಗಿ ಪ್ರಭಾವ ಬೀರಬಲ್ಲ ಸ್ಥಾನಕ್ಕೆ ಹೋದ ಬಳಿಕ, ತನ್ನ ನಡವಳಿಕೆ ಬಗ್ಗೆ ಎಚ್ಚರ, ವಿವೇಕ ಹೊಂದಿರಲೇಬೇಕು. ಇಲ್ಲದೇ ಹೋದರೆ ನಾಯಕನೆನಿಸಿಕೊಂಡವರು ‘ಖಳನಾಯಕ’ನ ಪಟ್ಟ ಹೊರಬೇಕಾಗುತ್ತದೆ. ಈ ಪ್ರಕರಣದ ತನಿಖೆಯಾಗ ಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು.