Wednesday, 11th December 2024

ದರ್ಶನ್ ಬಗ್ಗೆ ಸಮಗ್ರ ತನಿಖೆಯಾಗಲಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾದಾಗ, ಸಿಟ್ಟಿನ ಭರದಲ್ಲಿ ಯುವಕನೊಬ್ಬನ ಕೊಲೆ ಆಗಿದೆ ಎಂದಷ್ಟೇ ಪೊಲೀಸರೂ ಸೇರಿ ಎಲ್ಲರ ಭಾವನೆಯಾಗಿತ್ತು. ಆದರೆ ಈಗ ದರ್ಶನ್ ಮತ್ತು ಸಂಗಡಿಗರ ಮತ್ತಷ್ಟು ‘ಸಾಧನೆ’ಗಳು ಬೆಳಕಿಗೆ ಬರುತ್ತಿವೆ. ಈ ಹಿಂದೆ ಮುಚ್ಚಿ ಹೋಗಿದ್ದ ಪ್ರಕರಣಗಳೆಲ್ಲವೂ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಈ ಎಲ್ಲ ಪ್ರಕರಣಗಳಲ್ಲಿ ದರ್ಶನ್ ಕೈವಾಡವಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ನಾಯಕ ನಟನ ಪ್ರಭಾವಳಿಯಲ್ಲಿ ಸಿಲುಕಿದ್ದ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ ಎನ್ನುವುದು ಸ್ಪಷ್ಟ.

ದರ್ಶನ್ ಅವರ ಸಿನಿಮಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಮಲ್ಲಿಕಾರ್ಜುನ ಬಿ ಸಂಕೇಗೌಡರ್ ಕಾಣೆಯಾಗಿ ಎಂಟು ವರ್ಷಗಳೇ
ಕಳೆದಿವೆ. ಇದುವರೆಗೂ ಆತ ಬರೆದಿದ್ದಾನೆನ್ನಲಾದ ‘ಪತ್ರ’ವನ್ನು ಮುಂದಿಟ್ಟುಕೊಂಡು ಬದುಕಿದ್ದಾನೆಂದು ಹೇಳಲಾಗುತ್ತಿದೆ. “ನಟ ಅರ್ಜುನ್ ಸರ್ಜಾ
ಸೇರಿದಂತೆ ಕೆಲವರಿಂದ ಈತ ಸಾಲ ಪಡೆದಿದ್ದ. ಈ ಕಾರಣಕ್ಕಾಗಿ ದರ್ಶನ್ ಕೈಯಲ್ಲಿ ಬೈಸಿಕೊಂಡಿದ್ದ. ಸಾಲ ಕಟ್ಟಲಾಗದೆ ತಲೆ ಮರೆಸಿಕೊಂಡಿದ್ದಾನೆ” ಎಂಬ ಮಾತನ್ನು ಪೊಲೀಸರೂ ಒಪ್ಪಿಕೊಂಡು ಮೌನವಾಗಿರಲು ಹೇಗೆ ಸಾಧ್ಯ ? ಇಷ್ಟು ವರ್ಷಗಳ ನಂತರವಾದರೂ, ಪ್ರಕರಣದ ಸತ್ಯಾಸತ್ಯತೆಯನ್ನು
ಹೊರಗೆಳೆಯುವ ಕೆಲಸ ಮಾಡಿಲ್ಲದಿರುವುದು ಅಚ್ಚರಿಯ ಸಂಗತಿ.

ಆನೇಲ್ ನಲ್ಲಿರುವ ದರ್ಶನ್ ಅವರ ಫಾರ್ಮ್ ಹೌಸ್‌ನ ಮ್ಯಾನೇಜರ್ ಶ್ರೀಧರ್, ಕಳೆದ ಏಪ್ರಿಲ್ ತಿಂಗಳಿನಲ್ಲಿ ನಿಗೂಢವಾಗಿ ಮೃತಪಟ್ಟ ಸುದ್ದಿ ಹೊರ ಬಿದ್ದಿದೆ. ಈತನದ್ದು ಎನ್ನಲಾದ ಡೆತ್ ನೋಟ್‌ನಲ್ಲಿ “ ನನ್ನ ಸಾವಿಗೆ ನಾನೇ ಕಾರಣ, ಯಾರಿಗೂ ತೊಂದರೆ ಕೊಡಬೇಡಿ” ಎಂದು ಮೂರ‍್ನಾಲ್ಕು ಬಾರಿ ಬರೆಯಲಾಗಿದೆ. ಕೊನೆಯಲ್ಲಿ ಸಹಿ ಮಾಡುವ ಬದಲು ಹೆಬ್ಬೆಟ್ಟು ಒತ್ತಲಾಗಿದೆ. ಜನಸಾಮಾನ್ಯರಲ್ಲೂ ಸಂಶಯ ಹುಟ್ಟಿಸುವ ಈ ಡೆತ್‌ನೋಟ್ ಇಟ್ಟು ಕೊಂಡು ಪೊಲೀಸರು ಪ್ರಕರಣವನ್ನು ಬದಿಗೆ ತಳ್ಳಿದ್ದು ವಿಚಿತ್ರವಾಗಿ ಕಾಣಿಸುತ್ತಿದೆ.

ದರ್ಶನ್ ಅವರ ಮೈಸೂರಿನ ಫಾರ್ಮ್ ಹೌಸಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹಸುವಿನಿಂದ ತಿವಿಸಿಕೊಂಡು ಕೊಂಬು ಮಿದುಳಿಗೆ ತಾಗಿ
ಜೀವನ ಪರ್ಯಂತ ಹಾಸಿಗೆ ಹಿಡಿದಿರುವ ಸಂಗತಿಯೂ ಈಗ ಬೆಳಕಿಗೆ ಬಂದಿದೆ. ‘ಸಹಾಯ ಕೇಳಿಕೊಂಡು ಹೋದ ನನ್ನ ಕುಟುಂಬದವರ ಮೇಲೆ ದರ್ಶನ್ ಬೆಂಬಲಿಗರು ನಾಯಿಗಳನ್ನು ಛೂ ಬಿಟ್ಟರು’ ಎಂಬ ಈ ವ್ಯಕ್ತಿಯ ಮಾತು ಆಲಿಸಿದ ಬಳಿಕ, ಪಟ್ಟಣಗೆರೆಯ ಸೆಟ್ಲ್‌ಮೆಂಟ್ ಅಡ್ಡಾದ ಕತೆಗಳನ್ನು ಕೇಳಿದ ಮೇಲೆ, ‘ದರ್ಶನ್ ಇಂಥವರಾ ?’ ಎಂಬ ಪ್ರಶ್ನೆ ಮತ್ತೆ ಕೇಳಬೇಕೆನಿಸುವುದಿಲ್ಲ. ಈಗಲಾದರೂ ಈ ಎಲ್ಲ ಪ್ರಕರಣಗಳ ಬಗ್ಗೆ ತನಿಖೆಯಾಗಬೇಕು. ದರ್ಶನ್ ಇರಲಿ ಅಥವಾ ಅವರ ಸಂಗಡಿಗರಿರಲಿ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು. ಸಂತ್ರಸ್ತರಿಗೆ ನ್ಯಾಯ ದೊರಕಲೇಬೇಕು.